ಗುರುವಾರ , ಮಾರ್ಚ್ 4, 2021
30 °C

‘ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಮರ ಸಹಮತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಮರ ಸಹಮತ’

ಉಡುಪಿ: ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತಂತೆ ಮುಸ್ಲಿಂ ಹಾಗೂ ಹಿಂದೂಗಳ ಜತೆ ಮಾತುಕತೆ ನಡೆಸಲಾಗಿದೆ. ಮುಸ್ಲಿಮರು ಮಂದಿರ ನಿರ್ಮಾಣಕ್ಕೆ ಸಹಮತ ನೀಡಿದ್ದಾರೆಯೇ ಹೊರತು ಯಾರೂ ವಿರೋಧಿಸಿಲ್ಲ’ ಎಂದು ಆರ್ಟ್ ಆಫ್‌ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್‌ ಗುರೂಜಿ ಹೇಳಿದರು.

ಬುಧವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತ ಪ್ರಕರಣ ನ್ಯಾಯಾಲಯದಲ್ಲಿ ಇದೆ. ನ್ಯಾಯಾಲಯದ ಹೊರಗೆ ಸಮಸ್ಯೆ ಬಗೆಹರಿಸಲು ಮುಸ್ಲಿಂ ಹಾಗೂ ಹಿಂದೂಗಳ ಜತೆ ಮಾತುಕತೆ ನಡೆಸಲಾಗಿದೆ. ರಾಮ ಜನ್ಮಭೂಮಿಯಲ್ಲಿಯೇ ರಾಮ ಮಂದಿರ ನಿರ್ಮಾಣವಾಗುವಂತಾಗಬೇಕು ಎನ್ನುವುದಕ್ಕೆ ಮುಸ್ಲಿಮರ ಸಹಮತವಿದೆ’ ಎಂದರು.

ಧರ್ಮ ಸಂಸತ್‌ಗೆ ಗೈರಾಗಿದ್ದ ಬಗ್ಗೆ ಕೇಳಿದಾಗ, ‘ಕಾರಣಾಂತರಗಳಿಂದ ಬರಲು ಆಗಲಿಲ್ಲ. ಹೀಗಾಗಿ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುವುದಕ್ಕೆ ಬಂದಿದ್ದೇನೆ’ ಎಂದರು.

ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ‘ಆಯೋಧ್ಯೆ ವಿವಾದ ನ್ಯಾಯಾಲಯದಲ್ಲಿ ಬಗೆಹರಿದರೆ ಅದು ಒಂದು ಕಡೆಯವರಿಗೆ ಗೆಲುವಾದರೂ, ಇನ್ನೊಂದು ಕಡೆಯವರಿಗೆ ಸೋಲಾಗುತ್ತದೆ. ಇದರಿಂದ ದೇಶದಲ್ಲಿ ಸೌಹಾರ್ದತೆ ನೆಲೆಸಲು ಸಾಧ್ಯ ಆಗುವುದಿಲ್ಲ. ವಿವಾದಗಳು ಮುಂದುವರಿಯುತ್ತದೆ’ ಎಂದು ಹೇಳಿದರು.

‘ದೇಶದಲ್ಲಿ ಎರಡು ಸಮುದಾಯದ ನಡುವೆ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಈ ಎರಡೂ ಕಡೆಯವರ ಒಪ್ಪಿಗೆ ಪಡೆದು ಸೌಹಾರ್ದಯುತವಾಗಿ ರಾಮ ಮಂದಿರ ಕಟ್ಟಬಹುದು. ಈ ಕಾರಣಕ್ಕೆ ವಿವಾದವನ್ನು ನ್ಯಾಯಾಲಯದ ಹೊರಗೆ ಬಗೆಹರಿಸುವ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಪ್ರಯತ್ನ ಒಳ್ಳೆಯದು. ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಮುಸ್ಲಿಮರಲ್ಲಿ ಯಾವುದೇ ಆಕ್ಷೇಪ ಇಲ್ಲ, ಬದಲಿಗೆ ಸಹಮತವೇ ಇದೆ. ಆದರೆ, ಅದು ಸಂಘರ್ಷದ ಮೂಲಕ ಅಲ್ಲ, ಸೌಹಾರ್ದದಿಂದ ನಡೆಯಬೇಕು ಎಂದು ಅವರು ಆಶಿಸಿದ್ದಾರೆ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.