ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ತಿಂಗಳ ನಂತರ ಸಂಪನ್ಮೂಲ ಹಂಚಿಕೆ

Last Updated 8 ಡಿಸೆಂಬರ್ 2017, 20:22 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಉತ್ತರ ಮತ್ತು ಕೇಂದ್ರ ವಿಶ್ವವಿದ್ಯಾಲಯಗಳಿಗೆ ಆರ್ಥಿಕ, ಭೌತಿಕ ಹಾಗೂ ಮಾನವ ಸಂಪನ್ಮೂಲ ವರ್ಗಾಯಿಸುವಂತೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಉನ್ನತ ಶಿಕ್ಷಣ ಇಲಾಖೆ ಆದೇಶ ನೀಡಿದೆ. ವಿ.ವಿ. ರಚನೆಯಾಗಿ ಐದು ತಿಂಗಳ ನಂತರ ಈ ಆದೇಶ ಹೊರಬಿದ್ದಿದೆ.

ಬೆಂಗಳೂರು ವಿಶ್ವವಿದ್ಯಾಲಯವನ್ನು ವಿಭಜನೆಗೊಳಿಸಿ ಸರ್ಕಾರ ಜುಲೈನಲ್ಲಿಯೇ ಆದೇಶ ನೀಡಿತ್ತು. ಆದರೆ, ಇಲ್ಲಿಯವರೆಗೂ ವಿಶ್ವವಿದ್ಯಾಲಯಗಳ ಸಂಪನ್ಮೂಲ ಹಂಚಿಕೆ ಕುರಿತು ಯಾವುದೇ ಆದೇಶ ನೀಡಿರಲಿಲ್ಲ.

ಭಾರಿ ಗೊಂದಲ ಸೃಷ್ಟಿಸಿದ್ದ ಮೂರೂ ವಿಶ್ವವಿದ್ಯಾಲಯಗಳಿಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಂಚಿಕೆ ವಿಚಾರವನ್ನು ಆದೇಶದಲ್ಲಿ ಮೊದಲು ಪ್ರಸ್ತಾಪಿಸಲಾಗಿದ್ದು, ಸಿಬ್ಬಂದಿ ಅಭಿಮತದೊಂದಿಗೆ ಹಂಚಿಕೆ ನಡೆಯಬೇಕು ಎಂದು ಇಲಾಖೆ ತಿಳಿಸಿದೆ.

ಆಸ್ತಿ ಹಂಚಿಕೆ: ಸೆಂಟ್ರಲ್‌ ಕಾಲೇಜು ಆವರಣದಲ್ಲಿರುವ ಜಮೀನು ಮತ್ತು ಕಟ್ಟಡಗಳು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಕ್ಕೆ, ಕೋಲಾರ ಸ್ನಾತಕೋತ್ತರ ಕೇಂದ್ರದ ಆವರಣದಲ್ಲಿರುವ ಜಮೀನು ಮತ್ತು ಕಟ್ಟಡಗಳು ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಸೇರಬೇಕು. ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಬೆಂಗಳೂರು ವಿಶ್ವವಿದ್ಯಾಲಯ ವರ್ಗಾಯಿಸಬೇಕೆಂದು ಸೂಚಿಸಲಾಗಿದೆ.

ಅನುದಾನ: ಆರಂಭಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಉತ್ತರ ವಿ.ವಿ.ಗೆ ₹15 ಕೋಟಿ ಹಾಗೂ ಕೇಂದ್ರ ವಿ.ವಿ. ₹10ಕೋಟಿಯನ್ನು ಹಂತ ಹಂತವಾಗಿ ವರ್ಗಾಯಿಸಬೇಕು ಎಂದು ತಿಳಿಸಲಾಗಿದೆ.

ಕಾಲೇಜುಗಳ ಹಂಚಿಕೆ: 2017–18ನೇ ಸಾಲಿಗೆ ಸಂಗ್ರಹಿಸಿರುವ ಸಂಯೋಜನಾ ಶುಲ್ಕ ಹಾಗೂ ವೆಚ್ಚವನ್ನು ಕಡಿತಗೊಳಿಸಿ ಕೇಂದ್ರ ಮತ್ತು ಉತ್ತರ ವಿ.ವಿ.ಗಳಿಗೆ ಹಂಚಿಕೆ ಮಾಡಬೇಕು.

