ಬುಧವಾರ, ಫೆಬ್ರವರಿ 24, 2021
23 °C
ಬಿಳಿಗಿರಿರಂಗನ ಬೆಟ್ಟದಲ್ಲಿ ವನ್ಯಜೀವಿಗಳ ಕಂಡು ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರು

ದರ್ಶನ ನೀಡುತ್ತಿರುವ ಚಳಿಗಾಲದ ಅತಿಥಿಗಳು!

ನಾ. ಮಂಜುನಾಥಸ್ವಾಮಿ Updated:

ಅಕ್ಷರ ಗಾತ್ರ : | |

ದರ್ಶನ ನೀಡುತ್ತಿರುವ ಚಳಿಗಾಲದ ಅತಿಥಿಗಳು!

ಯಳಂದೂರು: ತಾಲ್ಲೂಕಿನ ಗಿರಿಸಾಲಿನ ನಿಸರ್ಗದಲ್ಲಿ ಸಾವಿರಾರು ಸಸ್ಯ ಕಣಗಳು ಕಣ್ಣು ಬಿಟ್ಟಿವೆ. ದಟ್ಟಾರಣ್ಯದ ನಡುವೆ ವನ್ಯಜೀವಿಗಳು ಎಲ್ಲೆಡೆ ದರ್ಶನ ನೀಡುತ್ತಲಿವೆ. ಗಿರಿ ಕಂದರಗಳಿಂದ ಧುಮ್ಮಿಕ್ಕುವ ಸಲಿಲಧಾರೆ, ಚಿಟ್ಟೆಗಳ ಚೆಲುವು, ಜೇಡರ ಬಲೆಯ ಚಿತ್ತಾರ ಈಗ ಎಲ್ಲರ ಚಿತ್ತವನ್ನು ಆಕರ್ಷಿಸುತ್ತಿವೆ.

ಕುಸಿದ ಉಷ್ಣಾಂಶದಿಂದ ಕರಡಿ, ಸಲಗ ಹಾಗೂ ಚಿರತೆಗಳು ಬಿಸಿಲು ಅರಸಿ ರಸ್ತೆ ಅಂಚಿನಲ್ಲಿ ನಿಲ್ಲುತ್ತಿವೆ. ‘ಚಳಿಗಾಲ ಆವರಿಸಿದೆ. ಪ್ರಾಣಿಗಳು ಮುಂಜಾನೆ ಬಿಸಿಲಿಗಾಗಿ ಹಂಬಲಿಸಿ ಎಲ್ಲೆಂದರಲ್ಲಿ ಬೀಡು ಬಿಡುತ್ತವೆ. ಪ್ರವಾಸಿಗರು ರಸ್ತೆ ಬಳಿ ನಿಂತು ಸೆಲ್ಫಿ ತೆಗೆಯುವ ಸಾಹಸಕ್ಕೆ ಮುಂದಾಗುತ್ತಿದ್ದಾರೆ.

ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ವನ್ಯ ಮೃಗಗಳ ದರ್ಶನ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸಿದೆ.

‘ಕಳೆದ ವಾರ ಉತ್ತಮ ಮಳೆಯಾಗಿದೆ. ನೀರಿನ ಒರತೆಗಳು ಹೆಚ್ಚಿವೆ. ಸಮೀಪದಲ್ಲೇ ಆನೆ ಹಿಂಡು ಅಡ್ಡಾಡುತ್ತವೆ. ಹೀಗಾಗಿ, ಒಮ್ಮೊಮ್ಮೆ ಹಾದಿಗೆ ಅಡ್ಡಲಾಗಿ ನಿಂತು ಸಂತಾನ ರಕ್ಷಿಸಲು ಘೀಳಿಡುತ್ತವೆ. ಕರಡಿಗಳು ಹೊಂಬಿಸಿಲಿಗೆ ಮೈಯೊಡ್ಡಿ ಕೂರುತ್ತವೆ. ಇಂತಹ ಸಮಯ ಮನೆಗೆ ತೆರಳಲು ಸಾಧ್ಯವಾಗದೇ ವಾಪಸ್‌ ಯಳಂದೂರು ಕಡೆಗೆ ಬಂದಿದ್ದೇನೆ’ ಎನ್ನುತ್ತಾರೆ ನಿವಾಸಿ ನಂಜೇಗೌಡ.

ಸಮೃದ್ಧ ವರ್ಷಧಾರೆಯಿಂದ ಮಲ್ಕೀ ಬೆಟ್ಟಗಳ ನೈಸರ್ಗಿಕ ನೆಲೆಗಳಲ್ಲಿ ಅಳಿವಿನಂಚಿನಲ್ಲಿದ್ದ ಸರ್ಪೆಂಡೇಸಿ ಕುಟುಂಬದ ಬಳ್ಳಿ, ಇಬ್ಬನಿ ಗಿಡ, ವೀನಸ್‌ ಫ್ಲೈ ಟ್ರ್ಯಾಪ್‌ ನಂತಹ ವಿಸ್ಮಯಕಾರಿ ಕೀಟ ಸಸ್ಯಗಳು ಕಾಣಿಸಿಕೊಂಡಿವೆ. ಇವು ವ್ಯಾಘ್ರಗಳ ನೆಲೆಯೂ ಆಗಿದೆ.

‘ಈ ವರ್ಷ ಕಾಳ್ಗಿಚ್ಚಿನಿಂದ ಅಪಾರ ಪ್ರಮಾಣದ ಸಸ್ಯಸಂಕುಲ ನಾಶವಾಗಿತ್ತು. ಆದರೆ, ಏಪ್ರಿಲ್‌ನಿಂದ ನವೆಂಬರ್ ವೇಳೆಗೆ 1073 ಮಿ.ಮೀ ಮಳೆ ಸುರಿಯಿತು’ ಎನ್ನುತ್ತಾರೆ 50 ವರ್ಷಗಳಿಂದ ಮಳೆ ಮಾಹಿತಿ ಸಂಗ್ರಹಿಸಿ ರುವ ವಿಜಿಕೆಕೆ ಸಸ್ಯತಜ್ಞ ರಾಮಾಚಾರಿ.

‘2017ರ ಅಂಕಿ ಅಂಶಗಳ ಪ್ರಕಾರ ಬಿಆರ್‌ಟಿಯಲ್ಲಿ 219 ಆನೆ ಮತ್ತು 65 ಹುಲಿಗಳಿವೆ. ಆದರೆ, ವನ್ಯ ಜೀವಿಗಳು ಸದಾ ಸಂಚರಿಸುತ್ತಲೇ ಇರುತ್ತವೆ. ಬಿಳಿಗಿರಿ ಬನದಿಂದ ತಿರುಪತಿ ಬೆಟ್ಟಗಳ ತನಕ ಇವುಗಳ ವಲಸೆ ಕಂಡುಬಂದಿವೆ.

ಇತ್ತೀಚಿಗೆ ಸುರಿದ ಮಳೆಯಿಂದ ಸಮೃದ್ಧ ಮೇವು ಹೆಚ್ಚಾಗಿದೆ. ಅರಣ್ಯ ಸಂರಕ್ಷಣೆಗೆ 25 ಬೀಟ್‌ಗಳು ಸದಾ ಸಕ್ರೀಯವಾಗಿವೆ. ಹಾಗಾಗಿ, ಕೃಷಿ ಜಮೀನುಗಳನ್ನು ಪ್ರಾಣಿಗಳು ಅವಲಂಬಿಸುವುದು ತಗ್ಗಿದೆ. ಇದರಿಂದ ಅರಣ್ಯ ಇಲಾಖೆಗೂ ನೆಮ್ಮದಿ ತಂದಿದೆ’ ಎನ್ನುತ್ತಾರೆ ಯಳಂದೂರು ವಿಭಾಗದ ಆರ್‌ಎಫ್‌ಒ ಮಹಾದೇವಯ್ಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.