ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡುಕರ ತಾಣವಾದ ಶೌಚಾಲಯ!

ಜಿಲ್ಲಾ ಆಸ್ಪತ್ರೆ ಹೊಸ ಕಟ್ಟಡದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ‘ಅವ್ಯವಸ್ಥೆ’, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ–ಆರೋಪ
Last Updated 7 ಡಿಸೆಂಬರ್ 2017, 7:12 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲಾ ಆಸ್ಪತ್ರೆ ನೂತನ ಕಟ್ಟಡದ ಮೊದಲ ಮಹಡಿಯಲ್ಲಿರುವ ಪುರುಷರ ಶೌಚಾಲಯದಲ್ಲಿ (ಸಂಖ್ಯೆ 135) ಇಟ್ಟಿರುವ ಕಸ ಹಾಕುವ ಬಾಕ್ಸ್‌ನಲ್ಲಿ ಬುಧವಾರ ಸುಮಾರು 25ಕ್ಕೂ ಅಧಿಕ ಮದ್ಯದ ಪ್ಯಾಕೇಟ್‌ಗಳು ಪತ್ತೆಯಾಗಿವೆ. ಇದಕ್ಕೆ
ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಶೌಚಾಲಯದೊಳಗಿನ ದೃಶ್ಯ ನೋಡಿದರೆ ಅನೇಕ ದಿನಗಳಿಂದ ಶೌಚಾಲಯವನ್ನು ಕೆಲವರು ಬಾರ್‌ನಂತೆ ಬಳಕೆ ಮಾಡಿಕೊಳ್ಳುತ್ತಿರುವುದು ಗೋಚರಿಸಿತು. ಭದ್ರತಾ ಸಿಬ್ಬಂದಿಯನ್ನು ಹೊಂದಿರುವ ಆಸ್ಪತ್ರೆಯೊಳಗೆ ನಡೆಯುತ್ತಿರುವ ಈ ವಿದ್ಯಮಾನ ಈವರೆಗೆ ಆಡಳಿತಾಧಿಕಾರಿ ಗಮನಕ್ಕೆ ಏಕೆ ಬಂದಿಲ್ಲ ಎನ್ನುವ ಪ್ರಶ್ನೆಯನ್ನು ಆಸ್ಪತ್ರೆಗೆ ಬರುವ ನಾಗರಿಕರು ಕೇಳುತ್ತಿದ್ದಾರೆ.

ಎರಡು ತಿಂಗಳ ಹಿಂದಷ್ಟೇ ಕಟ್ಟಡದ ಎರಡನೇ ಮಹಡಿಯಲ್ಲಿರುವ ಐಸಿಯು ಕೊಠಡಿಗೆ ನಾಯಿಗಳು ನುಗ್ಗಿ ಕಸದ ಬುಟ್ಟಿಯನ್ನು ಚೆಲ್ಲಾಪಿಲ್ಲಿ ಮಾಡಿ, ರೋಗಿಗಳಲ್ಲಿ ಭಯದ ವಾತಾವರಣ ಮೂಡಿಸಿದ್ದವು. ಇದು ಮಾಸುವ ಮುನ್ನವೇ ಕುಡುಕರು ‘ರಾಜಾರೋಷ’ವಾಗಿ ಆಸ್ಪತ್ರೆ ಶೌಚಾಲಯವನ್ನು ತಮ್ಮ ‘ಕೆಟ್ಟ ಚಟ’ಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ‘ಆರೋಗ್ಯ ದೇಗುಲ’ದಂತಿರಬೇಕಾದ ಆಸ್ಪತ್ರೆಯೊಳಗಿನ ‘ಅವ್ಯವಸ್ಥೆ’ಗೆ ಹಿಡಿದ ಕೈಗನ್ನಡಿಯಂತಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ₹ 23.35 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ನೂತನ ಕಟ್ಟಡ ಉದ್ಘಾಟನೆಗೊಂಡು ವರ್ಷದ ನಂತರ ಇಲ್ಲಿಗೆ ಆಸ್ಪತ್ರೆ ಸ್ಥಳಾಂತರಗೊಂಡಿತ್ತು. ಹೊಸ ಕಟ್ಟಡದಲ್ಲಿ ಆಸ್ಪತ್ರೆ ಕಾರ್ಯಾರಂಭ ಮಾಡಿ ಎಂಟು ತಿಂಗಳು ಕಳೆದಿವೆಯಷ್ಟೇ. ಆಸ್ಪತ್ರೆ ಶುಚಿತ್ವಕ್ಕೆ ಆದ್ಯತೆ ನೀಡಬೇಕಾದ ಸಿಬ್ಬಂದಿ ಮತ್ತು ಆಡಳಿತಾಧಿಕಾರಿ ತಮ್ಮ ಕೆಲಸ ಸರಿಯಾಗಿ ನಿಭಾಯಿಸುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕರದು.

