ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯ ಆಹ್ವಾನಿಸುತ್ತಿರುವ ಶಿಥಿಲ ಓವರ್‌ಹೆಡ್‌ ಟ್ಯಾಂಕ್‌

Last Updated 8 ಡಿಸೆಂಬರ್ 2017, 9:00 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ದೇವಪುರ ಗ್ರಾಮ ಪಂಚಾಯ್ತಿ ಹೊನ್ನೇನಹಳ್ಳಿಯಲ್ಲಿ ಶಿಥಿಲಗೊಂಡಿರುವ ಓವರ್‌ಹೆಡ್‌ ಟ್ಯಾಂಕ್‌ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಗ್ರಾಮದಲ್ಲಿ ಸುಮಾರು 1,000 ಮನೆಗಳಿದ್ದು, 5,000ಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ. 30 ವರ್ಷದ ಹಿಂದೆ ಗ್ರಾಮದಲ್ಲಿ ನಿರ್ಮಿಸಿದ್ದ 50,000 ನೀರು ಸಂಗ್ರಹಣಾ ಸಾಮರ್ಥ್ಯದ ಓವರ್‌ಹೆಡ್‌ ಟ್ಯಾಂಕ್‌ನ ಪಿಲ್ಲರ್‌ ನಿರ್ಮಾಣಕ್ಕೆ ಬಳಸಿರುವ ಸಿಮೆಂಟ್‌ ಕಳಚಿ ಬೀಳುತ್ತಿದೆ. ಕಬ್ಬಿಣವೂ ತುಕ್ಕು ಹಿಡಿದಿದ್ದು, ಕುಸಿದುಬಿದ್ದು ದೊಡ್ಡ ಅನಾಹುತ ಸಂಭವಿಸುವ ಭೀತಿ ಜನರಿಗೆ ಎದುರಾಗಿದೆ.

ಓವರ್‌ಹೆಡ್‌ ಟ್ಯಾಂಕ್‌ ಗ್ರಾಮದ ದಲಿತರ ಕಾಲೊನಿಯಲ್ಲಿದ್ದು ಸುತ್ತಮುತ್ತ ಅನೇಕ ಮನೆಗಳಿವೆ. ಶಾಲೆಗೆ ಹೋಗುವ ಮಕ್ಕಳು ನಿತ್ಯವೂ ಟ್ಯಾಂಕ್‌ನ ಕೆಳಗೆ ಆಟ ಆಡುವುದು, ಓದುವುದು, ಬರೆದುಕೊಳ್ಳುವ ಕೆಲಸ ಮಾಡುತ್ತಿರುತ್ತಾರೆ. ಟ್ಯಾಂಕ್‌ ಕಳಚಿ ಬೀಳುವ ಬಗ್ಗೆ ಆತಂಕದಲ್ಲಿರುವ ಪೋಷಕರು, ‘ಮಕ್ಳೇ ಟ್ಯಾಂಕ್‌ ಕಳಚಿ ಬಿದೀತು. ಅಲ್ಲಿ ಇರಬೇಡ್ರಿ ಇತ್ತ ಓಡಿ ಬರ‍್ರೀ’ ಎಂದು ಎಚ್ಚರಿಕೆ ನೀಡುತ್ತಿದ್ದಾರೆ.

ಓವರ್‌ಹೆಡ್‌ ಟ್ಯಾಂಕ್‌ ಕುಸಿದು ಬಿದ್ದು ದೊಡ್ಡ ಅನಾಹುತ ಸಂಭವಿಸುವ ಮೊದಲು ಅದನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಗ್ರಾಮ ಪಂಚಾಯ್ತಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಓವರ್‌ಹೆಡ್‌ ಟ್ಯಾಂಕ್‌ ತೆರವುಗೊಳಿಸುವಷ್ಟು ಆಧುನಿಕ ತಂತ್ರಜ್ಞಾನ ಗ್ರಾಮ ಪಂಚಾಯ್ತಿಯಲ್ಲಿ ಇಲ್ಲ. ಈ ಬಗ್ಗೆ ತಾಂತ್ರಿಕ ಮಾಹಿತಿ ಇರುವ ಪಂಚಾಯತ್‌ರಾಜ್‌ ಹಾಗೂ ಕುಡಿಯುವ ನೀರು, ನೈರ್ಮಲ್ಯ ವಿಭಾಗದವರು ಕ್ರಮ ಕೈಗೊಳ್ಳಬೇಕು ಎಂದು ಸಬೂಬು ಹೇಳುತ್ತಾ ಕಾಲ ಕಳೆಯುತ್ತಿದ್ದಾರೆ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಡಿ.ಮಲ್ಲೇಶ್‌ ದೂರಿದರು.

ಗ್ರಾಮದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕದ ನಿರ್ವಹಣೆ ಕೊರತೆಯಿಂದ ಪ್ರತಿ ತಿಂಗಳು ದುರಸ್ತಿಗೆ ಬರುತ್ತಿದೆ. ಆಗ ಶುದ್ಧ ನೀರಿಗೆ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಕಿರುನೀರು ಸರಬರಾಜಿನ ಎರಡು ಟ್ಯಾಂಕ್‌ಗಳಿಗೆ ಪೈಪ್‌ಲೈನ್‌ ವ್ಯವಸ್ಥೆ ಕಲ್ಪಿಸಿಲ್ಲ. ಓವರ್‌ಹೆಡ್‌ ಟ್ಯಾಂಕ್‌ನ ಮುಖ್ಯ ಪೈಪ್‌ಲೈನ್‌ ಸಹ ಅಲ್ಲಲ್ಲಿ ಒಡೆದಿರುವುದರಿಂದ ನೀರು ಕಲುಷಿತವಾಗುತ್ತಿದೆ. ಒಂದು ಕೊಳವೆಬಾವಿ ನಿರಂತರವಾಗಿ ಹರಿಯುತ್ತಿರುತ್ತದೆ.

ಇದರಿಂದ ಸಾಕಷ್ಟು ನೀರು ಪೋಲಾಗುತ್ತಿದೆ. ಚರಂಡಿ ಸ್ವಚ್ಛತೆಯೂ ಇಲ್ಲವಾಗಿದೆ. ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜನರು ಜೀವಿಸುವಂತಾಗಿದೆ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ಮಾರುತಿ. ಗ್ರಾಮದ ಜನರ ಹಿತ ಕಾಪಾಡಲು ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

* * 

ಥಿಲಗೊಂಡಿರುವ ಓವರ್‌ಹೆಡ್‌ ಟ್ಯಾಂಕ್‌ನ ಸುತ್ತಮುತ್ತ ಮನೆಗಳಿದ್ದು, ಆಧುನಿಕ ತಂತ್ರಜ್ಞಾನ ಬಳಸಿ ಅದನ್ನು ತೆರವುಗೊಳಿಸುವಂತೆ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಉಪವಿಭಾಗಕ್ಕೆ ಪತ್ರ ಬರೆಯಲಾಗುವುದು.
ಕೆ.ಎನ್‌.ಮಹಾಂತೇಶ್‌, ಇಒ ಹೊಸದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT