7

ಹೈಟೆಕ್‌ ಬಸ್‌ ನಿಲ್ದಾಣದ ನೀಲನಕ್ಷೆ ಹಸ್ತಾಂತರ

Published:
Updated:
ಹೈಟೆಕ್‌ ಬಸ್‌ ನಿಲ್ದಾಣದ ನೀಲನಕ್ಷೆ ಹಸ್ತಾಂತರ

ಕೊಳ್ಳೇಗಾಲ: ‘ನಗರದ 1.80 ಎಕರೆ ಪ್ರದೇಶದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲು ಸರ್ಕಾರದಿಂದ ₹ 22.76 ಕೋಟಿ ಅನುದಾನ ಮಂಜೂರಾಗಿದೆ’ ಎಂದು ಶಾಸಕ ಎಸ್. ಜಯಣ್ಣ ಹೇಳಿದರು.

ನಗರ ಬಸ್ ನಿಲ್ದಾಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಬಸ್‌ ನಿಲ್ದಾಣದ ನೀಲನಕ್ಷೆ ಹಸ್ತಾಂತರಿಸಿ ಅವರು ಮಾತನಾಡಿದರು.

ಕೆಲವು ತಾಂತ್ರಿಕ ಕಾರಣಗಳಿಂದ ಕಾಮಗಾರಿ 3 ವರ್ಷ ತಡವಾಗಿದೆ. ಮತ್ತೆ ವಿಳಂಬ ಮಾಡದೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

ಕಾಮಗಾರಿಗೆ ಮೊದಲನೇ ಹಂತದಲ್ಲಿ ₹11 ಕೋಟಿ ಹಣ ಬಿಡುಗಡೆಯಾಗಿದ್ದು, 5 ರಿಂದ 6 ತಿಂಗಳೊಳಗೆ ಎರಡು ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತದೆ. ನಂತರ 2ನೇ ಹಂತ ಅನುದಾನ ಬಂದ ಕೂಡಲೇ ಉಳಿದ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಬಸ್‌ ನಿಲ್ದಾಣವನ್ನು ತಾತ್ಕಾಲಿಕವಾಗಿ ಬೇರೆ ಕಡೆಗೆ ಸ್ಥಳಾಂತರ ಮಾಡಲಾಗುತ್ತದೆ. ನಗರದ ಜನರು ಕಾಮಗಾರಿಯನ್ನು ಗುಣಮಟ್ಟದಿಂದ ಪೂರ್ಣಗೊಳಿಸಲು ಸಹಕರಿಸಬೇಕು ಎಂದು ಕೋರಿದರು.

ಖಾಸಗಿ ಬಸ್ ಏಜೆಂಟ್‌ರಿಂದ ಮನವಿ: ಖಾಸಗಿ ಬಸ್‌ಗಳಿಗೆ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡಬೇಕು ಎಂದು ಖಾಸಗಿ ಬಸ್‌ ಏಜೆಂಟ್‌ಗಳು ಶಾಸಕರಿಗೆ ಮನವಿ ಮಾಡಿದರು.

ನಗರದಲ್ಲಿ 50 ವರ್ಷದಿಂದ ಸಾರಿಗೆ ವ್ಯವಸ್ಥೆ ಕಲ್ಪಿಸಿರುವ ಖಾಸಗಿ ಬಸ್‌ಗಳಿಗೆ ನಿಲ್ದಾಣದಲ್ಲಿ ಅವಕಾಶ ನೀಡದೆ ನಗರದಿಂದ 3 ಕಿ.ಮೀ ದೂರದಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದ ಹೆಚ್ಚಿನ ತೊಂದರೆಯಾಗುತ್ತದೆ. ನಗರದೊಳಗೇ ಖಾಸಗಿ ಬಸ್‌ ನಿಲ್ದಾಣದ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಶಾಸಕ ಜಯಣ್ಣ ಮಾತನಾಡಿ, ಖಾಸಗಿ ಬಸ್‌ ನಿಲುಗಡೆಗೂ ಅವಕಾಶ ನೀಡುತ್ತೇವೆ. ಜತೆಗೆ, ಸಿಟಿ ಬಸ್‌ ವ್ಯವಸ್ಥೆ ಮಾಡಲಾಗುವುದು ಎಂದರು. ಈ ವೇಳೆ ಕೆಲಹೊತ್ತು ಗದ್ದಲದ ವಾತಾವರಣ ನಿರ್ಮಾಣವಾಯಿತು. ಬಳಿಕ, ಪೊಲೀಸರು ಮಧ್ಯಪ್ರವೇಶಿಸಿ ಶಾಂತಗೊಳಿಸಿದರು.

ನಗರಸಭೆ ಅಧ್ಯಕ್ಷ ಶಾಂತರಾಜು, ಉಪಾಧ್ಯಕ್ಷ ನಂಜುಂಡ, ಸ್ಥಾಯಿಸಮಿತಿ ಅಧ್ಯಕ್ಷ ಹರ್ಷ, ಸದಸ್ಯರಾದ ಪ್ರಶಾಂತ್, ಮಲ್ಲಿಕಾರ್ಜುನ, ಶಂಕರ್, ರಮೇಶ್, ಗಿರೀಶ್, ಮನೋಹರ್, ಪೌರಾಯುಕ್ತ ಡಿ.ಕೆ. ಲಿಂಗರಾಜು, ಕೆ.ಎಸ್.ಆರ್.ಟಿ.ಸಿ. ಕಾರ್ಯಪಾಲಕ ಎಂಜಿನಿಯರ್‌ ನಾಗರಾಜು, ವ್ಯವಸ್ಥಾಪಕ ಸುಬ್ರಮಣ್ಯ, ಗುತ್ತಿಗೆದಾರರಾದ ಸದಾಶಿವು, ನಾಗರಾಜು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry