ಗುರುವಾರ , ಮಾರ್ಚ್ 4, 2021
30 °C

ಶಿಕ್ಷಣದ ರಾಷ್ಟ್ರೀಕರಣ ಇರಲಿ ಸರ್ಕಾರದ ಗಮನ

ಕಲ್ಗುಂಡಿ ನವೀನ್ Updated:

ಅಕ್ಷರ ಗಾತ್ರ : | |

ಶಿಕ್ಷಣದ ರಾಷ್ಟ್ರೀಕರಣ ಇರಲಿ ಸರ್ಕಾರದ ಗಮನ

ಇದೀಗ ಶಾಲೆಗಳಲ್ಲಿ ವಾರ್ಷಿಕ ಪ್ರವಾಸದ ಪರ್ವ. ಇದಕ್ಕೆ ‘ಶೈಕ್ಷಣಿಕ ಪ್ರವಾಸ’ ಎಂಬ ಹೆಸರು ಬೇರೆ! ಉದ್ದೇಶ ಎಷ್ಟು ಈಡೇರುತ್ತದೆಯೋ ಗೊತ್ತಿಲ್ಲ. ಆದರೆ ಬಹಳ ಮೊದಲೇ ಇದನ್ನು ಕ್ರಮಬದ್ಧವಾಗಿ ಯೋಜಿಸಿ ಪ್ರವಾಸ ಪಿಕ್‍ನಿಕ್‍ ಆಗಲಿ, ಇಲ್ಲವೇ ಶಿಕ್ಷಕರ ತೀರ್ಥಯಾತ್ರೆಯಾಗಲಿ ಆಗದಂತೆ ಶುದ್ಧವಾದ ಶೈಕ್ಷಣಿಕ ಪ್ರವಾಸ ಮಾಡಿಸುವ ಹಲವಾರು ಶಾಲೆಗಳು (ಸರ್ಕಾರಿ ಮತ್ತು ಖಾಸಗಿವಲಯದಲ್ಲಿ) ಇವೆ. ಇದು ಸಂತೋಷದ ವಿಷಯ. ಇವುಗಳ ಸಂಖ್ಯೆ ಹೆಚ್ಚಾಗಬೇಕು. ಖಾಸಗಿ ವಲಯದಲ್ಲಂತೂ ಇದು ಅನೇಕ ರೂಪಗಳನ್ನು ಪಡೆದುಕೊಂಡಿದೆ. ಅಂತರಾಷ್ಟ್ರೀಯ ಪ್ರವಾಸಗಳು, ವಿದೇಶಿ ವೈಜ್ಞಾನಿಕ ಸಂಸ್ಥೆಗಳು, ರಾಕೆಟ್‍ ಉಡಾವಣಾ ವೀಕ್ಷಣೆ, ವಿದೇಶದ ಸಂಸ್ಥೆಯಲ್ಲೊಂದು ಸಣ್ಣ ತರಬೇತಿ – ಹೀಗೆಲ್ಲ ಹೊಸ ಹೊಸ ಆಯಾಮಗಳನ್ನು ಪಡೆದುಕೊಂಡಿದೆ.

ಇತ್ತೀಚೆಗೆ ಸರ್ಕಾರವು ಸರ್ಕಾರಿ ನೌಕರರು ಮತ್ತು ರಾಜಕಾರಣಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೇ ಕಳಿಸಬೇಕು ಎಂಬ ನಿಯಮವನ್ನು ಮಾಡಹೊರಟಿದೆ. ಆ ನಿಟ್ಟಿನಲ್ಲಿ ಇಟ್ಟಿರುವ ಹೆಜ್ಜೆ ಮಹತ್ತರವಾದದ್ದು. ಇಲ್ಲಿ ಎಷ್ಟು ಜನ ರಾಜಕಾರಣಿಗಳಿಗೆ ಶಾಲೆಗೆ ಹೋಗುವ ಮಕ್ಕಳಿದ್ದಾರೆ ಎಂಬ ಪ್ರಶ್ನೆ ಮೂಡಬಹುದು. ನಿಜ, ಹೆಚ್ಚಿರಲಾರದು, ಆದರೂ ಇದು ಒಂದು ಮಹತ್ವದ ಹೆಜ್ಜೆ. ಹಿರಿಯ ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಗೆ ಬಂದರೆ ಸಹಜವಾಗಿಯೇ ಅಧಿಕಾರಿಗಳು ತನ್ಮೂಲಕ ಸರ್ಕಾರ ತನ್ನ ಶಾಲೆಗಳನ್ನು ಉತ್ತಮಪಡಿಸಿಕೊಳ್ಳುವ ಅನಿವಾರ್ಯತೆ ಬರುತ್ತದೆ. ಆದರೆ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಇಂತಹ ನಿಯಮಾವಳಿ ಮಾಡಿ, ಅದರ ಅಭಿವೃದ್ಧಿ ಮಾಡಬೇಕೆಂದರೆ ಅದು ಹಿತ ನೀಡುವ ಸಂಗತಿಯಲ್ಲ. ಆದರೆ, ಅಂತಹ ಪರಿಸ್ಥಿತಿಯಿದೆ, ಅಗತ್ಯವೂ ಇದೆ. ಫಲಿತಾಂಶ ಉತ್ತಮವೇ ಆಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಇದುವರೆಗಿನ ಬೆಳವಣಿಗೆಯನ್ನು ಸಾವಧಾನವಾಗಿ ಅವಲೋಕಿಸೋಣ.

