ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾವರದಲ್ಲಿ ಮುಂದುವರಿದ ಉದ್ವಿಗ್ನ ಸ್ಥಿತಿ

ಮೃತಪಟ್ಟ ಯುವಕನ ಹೆಸರು ವೃತ್ತಕ್ಕೆ
Last Updated 9 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಹೊನ್ನಾವರ (ಉತ್ತರ ಕನ್ನಡ ಜಿಲ್ಲೆ): ಹಿಂದೂ– ಮುಸ್ಲಿಮರ ನಡುವಿನ ಘರ್ಷಣೆಯಿಂದ ಪಟ್ಟಣದಲ್ಲಿ ಉಂಟಾಗಿರುವ ಉದ್ವಿಗ್ನ ಸ್ಥಿತಿ ಶನಿವಾರವೂ ಮುಂದುವರಿದಿದ್ದು, ತಾಲ್ಲೂಕಿನ ಕೆಲ ಗ್ರಾಮಗಳಿಗೂ ಹಬ್ಬಿದೆ.

ಪಟ್ಟಣದ ಶಾಲಾ– ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬಸ್ ಹಾಗೂ ಇತರ ವಾಹನಗಳ ಸಂಚಾರ ವಿರಳವಾಗಿತ್ತು. ಅಂಗಡಿ, ಹೋಟೆಲ್‌ ಹಾಗೂ ವಾಣಿಜ್ಯ ಮಳಿಗೆಗಳು ಮುಚ್ಚಿದ್ದವು. ಅಘೋಷಿತ ಬಂದ್ ವಾತಾವರಣ ಉಂಟಾಗಿ ಜನಸಾಮಾನ್ಯರು ಸಂಕಷ್ಟ ಅನುಭವಿಸಿದರು.

ತಾಲ್ಲೂಕಿನ ಹೊರ ವಲಯಗಳಾದ ಕವಲಕ್ಕಿ, ಹಡಿನಬಾಳ, ಹೆರಂಗಡಿಯಲ್ಲಿ ಕಲ್ಲು ತೂರಾಟ, ಹಲ್ಲೆಯಂಥ ಘಟನೆಗಳು ನಡೆದಿವೆ. ಅರೆಅಂಗಡಿಯಲ್ಲಿ ಶುಕ್ರವಾರ ಸಂಜೆ ದುಷ್ಕರ್ಮಿಗಳು ಬೈಕನ್ನು ಸುಟ್ಟು ಹಾಕಿದ್ದಾರೆ.

ಮೃತಪಟ್ಟ ಯುವಕ ಪರೇಶ ಮೇಸ್ತನ ಭಾವಚಿತ್ರವನ್ನು ಇಲ್ಲಿನ ಗೇರುಸೊಪ್ಪ ವೃತ್ತದಲ್ಲಿ ಇಟ್ಟು, ಈ ವೃತ್ತಕ್ಕೆ ‘ಪರೇಶ ಮೇಸ್ತ ವೃತ್ತ’ ಎಂದು ನಾಮಕರಣ ಮಾಡಲಾಗಿದೆ.

ಪರಿಸ್ಥಿತಿ ನಿಯಂತ್ರಣಕ್ಕೆ ಹರಸಾಹಸ: ನೂರಾರು ಪೊಲೀಸರು ಪಟ್ಟಣದಲ್ಲಿ ಬೀಡು ಬಿಟ್ಟಿದ್ದಾರೆ. ತಾಲ್ಲೂಕಿನ ಹೊರ ಭಾಗಗಳಲ್ಲೂ ಪೊಲೀಸರು ಗಸ್ತು ತಿರುಗುತ್ತಿದ್ದು, ಪರಿಸ್ಥಿತಿಯ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿವಿಧ ರೀತಿಯ ಸುದ್ದಿ ಹಾಗೂ ಚಿತ್ರಗಳಿಂದ ಊಹಾಪೋಹ ಸೃಷ್ಟಿಯಾಗುತ್ತಿದ್ದು, ಇದನ್ನು ನಿಯಂತ್ರಿಸುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

‘ಪ್ರಜಾವಾಣಿ’ ವರದಿಗಾರನ ಮೇಲೆ ಹಲ್ಲೆ: ವರದಿಗೆಂದು ತೆರಳಿದ್ದ ‘ಪ್ರಜಾವಾಣಿ’ಯ ಅರೆಕಾಲಿಕ ವರದಿಗಾರ ಎಂ.ಜಿ.ಹೆಗಡೆ ಅವರ ಮೇಲೆ ಹಡಿನಬಾಳದಲ್ಲಿ ಶನಿವಾರ ಹಲ್ಲೆ ನಡೆದಿದೆ.

ಉದ್ರಿಕ್ತ ಗುಂಪೊಂದು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿತ್ತು. ಈ ವೇಳೆ ಫೋಟೊ ತೆಗೆಯಲು ಮುಂದಾದ ಹೆಗಡೆ ಅವರ ಮೇಲೆ ಗುಂಪಿನಲ್ಲಿದ್ದ ಕೆಲವರು ಮುಗಿಬಿದ್ದು, ಅವರ ಬೈಕಿಗೆ ಹಾನಿ ಮಾಡಿದರು. ಜತೆಗೆ ಕ್ಯಾಮೆರಾ ಕಸಿದುಕೊಂಡು ಅದಲ್ಲಿದ್ದ ಮೆಮೊರಿ ಕಾರ್ಡನ್ನು ತಮ್ಮ ವಶಕ್ಕೆ ಪಡೆದರು. ಬೈಕ್‌ ಕೀ ಕಿತ್ತುಕೊಂಡಿದ್ದಲ್ಲದೇ ಹೆಲ್ಮೆಟ್ ಧರಿಸಿದ್ದ ಹೆಗಡೆ ಅವರ ತಲೆಯ ಮೇಲೆ ಗುದ್ದಿದರು. ಈ ಬಗ್ಗೆ, ಎಂ.ಜಿ.ಹೆಗಡೆ ಅವರು ಜಿಲ್ಲಾ
ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ಅವರಿಗೆ ಲಿಖಿತ ದೂರು ನೀಡಿದ್ದಾರೆ. ಘಟನೆಯನ್ನು ಖಂಡಿಸಿ, ಹೊನ್ನಾವರ ಪತ್ರಕರ್ತರ ಸಂಘವೂ ದೂರು ನೀಡಿದ್ದು, ತನಿಖೆಗೆ ಒತ್ತಾಯಿಸಿದೆ. ಜತೆಗೆ ತಾಲ್ಲೂಕಿನ ಎಲ್ಲ ಪತ್ರಕರ್ತರು ಹಾಗೂ ಕುಟುಂಬದವರಿಗೆ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದೆ.

ದೂರು ಸ್ವೀಕರಿಸಿದ ಎಸ್ಪಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT