7

ಅನಿಮೇಷನ್‌ಗೆ ಭವಿಷ್ಯವಿಲ್ಲವೇ?

Published:
Updated:

1. ನಾನು ದ್ವಿತೀಯ ಪಿಯುಸಿ ನಂತರ ಅನಿಮೇಷನ್‌ ಕೋರ್ಸ್‌ ಮಾಡಬೇಕೆಂದಿದ್ದೇನೆ. ಆದರೆ ಮನೆಯಲ್ಲಿ ಆ ಕೋರ್ಸ್‌ಗೆ ಭವಿಷ್ಯವಿಲ್ಲ ಎಂದು ಇಷ್ಟವಿಲ್ಲದಿದ್ದರೂ ಬಿ.ಕಾಂ.ಗೆ ಸೇರಿಸಿದರು. ಈಗ ಬಿ.ಕಾಂ. ಮೊದಲ ವರ್ಷದಲ್ಲಿ ಓದುತ್ತಿದ್ದೇನೆ. ಈಗಲೂ ಅನಿಮೇಷನ್ ಮಾಡಬೇಕೆಂಬ ಆಸೆ ಇದೆ. ಆದರೆ ಇದರಲ್ಲಿ ಭವಿಷ್ಯವಿಲ್ಲವೆ? ಇದರ ಬಗ್ಗೆ ಪೂರ್ಣ ಮಾಹಿತಿ ನೀಡಿ. ನನಗೆ ಡ್ರಾಯಿಂಗ್‌–ಪೇಂಟಿಂಗ್‌ನಲ್ಲಿ ಹೆಚ್ಚು ಆಸಕ್ತಿ. ಇದರಲ್ಲಿ ಏನಾದರೂ ಸಾಧನೆ ಮಾಡಬೇಕೆಂದಿರುವೆ. ಡ್ರಾಯಿಂಗ್‌–ಪೇಂಟಿಂಗ್‌ಗೆ ಸಂಬಂಧಿಸಿದ ಯಾವುದಾದರೂ ಕೋರ್ಸ್‌ ಇದ್ದರೆ ಅದರ ಬಗ್ಗೆ ಮಾಹಿತಿ ನೀಡಿ.

ಶ್ರೀಧರ ಎಸ್‌.ಪಿ., ಬಾಗಲಕೋಟೆ

ಅನಿಮೇಷನ್‌, ಚಿತ್ರಕಲೆ, ಡಿಸೈನ್‌ ಕೋರ್ಸ್‌ಗಳನ್ನು ಮಾಡಲು ನಿಮ್ಮಲ್ಲಿ ವಿಶೇಷ ಅರ್ಹತೆ ಇರಬೇಕು. ನೀವು ಬಾಲ್ಯದಿಂದಲೂ ಡ್ರಾಯಿಂಗ್‌, ಪೇಂಟಿಂಗ್‌ ಮಾಡಿದ್ದೀರಾ? ಯಾವುದಾದರೂ ವಸ್ತುವನ್ನು ನೋಡಿದಾಗ ಅದರ ಚಿತ್ರ ಬಿಡಿಸುವ ಛಾತಿ ಇದೆಯಾ? ಇಂಥ ಮೂಲ ಅರ್ಹತೆಗಳು ಇದ್ದಲ್ಲಿ ಅನಿಮೇಷನ್‌ ಕೋರ್ಸ್‌ ಮಾಡಬಹುದು.

ಅನಿಮೇಷನ್‌ ಓದಿದವರಿಗೆ ಸ್ಕೋಪ್‌ ಇಲ್ಲ ಎಂದೇನಿಲ್ಲ. ಯಾವ ವಿದ್ಯಾರ್ಥಿಗೆ ಈ ಅರ್ಹತೆ ಇದೆಯೋ ಅವರಿಗೆ ಉತ್ತಮವಾದ ಕೆಲಸವೂ ದೊರಕುತ್ತದೆ.

ಈ ಕ್ಷೇತ್ರ ವ್ಯಾವಹಾರಿಕವಾಗಿ 25,000 ಕೋಟಿ ಡಾಲರ್‌ಗಿಂತಲೂ ದೊಡ್ಡದು. ತಂತ್ರಜ್ಞಾನದ ಪ್ರಗತಿ, ಟಿವಿ–ಸಿನಿಮಾ ಕ್ಷೇತ್ರದಲ್ಲಿನ ಬೇಡಿಕೆ, ಇಂಟರ್‌ನೆಟ್‌ ಉಪಯೋಗದಲ್ಲಿನ ಪ್ರಗತಿ ಈ ಕ್ಷೇತ್ರವನ್ನು ಹೆಚ್ಚಾಗಿ ಬೆಳೆಸುತ್ತಿದೆ. ಅನಿಮೇಷನ್ ಮಾರ್ಕೆಟ್‌ಗೆ ಅಮೆರಿಕ, ಕೆನಡ, ಜಪಾನ್‌, ಫ್ರಾನ್ಸ್‌, ಬ್ರಿಟನ್‌, ಕೊರಿಯಾ ಮತ್ತು ಜರ್ಮನಿಯಲ್ಲಿ ಹೆಚ್ಚಿನ ಬೇಡಿಕೆ ಇದೆ.

2ಡಿ, 3ಡಿ ಸಿನಿಮಾ ತಯಾರಿಕೆಯಲ್ಲಿ ಈ ತಂತ್ರಜ್ಞಾನವನ್ನು ಬಳಸುತ್ತಾರೆ. ಹೊರದೇಶದಲ್ಲಿ ತಯಾರಿಸಬಹುದಾದ ಚಲನಚಿತ್ರವನ್ನು ಬಹಳ ಕಡಿಮೆ ಬೆಲೆಯಲ್ಲಿ ಭಾರತದಲ್ಲಿ ತಯಾರಿಸಬಹುದು.

2017ರ ಸಾಲಿನಲ್ಲಿ ತಯಾರಾದ ಹಲವು ಆಂಗ್ಲಚಿತ್ರಗಳು ಮೈ ಲಿಟಲ್‌ ಸೋನಿ, ಡೀಪ್‌, ದಿ ಸ್ಟಾರ್‌, ಬ್ಯಾಟ್‌ಮ್ಯಾನ್‌ vs ಟುಫ್ಲೆಸ್‌, ಇನ್ನೂ ಅನೇಕ.

ಈ ಕೋರ್ಸ್‌ಗೆ ಅನೇಕ ಸಂಸ್ಥೆಗಳಿವೆ. ನೀವು ಕೋರ್ಸ್‌ ಮಾಡುವಾಗ ಗಮನಿಸಬೇಕಾದದ್ದು, ಈ ಯಾವ  ಪದವಿಯು ಮಾನ್ಯತೆ ಪಡೆದ ಯಾವ ವಿಶ್ವವಿದ್ಯಾಲಯದ ಜೊತೆ ಜೋಡಣೆ (ಅಪಿಲಿಯೇಶನ್) ಇದೆ ಅನ್ನುವುದು.

1. ಮಣಿಪಾಲ್‌ ಯೂನಿವರ್ಸಿಟಿ: ಮಣಿಪಾಲ್‌, ಇಲ್ಲಿ ಬಿಎಸ್‌ಸಿ–ಅನಿಮೇಷನ್‌ ಕೋರ್ಸ್‌ ಇದೆ. 3 ವರ್ಷದ ಕೋರ್ಸ್‌, ಪ್ರವೇಶ ಪರೀಕ್ಷೆ ಇಲ್ಲ.

ವಿವರಗಳಿಗೆ: www.manipal.edu ಸಂಪರ್ಕಿಸಿ.

2. →ನ್ಯಾಷನಲ್‌ ಇನ್ಸ್‌ಟಿಟ್ಯೂಟ್ ಆಫ್ ಡಿಸೈನ್‌ (NID) ಅಹಮದಾಬಾದ್‌. ಇವರು 2–1/2 ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಇನ್‌ ಅನಿಮೇಷನ್ ಫಿಲಂ ಡಿಸೈನ್‌ ಕೋರ್ಸ್‌ ನೀಡುತ್ತಾರೆ.

3.→ಐ.ಐ.ಟಿ. ಮುಂಬೈ (Mumbai) ಮಾಸ್ಟರ್‌ ಆಫ್‌ ವಿಷುವಲ್‌ ಕಮ್ಯುನಿಕೇಷನ್‌ ಕೋರ್ಸ್‌ ನಡೆಸುತ್ತಾರೆ.

4. ಸೃಷ್ಟಿ ಸ್ಕೂಲ್‌ ಆಫ್‌ ಡಿಸೈನ್‌, ಪೋಸ್ಟ್ ಗ್ರ್ಯಾಜುಯೇಷನ್ ಕೋರ್ಸ್‌ ಇನ್‌ ಅನಿಮೇಷನ್‌ ಅಂಡ್‌ ಗೇಮಿಂಗ್‌ ಕೋರ್ಸ್‌ ನೀಡುತ್ತಾರೆ.

5.→ಕರ್ನಾಟಕ ಚಿತ್ರಕಲಾ ಪರಿಷತ್‌, ಫೈನ್‌ ಆರ್ಟ್‌ನಲ್ಲಿ ಡಿಗ್ರಿ ಕೋರ್ಸ್‌ ನೀಡುತ್ತಾರೆ. ಅಮೆರಿಕ ಮತ್ತು ಅನೇಕ ಹೊರ ದೇಶಗಳಲ್ಲಿ ಅನಿಮೇಷನ್ ಕೋರ್ಸ್‌ನಲ್ಲಿ ಡಿಗ್ರಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ನಡೆಸುತ್ತಾರೆ.

ಗಮನಿಸಬೇಕಾದ ವಿಷಯ: ನಿಮ್ಮಲ್ಲಿ ಸೋಷಿಯಲ್‌ ಎಬಿಲಿಟಿ ಇದೆಯೇ ಎಂಬುದು.

2. ನನ್ನ ಮಗ ಈಗ 7ನೇ ತರಗತಿ (CBSE)ಯಲ್ಲಿ ಓದುತ್ತಿದ್ದಾನೆ. ಪ್ರತಿ ವರ್ಷ ಶೇ.97 ಅಂಕ ಪಡೆಯುತ್ತಿದ್ದಾನೆ. ನನಗೆ ಮುಂದೆ (8ನೇ ತರಗತಿ) ಆತನನ್ನು ಬೇರೆ ಕಡೆ ಹಾಸ್ಟೆಲ್‌ಗೆ ಸೇರಿಸುವ ಉದ್ದೇಶವಿದೆ. ಕಡಿಮೆ ಫೀಸ್‌ನಲ್ಲಿ ಅತ್ಯುತ್ತಮ ಶಿಕ್ಷಣ ಕೊಡುವ ಒಳ್ಳೆಯ ವಸತಿ ಶಾಲೆಗಳ ಮಾಹಿತಿ ಕೊಡಿ. ನಮಗೆ ₹50,000ಕ್ಕಿಂತ ಹೆಚ್ಚಿನ ವೆಚ್ಚವನ್ನು ಭರಿಸುವ ಶಕ್ತಿ ಇಲ್ಲ.

ಬಿ.ಎಚ್‌. ಪಾಟೀಲ್‌, ಗಂಗಾವತಿ

ನಿಮ್ಮ ಮಗನ ಉನ್ನತಿ ಕೇಳಿ ತುಂಬಾ ಸಂತೋಷವಾಯಿತು. ಗಂಗಾವತಿಯಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಿಲ್ಲದಿದ್ದಲ್ಲಿ ಒಳ್ಳೆಯ, ಸುರಕ್ಷೆಯುಳ್ಳ ಹಾಸ್ಟೆಲ್‌ನಲ್ಲಿ ಸೇರಿಸಿ ಓದಿಸುವುದು ಉತ್ತಮ. ವಿದ್ಯಾರ್ಥಿಯ ಶೇಕಡಾವಾರು ಅಂಕ ಒಂದೇ ಅವನ ಉನ್ನತಿಗೆ ಮುಖ್ಯವಲ್ಲ. ಅವನು ಒಬ್ಬ ಒಳ್ಳೆಯ ನಾಗರಿಕನಾಗಬೇಕು, ಪ್ರಪಂಚಕ್ಕೆ ತನ್ನ ಸಾಧನೆಯ ಕೊಡುಗೆಯನ್ನು ನೀಡಬೇಕು. ಅವನ ವ್ಯಕ್ತಿತ್ವದ ಬೆಳವಣಿಗೆ, ಶಾರೀರಿಕ, ಮಾನಸಿಕ ಬೆಳವಣಿಗೆಯೂ ಅಷ್ಟೇ ಮುಖ್ಯ.

ಸ್ವಿಮಿಂಗ್‌, ಸಂಗೀತ, ಆಟ, ಸೋಷಿಯಲ್‌ ವರ್ಕ್‌, ಆರ್ಟ್‌ ಈ ರೀತಿಯ ವಿವಿಧ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿಗೆ ಪರಿಜ್ಞಾನ ಬರಬೇಕು. ಆಗಲೆ ಒಬ್ಬ ವಿದ್ಯಾರ್ಥಿಗೆ ಪರಿಪೂರ್ಣ ವ್ಯಕ್ತಿತ್ವದ ಬೆಳವಣಿಗೆ ಆಗುವುದು.

ನಮ್ಮ ರಾಜ್ಯದಲ್ಲಿ ಶ್ರೀ ರಾಮಕೃಷ್ಣ ವಿದ್ಯಾಶಾಲಾ ಸ್ಕೂಲ್‌, ಮೈಸೂರು, ಇಲ್ಲಿ ವಿದ್ಯಾರ್ಥಿಯ ಸಂಪೂರ್ಣ ಬೆಳವಣಿಗೆಗೆ ಗಮನ ನೀಡುತ್ತಾರೆ. ವಿದ್ಯಾರ್ಥಿಗಳಿಗೆ ಶಿಸ್ತು ಬಹಳ ಮುಖ್ಯ. ಸ್ನೇಹಿತರ ಜೊತೆ ಬೆರೆಯುವುದು, ದೊಡ್ಡವರನ್ನು ಕಂಡಾಗ ಗೌರವದಿಂದ ವರ್ತಿಸುವುದು ಎಲ್ಲವನ್ನೂ ಕಲಿಸುತ್ತಾರೆ.

ನೀವು ಕೇಳಿದಂತೆ ಫೀಸ್‌ ಕೂಡ ಹೆಚ್ಚಿಲ್ಲ. ಓದುವ ಮಕ್ಕಳಿಗೆ, ಬುದ್ಧಿವಂತ ಮಕ್ಕಳಿಗೆ ತಂದೆ–ತಾಯಿಯ ವರಮಾನದ ಮೇರೆಗೆ ನಿರ್ಧರಿಸುತ್ತಾರೆ. ನೀವು ಸರಿಯಾದ ಸಮಯದಲ್ಲಿ ಈ ಪ್ರಶ್ನೆಯನ್ನು ಕೇಳಿದ್ದೀರಾ. ಈ ಕೆಳಕಂಡ ವಿಳಾಸಕ್ಕೆ ತಕ್ಷಣ ನಿಮ್ಮ ಮಗನ ಅಂಕಪಟ್ಟಿ ಮತ್ತು ಇನ್ನೂ ಏನಾದರೂ ಅವನ, ಸರ್ಟಿಫಿಕೇಟ್‌ಗಳು ಇದ್ದಲ್ಲಿ, ಜನ್ಮದಿನಾಂಕ ಪ್ರತಿ ಸಮೇತ ಭೇಟಿ ಮಾಡಿ ಸೀಟನ್ನು ಕಾದಿರಿಸಿ.

ವಿಳಾಸ: ಶ್ರೀ ರಾಮಕೃಷ್ಣ ವಿದ್ಯಾಶಾಲಾ ಸ್ಕೂಲ್‌

ಪರಮಹಂಸ ರಸ್ತೆ, ಯಾದವಗಿರಿ,

ಮೈಸೂರು–570020.

ವೆಬ್‌: www.srkvs.org

ಇಲ್ಲಿ 8ನೇ ತರಗತಿ ಇಂದ ಪ್ರಿಯೂನಿವರ್‌ಸಿಟಿಯ ತನಕ ಓದಿಸುತ್ತಾರೆ.

3. ನಾನು 10ನೇ ತರಗತಿಯಲ್ಲಿ ಓದುತ್ತಿದ್ದು ಎನ್‌.ಟಿ.ಎಸ್‌.ಇ. ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. 2014–15 ರಲ್ಲಿ ನಡೆದ 8ನೇ ತರಗತಿಯ ಎನ್‌.ಎನ್‌.ಎಂ.ಎಸ್‌. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದೆ. ಈಗ ಪರೀಕ್ಷೆಗೆ 8,9 ಮತ್ತು 10ನೇ ತರಗತಿಯ ಸಮಾಜ, ವಿಜ್ಞಾನ ಮತ್ತು ಗಣಿತದ ವಿಷಯಗಳನ್ನು ಓದಬೇಕಾಗಿದೆ. 2014–15 ರಲ್ಲಿದ್ದ ಹಳೆಯ ಪುಸ್ತಕಗಳನ್ನು ಓದಬೇಕೆ? ಅಥವಾ ಈ ವರ್ಷ ಪ್ರಕಟವಾದ ಹೊಸ, 8,9 ತರಗತಿಯ ಪುಸ್ತಕಗಳನ್ನು ಓದುವುದೇ ಎಂಬ ಸಂದೇಹವಿದೆ. 

ಎ.ಜಿ. ಶ್ಯಾನುಭಾಗ, ಕುಮಟಾ

ಎನ್‌.ಟಿ.ಎಸ್‌.ಇ. – ನ್ಯಾಷನಲ್‌ ಟ್ಯಾಲೆಂಟ್‌ ಸೈನ್ಸ್‌ ಎಗ್ಸಾಮಿಶೇಷನ್‌. ಇದನ್ನು 10ನೇ ತರಗತಿಯ ವಿದ್ಯಾರ್ಥಿಗಳಿಗೆ, ಮೆಂಟಲ್‌ ಎಬಿಲಿಟಿ ಮತ್ತು ಸ್ಕೊಲಾಸ್ಟಿಕ್‌ ಎಬಿಲಿಟಿಯನ್ನು ಪರೀಕ್ಷಿಸಲು ಎನ್‌.ಸಿ.ಇ.ಆರ್‌.ಬಿ.ನವರು ನಡೆಸುತ್ತಾರೆ. ಇದರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳೂ ₹500 ವಿದ್ಯಾರ್ಥಿವೇತನ ದೊರಕುತ್ತದೆ. ಎನ್‌.ಟಿ.ಎಸ್‌.ಸಿ.ನವರು ಆನ್‌ಲೈನ್‌ ಕೋಚಿಂಗ್‌ ನಡೆಸುತ್ತಾರೆ. ಇಲ್ಲಿ ವಿದ್ಯಾರ್ಥಿಗಳು ಧ್ವನಿಯ ಮೂಲಕ ತಜ್ಞರ ಜೊತೆ ಮಾತನಾಡಬಹುದು.

ಮೇ 13, ಭಾನುವಾರ 2018 ಪರೀಕ್ಷೆಯ ದಿನಾಂಕ. ಈಗಾಗಲೇ ತಿಳಿಸಿದಂತೆ, ಮೊದಲ ಹಂತದಲ್ಲಿ ಮೆಂಟಲ್‌ ಎಬಿಲಿಟಿ ಟೆಸ್ಟ್‌ (MAT) Part I, ಸ್ಕೊಲಾಸ್ಟಿಕ್‌ ಆಪ್ಟಿಟ್ಯೂಡ್‌ ಟೆಸ್ಟ್‌ (SAT) ಮತ್ತು ಲ್ಯಾಂಗ್ವೇಜ್‌  ಕಾಂಪ್ರಹೆನ್‌ಸೀವ್‌ ಟೆಸ್ಟ್‌ Part IIನಲ್ಲಿ ನಡೆಸುತ್ತಾರೆ.

ಎರಡನೇ ಹಂತದಲ್ಲಿ: MATನಲ್ಲಿ 50 ಪ್ರಶ್ನೆಗಳು, 50 ಮಾರ್ಕ್‌ಗೆ 45 ನಿಮಿಷದಲ್ಲಿ ಉತ್ತರಿಸಬೇಕು. ಇದು ಮೊದಲನೆಯ ಪೇಪರ್‌.

ಎರಡನೇ ಪತ್ರಿಕೆ: ಲ್ಯಾಂಗ್ವೇಜ್ ಟೆಸ್ಟ್‌ (ಎಲ್‌ಟಿ) ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ, 50 ಪ್ರಶ್ನೆಗಳು, 50 ನಂಬರ್‌, 45 ನಿಮಿಷದ ಕಾಲವಧಿಯಲ್ಲಿ ಉತ್ತರಿಸಬೇಕು.

ಪೇಪರ್‌ 3ರಲ್ಲಿ ಎಸ್‌ಎಟಿ ಅನ್ನು ಪರೀಕ್ಷಿಸುತ್ತಾರೆ. ಇಲ್ಲಿ 100 ಪ್ರಶ್ನೆಗಳು, 100 ಅಂಕಗಳು, 90 ನಿಮಿಷದಲ್ಲಿ ಉತ್ತರಿಸಬೇಕು.

ಇನ್ನು ನಿಮ್ಮ ಸಂದೇಹ  – ಹಳೆಯ ಪುಸ್ತಕವೋ, ಹೊಸ ಪುಸ್ತಕವೋ?

1. ಪುಸ್ತಕದ ಅಂಗಡಿಯಲ್ಲಿ 2018ರ ಪರೀಕ್ಷೆಯ ವಿವರ ಇರುವ ಪುಸ್ತಕ ದೊರೆಯುತ್ತದೆ.

2. www.ncert.nicin ಇಲ್ಲಿ ವಿವರ ಪಡೆಯಿರಿ. ಪರೀಕ್ಷೆಗೆ ಸಂಬಂಧಿಸಿದ ಸಂದೇಹವನ್ನು ದೂರವಾಣಿ: 011–26560664 (2.30 ರಿಂದ 4.30 ಗಂಟೆ ಒಳಗೆ ಮಾತ್ರ)

3. E-mail: ntsexam.ncert@gmail

ಇವರಿಗೆ ಬರೆದು ತಿಳಿಯಿರಿ.

4. ನಿಮ್ಮ ಮನೆಯ ಹತ್ತಿರ ಯಾವುದಾದರೂ ಎನ್‌ಟಿಎಸ್‌ಇ ಕೋಚಿಂಗ್‌ ಸೆಂಟರ್‌ ಇದ್ದಲ್ಲಿ ಅವರನ್ನು ಕೇಳಿ ತಿಳಿಯಿರಿ.

ನಿಮಗೆ ಪರೀಕ್ಷೆಯಲ್ಲಿ ತೇರ್ಗಡೆ ಆಗಿ NISE ಸ್ಕಾಲರ್‌ಷಿಪ್‌ ದೊರಕಲಿ ಎಂದು ಹಾರೈಸುತ್ತೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry