ಬುಧವಾರ, ಮಾರ್ಚ್ 3, 2021
31 °C

ಪ್ರಕರಣ ವಿಲೇವಾರಿ: ವಿಳಂಬ ಸರಿಯಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಕರಣ ವಿಲೇವಾರಿ: ವಿಳಂಬ ಸರಿಯಲ್ಲ

ಕೋಲಾರ: ‘ನಿರಂತರ ಅಧ್ಯಯನ ಮತ್ತು ಹಿರಿಯ ವಕೀಲರ ಮಾರ್ಗದರ್ಶನದಿಂದ ಕಿರಿಯ ವಕೀಲರು ವೃತ್ತಿ ನೈಪುಣ್ಯ ಸಾಧಿಸಿ, ಪ್ರಕರಣಗಳ ಶೀಘ್ರ ವಿಲೇವಾರಿಗೆ ಸಹಕರಿಸಬೇಕು’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್‌ ನ್ಯಾಯಾಧೀಶೆ ಮಹಾಲಕ್ಷ್ಮಿ ನೇರಳೆ ಸಲಹೆ ನೀಡಿದರು.

ನಗರದಲ್ಲಿ ಸೋಮವಾರ ನಡೆದ ವಕೀಲರ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಪ್ರಕರಣಗಳ ಇತ್ಯರ್ಥ ಶೀಘ್ರವಾಗಿ ಆಗಬೇಕು. ಪ್ರಕರಣ ವಿಲೇವಾರಿಯಲ್ಲಿ ವಿಳಂಬ ಸರಿಯಲ್ಲ. ಕಾನೂನು ವಿಶಾಲ ತಳಹದಿ ಹೊಂದಿದೆ. ಅದರ ರಕ್ಷಣೆಯ ಹೊಣೆ ಹೊತ್ತಿರುವ ವಕೀಲರು ಹೆಚ್ಚು ಜಾಗೃತರಾಗಿರಬೇಕು ಎಂದು ಸಲಹೆ

ನೀಡಿದರು.

ವಕೀಲರು ನಿರಂತರ ಅಧ್ಯಯನಶೀಲರಾದರೆ ವೃತ್ತಿ ನೈಪುಣ್ಯತೆ ಹೆಚ್ಚುತ್ತದೆ. ಅನ್ಯಾಯಕ್ಕೊಳಗಾದವರು ವಕೀಲರ ಬಳಿ ಬರುತ್ತಾರೆ. ಅವರಿಗೆ ನ್ಯಾಯ ಸಿಗುವಂತಾಗಬೇಕು. ನಿರಪರಾಧಿಗಳಿಗೆ ಶಿಕ್ಷೆಯಾಗಬಾರದು, ಅಪರಾಧಿಗಳು ತಪ್ಪಿಸಿಕೊಳ್ಳಲು ಬಿಡಬಾರದು. ಸಮಾಜಕ್ಕೆ ನ್ಯಾಯಾಂಗ ವ್ಯವಸ್ಥೆ ಮೇಲೆ ಅಪಾರ ನಂಬಿಕೆ, ಗೌರವವಿದೆ. ಅದನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ನ್ಯಾಯಾಧೀಶರಷ್ಟೇ ವಕೀಲರಿಗೂ ಇದೆ

ಎಂದರು.

ಸಹಕಾರ ನೀಡಿದರು:‘ವಕೀಲಿ ವೃತ್ತಿ ಆರಂಭಿಸುತ್ತಿದ್ದಂತೆ ನ್ಯಾಯಾಧೀಶೆಯಾಗಬೇಕೆಂದು ಗುರಿ ಇಟ್ಟುಕೊಂಡಿದ್ದೆ. ಅದಕ್ಕೆ ಪೂರಕವಾಗಿ ಪೋಷಕರು, ಹಿರಿಯ ವಕೀಲರ ಸಹಕಾರ ನೀಡಿದರು. ಇದರಿಂದ ಗುರಿ ಮುಟ್ಟಲು ಸಾಧ್ಯವಾಯಿತು’ ಎಂದು ನೂತನ ನ್ಯಾಯಾಧೀಶೆ ವಿಸ್ಮಿತಾ ಎಂದು ಅವರು

ಹೇಳಿದರು.

ಬಾರ್ ಕೌನ್ಸಿಲ್‌ನಿಂದ ಯುವ ವಕೀಲರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆರಂಭಿಸಿದ ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡು ಮಾರ್ಗದರ್ಶನ ಪಡೆದೆ. ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆದು ನೇಮಕಾತಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಸಂಘ ಸ್ಥಾಪನೆ: ‘ವಕೀಲರ ಸಮಸ್ಯೆಗಳನ್ನು ಹೇಳಿಕೊಳ್ಳಲು ಮತ್ತು ಪರಿಹಾರ ಕಂಡುಕೊಳ್ಳಲು ಸಂಘ ಸ್ಥಾಪನೆ ಮಾಡಲಾಗಿದೆ. ಸಂಘದ ಸದಸ್ಯರಾಗಲು ಪ್ರತಿಯೊಬ್ಬ ವಕೀಲರಿಗೂ ಅವಕಾಶವಿದೆ. ವಕೀಲರ ಹಾಜರಾತಿ, ನೋಂದಣಿ ಹೇಗೆ ಆಗಬೇಕೆಂಬ ಬಗ್ಗೆ ಅರಿವು ಮೂಡಿಸಲು ವಕೀಲರ ದಿನಾಚರಣೆ ಆಯೋಜಿಸಲಾಗಿದೆ’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ರಾಮಕೃಷ್ಣ ತಿಳಿಸಿದರು.

ನ್ಯಾಯಾಲಯ ಸಮುಚ್ಚಯ ನಿರ್ಮಾಣಕ್ಕೆ ಮೀಸಲಿರಿಸಿರುವ ಜಾಗವನ್ನು ನ್ಯಾಯಾಲಯದ ಹೆಸರಿಗೆ ಮಾಡಿಸಲು ಸಾಕಷ್ಟು ಹೋರಾಟ ನಡೆಸಬೇಕಾಯಿತು. ವಿಧಾನಸಭೆಯಿಂದ ಹೈಕೋರ್ಟ್‌ವರೆಗೆ ಸಾಕಷ್ಟು ಬಾರಿ ಅಲೆದಾಡಿ ಒಂದು ಹಂತಕ್ಕೆ ತಂದಿದ್ದೇವೆ. ಸರ್ಕಾರದಿಂದ ₹ 48 ಲಕ್ಷ ನಗರಸಭೆಗೆ ವರ್ಗಾವಣೆಯಾದರೆ ಸಮುಚ್ಚಯವನ್ನು ಮುಂದಿನ ವರ್ಷದೊಳಗೆ ನಿರ್ಮಿಸಬಹುದು. ಸಂಘದ ಮುಂದಿನ ಅಧ್ಯಕ್ಷರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ

ನೀಡಿದರು.

ಗ್ರಂಥಾಲಯಕ್ಕೆ ನೂತನ ಕಟ್ಟಡ ನಿರ್ಮಿಸಲು ಸಾಕಷ್ಟು ಅಡೆತಡೆ ಎದುರಾದರೂ ವಕೀಲರು ಸಹಕಾರದಿಂದ ಕಟ್ಟಡ ಉದ್ಘಾಟನೆ ಮಾಡಲು ಸಾಧ್ಯವಾಯಿತು ಎಂದು ಸ್ಮರಿಸಿದರು.

ಸನ್ಮಾನ:‌ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿರುವ ವಕೀಲರ ಮಕ್ಕಳು, ನ್ಯಾಯಾಧೀಶರ ಹುದ್ದೆಗಳಿಗೆ ಆಯ್ಕೆಯಾಗಿರುವ ವಿಸ್ಮಿತಾ, ಹರೀಶ್ ಹಾಗೂ ಕುಸುಮಾ ಅವರನ್ನು ಸನ್ಮಾನಿಸಲಾಯಿತು.

ನ್ಯಾಯಾಧೀಶರಾದ ಶ್ರೀಕಾಂತ್, ವಿಜಯನ್, ಶ್ರೀಧರ್, ಗಣಪತಿ, ಕೃಪಾ, ಗೀತಾಂಜಲಿ, ಪಾರ್ವತಮ್ಮ, ಶೋಭಾ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುರಾಜ್‌ ಜಿ.ಶಿರೋಳ್, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಚ್.ವೆಂಕಟರಮಣ, ವಕೀಲರಾದ ಸಿ.ಬಿ.ಜಯರಾಂ, ಎಂ.ಜಿ.ವೆಂಕಟರೆಡ್ಡಿ, ಬಿಸಪ್ಪಗೌಡ, ಪಿ.ಎನ್.ಕೃಷ್ಣಾರೆಡ್ಡಿ ಭಾಗವಹಿಸಿದ್ದರು.

* * 

ಜಿಲ್ಲಾ ನ್ಯಾಯಾಲಯದಲ್ಲಿ ಡಿ.9ರಂದು ಅದಾಲತ್ ನಡೆಸಲಾಗುತ್ತಿದ್ದು, ರಾಜಿಸಂಧಾನದ ಮೂಲಕ ಇತ್ಯರ್ಥವಾಗಬಹುದಾದ ಪ್ರಕರಣಗಳ ನ್ಯಾಯ ತೀರ್ಮಾನಕ್ಕೆ ವಕೀಲರು ಸಹಕರಿಸಬೇಕು. ಅದಾಲತ್‌ನಲ್ಲಿ ವಕೀಲರು ಪಾಲ್ಗೊಂಡು ಅತಿ ಹೆಚ್ಚು ಪ್ರಕರಣಗಳ ವಿಲೇವಾರಿಗೆ ಸಹಕಾರ ಕೊಡಬೇಕು.

ಮಹಾಲಕ್ಷ್ಮಿ ನೇರಳೆ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.