ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅತ್ಯಂತ ಭ್ರಷ್ಟ

Last Updated 9 ಡಿಸೆಂಬರ್ 2017, 8:47 IST
ಅಕ್ಷರ ಗಾತ್ರ

ಹುಮನಾಬಾದ್: ‘ಸಿದ್ದರಾಮಯ್ಯ ಅವರದು ರಾಜ್ಯ ಕಂಡ ಅತ್ಯಂತ ಭಷ್ಟ ಸರ್ಕಾರ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದರು. ಇಲ್ಲಿನ ರಥ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಿಜೆಪಿ ಪರಿವರ್ತನಾ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.

‘ಜನಸಾಮಾನ್ಯರ ಹಿತ ಕಾಪಾಡುವುದರಲ್ಲಿ ಸಂಪೂರ್ಣ ವಿಫಲವಾದ ಕಾಂಗ್ರೆಸ್‌ ಸರ್ಕಾರ ಕಿತ್ತೊಗೆದು, ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಸರ್ವ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗಾಗಿ ರಾಜ್ಯದ ಜನ ಬಿಜೆಪಿ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಕೇಂದ್ರ ಸಚಿವ ಅನಂತಕುಮಾರ ಮಾತನಾಡಿ, ‘ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯದ ಹ್ಯಾಟ್ರಿಕ್‌ ಮುಖ್ಯಮಂತ್ರಿ ಆಗುವುದರಲ್ಲಿ ಸಂದೇಹವಿಲ್ಲ. ಬಿಜೆಪಿ ಬಲಪಡಿಸುವಿಕೆಯಲ್ಲಿ ಹುಮನಾಬಾದ್‌ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಧ್ಯೆ ಎಲ್ಲವೂ ಸರಿಯಿಲ್ಲ. 3ತಿಂಗಳಲ್ಲಿ ಸಿದ್ದರಾಮಯ್ಯ ರಾಜ್ಯದ ಮಾಜಿ ಮುಖ್ಯಮಂತ್ರಿ ಆಗುವುದು ಖಚಿತ’ ಎಂದು ಭವಿಷ್ಯ ನುಡಿದರು.

‘ಹಿರಿಯ ಪೊಲೀಸ್‌ ಅಧಿಕಾರಿಗಳ ಸಾವಿನ ಜೊತೆಗೆ ಎಸ್‌.ಐ ಮಲ್ಲಿಕಾರ್ಜುನ ಬಂಡೆ ಅವರ ಸಾವಿನ ಬಗ್ಗೆ ಸರ್ಕಾರ ಈವರೆಗೆ ತನಿಖೆ ಕೈಗೊಳ್ಳದಿರಲು ಕಾರಣವೇನು’ ಎಂದು ಅವರು ಪ್ರಶ್ನಿಸಿದರು.

‘ಜಿಲ್ಲೆಯ ಕಾರಂಜಾ ಮತ್ತು ಮುಲ್ಲಾಮಾರಿ ಯೋಜನೆ ಅಭಿವೃದ್ಧಿ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನಿರಾಸಕ್ತಿ ತೋರಿದ್ದು, ಅಭಿವೃದ್ಧಿ ಕುಂಠಿತದ ಪ್ರಶ್ನೆಗೆ ತಾಂತ್ರಿಕ ಅಡಚಣೆಯ ನೆಪ ಒಡ್ಡುತ್ತಿರುವುದು ಹಾಸ್ಯಾಸ್ಪದ.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಪುಟ ಸಹೋದ್ಯೋಗಿಗಳದು ಭಸ್ಮಾಸುರ ನಾಟಕ ಕಂಪೆನಿ. ಪೌರಾಡಳಿ ಸಚಿವ ಈಶ್ವರ ಖಂಡ್ರೆ, ಶಾಸಕ ರಾಜಶೇಖರ ಬಿ.ಪಾಟೀಲ ಅವರಿಬ್ಬರೂ ಅದರ ಸದಸ್ಯರಾಗಿದ್ದಾರೆ ಎಂಬುದಕ್ಕೆ ಈಗ ತಮ್ಮ ಕೈಯನ್ನು ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಮೇಲೆ ಇಡಲು ಹೊರಟಿರುವುದೇ ಸಾಕ್ಷಿ’ ಎಂದು ಅನಂತಕುಮಾರ ಆರೋಪಿಸಿದರು.

ಮಾಜಿ ಸಚಿವ ಅರವಿಂದ ಲಿಂಬಾವಳಿ, ಸಂಸದ ಭಗವಂತ ಖೂಬಾ, ಶಾಸಕ ಪ್ರಭು ಚವಾಣ್, ರಘುನಾಥ ಮಲ್ಕಾಪುರೆ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ರಾಜೇಂದ್ರ ವರ್ಮಾ, ಎಂ.ಜಿ.ಮುಳೆ, ಪಕ್ಷದ ಅಲ್ಪಸಂಖ್ಯಾತ ರಾಜ್ಯ ಘಟಕ ಅಧ್ಯಕ್ಷ ಅಬ್ದುಲ್‌ ಅಜೀಮ್‌, ಬಾಬುರಾವ ಚವಾಣ್, ಪರಿವರ್ತನಾ ಯಾತ್ರೆ ಉಸ್ತುವಾರಿ ರವಿಕುಮಾರ, ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಪಿ.ನಂಜುಂಡಿ, ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಉಪಾಧ್ಯಕ್ಷ ಶಿವಾನಂದ ಮಂಠಾಳಕರ್, ಬಸವರಾಜ ಆರ್ಯ, ಪದ್ಮಾಕರ ಪಾಟೀಲ ಇದ್ದರು.

ಮಾಜಿ ಶಾಸಕ ಸುಭಾಷ ಕಲ್ಲೂರ ಪ್ರಾಸ್ತಾವಿಕ ಮಾತನಾಡಿದರು. ಪಕ್ಷದ ತಾಲ್ಲೂಕು ಅಧ್ಯಕ್ಷ ವಿಶ್ವನಾಥ ಪಾಟೀಲ ಮಾಡ್ಗುಳ್ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮನಾಥ ಪಾಟೀಲ, ಪ್ರಭಾಕರ ನಾಗರಾಳೆ ನಿರೂಪಿಸಿದರು. ಕಾರ್ಯದರ್ಶಿ ಮಲ್ಲಿಕಾರ್ಜುನ ಕುಂಬಾರ ವಂದಿಸಿದರು.

* * 

ದಲಿತರಿಗೆ ಸ್ಥಾನಮಾನ ನೀಡುವುದಾಗಿ ಹೇಳಿಕೊಳ್ಳುತ್ತಿರುವ ಕಾಂಗ್ರೆಸ್‌ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡದಿರಲು ಕಾರಣವೇನು
ಗೋವಿಂದ ಕಾರಜೋಳ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT