ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರಿ ಯಾವುದಯ್ಯ ರಸ್ತೆ ದಾಟಲು...

ಜಯದೇವ ವೃತ್ತದಲ್ಲಿ ಟ್ರಾಫಿಕ್‌ ಸಮಸ್ಯೆ; ಸವಾರರ ಪರದಾಟ, ಪಾದಚಾರಿಗಳಿಗೆ ಪೀಕಲಾಟ
Last Updated 11 ಡಿಸೆಂಬರ್ 2017, 8:37 IST
ಅಕ್ಷರ ಗಾತ್ರ

ದಾವಣಗೆರೆ: ಸ್ಪರ್ಧೆಗೆ ಬಿದ್ದಿರುವಂತೆ ವೇಗವಾಗಿ ನುಗ್ಗುವ ಬಸ್‌ಗಳು. ರಸ್ತೆಯ ಮಧ್ಯೆ ಅಡ್ಡಲಾಗಿ ಬರುವ ಆಟೊಗಳು. ಜಾಗ ಸಿಕ್ಕಲ್ಲಿ ನುಗ್ಗುವ ಬೈಕ್‌ಗಳು. ಮೈಮೇಲೆ ಬಂದಂತೆ ಭಾಸವಾಗುವ ಟ್ರಕ್‌ಗಳು. ಇವುಗಳ ಮಧ್ಯೆ ದಿಕ್ಕುತೋಚದೆ ದಾರಿ ಮಧ್ಯೆಯೇ ನಿಲ್ಲುವ ಪಾದಚಾರಿಗಳು.

ನಗರದ ಜಯದೇವ ವೃತ್ತದಲ್ಲಿ ಪ್ರತಿನಿತ್ಯ ಕಂಡುಬರುವ ದೃಶ್ಯಗಳಿವು. ಈ ವೃತ್ತದಲ್ಲಿ ಟ್ರಾಫಿಕ್‌ ದೀಪಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದ ಪರಿಣಾಮ ಸಂಚಾರ ಸಮಸ್ಯೆ ಎದುರಾಗಿದೆ. ಸವಾರರಿಗೆ ವಾಹನಗಳನ್ನು ಓಡಿಸುವುದೇ ದುಸ್ತರವಾಗಿದೆ.

ಮಾರುಕಟ್ಟೆಯಾದ ಜಯದೇವ ವೃತ್ತ: ಪ್ರತಿಭಟನೆಗಳ ಕೇಂದ್ರಸ್ಥಾನ ಹಾಗೂ ಪ್ರಮುಖ ವೃತ್ತ ಎಂದೇ ಗುರುತಿಸಿಕೊಂಡಿರುವ ಜಯದೇವ ವೃತ್ತ ವಾಹನ ದಟ್ಟಣೆಯಿಂದಾಗಿ ಅಕ್ಷರಶಃ ಮಾರುಕಟ್ಟೆಯಾಗಿ ಬದಲಾಗಿದೆ. ಸವಾರರು ಎತ್ತ ಸಾಗಬೇಕು ಎಂಬ ಗೊಂದಲದಲ್ಲಿ ಸಿಲುಕುತ್ತಿದ್ದು, ಅಪಘಾತಗಳು ಸಂಭವಿಸುತ್ತಿವೆ.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ರೈಲ್ವೆ ಸ್ಟೇಷನ್‌, ಪಿ.ಬಿ ರಸ್ತೆ, ಮಂಡಿಪೇಟೆ, ರಾಷ್ಟ್ರೀಯ ಹೆದ್ದಾರಿ, ಹೀಗೆ ಪ್ರಮುಖ ಸ್ಥಳಗಳಿಗೆ ಸಂಪರ್ಕಕೊಂಡಿಯಾಗಿದೆ ಜಯದೇವ ವೃತ್ತ. ಇಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಇಲ್ಲದಿರುವುದರಿಂದ ತೀವ್ರ ತೊಂದರೆಯಾಗಿದೆ ಎನ್ನುತ್ತಾರೆ ಸವಾರ ಸಿದ್ದೇಶ್‌.

ಒಂದೆಡೆ ಹದಡಿ ರಸ್ತೆ, ಮತ್ತೊಂದೆಡೆ ಲಾಯರ್ ರಸ್ತೆ, ಇನ್ನೊಂದೆಡೆ ಅಶೋಕ ರಸ್ತೆ, ಪ್ರವಾಸಿ ಮಂದಿರ ರಸ್ತೆ, ಶಿವಪ್ಪಯ್ಯ ವೃತ್ತದಿಂದ ಬರುವ ವಾಹನಗಳು ಜಯದೇವ ವೃತ್ತದ ಮೂಲಕವೇ ಹಾದು ಹೋಗುತ್ತವೆ. ಹೀಗೆ ಬರುವ ವಾಹನಗಳನ್ನು ನಿಯಂತ್ರಿಸಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ವಾಹನಗಳು ಒಮ್ಮೆಲೇ ವೃತ್ತದಲ್ಲಿ ಜಮಾವಣೆಯಾಗುತ್ತಿವೆ. ಈ ಸಂದರ್ಭ ಚಾಲಕರ ಮಧ್ಯೆ ವಾಗ್ವಾದ, ಜಗಳಗಳು ಪ್ರತಿನಿತ್ಯ ನಡೆಯುತ್ತವೆ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿ ವೀರಭದ್ರಪ್ಪ.

ಪಾದಚಾರಿಗಳ ಸಂಕಷ್ಟ: ಐದು ರಸ್ತೆಗಳಿಂದ ಬರುವ ವಾಹನಗಳು ಜಯದೇವ ವೃತ್ತವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳುತ್ತಿದ್ದು, ಪಾದಚಾರಿ ಮಾರ್ಗವನ್ನೂ ಬಿಡುತ್ತಿಲ್ಲ. ಹಾಗಾಗಿ, ಜನರು ರಸ್ತೆ ದಾಟಲು ಹರಸಾಹಸ ನಡೆಸಬೇಕಿದೆ. ವೃದ್ಧರು, ಮಕ್ಕಳು, ಮಹಿಳೆಯರು ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟಬೇಕು ಎನ್ನುತ್ತಾರೆ ಹದಡಿಯ ಪರಮೇಶ್ವರಪ್ಪ.

ಪಿ.ಬಿ ರಸ್ತೆಯಿಂದ ಹದಡಿ ರಸ್ತೆಗೆ ಬರುವ ಬಸ್‌ಗಳು ವೇಗವಾಗಿ ಸಂಚರಿಸುತ್ತವೆ. ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಕಟ್ಟಿಟ್ಟಬುತ್ತಿ. ಒಂದು ರಸ್ತೆ ನೋಡಿಕೊಂಡು ರಸ್ತೆ ದಾಟುತ್ತಿದ್ದರೆ, ಮತ್ತೊಂದು ರಸ್ತೆಯಿಂದ ವಾಹನಗಳು ಮುನ್ನುಗ್ಗುತ್ತವೆ. ಜೀವ ಪಣಕ್ಕಿಟ್ಟು ರಸ್ತೆ ದಾಟಬೇಕಿದೆ ಎನ್ನುತ್ತಾರೆ ಸಾರ್ವಜನಿಕರು.

ಪಾದಚಾರಿಗಳು ರಸ್ತೆ ದಾಟಲು ನಿರ್ದಿಷ್ಟವಾದ ಸ್ಥಳ ಇರಬೇಕು. ಆದರೆ, ಜಯದೇವ ವೃತ್ತದಲ್ಲಿ ಪಾದಚಾರಿ ಪಥವಿದ್ದರೂ ವಾಹನ ಸವಾರರೇ ಆಕ್ರಮಿಸಿಕೊಳ್ಳುತ್ತಿದ್ದಾರೆ. ಇದರಿಂದ ಅನಿವಾರ್ಯವಾಗಿ ರಸ್ತೆ ಮಧ್ಯೆಯೇ ಓಡಾಡಬೇಕಾಗಿದೆ ಎನ್ನುತ್ತಾರೆ ಹಿರಿಯ ನಾಗರಿಕ ವೀರಭದ್ರಪ್ಪ.

ಬೆಳಿಗ್ಗೆ 9ರಿಂದ 10ಬ ಗಂಟೆಯ ಅವಧಿಯಲ್ಲಿ ಶಾಲಾ–ಕಾಲೇಜು ವಿದ್ಯಾರ್ಥಿಗಳು ಹೆಚ್ಚು ಸಂಚಾರ ಮಾಡುತ್ತಾರೆ. ಸಾರ್ವಜನಿಕರೂ ಕಚೇರಿಗೆ ಹೋಗುವ ಸಮಯವಿದು. ಈ ಅವಧಿಯಲ್ಲಿ ಸಂಚಾರ ದಟ್ಟಣೆಗೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ಸ್ಥಳೀಯರು.

ಸುಗಮ ವಾಹನ ಸಂಚಾರಕ್ಕೆ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್‌ ಸಿಗ್ನಲ್‌ಗಳು ಅವಶ್ಯ. ಹಾಗೆಯೇ ಪಾದಚಾರಿ ಮಾರ್ಗಗಳ ಅತಿಕ್ರಮಣ ತಡೆಯಬೇಕು. ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ ನಾಗರಿಕರು.

*

ನಗರದಲ್ಲಿ ಸಿಮೆಂಟ್‌ ರಸ್ತೆ ಕಾಮಗಾರಿಗಳು ಭರದಿಂದ ಸಾಗಿದ್ದು, ಸುಗಮ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ. ಶೀಘ್ರವೇ ಸಂಚಾರ ದಟ್ಟಣೆ ಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಪೊಲೀಸ್‌ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT