ಭಾನುವಾರ, ಮಾರ್ಚ್ 7, 2021
19 °C

ಬೆಳೆ ನಾಶ ವಿವರ ದಾಖಲಿಸಲು ಪತ್ರ; ಸ್ಪಂದಿಸದ ಮುಖ್ಯಮಂತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳೆ ನಾಶ ವಿವರ ದಾಖಲಿಸಲು ಪತ್ರ; ಸ್ಪಂದಿಸದ ಮುಖ್ಯಮಂತ್ರಿ

ಚಿಕ್ಕಮಗಳೂರು: ‘ಬರಗಾಲಕ್ಕೆ ತುತ್ತಾಗಿ ಬೆಳೆ ನಾಶವಾಗಿರುವ ತೆಂಗು, ಅಡಿಕೆ ತೋಟದ ವಿಸ್ತೀರ್ಣ, ಬೆಳೆಗಾರರ ಹೆಸರು, ಮರಗಳ ಸಂಖ್ಯೆ ವಿವರ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆಅವರು ಅದಕ್ಕೆ ಸ್ಪಂದಿಸಿಲ್ಲ’ ಎಂದು ಸಂಸದ ಎಚ್‌.ಡಿ.ದೇವೇಗೌಡ ಆರೋಪಿಸಿದರು.

‘ನಾಲ್ಕು ತಿಂಗಳ ಹಿಂದೆ ಪತ್ರ ಬರೆದಿದ್ದೇನೆ. ದೂರವಾಣಿ ಮೂಲಕವೂ ಗಮನಕ್ಕೆ ತಂದಿದ್ದೇನೆ. ಬೆಳೆ ನಾಶದ ವಿವರ ದಾಖಲಿಸಿದ್ದರೆ, ಬೆಳೆಗಾರರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಮುಂದಿನ ಸರ್ಕಾರ ಕ್ರಮ ವಹಿಸಲು ಅನುಕೂಲವಾಗುತ್ತದೆ’ ಎಂದು ಅವರು ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬರಗಾಲದಿಂದ ರಾಜ್ಯದಲ್ಲಿ ಅಡಿಕೆ, ತೆಂಗು ನಾಶವಾಗಿರುವ ಬಗ್ಗೆ, ತೋಟಗಳ ದುಸ್ಥಿತಿಯ ಫೋಟೋಗಳ ಸಮೇತ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ. ಕೇರಳ ಮಾದರಿಯಲ್ಲಿ ಪರಿಹಾರಕ್ಕೆ ಆಗ್ರಹಿಸಿ ಆ ರಾಜ್ಯದ ಸರ್ಕಾರಿ ಆದೇಶ ಪ್ರತಿಗಳನ್ನು ಮನವಿಯೊಂದಿಗೆ ಲಗತ್ತಿಸಿದ್ದೇನೆ. ಆದರೆ, ಕೇಂದ್ರ ಸರ್ಕಾರ ಈ ಬಗ್ಗೆ ಆಸಕ್ತಿ ವಹಿಸಿಲ್ಲ’ ಎಂದು ದೂರಿದರು.

ರಾಮನಗರ ಕ್ಷೇತ್ರದಿಂದ ಎಚ್‌ಡಿಕೆ ಸ್ಪರ್ಧೆ: ಎಚ್‌.ಡಿ.ಕುಮಾರಸ್ವಾಮಿ ಅವರು ರಾಮನಗರದಿಂದ ಕಣಕ್ಕಿಳಿಯಲಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅಥವಾ ಎರಡು ಕಡೆ ಅವರು ಸ್ಪರ್ಧಿಸುವುದಿಲ್ಲ ಎಂದು ದೇವೇಗೌಡ ಸ್ಪಷ್ಟಪಡಿಸಿದರು.

‘ಕಾಂಗ್ರೆಸ್‌, ಬಿಜೆಪಿ ಎರಡರ ಜತೆಗೂ ಮೈತ್ರಿ ಮಾಡಿಕೊಂಡು ನೋಡಿದ್ದೇವೆ. ಎರಡೂ ಪಕ್ಷಗಳ ಸಹವಾಸ ಸಾಕಾಗಿದೆ. ಹೀಗಾಗಿ ಮೈತ್ರಿ ಮಾಡಿಕೊಳ್ಳುವ ಇರಾದೆ ಇಲ್ಲ. ಜೆಡಿಎಸ್‌ ‘ಕಿಂಗ್‌ ಮೇಕರ್‌’ ಅಥವಾ ‘ಕಿಂಗ್‌’ ಎಂಬುದು ಮೇ ತಿಂಗಳಲ್ಲಿ ತಿಳಿಯಲಿದೆ. ದಲಿತರೊಬ್ಬರು, ಅಲ್ಪಸಂಖ್ಯಾತರೊಬ್ಬರನ್ನು ಉಪಮುಖ್ಯಮಂತ್ರಿ ಮಾಡುವ ಕುರಿತು ಈಗಲೇ ಮಾತನಾಡುವುದು ಸರಿಯಲ್ಲ. ಈ ಬಗ್ಗೆ ಮಾತನಾಡಲು ಇದು ಸಕಾಲವಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಕೆ.ಸಿ.ರೆಡ್ಡಿ ಕಾಲದಿಂದ ಸಿದ್ದರಾಮಯ್ಯ ಬರುವವರೆಗೂ ಮುಖ್ಯಮಂತ್ರಿ ಆಗಿದ್ದವರೆಲ್ಲರೂ ಭ್ರಷ್ಟರು, ಸಿದ್ದರಾಮಯ್ಯ ಅವರೊಬ್ಬರೇ ಸತ್ಯವಂತರು ಎಂದು ಹೇಳಿದ್ದೆ. ಇದನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದಾರೆ ಎಂದು ಮಾಧ್ಯಮಗಳು ತಿರುಚಿವೆ. ಭ್ರಷ್ಟಾಚಾರದ ಆರೋಪಗಳಿದ್ದರೆ ಹೇಳಲಿ ಎಂದು ಸಿದ್ದರಾಮಯ್ಯ ಗುಡುಗಿದ್ದಕ್ಕೆ ಆ ರೀತಿ ಪ್ರತಿಕ್ರಿಯಿಸಿದ್ದೆ’ ಎಂದು ಉತ್ತರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.