‘ಶೌಚಕ್ಕೆ ಹೋದವನ ಕಣ್ಣು ಶೌಚಾಲಯದೊಳಗಿನ ಕಸದ ಬುಟ್ಟಿಗೆ ಕಡೆಗೆ ಹರಿಯಿತು. ಅವಕ್ಕಾಗಿ ಹೋದೆ. ಒಂದಲ್ಲ, ಎರಡಲ್ಲ ಮದ್ಯದ ಪಾಕೇಟ್‌ಗಳು, ಪ್ಲಾಸ್ಟಿಕ್‌ ಗ್ಲಾಸ್‌ಗಳಿಂದ ಅಲ್ಲಿನ ಬಾಕ್ಸ್‌ ತುಂಬಿತ್ತು. ಅದನ್ನು ನೋಡಿದವನಿಗೆ ಒಂದು ಕ್ಷಣ ನಾನು ಆಸ್ಪತ್ರೆಯಲ್ಲಿದ್ದೆನಾ ಅಥವಾ ಬಾರ್‌ನಲ್ಲಾ ಎಂದು ತಿಳಿಯಲ್ಲಿಲ್ಲ. ಅಲ್ಲಿನ ದೃಶ್ಯ ನೋಡಿ ಮುಜುಗರವಾಯಿತು’ ಎಂದು ಸುಬ್ಬರಾಯಪೇಟೆ ನಿವಾಸಿ ದೀಪು ತಿಳಿಸಿದರು.

‘ಜನರು ಆರೋಗ್ಯ ಬಯಸಿ ಆಸ್ಪತ್ರೆಗೆ ಬರುತ್ತಾರೆ. ಆದರೆ ಅಲ್ಲಿಯೇ ಜನರಿಗೆ ತಪ್ಪು ಸಂದೇಶ ಹೋಗುವಂತಹ ಪರಿಸರ ಸೃಷ್ಟಿಯಾದರೆ? ಅಧಿಕಾರಿಗಳ ನಿಷ್ಕಾಳಜಿಯಿಂದ ಜನರಲ್ಲಿ ಆಸ್ಪತ್ರೆ ಬಗ್ಗೆ ಅಸಹ್ಯಕರ ಭಾವನೆ ಮೂಡುವ ವಾತಾವರಣ ನಿರ್ಮಾಣವಾಗಿದೆ. ಇಷ್ಟಾದರೂ ನಮ್ಮ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳದಿರುವುದು ದುರಂತ’ ಎಂದು ಬೇಸರ ವ್ಯಕ್ತಪಡಿಸಿದರು.

ಒಳಗಿನವರ ಕೆಲಸ?: ‘ಆಸ್ಪತ್ರೆಗೆ ಬರುವ ಸಾರ್ವಜನಿಕರು ಶೌಚಾಲಯದಲ್ಲಿ ಕುಡಿದಿದ್ದರೆ ಒಂದೋ, ಎರಡೋ ಪ್ಯಾಕೇಟ್‌ಗಳು ಬಿದ್ದಿರುತ್ತಿದ್ದವು. ಆದರೆ ಒಂದು ಬಾಕ್ಸ್‌ ತುಂಬುವಷ್ಟು ಪಾಕೇಟ್‌ಗಳ ಜತೆಗೆ ಗ್ಲಾಸ್‌ಗಳು ಕಾಣಿಸಿಕೊಂಡಿರುವುದು ಹಲವು ಸಂಶಯಗಳನ್ನು ಉಂಟು ಮಾಡುತ್ತಿದೆ. ಆಸ್ಪತ್ರೆಯ ಕೆಲ ಸಿಬ್ಬಂದಿಯೇ ಇಂತಹ ಕೆಲಸ ಏಕೆ ಮಾಡುತ್ತಿರಬಾರದು? ಈ ಬಗ್ಗೆ ತನಿಖೆ ನಡೆಯಲಿ. ಆಗ ಸತ್ಯ ಹೊರಬರುತ್ತದೆ’ ಎಂದು ಎಂ.ಜಿ.ರಸ್ತೆ ನಿವಾಸಿ ಅವಿನಾಶ್‌ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT