ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸವಕ್ಕೆ ಸಿಗುವುದೇ ಬಿಡುಗಡೆ ಭಾಗ್ಯ?

Last Updated 8 ಡಿಸೆಂಬರ್ 2017, 20:07 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲು ತಯಾರಿ ನಡೆಸಿರುವ ಗೃಹ ಇಲಾಖೆ, ಅರ್ಹ 120 ಕೈದಿಗಳ ಪಟ್ಟಿಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದೆ.

ಸಿಆರ್‌ಪಿಸಿ (ದಂಡ ಪ್ರಕ್ರಿಯಾ ಸಂಹಿತೆ) ಕಲಂ 433 ಎ ಅನುಸಾರ ರೂಪಿಸಿರುವ ಹೊಸ ನಿಯಮಗಳನ್ವಯ ಕೈದಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. 14 ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆ ಪೂರ್ಣಗೊಳಿಸಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೆಲ ಕೈದಿಗಳು, 10 ವರ್ಷಕ್ಕಿಂತ ಹೆಚ್ಚು ಶಿಕ್ಷೆ ಅನುಭವಿಸಿದ್ದು ಅವರ ವಯಸ್ಸು 65 ವರ್ಷ ದಾಟಿದೆ. ಅಂಥ ಕೆಲ ಕೈದಿಗಳ ಹೆಸರು ಪಟ್ಟಿಯಲ್ಲಿವೆ.

‘ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ಕಲಬುರ್ಗಿ, ಮೈಸೂರು, ಧಾರವಾಡ, ತುಮಕೂರು ಕೇಂದ್ರ ಕಾರಾಗೃಹಗಳಲ್ಲಿರುವ ಅರ್ಹ ಕೈದಿಗಳ ಪಟ್ಟಿ ತರಿಸಿಕೊಂಡಿದ್ದೆವು. 200ಕ್ಕೂ ಹೆಚ್ಚು ಮಂದಿಯ ಹೆಸರುಗಳು ಆ ಪಟ್ಟಿಯಲ್ಲಿದ್ದವು. ಅವರ ಪೂರ್ವಾಪರ ಗಮನಿಸಿ ಅರ್ಹ 120 ಮಂದಿಯ ಪಟ್ಟಿಯನ್ನು ಅಂತಿಮಗೊಳಿಸಿದ್ದೇವೆ. ಆ ಪಟ್ಟಿಯೇ ಗೃಹ ಇಲಾಖೆ ಮೂಲಕ ರಾಜ್ಯಪಾಲರಿಗೆ ಹೋಗಿದೆ’ ಎಂದು ಕಾರಾಗೃಹಗಳ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ವರ್ಷದ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆಯಂದು ಸನ್ನಡತೆ ಆಧಾರದಲ್ಲಿ ಯಾವೊಬ್ಬ ಕೈದಿಯನ್ನೂ ಬಿಡುಗಡೆ ಮಾಡಿರಲಿಲ್ಲ. ಆ ಎರಡೂ ದಿನಗಳಂದು ಬಿಡುಗಡೆಗೆ ಅರ್ಹರಾಗಿದ್ದವರ ಹೆಸರನ್ನು ಹೊಸ ಪಟ್ಟಿಯಲ್ಲಿ ಸೇರಿಸಿದ್ದೇವೆ. ರಾಜ್ಯಪಾಲರು ಅಂಕಿತ ಹಾಕಿದರೆ 2018ರ ಜ.26ರಂದು ಗಣರಾಜ್ಯೋತ್ಸವದಲ್ಲಿ ಅವರೆಲ್ಲರೂ ಬಿಡುಗಡೆಯಾಗಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಪಟ್ಟಿ ತಿರಸ್ಕರಿಸಿದ್ದ ರಾಜ್ಯಪಾಲ:  ‘120 ಮಂದಿಯಲ್ಲಿ 27 ಹಿರಿಯ ನಾಗರಿಕರಿದ್ದಾರೆ. ಕಳೆದ ಗಣರಾಜ್ಯೋತ್ಸವದಂದೇ ಅವರ ಬಿಡುಗಡೆಯಾಗಬೇಕಿತ್ತು. ಅವರ ದಾಖಲೆಗಳ ಸಮೇತ ರಾಜ್ಯಪಾಲರಿಗೆ ಪಟ್ಟಿ ಕಳುಹಿಸಿದ್ದೆವು. ಆದರೆ, ಅವರು ಆ ಪಟ್ಟಿಯನ್ನು ತಿರಸ್ಕರಿಸಿದ್ದರು’ ಎಂದು ಅಧಿಕಾರಿಗಳು ಹೇಳಿದರು.

‘ಕೈದಿಗಳ ಅರ್ಹತೆ ಪ್ರಶ್ನಿಸಿದ್ದ ರಾಜ್ಯಪಾಲರು, ಮತ್ತಷ್ಟು ದಾಖಲೆಗಳನ್ನು ಕೇಳಿದ್ದರು. ಅಂಥ ದಾಖಲೆಗಳನ್ನು ನೀಡುವಂತೆ ಆಯಾ ಕೇಂದ್ರ ಕಾರಾಗೃಹಗಳ ಅಧಿಕಾರಿಗಳಿಗೆ ಹೇಳಿದ್ದೆವು. ಬಹುಪಾಲು ಅಧಿಕಾರಿಗಳು ದಾಖಲೆ ನೀಡಲಿಲ್ಲ. ಹೀಗಾಗಿ ಬಿಡುಗಡೆ ಪ್ರಕ್ರಿಯೆ ಸ್ಥಗಿತವಾಗಿತ್ತು’ ಎಂದು ವಿವರಿಸಿದರು.‌

ಮೌನ ಪ್ರತಿಭಟನೆ: ಅರ್ಹತೆ ಇದ್ದರೂ ಬಿಡುಗಡೆ ಮಾಡದಿದ್ದಕ್ಕೆ ಅಸಮಾಧಾನಗೊಂಡಿರುವ ಕೈದಿಗಳು, ನಿತ್ಯವೂ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ತಿಂಡಿ ಹಾಗೂ ಊಟದ ಅವಧಿಯಲ್ಲಿ ಸೆಲ್‌ನಿಂದ ಹೊರಬರುವ ಕೈದಿಗಳು, ನೆಲದ ಮೇಲೆ ಕುಳಿತು ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಅವರ ಬಳಿಗೆ ಹೋಗಿ ಸಮಸ್ಯೆ ಆಲಿಸುತ್ತಿರುವ ಜೈಲಿನ ಅಧಿಕಾರಿಗಳು, ಬಿಡುಗಡೆಯ ಭರವಸೆ ನೀಡುತ್ತಿದ್ದಾರೆ.

‘ಕೈದಿಗಳ ಬಿಡುಗಡೆಗೆ ಕಾರಾಗೃಹಗಳ ಇಲಾಖೆಯಿಂದ ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಂಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ನಿತ್ಯವೂ ಕೈದಿಗಳನ್ನು ಸಂಭಾಳಿಸುವುದು ದೊಡ್ಡ ಸಮಸ್ಯೆಯಾಗಿದೆ’ ಎಂದು ಜೈಲು ಸಿಬ್ಬಂದಿಯೊಬ್ಬರು ಹೇಳಿದರು.

ಕೊನೆ ದಿನಗಳ ಎದುರು ನೋಡುತ್ತಿರುವೆ...

‘ಗುಂಪು ಗಲಾಟೆಯಲ್ಲಿ ವ್ಯಕ್ತಿಯೊಬ್ಬರ ಕೊಲೆ ನಡೆದ ಪ್ರಕರಣದಲ್ಲಿ ನನಗೆ ಜೀವಾವಧಿ ಶಿಕ್ಷೆಯಾಯಿತು. ನನಗೀಗ 60 ವರ್ಷ ದಾಟಿದೆ. ಊರುಗೋಲು ಇಲ್ಲದೆ ನಡೆಯಲು ಆಗುತ್ತಿಲ್ಲ. ಜೀವನದ ಕೊನೆಯ ದಿನಗಳಲ್ಲಿದ್ದೇನೆ. ಕಳೆದ ಬಾರಿ ಅರ್ಹತೆ ಇದ್ದರೂ ಬಿಡುಗಡೆಯಾಗಲಿಲ್ಲ’ ಎಂದು ಕೈದಿಯೊಬ್ಬರು ಅಳಲು ತೋಡಿಕೊಂಡರು.

‘ಮಕ್ಕಳು, ಮೊಮ್ಮಕ್ಕಳಿಂದ ದೂರವಿದ್ದೇನೆ. ಯಾವುದೋ ಕೋಪದಲ್ಲಿ ಮಾಡಿದ ತಪ್ಪಿಗೆ ಸಾಕಷ್ಟು ನೊಂದಿದ್ದೇನೆ. ಕೊನೆಯ ದಿನಗಳಲ್ಲಾದರೂ ಕುಟುಂಬದ ಜತೆ ಕಾಲಕಳೆಯಬೇಕು. ಈ ಬಾರಿಯ ಬಿಡುಗಡೆ ಪಟ್ಟಿಯಲ್ಲಿ ನನ್ನ ಹೆಸರು ಇರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಬಿಡುಗಡೆಯ ಆದೇಶಕ್ಕಾಗಿ ಕಾಯುತ್ತಿದ್ದೇನೆ’ ಎಂದು ಅವರು ಹೇಳಿದರು.

ಅರ್ಹ ಕೈದಿಗಳ ಪಟ್ಟಿಯನ್ನು ಗೃಹ ಇಲಾಖೆಯು ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿದೆ. ಅಲ್ಲಿಂದ ಪ್ರತಿಕ್ರಿಯೆ ಬರಬೇಕಿದ್ದು, ಕಾಯುತ್ತಿದ್ದೇವೆ.
– ಎಚ್‌.ಎಸ್‌.ರೇವಣ್ಣ, ಕಾರಾಗೃಹಗಳ ಇಲಾಖೆಯ ಡಿಐಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT