ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಬಾಗ: ಆಸ್ಪತ್ರೆ ಆವರಣದಲ್ಲಿ ಕ್ಯಾಂಟೀನ್‌

Last Updated 10 ಡಿಸೆಂಬರ್ 2017, 8:56 IST
ಅಕ್ಷರ ಗಾತ್ರ

ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಒಂದೇ ಸೂರಿನಡಿ ರೋಗಿಗಳಿಗೆ ಪೌಷ್ಟಿಕ ಆಹಾರ ಮತ್ತು ಹಾಲು ಹಣ್ಣುಗಳನ್ನು ರಿಯಾಯಿತಿ ದರದಲ್ಲಿ ಒದಗಿಸಲು ಸರ್ಕಾರ ಕ್ಯಾಂಟೀನ್‌ಗಳನ್ನು ಆರಂಭಿಸಲು ಸಿದ್ಧತೆ ಮಾಡಿಕೊಂಡಿದೆ.

ನಾಗರಿಕ ಸೌಲಭ್ಯ ಯೋಜನೆಯಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಯೋಜನೆಯನ್ನು ರೂಪಿಸಿದೆ. ಅದಕ್ಕಾಗಿ ತಾಲ್ಲೂಕು ಆಸ್ಪತ್ರೆಯ ಆವರಣದಲ್ಲಿ ಸಿದ್ಧ ಮಾದರಿಯ ಕಟ್ಟಡ ನಿರ್ಮಾಣ ಕಾರ್ಯ ಮುಗಿದಿದ್ದು ಶೀಘ್ರ ಕಾರ್ಯಾರಂಭ ಮಾಡಲಿದೆ.

ಕಟ್ಟಡಕ್ಕೆ ಅಗತ್ಯವಾದ 500 ಚ.ಅಡಿ ವ್ಯಾಪ್ತಿಯಲ್ಲಿ ಕ್ಯಾಂಟಿನ್‌, ನಂದಿನಿ ಹಾಲಿನ ಮಳಿಗೆ, ಹಾಪ್‌ ಕಾಮ್ ಹಣ್ಣಿನ ಮಳಿಗೆ ವ್ಯವಸ್ಥೆ ಮಾಡಲಾಗಿದೆ. ಕಟ್ಟಡಕ್ಕೆ ಅಗತ್ಯವಾದ ಸ್ಥಳ, ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಅಗತ್ಯವಾದ ಸೌಲಭ್ಯ ಗಳನ್ನು ಸಂಬಂಧಿಸಿದ ಅಸ್ಪತ್ರೆಯವರೇ ಉಚಿತವಾಗಿ ಕಲ್ಪಿಸಬೇಕು.

ವಿಶೇಷವೆಂದರೆ ಕ್ಯಾಂಟೀನ್‌ನ ಕಟ್ಟಡ ಮಾದರಿಯನ್ನು ರಾಜ್ಯದಾದ್ಯಂತ ಒಂದೇ ಮಾದರಿಯಲ್ಲಿ ರೂಪಿಸಲಾಗಿದೆ.
ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಇದೇ ರೀತಿ ಸಿದ್ಧ ಮಾದರಿಯ ಕಟ್ಟಡ ಕಾಮಗಾರಿ ಆರಂಭವಾಗಿದ್ದು, ಉಪಕರಣ ಜೋಡನೆ ಕಾರ್ಯ ಭರದಿಂದ ಸಾಗಿದೆ.

ಈ ಹೊಸ ಮಾದರಿಯ ಕ್ಯಾಂಟೀನ್‌ನಲ್ಲಿ ಊಟ, ಉಪಾಹಾರದ ಜೊತೆಗೆ ಶುದ್ಧ ಕುಡಿಯುವ ನೀರು, ಶೌಚಾಲಯಗಳ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜೊತೆಗೆ ನಂದಿನಿ ಹಾಲಿನ ಮಳಿಗೆ ಸಹ ಇರಲಿದೆ. ಹೀಗಾಗಿ, ಒಂದೇ ಸೂರಿನಡಿ ಪೌಷ್ಟಿಕ ಆಹಾರ, ಹಾಲು ಹಣ್ಣು ಕಡಿಮೆ ದರದಲ್ಲಿ ಜನರಿಗೆ ಸಿಗಲಿದೆ.

‘ಪ್ರಾರಂಭದಲ್ಲಿ ಪ್ರತಿದಿನ 500 ಜನರಿಗೆ ಊಟ, ಉಪಾಹಾರ ಕಲ್ಪಿಸುವ ಗುರಿ ಹೊಂದಲಾಗಿದೆ. ನಂತರ ಸಾರ್ವಜನಿಕರ ಪ್ರತಿಕ್ರಿಯೆ ನೊಡಿಕೊಂಡು ಅಗತ್ಯಕ್ಕೆ ತಕ್ಕಂತೆ ಊಟ–ತಿಂಡಿ ಸಿದ್ಧಪಡಿಸಲು ಗುತ್ತಿಗೆದಾರರಿಗೆ ಸೂಚಿಸಲಾಗುವುದು’ ಎಂದು ಮುಖ್ಯ ವೈದ್ಯಾಧಿಕಾರಿ ಡಾ. ರಮೇಶ ರಂಗನ್ನವರ ತಿಳಿಸಿದರು.

‘ರಿಯಾಯತಿ ದರದ ಕ್ಯಾಂಟೀನ್‌ ನಡೆಸಲು ಸದ್ಯ ಒಂದು ವರ್ಷದ ಅವಧಿಗೆ ಹೊರಗುತ್ತಿಗೆ ನೀಡಲಾಗುವುದು. ಎನ್‌ಜಿಒ, ಸ್ತ್ರೀಶಕ್ತಿ ಸಂಘಗಳು, ಅಂಗವಿಕಲರು, ವಿಧವೆಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಕ್ಯಾಂಟೀನಿಗೆ ಬೇಕಾಗುವ ಹಾಗೂ ಬಳಸುವ ಪಾತ್ರೆಗಳು., ಒಲೆ, ಪೀಠೋಪಕರಣ ಹಾಗೂ ಇನ್ನಿತರೆ ವಸ್ತುಗಳನ್ನು ಎಂಎಸ್ಐಎಲ್ ಮೂಲಕವೇ ಪೂರೈಕೆ ಮಾಡಲಾಗುವುದು. ರಾಯಬಾಗ ಅಸ್ಪತ್ರೆಯ ಆವರಣದಲ್ಲಿನ ಕ್ಯಾಂಟೀನ್‌ ಕಟ್ಟಡ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, ಟೆಂಡರ್‌ ಕರೆಯಲಾಗಿದೆ’ ಎನ್ನುತ್ತಾರೆ ರಂಗನ್ನವರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT