ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪುಂದ ರಥೋತ್ಸವ ಸಂಪನ್ನ

Last Updated 5 ಡಿಸೆಂಬರ್ 2017, 6:16 IST
ಅಕ್ಷರ ಗಾತ್ರ

ಬೈಂದೂರು: ರಥೋತ್ಸವ ಋತುವಿನ ಎರಡನೇ ರಥೋತ್ಸವವೆನಿಸಿದ ಉಪ್ಪುಂದ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ರಥೋತ್ಸವವು ಜನಸಾಗರದ ನಡುವೆ ಸೋಮವಾರ ಸಂಪನ್ನವಾಯಿತು.

ನಸುಕಿನಿಂದಾರಂಭಿಸಿ ಇರುಳಿನ ತನಕವೂ ಜನ ದೇವಿಯ ದರ್ಶನ ಪಡೆದು, ಪೂಜೆ, ಹರಕೆ ಸಲ್ಲಿಸಿದರು. ಮಧ್ಯಾಹ್ನದ ರಥಾರೋಹಣ, ಸಂಜೆಯ ರಥೋತ್ಸವ ಮತ್ತು ರಥಾವರೋಹಣದ ವೇಳೆ ದಾಖಲೆ ಸಂಖ್ಯೆಯ ಜನ ಸೇರಿದರು. ಉದ್ದದ ರಥಬೀದಿ, ಇಕ್ಕೆಲದ ವಿಶಾಲ ಗದ್ದೆಗಳು ಜನಾವೃತವಾದುವು.

ಕೊಲ್ಲೂರು ಮಂಜುನಾಥ ಅಡಿಗರ ನೇತೃತ್ವದಲ್ಲಿ ಅರ್ಚಕ ಕೊಲ್ಲೂರು ನಿತ್ಯಾನಂದ ಅಡಿಗ ಮತ್ತು ದೇವಳದ ಪ್ರಧಾನ ಅರ್ಚಕ ಪ್ರಕಾಶ ಉಡುಪ ದೇವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಭೂತ ಬಲಿ, ರಥಶುದ್ಧಿಹೋಮ, ರಥಬಲಿ ಹಾಗೂ ರಥಾರೋಹಣದ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಮಧ್ಯಾಹ್ನ ದೇವಳದ ಸಭಾಭವನದಲ್ಲಿ ಸಹಸ್ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ದೇವಿಗೆ ಹರಕೆ ರೂಪದಲ್ಲಿ ಬಂದ ಸೀರೆಗಳ ಬಹಿರಂಗ ಹರಾಜಿನಲ್ಲಿ ಮಹಿಳೆಯರು ಪೈಪೋಟಿ ನಡೆಸಿ ಸೀರೆಗಳನ್ನು ಖರೀದಿಸಿ ಕೃತಾರ್ಥಭಾವ ಹೊಂದಿದರು. ಸಂಜೆಯ ರಥೋತ್ಸವದಲ್ಲಿ ಸಾವಿರಾರು ಭಕ್ತರು ರಥ ಎಳೆದು ಭಾವುಕ ಕ್ಷಣ ಅನುಭವಿಸಿದರು.

ದೇವಳದ ಆಡಳಿತಾಧಿಕಾರಿಯಾಗಿರುವ ಬೈಂದೂರು ವಿಶೇಷ ತಹಶೀಲ್ದಾರ ಕಿರಣ್ ಜಿ. ಗೌರಯ್ಯ, ಕಾರ್ಯನಿರ್ವಹಣಾಧಿಕಾರಿ ಅಣ್ಣಪ್ಪ ಬಿ., ವ್ಯವಸ್ಥಾಪಕ ಸುರೇಶ ಭಟ್, ಸಿಬ್ಬಂದಿ, ಅರ್ಚಕ, ಉಪಾದಿವಂತರು, ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರು ಮತ್ತು ಸದಸ್ಯರು, ದೊಡ್ಡ ಸಂಖ್ಯೆಯ ಸ್ವಯಂಸೇವಕರು ಜನರ ಒತ್ತಡದ ನಡುವೆ ರಥೋತ್ಸವ ಸಾಂಗವಾಗಿ ನಡೆಯುವಂತೆ ನೋಡಿಕೊಂಡರು. ಕುಂದಾಪುರ ಡಿವೈಎಸ್‌ಪಿ ಪ್ರವೀಣ್ ನಾಯಕ್ ಮಾರ್ಗದರ್ಶನದಲ್ಲಿ ಬೈಂದೂರು ಇನ್‌ಸ್ಪೆಕ್ಟರ್‌ ಪರಮೇಶ್ವರ್ ಆರ್. ಗುನಗಾ, ಠಾಣಾಧಿಕಾರಿ ಬಿ. ತಿಮ್ಮೇಶ್ ಸಿಬ್ಬಂದಿಯೊಂದಿಗೆ ಸುರಕ್ಷತೆಯ ಹೊಣೆ ನಿರ್ವಹಿಸಿದರು.

ಕೊಡಿಹಬ್ಬದ ಕಬ್ಬಿನ ಜಲ್ಲೆಗಳ ಖರೀದಿಗೆ ಜನ ಮುಗಿಬಿದ್ದರು. ಮಿಠಾಯಿ, ತಿನಿಸು, ಐಸ್‌ಕ್ರೀಮ್, ಮಣಿಸರಕು, ಕೃತಕ ಆಭರಣ, ಆಟಿಕೆ, ಇತ್ಯಾದಿ ಹಬ್ಬದ ಸರಕಿನ ವ್ಯಾಪಾರ ಜೋರಾಗಿತ್ತು. ಗದ್ದೆಗಳಲ್ಲಿ ನೆಲೆಗೊಂಡಿದ್ದ ಜಯಂಟ್‌ವೀಲ್ ಸೇರಿದಂತೆ ಹತ್ತಾರು ತರದ ಮೋಜಿನ ಆಟಗಳೂ ಜನಾಕರ್ಷಣೆಯ ತಾಣವಾದುವು. ವಿಶೇಷವಾಗಿ ಅಲಂಕೃತವಾದ ರಥಬೀದಿಯುದ್ದದ ಮನೆ, ಅಂಗಡಿಗಳು ಹಬ್ಬದ ಮೆರುಗು ಹೆಚ್ಚಿಸಿದ್ದವು.

ಉಪ್ಪುಂದ ಸುತ್ತಲಿನ ಸುಮಾರು 25 ಗ್ರಾಮಗಳ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಸಂಪ್ರದಾಯದಂತೆ ಸ್ಥಳೀಯ ರಜೆ ನೀಡಲಾಗಿತ್ತು. ಮೀನುಗಾರರು ಕಸುಬಿಗೆ ರಜೆ ಸಾರಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT