ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ನಾಯಕರು ಹರಾಮ್‌ ಖೋರರು

Last Updated 8 ಡಿಸೆಂಬರ್ 2017, 19:27 IST
ಅಕ್ಷರ ಗಾತ್ರ

ಬೆಂಗಳೂರು/ಬೆಳಗಾವಿ: ‘ಬಿಜೆಪಿಯಲ್ಲಿರುವ ಹರಾಮ್ ಖೋರ್ ನಾಯಕರು ನಾನು ಲಿಂಗಾಯತ ಧರ್ಮದ ಹೋರಾಟದಲ್ಲಿ ಪಾಲ್ಗೊಳ್ಳದಂತೆ ತಡೆದರು’ ಎಂದು ಹುಕ್ಕೇರಿ ಕ್ಷೇತ್ರದ ಬಿಜೆಪಿ ಶಾಸಕ ಉಮೇಶ ಕತ್ತಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆ ಬೆಲ್ಲದ ಬಾಗೇವಾಡಿಯಲ್ಲಿರುವ ಅವರ ತೋಟದ ಮನೆಗೆ ಬಂದಿದ್ದ ಗುರುಲಿಂಗಪ್ಪ, ಶಿವಶೆಟ್ಟಿ, ಮಹಾದೇವ ಜತೆಗೆ ಮಾತನಾಡುತ್ತಾ ಈ ಶಬ್ದಗಳನ್ನು ಬಳಸಿರುವ ವಿಡಿಯೊ ಟಿವಿ9, ನ್ಯೂಸ್ 18 ಕನ್ನಡ ಸುದ್ದಿ ವಾಹಿನಿಗಳಲ್ಲಿ ಶುಕ್ರವಾರ ಬೆಳಿಗ್ಗೆ ಬಿತ್ತರವಾಗಿತ್ತು.

ವಿಡಿಯೋ ಪ್ರಸಾರವಾಗುತ್ತಿದ್ದಂತೆ ಮಾಧ್ಯಮಗೋಷ್ಠಿ ಕರೆದ ಕತ್ತಿ, ‘ಬೆಲ್ಲದ ಬಾಗೇವಾಡಿಯಲ್ಲಿರುವ ನಮ್ಮ ತೋಟದ ಮನೆಗೆ ಕೆಲವು ಟಿ.ವಿ ಮಾಧ್ಯಮದ ವರದಿಗಾರರು ಬಂದಿದ್ದರು. ಉಪಾಹಾರ ಸೇವಿಸುವಾಗ ನನ್ನ ಆಪ್ತ ಮಹಾದೇವ ಕೂಡ ಇದ್ದರು. ಆ ಸಂದರ್ಭದಲ್ಲಿ ಸಲುಗೆಯಿಂದ ಅವರಿಗೆ ಹರಾಮ್‌ ಖೋರ್‌ ಎಂದು ಬೈದಿದ್ದು ನಿಜ. ಬಿಜೆಪಿ ನಾಯಕರನ್ನು ಉದ್ದೇಶಿಸಿ ಅಲ್ಲ’ ಎಂದು ಸ್ಪಷ್ಟನೆ ನೀಡಿದರು.

‘ನಾನು ಮೊದಲು ಹಿಂದೂ ಧರ್ಮಕ್ಕೆ ಸೇರಿದವ. ನಂತರ ಲಿಂಗಾಯತ– ವೀರಶೈವ ಜಾತಿಗೆ ಸೇರಿದವ. ಇವೆರಡೂ ಒಂದೇ. ನಾನು ಹುಟ್ಟಿನಿಂದ ಲಿಂಗಾಯತ, ಸತ್ತಾಗಲೂ ಲಿಂಗಾಯತ. ಆದರೆ, ಕಾಂಗ್ರೆಸ್‌ ಎರಡನ್ನೂ ಒಡೆಯಲು ಹೊರಟಿದೆ. ಅದಕ್ಕಾಗಿ ನಾನು ಲಿಂಗಾಯತ ಹೋರಾಟದಲ್ಲಿ ಪಾಲ್ಗೊಳ್ಳಲು ಹೋಗಲಿಲ್ಲ’ ಎಂದೂ ಅವರು ಪ್ರತಿಪಾದಿಸಿದರು.

ಕಾಂಗ್ರೆಸ್ ಸೇರುವುದಿಲ್ಲ:

‘ನಾನು ಬಿಜೆಪಿಯಲ್ಲಿಯೇ ಮುಂದುವರಿಯುತ್ತೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಸೇರುವುದಿಲ್ಲ’ ಎಂದು ಮಾಧ್ಯಮಗೋಷ್ಠಿಯಲ್ಲಿ ಕತ್ತಿ ಸ್ಪಷ್ಟಪಡಿಸಿದರು.

‘ಬಿಜೆಪಿ ಟಿಕೆಟ್‌ ನೀಡಿದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಮನೆಗೆ ಹೋಗುತ್ತೇನೆ’ ಎಂದು ಘೋಷಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಸ್ನೇಹಿತರು. ಅವರನ್ನು ಇತ್ತೀಚೆಗೆ ಭೇಟಿಯಾಗಿದ್ದೆ. ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಆಕಳು ಸತ್ತರೆ ಪರಿಹಾರ ನೀಡಲಾಗುತ್ತದೆ. ಅದೇ ರೀತಿ ಉತ್ತರ ಕರ್ನಾಟಕದಲ್ಲಿಯೂ ಎಮ್ಮೆ, ಕೋಣ ಸತ್ತರೆ ಪರಿಹಾರ ನೀಡಬೇಕು ಎಂದು ಅವರನ್ನು ಒತ್ತಾಯಿಸಿದ್ದೆ ಹೊರತು, ರಾಜಕೀಯದ ಬಗ್ಗೆ ಮಾತನಾಡಿಲ್ಲ’ ಎಂದು ವಿವರಿಸಿದರು.

‘ಸಿದ್ದರಾಮಯ್ಯ ನನ್ನನ್ನು ಕಾಂಗ್ರೆಸ್‌ ಪಕ್ಷಕ್ಕೆ ಆಹ್ವಾನಿಸಿಲ್ಲ. ಬಿಜೆಪಿ ಬಿಡುವುದಾಗಿ ನಾನೂ ಹೇಳಿಲ್ಲ. ಕಳೆದ ಎರಡು ಬಾರಿ ಬಿಜೆಪಿಯಿಂದಲೇ ಗೆಲುವು ಸಾಧಿಸಿದ್ದು, ಈ ಸಲವೂ ಬಿಜೆಪಿಯಿಂದಲೇ ಕಣಕ್ಕಿಳಿಯುತ್ತೇನೆ’ ಎಂದು ಸ್ಪಷ್ಟಪಡಿಸಿದರು.

‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ ಮತ್ತು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಜತೆ ಮಾತನಾಡಿ ಗೊಂದಲದ ಬಗ್ಗೆ ತೆರೆ ಎಳೆದಿದ್ದೇನೆ. ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 12 ಸ್ಥಾನಗಳಲ್ಲಿ ಜಯಗಳಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕತ್ತಿ ಹೇಳಿರುವುದೇನು?

‘ಶಿವಶೆಟ್ಟಿ ನೀನು ಏನು ಹೇಳಿದೆ. ನಾನು ಲಿಂಗಾಯತ ವೀರಶೈವ ಹೋರಾಟಕ್ಕೆ ಹೋಗೋಕೆ ಬಿಡದ ಬಿಜೆಪಿ ನಾಯಕರು ಹರಾಮ್ ಖೋರ್. . ಮಕ್ಕಳು’ ಎಂದು ಜರಿದಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಲಿಂಗಾಯತ– ವೀರಶೈವ ಎರಡೂ ಒಂದೇ. ಅದನ್ನು ಡಿವೈಡ್ ಮಾಡಲು ಕೆಲವು ಹೊರಟಿದ್ದಾರೆ. ನಿಮ್ಮ ಕಾರ್ಯಕ್ರಮ ನಡೀತಲ್ಲ. ಅದಕ್ಕಿಂತ ಮುಂಚೆ ನಾನು ವೀರಶೈವ ಲಿಂಗಾಯತ. ನಮ್ಮಪ್ಪ, ನಮ್ಮ ಹಡೆದವ್ವ ವೀರಶೈವ ಲಿಂಗಾಯತರು’ ಎಂದು ಕತ್ತಿ ಪ್ರತಿಪಾದಿಸಿದ್ದಾರೆ.

‘ಲಿಂಗಾಯತರಾದ ಜಗದೀಶ ಶೆಟ್ಟರ್‌ಗೂ ಹೇಳಿದಿನಿ. ನಾನು ಲಿಂಗಾಯತನಾಗಿ ಬದುಕಿದ್ದೀನಿ. ಹುಟ್ಟಿದಾಗ ಲಿಂಗಾಯತ, ಸಾಯೋತನಕ ಲಿಂಗಾಯತನಾಗಿರುತ್ತೇನೆ. ಪ್ರತ್ಯೇಕ ಧರ್ಮದ ಪರವಾಗಿ ಹೋರಾಟ ನಡೆಸಿದರೆ ಬಿಜೆಪಿಯವರು ಟಿಕೆಟ್ ತಪ್ಪಿಸುತ್ತಾರೆ. ಅದಕ್ಕಾಗಿ ಪಾಲ್ಗೊಂಡಿಲ್ಲ’ ಎಂದು ಹೇಳಿರುವುದು ವಿಡಿಯೋದಲ್ಲಿದೆ.

ಕತ್ತಿ ಪಕ್ಷ ಬಿಡಲ್ಲ: ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಪರಿವರ್ತನಾ ರ‍್ಯಾಲಿಯಲ್ಲಿ ಉಮೇಶ ಕತ್ತಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಅವರು ಪಕ್ಷ ಬಿಡುವುದಿಲ್ಲ

ಕತ್ತಿ ಅವರು ಯಾವ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಮಾತನಾಡಿದ್ದಾರೆ ಎಂಬುದು ತಿಳಿದಿಲ್ಲ. ಪಕ್ಷ ಮತ್ತು ಮುಖಂಡರ ಮೇಲೆ ಅವರಿಗೆ ಯಾವುದೇ ಅಸಮಾಧಾನವಿಲ್ಲ
–ಜಗದೀಶ ಶೆಟ್ಟರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT