ಶನಿವಾರ, ಮಾರ್ಚ್ 6, 2021
24 °C
ಜಿಲ್ಲೆಯ ಹೆಸರು ಪಸರಿಸುತ್ತಿದೆ ಸಸಿ

ಆರತಕ್ಷತೆಗೆ ಸಿದ್ಧು ಹಲಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರತಕ್ಷತೆಗೆ ಸಿದ್ಧು ಹಲಸು

ತೋವಿನಕೆರೆ: ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಚೇಳೂರಿನ ಸಿದ್ದು ಹಲಸು ದಿನದಿಂದ ದಿನಕ್ಕೆ ಗಮನ ಸೆಳೆಯುತ್ತಿದೆ. ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ಎಲ್.ಮಹೇಶ್ವರ್ ಅವರು ತಮ್ಮ ಮಗನ ಮದುವೆ ಆರತಕ್ಷತೆಯನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿ.9ರಂದು ಹಮ್ಮಿಕೊಂಡಿದ್ದು ಸಮಾರಂಭಕ್ಕೆ ಬರುವ ಅತಿಥಿಗಳಿಗೆ ಸಿದ್ಧು ಹಲಸಿನ ಸಸಿಗಳನ್ನು ವಿತರಿಸಲು ಮುಂದಾಗಿದ್ದಾರೆ.

ಹತ್ತಕ್ಕೂ ಹೆಚ್ಚು ಹಲಸಿನ ಖಾದ್ಯಗಳು ಮೆನುವಿನ ಪಟ್ಟಿಯಲ್ಲಿವೆ. ‘ಎಲ್ಲ ಅತಿಥಿಗಳಿಗೂ ಸಸಿಗಳನ್ನು ಕೊಡುವ ಉದ್ದೇಶ ಕುಲಪತಿ ಅವರಿಗೆ ಇತ್ತು. ಆದರೆ ಅಗತ್ಯ ಸಸಿಗಳು ದೊರೆಯುತ್ತಿಲ್ಲ. ಆದ್ದರಿಂದ ಸಿದ್ಧು ಹಲಸಿನ ಜತೆಗೆ ಇತರ ಹಲಸಿನ ತಳಿಗಳನ್ನು ನೀಡುತ್ತಿದ್ದಾರೆ’ ಎಂದು ತಿಳಿಸಿದರು ಮಹೇಶ್ವರ್ ಅವರ ಆಪ್ತರು.

ಹಿರೇಹಳ್ಳಿಯ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದಿಂದ ಸಿದ್ಧು ಹಲಸನ್ನು ಮತ್ತು ಖಾಸಗಿ ಫಾರಂಗಳಿಗೆ ಇತರೆ ಸಸಿಗಳನ್ನು ಖರೀದಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ತಮ್ಮ ಮಗಳ ಮದುವೆ ಸಮಾರಂಭಕ್ಕೂ ತೋವಿನಕೆರೆಯಿಂದ ಸಾವಿರಾರು ಎಳೆಯ ಹಲಸಿನ ಕಾಯಿಗಳನ್ನು ತರಿಸಿಕೊಂಡಿದ್ದರು.

‘ಮಹೇಶ್ವರ್ ಅವರಂತೆ ಹಲಸಿನ ಬಗ್ಗೆ ಅಧಿಕಾರಿಗಳಿಗೆ ಪ್ರೀತಿ ಬಂದರೆ. ಬೆಳಗಾರರ ಬದುಕು ಬಂಗಾರವಾಗುತ್ತದೆ’ ಎನ್ನುತ್ತಾರೆ ಶ್ರಮಿಕ ಸಿರಿ ಹಲಸು ಬೆಳೆಗಾರರ ಸಂಘದ ಕಾರ್ಯದರ್ಶಿ ಜೆ.ಸಿ.ಸೋಮಶೇಖರ್.

‘ಕೆಲವು ವರ್ಷಗಳ ಹಿಂದೆ ದಕ್ಷಿಣ ವಿಯಟ್ನಾಂನ ಹಲಸಿನ ವಿಜ್ಙಾನಿ ವ್ಯಾನ್ ಟ್ರೇ ಜಿಲ್ಲೆಯ ಹಲಸಿನ ಹಣ್ಣುಗಳು, ಹಲಸಿನ ಖಾದ್ಯಗಳ ರುಚಿ ನೋಡಲು ತೋವಿನಕೆರೆಗೆ ಭೇಟಿ ನೀಡಿದ್ದರು. ದಿನ ಪೂರ್ತಿ ರೈತರು ಮತ್ತು ಮಹಿಳೆಯರ ಜತೆ ಸಂವಾದ ನಡೆಸಿದ್ದರು’ ಎಂದು ನೆನಪಿಸಿಕೊಳ್ಳುವರು ಹಳ್ಳಿಸಿರಿ ಸ್ವಸಹಾಯ ಸಂಘದ ಮಂಜಮ್ಮ.

‘ಜಿಲ್ಲೆಯಲ್ಲಿ ಹಲಸಿನ ಹಣ್ಣಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಬೇಕು. ಹಲಸಿನ ಖಾದ್ಯಗಳನ್ನು ಸಮಾರಂಭಗಳಲ್ಲಿ ಉಪಯೋಗಿಸುವ ಬಂದರೆ ಉತ್ತಮ ಆದಾಯ ಪಡೆಯಬಹುದು’ ಎನ್ನುತ್ತಾರೆ ಮಧುಗಿರಿ ತಾಲ್ಲೂಕಿನ ರಂಗಾಪುರದ ಕಾಮಣ್ಣ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.