ವೇತನ, ಪಿಂಚಣಿ ವರ್ಗಾವಣೆ: ಪ್ರಸಕ್ತ ಸಾಲಿನಲ್ಲಿ ಸರ್ಕಾರದಿಂದ ಮಂಜೂರಾದ ವೇತನ ಹಾಗೂ ಪಿಂಚಣಿ ಅನುದಾನವನ್ನು ಸಿಬ್ಬಂದಿ ವರ್ಗಾವಣೆ ಪ್ರಮಾಣಾನುಸಾರ ನೂತನ ವಿಶ್ವವಿದ್ಯಾಲಯಗಳಿಗೆ ವರ್ಗಾವಣೆ ಮಾಡಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ಕೋಲಾರ ಸ್ನಾತಕೋತ್ತರ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದಲೇ ತ್ವರಿತವಾಗಿ ಪೂರ್ಣಗೊಳಿಸಿ ಗುತ್ತಿಗೆದಾರರಿಗೆ ಹಣ ಪಾವತಿಸಬೇಕು ಎಂದು ನಿರ್ದೇಶಿಸಲಾಗಿದೆ.

ಮೌಲ್ಯಮಾಪನ ಕಟ್ಟಡಕ್ಕೆ ಹಗ್ಗಜಗ್ಗಾಟ

700ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳ ಪರೀಕ್ಷೆ ಹಾಗೂ ಮೌಲ್ಯಮಾಪನ ಕಾರ್ಯಕ್ಕೆ ಸೆಂಟ್ರಲ್‌ ಕಾಲೇಜಿನಲ್ಲಿನ ನ್ಯಾಚುರಲ್‌ ಸೈನ್ಸ್‌ ಬ್ಲಾಕ್‌ ಅನ್ನು (ಮೌಲ್ಯಮಾಪನ ಕಟ್ಟಡ) ಬೆಂಗಳೂರು ವಿಶ್ವವಿದ್ಯಾಲಯ ಉಪಯೋಗಿಸಿಕೊಳ್ಳಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ಇದರಿಂದ ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ನಡುವೆ ಸೈನ್ಸ್‌ ಬ್ಲಾಕ್‌ ಕಟ್ಟಡಕ್ಕಾಗಿ ಹಗ್ಗ ಜಗ್ಗಾಟ ಪ್ರಾರಂಭವಾಗಿದೆ.

‘ಪ್ರಸಕ್ತ ವರ್ಷ ದಾಖಲಾಗಿರುವ 3.5 ಲಕ್ಷ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಜವಾಬ್ದಾರಿ ನಮ್ಮದು. ಹಾಗಾಗಿ ಸೈನ್ಸ್‌ ಬ್ಲಾಕ್‌ ನಮಗೆ ನೀಡಿರುವುದು ಸರಿ ಇದೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಎಚ್‌.ಎನ್. ರಮೇಶ್‌ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಜಾಫೆಟ್‌, ‘ನಮ್ಮ ವಿಶ್ವವಿದ್ಯಾಲಯಕ್ಕೆ ನ್ಯಾಚುರಲ್‌ ಸೈನ್ಸ್‌ ಬ್ಲಾಕ್‌ ಕಟ್ಟಡ ಹೆಚ್ಚು ಅಗತ್ಯವಿದೆ. ನಮ್ಮಲ್ಲಿರುವ ಅನೇಕ ಕಟ್ಟಡಗಳು ಶಿಥಿಲಗೊಂಡಿವೆ. ಹಾಗಾಗಿ ಆಡಳಿತ, ಪರೀಕ್ಷಾ ಕಾರ್ಯ ಹಾಗೂ ಹೊಸ ಕೋರ್ಸ್‌ಗಳಿಗೆ ಕೊಠಡಿ ಒದಗಿಸಲು ಸೈನ್ಸ್‌ ಬ್ಲಾಕ್‌ ನಮ್ಮ ವ್ಯಾಪ್ತಿಗೆ ಬೇಕು’ ಎಂದರು.

‘ಈಗ ನೀಡಿರುವ ಆದೇಶದಲ್ಲಿ ಈ ಅಂಶವನ್ನು ತಿದ್ದುಪಡಿ ಮಾಡಿ, ಶೀಘ್ರದಲ್ಲಿ ಹೊಸ ಆದೇಶ ನೀಡಬೇಕೆಂದು ಕೋರಿ ಇಲಾಖೆಗೆ ಪತ್ರ ಬರೆದಿದ್ದೇನೆ. ನಮ್ಮ ಅಗತ್ಯಗಳನ್ನು ಪರಿಶೀಲಿಸಿ, ಕಟ್ಟಡ ನಮಗೆ ದೊರೆಯುವ ವಿಶ್ವಾಸವಿದೆ’ ಎಂದು ಜಾಫೆಟ್‌ ‘ಪ್ರಜಾವಾಣಿ’ ತಿಳಿಸಿದರು.

₹4.15 ಕೋಟಿ ಅನುದಾನ

ಬೆಂಗಳೂರು ಕೇಂದ್ರ ಮತ್ತು ಉತ್ತರ ವಿಶ್ವವಿದ್ಯಾಲಯಗಳಿಗೆ ಇಲ್ಲಿಯವರೆಗೆ ತಲಾ ₹4.15 ಕೋಟಿ ಅನುದಾನ ದೊರೆತಿದೆ.

‘ಬೆಂಗಳೂರು ವಿಶ್ವವಿದ್ಯಾಲಯ ಕಳೆದ ವರ್ಷ ಸಂಗ್ರಹಿಸಿದ್ದ ಕಾಲೇಜುಗಳ ಮಾನ್ಯತೆ ನವೀಕರಣ ಶುಲ್ಕದಲ್ಲಿ ನಮ್ಮ ಪಾಲು ₹3 ಕೋಟಿ ಬರಬೇಕಿದೆ. ಉನ್ನತ ಶಿಕ್ಷಣ ಇಲಾಖೆ ₹5 ಕೋಟಿ ಅನುದಾನ ನೀಡುವುದಾಗಿ ಪ್ರಕಟಿಸಿತ್ತು. ಈ ಮೊತ್ತದಲ್ಲಿ ₹2.30 ಕೋಟಿ ಮಾತ್ರ ಕೈಸೇರಿದೆ’ ಎಂದು ಜಾಫೆಟ್‌ ತಿಳಿಸಿದರು.

‘ವಿ.ವಿ.ಯಲ್ಲಿ ಮೂಲಸೌಕರ್ಯ ಕಲ್ಪಿಸಲು ₹300 ಕೋಟಿ ಬೇಕು. ಈ ಸಂಬಂಧ ಕ್ರಿಯಾಯೋಜನೆ ಸಿದ್ಧಪಡಿಸಿ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದೇನೆ. ಕನಿಷ್ಠ ₹100 ಕೋಟಿ ನೀಡಿದರೆ ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಲು ಹಾಗೂ ಕಟ್ಟಡಗಳ ದುರಸ್ತಿಗೆ ನೆರವಾಗುತ್ತದೆ’ ಎಂದರು.

‘ಉತ್ತರ ವಿಶ್ವವಿದ್ಯಾಲಯದ ಅಗತ್ಯಕ್ಕೆ ತಕ್ಕಂತೆ ಕ್ರಿಯಾಯೋಜನೆ ಸಿದ್ಧಪಡಿಸಿ ₹365 ಕೋಟಿಯ ಪ್ರಸ್ತಾವವನ್ನು 2016ರ ಡಿಸೆಂಬರ್‌ನಲ್ಲಿ ಇಲಾಖೆಗೆ ಸಲ್ಲಿಸಿದ್ದೇನೆ. ಮೊದಲ ಹಂತದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ₹3 ಕೋಟಿ ಹಣ ನೀಡಿದೆ. ಜೊತೆಗೆ ಸರ್ಕಾರ ನೀಡಿದ ₹5ಕೋಟಿ ಅನುದಾನದಲ್ಲಿ ₹1.15 ಕೋಟಿಯನ್ನು ವರ್ಗಾಯಿಸಿದೆ’ ಎಂದು ಕುಲಪತಿ ಡಾ.ಟಿ.ಡಿ. ಕೆಂಪರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT