ಶುಕ್ರವಾರ, ಮಾರ್ಚ್ 5, 2021
27 °C

ಜೆಸಿಬಿ ಮುಂದೆ ಮಲಗಿ ವ್ಯಾಪಾರಿಗಳ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೆಸಿಬಿ ಮುಂದೆ ಮಲಗಿ ವ್ಯಾಪಾರಿಗಳ ಧರಣಿ

ಮಲೆಮಹದೇಶ್ವರ ಬೆಟ್ಟ: ಸಮೀಪದ ತಾಳು ಬೆಟ್ಟದಲ್ಲಿನ ತಾತ್ಕಾಲಿಕ ಹೋಟೆಲ್‌ಗಳನ್ನು ತೆರವುಗೊಳಿಸುವ ಸಂಬಂಧ ಮಲೆಮಹದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ವರ್ತಕರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಮಕ್ಕಳ ಸಮೇತ ಜೆಸಿಬಿ ಮುಂದೆ ಮಲಗಿದ ವ್ಯಾಪಾರಿಗಳು; ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದರು.

ಮತ್ತೆ ಕೆಲವು ಕೈಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸೀಮೆಎಣ್ಣೆಯ ಕ್ಯಾನುಗಳನ್ನು ಹಿಡುದುಕೊಂಡು ಬೆದರಿಸಿದರು. ಇದರಿಂದ ತೆರವು ಕಾರ್ಯಾಚರಣೆಯನ್ನು ಅನಿವಾರ್ಯವಾಗಿ ಮುಂದೂಡಲಾಯಿತು. ಅಲ್ಲದೇ, ಸ್ವಯಂ ಪ್ರೇರಣೆಯಿಂದ ಮಳಿಗೆ ತೆರವು ಮಾಡುವಂತೆ ವ್ಯಾಪಾರಿಗಳಿಗೆ ತಿಂಗಳ ಗಡುವು ನೀಡಲಾಯಿತು.

ಮಲೆಮಹದೇಶ್ವರ ಬೆಟ್ಟದಿಂದ 17 ಕಿ.ಮೀ ದೂರವಿರುವ ತಾಳು ಬೆಟ್ಟದಲ್ಲಿ ರಸ್ತೆ ಪಕ್ಕದಲ್ಲೇ 17 ಕುಟುಂಬಗಳು ತಾತ್ಕಾಲಿಕ ಹೋಟೆಲ್‌ ನಿರ್ಮಿಸಿಕೊಂಡಿವೆ. ಸುಮಾರು 50 ವರ್ಷಗಳಂದ ಈ ಜನ ಇದೇ ವ್ಯಾಪಾರ ನಂಬಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಆದರೆ, ಈ ನಾಗ ಬೆಟ್ಟದ ಪ್ರಾಧಿಕಾರಕ್ಕೆ ಸೇರಿದ್ದು, ಅದನ್ನು ತೆರವುಗೊಳಿಸುವಂತೆ ನಾಲ್ಕು ವರ್ಷಗಳಿಂದಲೂ ಒತ್ತಡ ಹೇರುತ್ತಿದೆ. ಈಗಾಗಲೇ ನೋಟಿಸ್‌ಗಳನ್ನೂ ನೀಡಲಾಗಿದೆ.

ಇದನ್ನು ಪ್ರಶ್ನಿಸಿ ವ್ಯಾಪಾರಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಈ ಸ್ಥಳವು ಪ್ರಾಧಿಕಾರಕ್ಕೆ ಸೇರಬೇಕೆಂದು ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರದ ಅಧಿಕಾರಿಗಳು ಅಂಗಡಿಗಳನ್ನು ತೆರವುಗೊಳಿಸಲು ಮುಂದಾದರು.

ಶುಕ್ರವಾರ ಬೆಳಿಗ್ಗೆ ಜೆಸಿಬಿಗಳು ಸ್ಥಳಕ್ಕೆ ಬರುತ್ತಿದ್ದಂತೆ ವ್ಯಾಪಾರಿಗಳು ಪ್ರತಿಭಟನೆಗೆ ಇಳಿದರು. ಪತ್ನಿ, ಮಕ್ಕಳ ಸಮೇತ ಜೆಸಿಬಿ ಚಕ್ರದ ಬಳಿ ಮಲಗಿದರು. ಪ್ರಾಣ ಬಿಟ್ಟರೂ ಈ ಸ್ಥಳ ಬಿಟ್ಟುಕೊಡುವುದಿಲ್ಲ ಎಂದು ಪಟ್ಟುಹಿಡಿದರು. ಕೆಲವರು ಸೀಮೆಎಣ್ಣೆ ಕ್ಯಾನ್ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದರು. ಕ್ಯಾನುಗಳನ್ನು ವಶಕ್ಕೆ ಪಡೆದ ಪೊಲೀಸರು, ಸಮಾಧಾನಪಡಿಸಿದರು.

ಈ ಸಂಭಂದ ವ್ಯಾಪಾರಸ್ಥರೊಡನೆ ಮಾತನಾಡಿದ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಜೆ.ರೂಪಾ, ‘ಈ ಸ್ಥಳವು ಪ್ರಾಧಿಕಾರಕ್ಕೆ ಸೇರಿದೆ. ವ್ಯಾಪಾರಕ್ಕಾಗಿ ಪ್ರಾಧಿಕಾರದ ವತಿಯಿಂದಲೇ 15 ಮಳಿಗೆ ನಿರ್ಮಿಸಲಾಗಿದೆ. ರಸ್ತೆ ತಕ್ಕದ ತಾತ್ಕಾಲಿಕ ಹೋಟೆಲ್‌ ತೆರವುಗೊಳಿಸಿ, ಹೊಸ ಮಳಿಗೆಗಳಲ್ಲಿ ವ್ಯಾಪಾರ ಮಾಡಿಕೊಳ್ಳಿ. ಇದರಿಮದ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ’ ಎಂದರು.

ಆದರೆ, ವ್ಯಾಪಾರಿಗಳು ಇದಕ್ಕೂ ಒಪ್ಪಲಿಲ್ಲ. 30 ದಿನಗಳವರೆಗೆ ಗಡುವು ನೀಡಲಾಗುವುದು. ಅದರೊಳಗೆ ಅಂಗಡಿಗಳನ್ನು ಖಾಲಿ ಮಾಡದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ರೂಪಾ ಹೇಳಿದರು. ತಿಂಗಳ ಗಡುವು ಸಿಕ್ಕಿದ್ದರಿಂದ ವ್ಯಾಪಾರಿಗಳು ಪ್ರತಿಭಟನೆ ಹಿಂತೆಗೆದುಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.