ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿಗೆ ತಕ್ಕ ಮಗ

Last Updated 8 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನಿರ್ದೇಶಕ ಶಶಾಂಕ್‌ ವಯಸ್ಸಿನಲ್ಲಿ ಒಂದಿಷ್ಟು ಹಿಂದಕ್ಕೆ ಚಲಿಸಿದಂತೆಯೂ, ಉತ್ಸಾಹದಲ್ಲಿ ಮತ್ತಷ್ಟು ಎತ್ತರಕ್ಕೆ ಜಿಗಿದಂತೆಯೂ ಕಾಣುತ್ತಿದ್ದರು. ಸಣ್ಣಗೆ ಕತ್ತರಿಸಿಕೊಂಡ ಕೂದಲು, ತೆಳುಗೊಂಡ ಹೊಟ್ಟೆಯಷ್ಟೇ ಅಲ್ಲ, ಮುಖದಲ್ಲಿನ ನಗುವೂ ಅವರ ಉತ್ಸಾಹವನ್ನು ಸೂಚಿಸುತ್ತಿತ್ತು.

‘ಇಂದು ನನ್ನ ಕನಸು ನನಸುಗೊಂಡ ದಿನ’ ಎಂದು ಪೀಠಿಕೆ ಇಟ್ಟು ಅವರು ತಮ್ಮ ಕನಸಿನ ಕತೆಯನ್ನು ಹೇಳಲು ಶುರುಮಾಡಿದರು.

‘ನಾನು ನಿರ್ದೇಶಕನಾಗಿ ಸಿನಿಮಾರಂಗಕ್ಕೆ ಬಂದವನು. ನಿರ್ಮಾಪಕ ಆಗಬೇಕು ಎಂಬ ಆಸೆ ಯಾವಾಗಲೂ ಇತ್ತು. ಇಂದು ನನ್ನ ಕನಸು ನನಸಾಗಿದೆ. ಶಶಾಂಕ್‌ ಸಿನಿಮಾಸ್‌ ಎಂಬ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿ ’ತಾಯಿಗೆ ತಕ್ಕ ಮಗ’ ಎಂಬ ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ’ ಎಂದು ತಮ್ಮ ಖುಷಿಯ ಹಿಂದಿನ ಕಾರಣವನ್ನು ಬಿಚ್ಚಿಟ್ಟರು.

‘ತಾಯಿಗೆ ತಕ್ಕ ಮಗ’ ಚಿತ್ರಕ್ಕೆ ಅಜಯ್‌ ರಾವ್‌ ನಾಯಕ. ಇದು ಅಜಯ್‌ ಮತ್ತು ಶಶಾಂಕ್‌ ಅವರ ಮೂರನೇ ಸಿನಿಮಾ. ಹಾಗೆಯೇ  ಹದಿನಾಲ್ಕು ವರ್ಷಗಳ ಹಿಂದಿನ ‘ಎಕ್ಸ್‌ಕ್ಯೂಸ್‌ ಮೀ’ ಚಿತ್ರದ ನಂತರ ಸುಮಲತಾ ತಾಯಿಯಾಗಿ ನಟಿಸುತ್ತಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಶಶಾಂಕ್‌ ತಾವು ಕಥೆ, ಚಿತ್ರಕಥೆ ಬರೆದು ಹಣ ಹೂಡುತ್ತಿರುವ ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ವೇದ್‌ ಗುರು ಎಂಬ ಹೊಸ ನಿರ್ದೇಶಕನಿಗೆ ನೀಡಿದ್ದಾರೆ.

‘ಈ ಕಥೆ ಹುಟ್ಟಿರುವುದೇ ಅಜಯ್‌ ಮತ್ತು ಅವರ ತಾಯಿ ನಡುವಿನ ಬಾಂಧವ್ಯವನ್ನು ನೋಡಿ. ಅವರ ನಡುವೆ ಇರುವ ಪ್ರೀತಿ, ಕಾಳಜಿ, ಅಕ್ಕರೆ ಎಲ್ಲವೂ ನನ್ನಲ್ಲಿ ಮೂರು ವರ್ಷಗಳ ಹಿಂದೆಯೇ ಒಂದು ಕಥೆಯ ಎಳೆಯನ್ನು ಹೊಳೆಯಿಸಿದ್ದವು. ಕಳೆದ ಆರು ತಿಂಗಳಿಂದ ನಮ್ಮ ತಂಡದ ಮೂವರು ಕೂತು ಆ ಎಳೆಯನ್ನು ಬೆಳೆಸಿದ್ದೇವೆ. ಈಗ ಆ ಥಾಟ್‌ಗೆ ಒಂದು ಸಮರ್ಥ ಪ್ಲಾಟ್‌ ಸಿಕ್ಕಿದೆ’ ಎಂದರು ಶಶಾಂಕ್‌.

ರೆಬಲ್‌ ಸ್ಟಾರ್‌ ಅಂಬರೀಷ್ ಪತ್ನಿ ಸುಮಲತಾ ಈ ಚಿತ್ರದಲ್ಲಿ ನಾಯಕನ ತಾಯಿಯಾಗಿ, ಲೇಡಿ ರೆಬಲ್‌ ಆಗಿ ಕಾಣಿಸಿಕೊಂಡಿದ್ದಾರಂತೆ.

ಅಂದ ಹಾಗೆ ಇದು ಅಜಯ್‌ ರಾವ್‌ ಅವರ 25ನೇ ಸಿನಿಮಾ. ‘ನಾನು ಒಬ್ಬ ಕಲಾವಿದನಾಗಿ ಸಮರ್ಥವಾಗಿ ಬಿಂಬಿತಗೊಂಡಿರುವುದು ಶಶಾಂಕ್‌ ನಿರ್ದೇಶನದ ಸಿನಿಮಾಗಳಲ್ಲಿ. ಈಗ ಅವರು ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಿರುವುದು, ಆ ಸಂಸ್ಥೆಯ ಮೊದಲ ಸಿನಿಮಾದಲ್ಲಿ ನಾನೇ ನಾಯಕನಾಗಿ ನಟಿಸಿರುವುದು ತುಂಬ ಖುಷಿ ನೀಡುತ್ತಿದೆ. ನಮ್ಮಿಬ್ಬರ ಕಾಂಬಿನೇಷನ್‌ ಎಂದ ಮೇಲೆ ಜನರಲ್ಲಿ ನಿರೀಕ್ಷೆ ಹೆಚ್ಚಿರುತ್ತದೆ. ಅದಕ್ಕೆ ತಕ್ಕ ಹಾಗೆ ಹೊಸ ಪ್ರತಿಭಾವಂತ ನಿರ್ದೇಶಕ ವೇದ್‌ ಗುರು ಸಹ ಜತೆಯಾಗಿದ್ದಾರೆ’ ಎಂದರು ಅಜಯ್‌.

ಅವರು ಈ ಚಿತ್ರದಲ್ಲಿ ಮೋಹನ್‌ ದಾಸ್‌ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವನು ಅಹಿಂಸಾವಾದಿ ಗಾಂಧಿಯಲ್ಲ, ಬದಲಿಗೆ ಸಮಾಜದಲ್ಲಿ ಎಲ್ಲಿಯೇ ಅನ್ಯಾಯ ಕಂಡರೂ ಅದನ್ನು ಮಟ್ಟಹಾಕುವ ರೆಬೆಲ್‌ ಮೋಹನ್‌.

‘ಇದು ಸವಾಲು ಮತ್ತು ಜವಾಬ್ದಾರಿ ಎರಡೂ ಇರುವ ಪಾತ್ರ’ ಎಂದು ತಮ್ಮ ಪಾತ್ರದ ಕುರಿತು ಹೇಳಿಕೊಂಡರು ಸುಮಲತಾ.

ಅಚ್ಯುತ್‌ಕುಮಾರ್‌ ನಾಯಕಿಯ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಅಜಯ್‌ ಮತ್ತು ಶಶಾಂಕ್‌ ಇಬ್ಬರ ಬೆಂಬಲದಿಂದ ನಾನು ಇಲ್ಲಿಗೆ ಬಂದು ಮುಟ್ಟಿದ್ದೇನೆ’ ಎಂದು ಕೃತಜ್ಞತೆ ಹೇಳಿ ಮಾತು ಮುಗಿಸಿದರು ನಿರ್ದೇಶಕ ವೇದ್‌ ಗುರು. ಜೂಡಾ ಸ್ಯಾಂಡಿ ಸಂಗೀತ, ನಂದಕಿಶೋರ್‌ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಇದೇ ತಿಂಗಳ 11ರಂದು ಆರಂಭಿಸಿ 60ರಿಂದ 65 ದಿನಗಳಲ್ಲಿ ಚಿತ್ರೀಕರಣ ಮುಗಿಸುವ ಯೋಜನೆಯನ್ನು ತಂಡ ಹಾಕಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT