ಗುರುವಾರ , ಮಾರ್ಚ್ 4, 2021
18 °C

ಸಂಭ್ರಮದ ನಾಗನಕೆರೆ ಗಿಡದ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಭ್ರಮದ ನಾಗನಕೆರೆ ಗಿಡದ ಜಾತ್ರೆ

ನಾಗಮಂಗಲ: ತಾಲ್ಲೂಕಿನ ದೇವಲಾಪುರ ಹೋಬಳಿ ನಾಗನಕೆರೆಯಲ್ಲಿ ವಿಶಿಷ್ಟ ಗಿಡದ ಜಾತ್ರೆ ಶುಕ್ರವಾರ ನಡೆಯಿತು. ದಾಸಗಳ ಹಬ್ಬ ಅಥವಾ ಐಗೋಳ ಹಬ್ಬ ಎಂದೇ ಹೆಸರಾದ ಈ ಜಾತ್ರೆ ಒಂದು ದಿನ ನಡೆಯುತ್ತದೆ.

ತಿರುಪತಿ ತಿಮ್ಮಪ್ಪನ ಅಸಂಖ್ಯ ಭಕ್ತರು ಬರುತ್ತಾರೆ. ಇಲ್ಲಿ ದಾಸಪ್ಪನ ದರ್ಶನ ಮಾಡಿದರೆ ತಿರುಪತಿಗೆ ಹೋಗಿ ಬಂದಷ್ಟೇ ಭಾಗ್ಯ ಸಿಗಲಿದೆ ಎಂಬುದು ನಂಬಿಕೆ. ತಿರುಪತಿಗೆ ತೆರಳುವ ಹರಿಭಕ್ತರು ಮೊದಲು ಗಿಡದ ಜಾತ್ರೆಯಲ್ಲಿ ಪಾಲ್ಗೊಳ್ಳುವುದು ವಿಶೇಷ.

ಜಾತ್ರೆಗೆ 15 ದಿನಗಳ ಮೊದಲೇ ತಿರುಪತಿ ತಿಮ್ಮಪ್ಪನ ಒಕ್ಕಲು ಅಂದರೆ ದಾಸಪ್ಪ ಅಥವಾ ಹರಿಭಕ್ತರು ಜಾತ್ರೆ ದಿನ ಪ್ರಚುರಪಡಿಸುತ್ತಾರೆ. ವಾರವಿದ್ದಂತೆ ಆಂಜನೇಯ, ಜಾಗಟೆ, ಶಂಖ, ಬೋನಾಸಿಯೊಂದಿಗೆ ಒಕ್ಕಲಿಗೆ ಒಬ್ಬರಂತೆ ಹೊರಡುವ ದಾಸಪ್ಪದಿರು, ಪ್ರತಿ ಹಳ್ಳಿಗಳಿಗೆ ತೆರಳಿ ಭಕ್ತರಿಂದ ಪೂಜೆ ಪುನಸ್ಕಾರಕ್ಕೆ ಒಳಗಾಗಿ ಜಾತ್ರೆಯ ದಿನ ಇಲ್ಲಿಗೆ ಬರುತ್ತಾರೆ.

ಚಿಕ್ಕತಿರುಪತಿ ಎಂದೇ ಗುರುತಿಸಲ್ಪಟ್ಟಿರುವ ಇಲ್ಲಿಗೆ ಹೊರಗಿನ ಜಿಲ್ಲೆಗಳಿಂದಲೂ ಭಕ್ತರು ಬರುತ್ತಾರೆ.

ನಾಗನಕೆರೆಯ ಈ ಬಾರಿ ವರುಣನ ಕೃಪೆಯಿಂದ ತುಂಬಿದೆ.

ಸುತ್ತಲಿನ ಗಿಡಗಳಿಂದಾಗಿ ನಾಗನಕೆರೆ ಗಿಡದ ಜಾತ್ರೆ ಎಂದೇ ಹೆಸರು ಬಂದಿದೆ. ಇಲ್ಲಿ ದೇವಾಲಯಗಳಿಲ್ಲ. ಕೆರೆಯ ಸನಿಹದಲ್ಲಿ ಒಂದು ಚಿಕ್ಕ ಮಂಟಪವಿದೆ, ಕುರುಚಲು ಗಿಡಗಳ ನಡುವೆ ಭಕ್ತರು ತಾವು ತಂದ ಮಾಂಸ, ಮಧ್ಯ ಮತ್ತು ಸಿಹಿತಿಂಡಿಗಳನ್ನು ದಾಸಪ್ಪದಿರಿಗೆ ಅರ್ಪಿಸಿ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಭಾವ ಮೆರೆಯುತ್ತಾರೆ.

ಭಕ್ತರು ಮೇಕೆ ಮತ್ತು ಕುರಿ ಬಲಿಕೊಟ್ಟು, ಅಡುಗೆ ಮಾಡಿ ಭಕ್ತರಿಗೆ ಉಣಬಡಿಸುತ್ತಾರೆ. ಸುತ್ತಮುತ್ತಲ ಹತ್ತಾರು ಹಳ್ಳಿಗಳಲ್ಲಿ ದಾಸಗಳ ಹಬ್ಬವೆಂದೇ ಆಚರಿಸುತ್ತಾರೆ

ಜಾತ್ರೆ ನಂತರ ಕುಣಿಗಲ್ ತಾಲ್ಲೂಕಿನ ಮಾರ್ಕೊನಹಳ್ಳಿ ಬಳಿ ಹರಿಸೇವೆ ಮಾಡಿ ಸಾವಿರಾರು ಮಂದಿಗೆ ಮಾಂಸದೂಟ ಬಡಿಸಿ ತಿರುಪತಿಗೆ ತೆರಳುತ್ತಾರೆ. ಅಲ್ಲಿಂದ ಬಂದು ಭಕ್ತರಿಗೆ ತಿರುಪತಿಯ ಪ್ರಸಾದ ನೀಡಿದ ನಂತರ ದಾಸಗಳ ಹಬ್ಬ ಮುಕ್ತಾಯವಾಗುತ್ತದೆ.

ಗ್ರಾಮಾಂತರ ಠಾಣೆ ಪೊಲೀಸರು ಬಂದೋಬಸ್ತ್‌ ವ್ಯವಸ್ಥೆ ಮಾಢಿದ್ದರು. ಸಾರಿಗೆ ಬಸ್ ಅಲ್ಲದೆ ಖಾಸಗಿ ಬಸ್ಸುಗಳು, ಆಟೊ, ಸ್ವಂತ ವಾಹನಗಳಲ್ಲಿ ಬಂದು ಜಾತ್ರೆಯಲ್ಲಿ ಭಾಗಿಯಾದರು.

ಜಾತ್ರೆ ಹಿನ್ನೆಲೆಯಲ್ಲಿ ದೇವಲಾಪುರ, ಬಿಂಡೇನಹಳ್ಳಿ, ದಂಡಿಗನಹಳ್ಳಿ ಮಾರ್ಗದಲ್ಲಿ ಹೆಚ್ಚಿನ ವಾಹನ ಸಂಚಾರ ಇದ್ದು, ಅಲ್ಲಲ್ಲಿ ದಟ್ಟಣೆ ಕಂಡುಬಂದಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.