ಶಿಕ್ಷಣ ಸಂಶೋಧಕರು ಅನೇಕ ಅಧ್ಯಯನಗಳಲ್ಲಿ ಗುರುತಿಸಿರುವಂತೆ ಶಿಕ್ಷಣ ಕ್ಷೇತ್ರದಲ್ಲಿ ಕಳೆದ ಎರಡು ದಶಕಗಳಲ್ಲಿ ಆಗಿರುವಷ್ಟು ಬದಲಾವಣೆ ಕಳೆದೊಂದು ಶತಮಾನದಲ್ಲಿಯೂ ಆಗಿರಲಿಲ್ಲ. ಶಿಕ್ಷಣಪದ್ಧತಿ, ಹೇಳಿಕೊಡುವ ರೀತಿ – ಒಟ್ಟಾರೆ ಶಾಲಾ ಶೈಕ್ಷಣಿಕ ವ್ಯವಸ್ಥೆಯೇ ಆಮೂಲಾಗ್ರವಾಗಿ ಬದಲಾಗುತ್ತಿದೆ. ಖಾಸಗಿ ನೆಲೆಯಲ್ಲಿ ಇದು ನಾಗಾಲೋಟದಲ್ಲಿ ಸಾಗಿದೆ. ಸರ್ಕಾರಿ ನೆಲೆಯಲ್ಲಿ ಇದು ನಿಧಾನವಾದರೂ ಬದಲಾವಣೆಗೆ ತೆರೆದುಕೊಳ್ಳುತ್ತಿರುವುದು ಸಂತೋಷದ ವಿಷಯ. ಜೊತೆಗೆ, ನೇರ ಸ್ಪರ್ಧೆಗಿಳಿಯದೆ ಕಲಿ-ನಲಿಯಂತಹ ಹೊಸ ಬಗೆಯ ಕಲಿಕಾ ಪದ್ಧತಿಯನ್ನು ಜಾರಿಗೆ ತಂದದ್ದು ಮಹತ್ವದ ಸಂಗತಿಯೇ. ಜೊತೆಗೆ ಪಠ್ಯಕ್ರಮಗಳಲ್ಲಿಯೂ ಬದಲಾವಣೆಗಳು ಬಂದುವು. ಹೊಸ ಸಹಸ್ರಮಾನದಲ್ಲಿ ಸರ್ವಶಿಕ್ಷ ಅಭಿಯಾನ ಮೊದಲಾಯಿತು. ಅಷ್ಟಿಷ್ಟು ಪ್ರಚಲಿತವಾಗಿದ್ದ ಬಿಸಿಯೂಟ ದೊಡ್ಡ ಪ್ರಮಾಣದಲ್ಲಿ ಜಾರಿಗೆ ಬಂದಿತು. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟುಗಳು (2000 ಮತ್ತು 2005) ಬಂದವು. ಶಿಕ್ಷಕರ ಶಿಕ್ಷಣಕ್ಕೂ ನ್ಯಾಯಮೂರ್ತಿ ವರ್ಮಾ ಆಯೋಗದ ಶಿಫಾರಸಿನಂತೆ (ವ್ಯವಸ್ಥಿತ ಚೌಕಟ್ಟು) ಬಂದಿತು. ಇತ್ತೀಚೆಗೆ ಆರ್‌ಟಿಇ ಇದನ್ನು ಸೇರಿಕೊಂಡಿದೆ. ಇದೀಗ ಸರ್ಕಾರಿ ನೌಕರರ ಮಕ್ಕಳು ಸರ್ಕಾರಿ ಶಾಲೆಗೆ ಎಂಬುದು ಅಧಿಕೃತವಾಗಿ ಚರ್ಚೆಗೆ ಬರುತ್ತಿದೆ. ಶಿಕ್ಷಣದ ರಾಷ್ಟ್ರೀಕರಣವಾಗಬೇಕೆಂಬ ಕೂಗು ನಿಧಾನವಾಗಿ ಕೇಳಿಬರುತ್ತಿದೆ.

ಶಿಕ್ಷಣದ ರಾಷ್ಟ್ರೀಕರಣದ ಫಲಿತಾಂಶಗಳೇನಾಗಿರಬೇಕು ಎಂಬುದನ್ನು ನೋಡುವ ಮೊದಲು ಇದುವರೆಗಿನ ಹೊಸ ಯೋಜನೆಗಳು ಉಂಟು ಮಾಡಿದ ಬದಲಾವಣೆಗಳನ್ನು ವಸ್ತುನಿಷ್ಠವಾಗಿ ನೋಡಲೇಬೇಕು.

ಸಂವಿಧಾನದ ಆಶಯವಾದ ಹದಿನಾಲ್ಕು ವರ್ಷದೊಳಗಿನ ಎಲ್ಲರಿಗೂ ಉಚಿತ, ಯುಕ್ತ ಶಿಕ್ಷಣ ಎಂಬುದಕ್ಕೆ ಸಾವಿರ ಆನೆಗಳ ಬಲಕೊಟ್ಟಿದ್ದು ಸರ್ವಶಿಕ್ಷಣ ಅಭಿಯಾನ (ಎಸ್‍ಎಸ್‍ಎ) ಹಾಗೂ ಮುಂದೆ ಚರ್ಚಿಸಲಾಗಿರುವ ಯೋಜನೆಗಳು. ಮೊದಲಿಗೆ ಎಸ್‌ಎಸ್‌ಎಯನ್ನು ನೋಡೋಣ. ಅತ್ಯುತ್ತಮ ಆಂಶಗಳಿದ್ದ ಈ ಯೋಜನೆ ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯವಸ್ಥೆಗೆ ಹರಿಸಿತು. ಎಂದರೆ ಆರ್ಥಿಕ ಧೃಡತೆಯನ್ನು ಇದು ಹೊಂದಿತ್ತು. ಇದರಿಂದಾಗಿಯೇ ಪ್ರಾಥಮಿಕ ಶಾಲೆಗಳಿಗೆ ಕಟ್ಟಡ, ಶೌಚಾಲಯದಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗಿದ್ದು. ಇದೇ ಸಂದರ್ಭದಲ್ಲಿಯೇ ಅಕ್ಷರಶಃ ಲಕ್ಷಾಂತರ ಶಾಲೆಗಳನ್ನು ಹೊಸದಾಗಿ ಸ್ಥಾಪಿಸಲಾಯಿತು (ದೇಶಾದ್ಯಂತ). ಅಗತ್ಯವಾಗಿ ಬೇಕಾಗಿದ್ದ ಶೌಚಾಲಯ ವ್ಯವಸ್ಥೆಯನ್ನು ಒದಗಿಸಲಾಯಿತು. ಎಸ್‍ಎಸ್‍ಎ ಕಳೆದ ಎಪ್ಪತ್ತು ವರ್ಷಗಳಲ್ಲಿ ಸಾಧಿಸಲಾಗದಿದ್ದದ್ದನ್ನು ಒಂದೂವರೆ ದಶಕದಲ್ಲಿ ಸಾಧಿಸಿತು. ಹೀಗಿದ್ದರೂ, ಇಂದಿಗೂ ಗಣನೀಯ ಪ್ರಮಾಣದ ಶಾಲೆಗಳಲ್ಲಿ ಶೌಚಾಲಯವಿಲ್ಲ ಎಂಬುದು ಖೇದಕರ ವಿಷಯವೇ.

ಎಸ್‍ಎಸ್‍ಎನಷ್ಟೇ ಪರಿಣಾಮಕಾರಿಯಾದ ಮತ್ತೊಂದು ಪೂರಕ ಯೋಜನೆ ಮಧ್ಯಾಹ್ನದ ಬಿಸಿಯೂಟದ ಯೋಜನೆ. ಇದರಿಂದಾಗಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಿದ್ದು ಮಾತ್ರವಲ್ಲ, ಮಕ್ಕಳು ಶಾಲೆಯನ್ನು ನಡುವೆ ಬಿಟ್ಟುಹೋಗುವುದರಿಂದ ತಪ್ಪಿಸುವುದೂ ಸಾಧ್ಯವಾಯಿತು. ಈ ಯೋಜನೆಗೆ ದೊಡ್ಡ ಇತಿಹಾಸವಿದೆ. 1920ರಲ್ಲಿ ಮೊದಲ ಬಾರಿಗೆ ಜಾರಿಯಾದ ಈ ಯೋಜನೆ ಇಂದು ವಿಶ್ವದಲ್ಲಿಯೇ ಅತಿದೊಡ್ಡ ಮಧ್ಯಾಹ್ನದ ಬಿಸಿಯೂಟದ ಯೋಜನೆ ಎಂದು ಹೆಸರಾಗಿದೆ. ಇದಕ್ಕೆ ನಮ್ಮ ಸರ್ಕಾರಗಳು, ಅಧಿಕಾರಿಗಳು ಮಾತ್ರವಲ್ಲದೆ ಘನವೆತ್ತ ಸರ್ವೋಚ್ಚ ನ್ಯಾಯಾಲಯವೂ ಕಾರಣ. ಇಂದು ಭಾರತದಾದ್ಯಂತ ಹತ್ತು ಕೋಟಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಇದರಿಂದಾಗಿ ಕೇವಲ ದಾಖಲಾತಿ ಹೆಚ್ಚಾಯಿತು. ಮಕ್ಕಳನ್ನು ಶಿಕ್ಷಣ ಪೂರೈಸುವಂತೆ ಮಾಡಲು ಸಾಧ್ಯವಾದದ್ದು ಮಾತ್ರವಲ್ಲ, ಪೌಷ್ಟಿಕ ಆಹಾರದ ವ್ಯವಸ್ಥೆಯಾದದ್ದರಿಂದ ಮಕ್ಕಳ ಕಲಿಕಾ ಫಲಿತಾಂಶಗಳು ಸಹ ಗಣನೀಯವಾಗಿ ಉತ್ತಮಗೊಂಡವು. ಅಪೌಷ್ಟಿಕತೆ ಒಂದು ಹಂತಕ್ಕೆ ಕಡಿಮೆಯಾಯಿತು. ಶಿಕ್ಷಣದ ಯೋಜನೆಗಳಿಂದ ಇದು ಆಗಿದ್ದು ಆಶ್ಚರ್ಯಕರವಾದರೂ ಒಂದು ಸಕಾರಾತ್ಮಕ ಅಂಶ. ಇಲ್ಲೂ ಒಂದು ನೋವಿನ ಎಳೆಯಿದೆ. ಅದೆಂದರೆ, ಬಿಸಿಯೂಟದ ಯೋಜನೆ ಅದೆಷ್ಟೋ ಮಕ್ಕಳಿಗೆ ಅವರ ದಿನದ ಒಂದೇ ಊಟವನ್ನು ಒದಗಿಸುತ್ತಿದೆ.

ಇನ್ನು ಆರ್‌ಟಿಇ ಇದೂ ಒಂದು ಮಹತ್ವದ ಅಂಶ. ಇದನ್ನು ಅರ್ಥ ಮಾಡಿಕೊಳ್ಳಲು, ಈ ಮೊದಲು ವಿಶ್ವಸಂಸ್ಥೆಯಲ್ಲಿದ್ದ ಶಿಕ್ಷಣತಜ್ಞೆ  ಕ್ಯಾತರೀನಾ ತೊಮಸ್ವೇಕಿ (Katarina Tomasveki) ರಚಿಸಿದ ಫೋರ್‍ ಎ (The four A's) ಅನ್ನು ನೋಡಬೇಕು. ಅಕ್ಸಪ್ಟೆಬಲ್, ಅವೇಲಬಲ್, ಅಕ್ಸೆಸಿಬಲ್ ಮತ್ತು ಅಡಾಪ್ಟಬಲ್‍ – ಈ ನಾಲ್ಕೂ ಅಂಶಗಳಿಂದಾಗಿ ಬಡಜನತೆಗೂ ಗುಣಮಟ್ಟದ ಶಿಕ್ಷಣ ದೊರಕುವಂತಾಗಿದೆ.

ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ, ಯೋಜನೆಗೆ ಪೂರಕವಾದ ಪಠ್ಯಕ್ರಮ ಮತ್ತು ಶಾಲೆಗಳಲ್ಲಿ ಪಾಠಮಾಡಬೇಕಾದ ವಿಷಯದ ಹರವು ಮತ್ತು ಕ್ರಮ ಎಲ್ಲವೂ ನಿಗದಿಯಾದದ್ದರಿಂದ ಒಳ್ಳೆಯ ಫಲಿತಾಂಶಗಳು ಬಂದವು. ಅಂದರೆ ಈ ಎಸ್‍ಎಸ್‍ಎ, ಬಿಸಿಯೂಟದ ಯೋಜನೆ, ಆರ್‌ಟಿಇ ಮತ್ತು ಪೂರಕ ನಿಯಮಾವಳಿಗಳು ದೇಶದ ಶಿಕ್ಷಣದ ಚಿತ್ರವನ್ನು ಸಕಾರಾತ್ಮಕವಾಗಿ ಬದಲಿಸಿದವು ಎಂಬುದು ಸತ್ಯ. ಆದರೆ, ಕ್ರಮಿಸಬೇಕಾದ ದಾರಿ ಮಾತ್ರ ಅಗಾಧವಾಗಿದೆ. ಆದರೆ ದಾರಿ ತಿಳಿದಿದೆ.

ಈಗ ರಾಜ್ಯ ಸರ್ಕಾರದ ‘ಸರ್ಕಾರಿ ನೌಕರರು ಮತ್ತು ರಾಜಕಾರಣಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು’ ಎಂಬ ಚರ್ಚೆಯನ್ನು ಗಮನಿಸಿದರೆ ಇದು ಮೇಲು ನೋಟಕ್ಕೆ ಮಹತ್ವದಲ್ಲ ಎನಿಸಬಹುದು. ಆದರೆ ಅದೊಂದು ಮಹತ್ವದ ಹೆಜ್ಜೆ. ಅಧಿಕಾರದಲ್ಲಿರುವವರು ವ್ಯವಸ್ಥೆಯ ಮೇಲುಸ್ತುವಾರಿ ನೋಡಲು ಗಟ್ಟಿಕಾರಣವನ್ನು ಇದು ಒದಗಿಸುತ್ತದೆ.

ಇನ್ನು ಶಿಕ್ಷಣದ ರಾಷ್ಟ್ರೀಕರಣವಾಗಬೇಕು ಎಂಬ ಮಾತು ಕೇಳಿ ಬರುತ್ತಿದೆ. ಇದರ ಕರಡು ಸಿದ್ಧವಾಗದ ಹೊರತು ಆ ಕುರಿತಾಗಿ ಏನೂ ಹೇಳಲಾಗುವುದಿಲ್ಲ. ಅದು ಆದಲ್ಲಿ, ಶಿಕ್ಷಣ ಕ್ಷೇತ್ರದ ಅತ್ಯುತ್ತಮ ಮಾದರಿ ಸರ್ಕಾರಿ ಶಾಲೆಗಳಲ್ಲಿರುವಂತಾಗಬೇಕು. ತಮ್ಮದೇ ಕನಸು, ಆದರ್ಶಗಳನ್ನಿಟ್ಟುಕೊಂಡ ಅನೇಕ ಖಾಸಗಿ ಶಾಲೆಗಳು ಇಂದು ಇವೆ. ಅವುಗಳು ಯಾವ ತೊಂದರೆಯೂ ಇಲ್ಲದಂತೆ ಮುಂದುವರೆಯಬೇಕು. ಆದರೆ, ಇವುಗಳಲ್ಲಿನ ಉತ್ತಮಾಂಶಗಳು ಸರ್ಕಾರಿ ಶಾಲೆಗಳಲ್ಲಿಯೂ ದೊರೆಯುವಂತಾಗಬೇಕು. ಆಸಕ್ತರಿಗೆ ಖಾಸಗಿ ಶಾಲೆ ಒಂದು ಅವರಿಷ್ಟದ ಆಯ್ಕೆಯಾಗಬೇಕೆ ಹೊರತಾಗಿ ಗುಣಮಟ್ಟವೆಂದರೆ ಖಾಸಗಿ ಎಂದಾಗಬಾರದು. ಹಾಗಾದಾಗ, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಮುಂದಿನ ಭವಿಷ್ಯವನ್ನು ಇಂದೇ ನಿರ್ಮಿಸುವ ಶಿಕ್ಷಣ ವ್ಯವಸ್ಥೆಯನ್ನು ಕಾಣಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.