ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನ ಹೆಬ್ಬಾಗಿಲಲ್ಲೇ ಸಮಸ್ಯೆಗಳ ಸರಮಾಲೆ

Last Updated 9 ಡಿಸೆಂಬರ್ 2017, 7:22 IST
ಅಕ್ಷರ ಗಾತ್ರ

ಕುಶಾಲನಗರ: ಜಿಲ್ಲೆಯಲ್ಲೇ ಶೀಘ್ರಗತಿ ಯಲ್ಲಿ ಬೆಳವಣಿಗೆ ಹೊಂದುತ್ತಿರುವ ಹೋಬಳಿಯಲ್ಲಿ ಕುಶಾಲನಗರಕ್ಕೆ ಮೊದಲ ಸ್ಥಾನ. ಜಿಲ್ಲೆಯ ಹೆಬ್ಬಾಗಿಲು ಎಂದು ಕರೆಯಲ್ಪಡುವ ಪಟ್ಟಣದಲ್ಲಿ ಹಲವು ಸಮಸ್ಯೆಗಳಿವೆ. ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸೌಲಭ್ಯದಿಂದ ವಂಚಿತಗೊಂಡಿದ್ದು ಸಾರ್ವಜನಿಕರು ನಿತ್ಯ ತೊಂದರೆಗೆ ಒಳಗಾಗುತ್ತಿದ್ದಾರೆ.

ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕಿಷ್ಕಿಂಧೆ ಪ್ರದೇಶದಲ್ಲಿ ಈಗ ಖಾಸಗಿ ಬಸ್ ಹಾಗೂ ಮ್ಯಾಕ್ಸಿಕ್ಯಾಬ್‌ಗಳು ನಿಲ್ದಾಣವು ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ಸಾರ್ವಜನಿಕರಿಗೆ ಅನನಕೂಲವೇ ಹೆಚ್ಚು; ಅಲ್ಲದೇ ಬೀದಿ ಬದಿಯ ವ್ಯಾಪಾರಿಗಳು, ದ್ವಿಚಕ್ರ ಹಾಗೂ ಆಟೋ ಚಾಲಕರಿಗೂ ಸಮಸ್ಯೆ ಉಂಟಾಗುತ್ತಿದೆ.

ಪಟ್ಟಣ ಪಂಚಾಯಿತಿ, 2012ರಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ತೆರಳುವ ರಸ್ತೆಯ ಬಳಿ ಒಂದು ಎಕರೆ ಜಾಗದಲ್ಲಿ ಮುಖ್ಯಮಂತ್ರಿ ಅನುದಾನದ ಅಡಿ ₹40 ಲಕ್ಷ ವೆಚ್ಚದಲ್ಲಿ ಖಾಸಗಿ ಬಸ್ ನಿಲ್ದಾಣ ಕಾಮಗಾರಿಯನ್ನು ಕೈಗೊಂಡಿತ್ತು. ಆದರೆ, ಕಾಮಗಾರಿ ಆರಂಭದಿಂದಲೂ ಕುಂಟುತ್ತಾ ಸಾಗುತ್ತಿದೆ.

ಅನುದಾನದ ಕೊರತೆಯಿಂದ ಸ್ಥಗಿತ ಗೊಂಡಿದ್ದ ಕಾಮಗಾರಿಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿದ್ದ ಡಿ.ಕೆ. ತಿಮ್ಮಪ್ಪ ಹಾಗೂ ಎನ್.ಎನ್. ಚರಣ್ ಅವರ ಅವಧಿಯಲ್ಲಿ ಮರು ಚಾಲನೆ ನೀಡಲಾಗಿತ್ತು. ಆದರೆ, ಇನ್ನೂ ಸೇವೆಗೆ ಲಭ್ಯವಾಗಿಲ್ಲ.

ಪಟ್ಟಣ ಪಂಚಾಯಿತಿ ಇಒ ಶ್ರೀಧರ್ ಅವರು ಬಂದ ಬಳಿಕ ಪ್ರಯಾಣಿಕರ ತಂಗುದಾಣ, ವಿಶ್ರಾಂತಿ ಕೊಠಡಿ , ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದೆ. ಇದುವರೆಗೆ ಕಾಮಗಾರಿಗೆ ₹75 ಲಕ್ಷ ಖಚ್ಚು ಮಾಡಲಾಗಿದ್ದರೂ ಬಳಕೆಗೆ ಲಭ್ಯವಾಗಿಲ್ಲ.

ಬಸ್ ನಿಲ್ದಾಣ ಆರಂಭವಾದರೆ ಕುಶಾಲನಗರ ಸುತ್ತಮುತ್ತಲ ಗ್ರಾಮ ಗಳಿಗೆ ಹಾಗೂ ವಿರಾಜಪೇಟೆ, ಸಿದ್ದಾಪುರ, ಗೋಣಿಕೊಪ್ಪಲು, ಸೋಮವಾರಪೇಟೆ, ಶನಿವಾರಸಂತೆ, ಸುಂಟಿಕೊಪ್ಪ ಭಾಗಗಳಿಗೆ ನಿತ್ಯ ಸಂಚರಿಸುವ 50ಕ್ಕೂ ಹೆಚ್ಚು ಬಸ್‌ ಚಾಲಕರಿಗೆ, ಪ್ರಯಾಣಿಕರಿಕೆ ಅನುಕೂಲವಾಗಲಿದೆ ಎನ್ನುತ್ತಾರೆ ಸಾರ್ವಜನಿಕರು.

ಆಸನಗಳ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಬಸ್ ನಿಲ್ದಾಣಕ್ಕೆ ಡಾಂಬರೀಕರಣ ಅಥವಾ ಕಾಂಕ್ರೀಟ್ ಅಳವಡಿಕೆ, ವಿದ್ಯುತ್ ದೀಪಗಳ ಅಳವಡಿಕೆ ಸೇರಿದಂತೆ ಹಲವು ಕೆಲಸಗಳು ಬಾಕಿ ಉಳಿದಿವೆ.

ಅಯ್ಯಪ್ಪ ದೇವಸ್ಥಾನಕ್ಕೆ ಹೋಗುವ ರಸ್ತೆ ತುಂಬ ಕಿರಿದಾಗಿದ್ದು ಬಸ್‌ಗಳ ಸಂಚಾರ ಕಷ್ಟಸಾಧ್ಯವಾಗಿದೆ. ಏಕಕಾಲ ದಲ್ಲಿ ಎರಡು ಬಸ್ ಸಂಚರಿಸಲು ಸಾಧ್ಯವಿಲ್ಲ. ಆದ್ದರಿಂದ, ಈ ರಸ್ತೆಯನ್ನು ವಿಸ್ತರಣೆ ಮಾಡಬೇಕು ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಮಧು ಒತ್ತಾಯಿಸುತ್ತಾರೆ.

ಕುಶಾಲನಗರ ಸುತ್ತಮುತ್ತಲ ಪ್ರವಾಸಿತಾಣಗಳ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಅಲ್ಲದೇ, ಇದೇ ಮಾರ್ಗವಾಗಿ ಜಿಲ್ಲೆಯ ಇತರ ತಾಣಗಳಿಗೂ ತೆರಳಬೇಕು. ಹೀಗಾಗಿ, ನಿತ್ಯವೂ ಇಲ್ಲಿ ವಾಹನ ದಟ್ಟಣೆ ವಿಪರೀತವಾಗಿರುತ್ತದೆ. ಜತೆಗೆ, ಆಟೊ ನಿಲ್ದಾಣದ ಕೊರತೆಯಿದ್ದು, ಮತ್ತಷ್ಟು ಸಮಸ್ಯೆ ಬಿಗಡಾಯಿಸುವಂತೆ ಮಾಡಿದೆ ಎನ್ನುತ್ತಾರೆ ನಾಗರಿಕರು.

ಪಟ್ಟಣ ವ್ಯಾಪ್ತಿಯಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಆಟೊಗಳಿವೆ. ಹೃದಯ ಭಾಗದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಸಹ ಹಾದು ಹೋಗಿದ್ದು, ಆಗ್ಗಾಗ್ಗೆ ಸಣ್ಣಪುಟ್ಟ ಅಪಘಾತಗಳು ಘಟಿಸುತ್ತಲೇ ಇರುತ್ತವೆ. ಸುಗಮ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕುಶಾಲನಗರ ಪಟ್ಟಣಕ್ಕೆ ಹೆಚ್ಚುವರಿಯಾಗಿ ಸಂಚಾರಿ ಪೊಲೀಸ್ ಠಾಣೆಯನ್ನೂ ಸ್ಥಾಪಿಸಲಾಗಿದೆ.

ಕುಶಾಲನಗರದಲ್ಲಿ ಸುಗಮ ವಾಹನ ಸಂಚಾರಕ್ಕೆ ಪೊಲೀಸರು ಹಲವು ಕ್ರಮ ಕೈಗೊಂಡಿದ್ದು ಅದರ ವಿವರ ಈ ಕೆಳಕಂಡಂತಿದೆ...

* ಗಣಪತಿ ದೇವಸ್ಥಾನದ ಮುಂಭಾಗ ವಾಹನ ನಿಲುಗಡೆ ನಿಷೇಧ

* ಕರ್ನಾಟಕ ಬ್ಯಾಂಕ್‌ನಿಂದ ಶ್ರೀವಿನಾಯಕ ಎಂಟರ್ ಪ್ರೈಸಸ್‌ವರೆಗೆ ಮಾತ್ರ ದ್ವಿಚಕ್ರ ವಾಹನ ನಿಲುಗಡೆ

* ಕೊಹಿನೂರ್ ರಸ್ತೆಯಿಂದ ಲಾರಿ ಸ್ಟ್ಯಾಂಡ್ ಮಾರ್ಗವಾಗಿ ಗಣಪತಿ ದೇವಸ್ಥಾನ ರಸ್ತೆ ತನಕ ಏಕಮುಖ ಸಂಚಾರ ವ್ಯವಸ್ಥೆ

* ಕಾರ್ಯಪ್ಪ ವೃತ್ತದಿಂದ ದೇವಿ ಪ್ರಸಾದ್ ಹೋಟೆಲ್‌ವರೆಗೆ ವಾಹನ ನಿಲುಗಡೆ ನಿಷೇಧ

* ಚರ್ಮ ಕುಟೀರ ಮುಂಭಾಗದಿಂದ ಎಸ್‌ಬಿಎಂ ಬ್ಯಾಂಕ್‌ವರೆಗೆ ರಸ್ತೆಯ ಎಡಬದಿಗೆ ಆಟೊ ನಿಲುಗಡೆ

* ಕಾರ್ಯಪ್ಪ ವೃತ್ತದಿಂದ ರಥಬೀದಿಯ ಮೈಸ್ ಕಂಪ್ಯೂಟರ್‌ವರೆಗೆ ಏಕಮುಖ ಸಂಚಾರ

* ಐ.ಬಿ ಜಂಕ್ಷನ್‌ನಲ್ಲಿ ರಸ್ತೆಯ ನಾಲ್ಕು ಬದಿಗಳಲ್ಲಿ 50 ಅಡಿಗಳವರೆಗೆ ವಾಹನ ನಿಲುಗಡೆ ನಿಷೇಧ* ಸೆಸ್ಕ್‌ ತಡೆಗೋಡೆ ರಸ್ತೆಬದಿಯಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ

ಕುಶಾಲನಗರ ಪಟ್ಟಣದಲ್ಲಿ ಸಂಚಾರದ ವಿವರ

₹ 40 ಲಕ್ಷ – ಬಸ್‌ ನಿಲ್ದಾಣಕ್ಕೆ ನಿಗದಿಪಡಿಸಿದ್ದ ಅನುದಾನ

₹75 ಲಕ್ಷ – ಖರ್ಚಾಗಿರುವ ಹಣ

50 – ನಿತ್ಯ ಸಂಚರಸುವ ಖಾಸಗಿ ಬಸ್‌ಗಳು

1,500 – ಆಟೊಗಳ ಸಂಖ್ಯೆ

* * 

ಖಾಸಗಿ ಬಸ್‌ ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಕೆಲವೊಂದು ಮೂಲಸೌಕರ್ಯ ಕಲ್ಪಿಸಿದರೆ ನಿಲ್ದಾಣವು ಬಳಕೆಗೆ ಲಭ್ಯವಾಗಲಿದೆ
ಶ್ರೀಧರ್, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ, ಕುಶಾಲನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT