ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀಕೃತ ವಿಮಾನ ನಿಲ್ದಾಣ ಉದ್ಘಾಟನೆ 12ಕ್ಕೆ

ಬೆಂಗಳೂರು– ಹುಬ್ಬಳ್ಳಿ – ಮುಂಬೈ ನಡುವೆ ವಿಮಾನ ಸಂಚಾರ
Last Updated 8 ಡಿಸೆಂಬರ್ 2017, 5:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ₹142 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಿರುವ ಹುಬ್ಬಳ್ಳಿ ವಿಮಾನ ನಿಲ್ದಾಣದ ಉದ್ಘಾಟನೆ ಡಿ.12ರಂದು ನಡೆಯಲಿದೆ. ಅದೇ ದಿನ ಬೆಂಗಳೂರು– ಹುಬ್ಬಳ್ಳಿ– ಮುಂಬೈ ವಿಮಾನ ಸಂಚಾರಕ್ಕೂ ಚಾಲನೆ ಸಿಗಲಿದೆ.

ಕೇಂದ್ರ ವಿಮಾನಯಾನ ಸಚಿವ ಅಶೋಕ ಗಜಪತಿ ರಾಜು, ನಿಲ್ದಾಣದ ಹೊಸ ಟರ್ಮಿನಲ್‌ ಉದ್ಘಾಟಿಸಲಿದ್ದಾರೆ ಎಂದು ಸಂಸದ ಪ್ರಹ್ಲಾದ ಜೋಶಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಹೊಸದೇನು?: ‘3,600 ಚದರ ಮೀಟರ್‌ ವಿಸ್ತೀರ್ಣದಲ್ಲಿ ಹವಾನಿಯಂತ್ರಿತ ಟರ್ಮಿನಲ್‌ ನಿರ್ಮಿಸಲಾಗಿದೆ. ಈ ಹಿಂದೆ ಇದ್ದ 1,674 ಮೀಟರ್‌ ರನ್‌ವೇಯನ್ನು 2,600 ಮೀಟರ್‌ಗೆ ವಿಸ್ತರಿಸಲಾಗಿದೆ. ಹೊಸದಾಗಿ ಏರ್‌ ಟ್ರಾಫಿಕ್‌ ಕಂಟ್ರೋಲ್‌ (ಎಟಿಸಿ) ನಿರ್ಮಿಸಲಾಗಿದೆ. ಮೂರು ಏರ್‌ಬಸ್‌ ನಿಲುಗಡೆಗೆ ನಿಲ್ದಾಣ ನಿರ್ಮಿಸಲಾಗಿದೆ’ ಎಂದು ಹೇಳಿದರು.

ಮುಂಬೈಗೆ ವಿಮಾನ: ಒಟ್ಟು 124 ಆಸನಗಳ ಏರ್‌ ಇಂಡಿಯಾ ವಿಮಾನವು ಬೆಂಗಳೂರು– ಹುಬ್ಬಳ್ಳಿ– ಮುಂಬೈ ನಡುವೆ ಪ್ರತಿ ಮಂಗಳವಾರ, ಬುಧವಾರ ಮತ್ತು ಶನಿವಾರ ಸಂಚರಿಸಲಿದೆ.

ಮಧ್ಯಾಹ್ನ 12ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನವು 12.50ಕ್ಕೆ ಹುಬ್ಬಳ್ಳಿಗೆ ಬರಲಿದೆ. ಹುಬ್ಬಳ್ಳಿಯಿಂದ ಮಧ್ಯಾಹ್ನ 1.25ಕ್ಕೆ ಹೊರಟು 2.30ಕ್ಕೆ ಮುಂಬೈ ತಲುಪಲಿದೆ. ಬಳಿಕ ಅದೇ ದಿನ ಮಧ್ಯಾಹ್ನ 3.25ಕ್ಕೆ ಮುಂಬೈನಿಂದ ಹೊರಟು ಸಂಜೆ 4.35ಕ್ಕೆ ಹುಬ್ಬಳ್ಳಿಗೆ ಬರಲಿದೆ. ಸಂಜೆ 6.10ಕ್ಕೆ ಹುಬ್ಬಳ್ಳಿಯಿಂದ ಹೊರಟು ಸಂಜೆ 7ಕ್ಕೆ ಬೆಂಗಳೂರು ತಲುಪಲಿದೆ ಎಂದು ಅವರು ವಿವರಿಸಿದರು.

ಹುಬ್ಬಳ್ಳಿ– ಮುಂಬೈ ನಡುವಿನ ಪ್ರಯಾಣಕ್ಕೆ ಏರ್‌ ಇಂಡಿಯಾ ₹3,840 ಆರಂಭಿಕ ದರ ನಿಗದಿಪಡಿಸಿದೆ. ಹುಬ್ಬಳ್ಳಿ–ಬೆಂಗಳೂರಿನ ದರ ಇನ್ನೂ ನಿರ್ಧರಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ನಿಲುಗಡೆಗೆ ಬಳಕೆ: ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಮಾತನಾಡಿ, ‘ಹುಬ್ಬಳ್ಳಿ– ಬೆಂಗಳೂರು ನಡುವೆ ವಿಮಾನ ಸಂಚಾರಕ್ಕೆ ಸಾಕಷ್ಟು ಬೇಡಿಕೆ ಇತ್ತು. ಶೀಘ್ರದಲ್ಲೇ ಈ ನಗರಗಳ ನಡುವೆ ಪ್ರತಿ ದಿನ ವಿಮಾನ ಸಂಚಾರ ಆರಂಭವಾಗಲಿದೆ’ ಎಂದು ತಿಳಿಸಿದರು.

ಮುಂಬೈ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ವಿಮಾನಗಳ ನಿಲುಗಡೆಗೆ ಜಾಗ ಸಾಲುತ್ತಿಲ್ಲ. ಹೀಗಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ವಿಮಾನಗಳ ನಿಲುಗಡೆಗೆ ಬಳಸಿಕೊಳ್ಳುವ ಪ್ರಸ್ತಾವ ಬಂದಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT