ಶುಕ್ರವಾರ, ಫೆಬ್ರವರಿ 26, 2021
29 °C
ವಿಶ್ವ ಹಾಕಿ ಲೀಗ್‌ ಫೈನಲ್‌; ಜರ್ಮನಿಗೆ ಆಘಾತ ನೀಡಿದ ಮನ್‌ಪ್ರೀತ್ ಸಿಂಗ್‌ ಪಡೆ

ಕಂಚಿಗೆ ಮುತ್ತಿಕ್ಕಿದ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಚಿಗೆ ಮುತ್ತಿಕ್ಕಿದ ಭಾರತ

ಭುವನೇಶ್ವರ: ಕರ್ನಾಟಕದ ಎಸ್‌.ವಿ.ಸುನಿಲ್‌ ಮತ್ತು ಹರ್ಮನ್‌ಪ್ರೀತ್‌ ಸಿಂಗ್‌ ಅವರು ಭಾನುವಾರ ಕಳಿಂಗ ಕ್ರೀಡಾಂಗಣದಲ್ಲಿ ಮೋಡಿ ಮಾಡಿದರು.

ಇವರ ಕೈಚಳಕದಲ್ಲಿ ಅರಳಿದ ತಲಾ ಒಂದು ಗೋಲುಗಳ ನೆರವಿನಿಂದ ಭಾರತ ತಂಡ ವಿಶ್ವ ಹಾಕಿ ಲೀಗ್‌ ಫೈನಲ್‌ನಲ್ಲಿ ಕಂಚಿನ ಸಾಧನೆ ಮಾಡಿದೆ.

ಮೂರು ಮತ್ತು ನಾಲ್ಕನೇ ಸ್ಥಾನ ನಿರ್ಧರಿಸಲು ನಡೆದ ಹೋರಾಟದಲ್ಲಿ ಭಾರತ 2–1 ಗೋಲುಗಳಿಂದ ಜರ್ಮನಿ ತಂಡಕ್ಕೆ ಆಘಾತ ನೀಡಿತು.

2015ರಲ್ಲಿ ರಾಯಪುರದಲ್ಲಿ ನಡೆದಿದ್ದ ಕೂಟದಲ್ಲೂ ಭಾರತ ತಂಡದವರು ಕಂಚಿಗೆ ಕೊರಳೊಡ್ಡಿದ್ದರು.

ಲೀಗ್‌ ಹಂತದ ಹೋರಾಟದಲ್ಲಿ ಭಾರತವನ್ನು ಮಣಿಸಿದ್ದ ಜರ್ಮನಿ ತಂಡ ಭಾನುವಾರದ ಹೋರಾಟದಲ್ಲೂ ಸುಲಭವಾಗಿ ಗೆಲುವಿನ ಸಿಹಿ ಸವಿಯಲಿದೆ ಎಂದೇ ಭಾವಿಸಲಾಗಿತ್ತು. ಹಾಕಿ ಪ್ರಿಯರ ಈ ನಿರೀಕ್ಷೆಯನ್ನು ಆತಿಥೇಯ ತಂಡದ ಆಟಗಾರರು ಹುಸಿಗೊಳಿಸಿದರು.

ಜರ್ಮನಿ ತಂಡದ ಪ್ರಮುಖ ಐದು ಮಂದಿ ಆಟಗಾರರು ಗಾಯ ಮತ್ತು ಅನಾರೋಗ್ಯದ ಕಾರಣ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಇದು ಈ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತು.

ತವರಿನ ಅಭಿಮಾನಿಗಳ ಬೆಂಬಲ ದೊಂದಿಗೆ ಅಂಗಳಕ್ಕಿಳಿದಿದ್ದ ಮನ್‌ಪ್ರೀತ್‌ ಪಡೆ ಮೊದಲ ಕ್ವಾರ್ಟರ್‌ನಲ್ಲಿ ಜರ್ಮನಿ ತಂಡದಿಂದ ಪ್ರಬಲ ಪೈಪೋಟಿ ಎದುರಿ ಸಿತು. 14ನೇ ನಿಮಿಷದಲ್ಲಿ ಈ ತಂಡದ ನಾಯಕ ಮಾರ್ಕ್‌ ಗ್ರಾಮ್‌ಬುಷ್‌ ಗೋಲು ಗಳಿಸುವ ಉತ್ತಮ ಅವಕಾಶ ಕೈಚೆಲ್ಲಿದರು.

ಎರಡನೇ ಕ್ವಾರ್ಟರ್‌ನ ಆರಂಭ ದಲ್ಲೂ ಜರ್ಮನಿಗೆ ಮೇಲುಗೈ ಸಾಧಿ ಸುವ ಅವಕಾಶ ಲಭ್ಯವಾಗಿತ್ತು. 19ನೇ ನಿಮಿಷದಲ್ಲಿ ಈ ತಂಡ ಎರಡು ಪೆನಾಲ್ಟಿ ಕಾರ್ನರ್‌ ಸೃಷ್ಟಿಸಿಕೊಂಡಿತ್ತು. ಎದುರಾಳಿ ಆಟಗಾರರ ಈ ಎರಡೂ ಪ್ರಯತ್ನಗಳನ್ನೂ ಭಾರತದ ಗೋಲ್‌ಕೀಪರ್‌ ಸೂರಜ್‌ ಕರ್ಕೇರಾ ಅಮೋಘ ರೀತಿಯಲ್ಲಿ ತಡೆದು ತವರಿನ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು.

21ನೇ ನಿಮಿಷದಲ್ಲಿ ಸುನಿಲ್‌, ಆತಿಥೇಯರು ಖುಷಿಯ ಕಡಲಲ್ಲಿ ತೇಲು ವಂತೆ ಮಾಡಿದರು. ಹರ್ಮನ್‌ಪ್ರೀತ್‌ ಸಿಂಗ್‌ ನೀಡಿದ ಪಾಸ್‌ನಲ್ಲಿ ಚೆಂಡನ್ನು ತಡೆದ ಆಕಾಶ್‌ ದೀಪ್‌ ಅದನ್ನು ಗುರಿ ಯತ್ತ ಬಾರಿಸಿದರು. ಆ ಚೆಂಡನ್ನು ಜರ್ಮನಿಯ ಗೋಲ್‌ಕೀಪರ್‌ ತೋಬಿ ಯಸ್‌ ಹೌಕೆ ಮನಮೋಹಕ ರೀತಿಯಲ್ಲಿ ತಡೆದರು. ಅವರು ತಡೆದ ಚೆಂಡು ಗೋಲು ಪೆಟ್ಟಿಗೆಯ ಸನಿಹದಲ್ಲಿ ಬಿತ್ತು. ಇದನ್ನು ಗಮನಿಸಿದ ಸುನಿಲ್‌ ಕ್ಷಣಾರ್ಧದಲ್ಲಿ ಮುನ್ನುಗ್ಗಿ ಅದನ್ನು ಲೀಲಾಜಾಲವಾಗಿ ಗುರಿ ತಲುಪಿಸಿದರು.

ಹೀಗಾಗಿ ಆತಿಥೇಯ ತಂಡ 1–0ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು. ದ್ವಿತೀಯಾರ್ಧದಲ್ಲಿ ಮುನ್ನಡೆ ಹೆಚ್ಚಿಸಿಕೊಳ್ಳುವ ಅವಕಾಶ ಸಿಕ್ಕಿತ್ತು. ಹರ್ಮನ್‌ಪ್ರೀತ್‌ ಅವರ ಪ್ರಯತ್ನವನ್ನು ಎದುರಾಳಿ ಗೋಲ್‌ಕೀಪರ್‌ ವಿಫಲಗೊಳಿಸಿದರು.

36ನೇ ನಿಮಿಷದಲ್ಲಿ ಜರ್ಮನಿ ತಂಡ ಸಮಬಲದ ಗೋಲು ದಾಖಲಿಸಲು ಸಫಲವಾಯಿತು. ನಾಯಕ ಗ್ರಾಮ್‌ಬುಷ್‌ ನೀಡಿದ ಪಾಸ್‌ನಲ್ಲಿ ಮಾರ್ಕ್‌ ಅಪೆಲ್‌ ಚೆಂಡನ್ನು ಗುರಿ ಮುಟ್ಟಿಸಿದರು. 54ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್‌ ಗೋಲು ಗಳಿಸಿ ಭಾರತದ ಪಾಳಯದಲ್ಲಿ ಹರ್ಷದ ಹೊನಲು ಹರಿಯುವಂತೆ ಮಾಡಿದರು.–ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾ ತಂಡದ ಆಟಗಾರರ ಖುಷಿಯ ಕ್ಷಣ.

ಆಸ್ಟ್ರೇಲಿಯಾ ಚಾಂಪಿಯನ್‌: ಆಸ್ಟ್ರೇಲಿಯಾ ತಂಡ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿತು.

ಫೈನಲ್‌ನಲ್ಲಿ ಕಾಂಗರೂಗಳ ನಾಡಿನ ತಂಡ 2–1 ಗೋಲುಗಳಿಂದ ಅರ್ಜೆಂಟೀನಾವನ್ನು ಸೋಲಿಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.