ಸೋಮವಾರ, ಮಾರ್ಚ್ 1, 2021
24 °C

ಪರೇಶ ಮೇಸ್ತ ಮೃತದೇಹದ ಮೇಲೆ ಹಲ್ಲೆಯ ಗುರುತಿಲ್ಲ: ಮರಣೋತ್ತರ ಪರೀಕ್ಷೆ ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರೇಶ ಮೇಸ್ತ ಮೃತದೇಹದ ಮೇಲೆ ಹಲ್ಲೆಯ ಗುರುತಿಲ್ಲ: ಮರಣೋತ್ತರ ಪರೀಕ್ಷೆ ವರದಿ

ಕಾರವಾರ/ಕುಮಟಾ: ಹೊನ್ನಾವರದ ಯುವಕ ಪರೇಶ ಮೇಸ್ತ ಸಾವಿನ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ, ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ಕುಮಟಾ ಮತ್ತು ಕಾರವಾರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ್ದು, ಹಿಂಸಾಚಾರಕ್ಕೆ ತಿರುಗಿ, ಕುಮಟಾದಲ್ಲಿ ಉದ್ರಿಕ್ತರು ಪೊಲೀಸ್‌ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪಶ್ಚಿಮ ವಲಯ ಐಜಿಪಿ ಹೇಮಂತ್‌ ನಿಂಬಾಳ್ಕರ್‌ ಅವರ ಕಾರು ಸುಟ್ಟಿದ್ದಾರೆ.

ಇದರ ಬೆನ್ನಲ್ಲೆ ಪರೇಶ್‌ ಮೇಸ್ತ ಮರಣೋತ್ತರ ಪರೀಕ್ಷೆಯ ವರದಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಪರೇಶ ಮೇಸ್ತ ಮೃತದೇಹದ ಮೇಲೆ ಹಲ್ಲೆಯ ಗುರುತಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ವರದಿಯ ವಿವರ

ಮರಣೋತ್ತರ ಪರೀಕ್ಷೆ ನಡೆಸಿದ ಮಣಿಪಾಲ ಕಸ್ತೂರ ಬಾ ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಶಂಕರ್‌ ಎಂ.ಬಕ್ಕನ್ನವರ ಅವರು ಹೊನ್ನಾವರ ಪೊಲೀಸರಿಗೆ ನೀಡಿರುವ ವರದಿಯಲ್ಲಿ, ‘ಆಯುಧದಿಂದ ಹಲ್ಲೆ ನಡೆಸಿದ ಗುರುತುಗಳಾಗಲಿ ಅಥವಾ ಉಸಿರುಗಟ್ಟಿಸಿ ಸಾಯಿಸಿರುವ ಲಕ್ಷಣಗಳಾಗಲಿ ಪರೇಶ್‌ ಮೇಸ್ತ ಮೃತದೇಹದಲ್ಲಿ ಕಂಡುಬಂದಿಲ್ಲ’ ಎಂದು ತಿಳಿಸಿದ್ದಾರೆ.

ಡಿ.8ರಂದು ಪರೇಶ್‌ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ಈ ವರದಿಯು ಪ್ರಶ್ನೋತ್ತರ ಮಾದರಿಯಲ್ಲಿದೆ. ಸಹಜವಾಗಿ ಮೃತಪಟ್ಟಿದ್ದಾರೆಯೇ ಅಥವಾ ಹತ್ಯೆ ಮಾಡಲಾಗಿದೆಯೇ ಎಂಬ ಕುರಿತಾದ 19 ಪ್ರಶ್ನೆಗಳಿಗೆ ಈ ವರದಿಯಲ್ಲಿ ಉತ್ತರಿಸಲಾಗಿದೆ.

‘ಸುಟ್ಟ ಗಾಯದ ಗುರುತು ಕಂಡುಬಂದಿಲ್ಲ. ಆದರೆ, ದೇಹದ ಎರಡು ಕಡೆ ತರಚಿದ ಗಾಯಗಳಿವೆ. ಉಗುರು ಅಥವಾ ಪಿನ್‌ನಿಂದ ಚುಚ್ಚಿರುವುದು ಕಂಡುಬಂದಿಲ್ಲ. ಇನ್ನು ಮರ್ಮಾಂಗವಾಗಲಿ ಅಥವಾ ಇತರ ಅಂಗಾಂಗಗಳಾಗಲಿ ವಿರೂಪಗೊಂಡಿಲ್ಲ. ಕೈಯಲ್ಲಿ ಶಿವಾಜಿ ಚಿತ್ರದ ಹಚ್ಚೆ (ಟ್ಯಾಟು) ಇದ್ದು , ‘ಮರಾಠಾ’ ಎಂದು ಹಿಂದಿಯಲ್ಲಿ ಬರೆಯಲಾಗಿದೆ. ಇದಕ್ಕೂ ಯಾವುದೇ ಹಾನಿಯಾಗಿಲ್ಲ. ತಲೆಗೂ ಯಾವುದೇ ರೀತಿ ಪೆಟ್ಟು ಬಿದ್ದಿಲ್ಲ. ದೇಹದ ಮೇಲೆ ಬಿಸಿ ನೀರು ಅಥವಾ ಆ್ಯಸಿಡ್‌ ಬಿದ್ದಿಲ್ಲ. ಹಗ್ಗ ಬಿಗಿದ ಗುರುತು ಸಹ ಎಲ್ಲೂ ಇಲ್ಲ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಚಾಲಕನ ಸಮೇತ ಕಾರಿಗೆ ಬೆಂಕಿ

ಕಲ್ಲು ತೂರಾಟದಲ್ಲಿ ಕುಮಟಾ ಪಿಎಸ್ಐ ಇ.ಸಿ. ಸಂಪತ್, ದಾಂಡೇಲಿ ಮಹಿಳಾ ಎಎಸ್ಐ ಮಂಜುಳಾ ರಾವೋಜಿ ಸೇರಿದಂತೆ ಸುಮಾರು ಹತ್ತು ಜನ ಪೊಲೀಸರು ಗಾಯಗೊಂಡಿದ್ದಾರೆ. ಬೆಳಿಗ್ಗೆ ಕುಮಟಾದ ಮಾಸ್ತಿಕಟ್ಟೆ ವೃತ್ತದಿಂದ ಆರಂಭವಾದ ಮೆರವಣಿಗೆ ಮುಂದೆ ಸಾಗುತ್ತಿದ್ದಂತೆಯೇ ಪೊಲೀಸ್‌ ಸಿಬ್ಬಂದಿ, ಮಾಧ್ಯಮದವರ ಮೇಲೂ ಕಲ್ಲು ತೂರಲಾಯಿತು.

ಈ ವೇಳೆ ಸ್ಥಳಕ್ಕೆ ಬಂದ ಐ.ಜಿ.ಪಿ ಹೇಮಂತ ನಿಂಬಾಳ್ಕರ್ ಕಾರಿನಿಂದ ಇಳಿದ ನಂತರ, ಚಾಲಕ ಒಳಗಿದ್ದಾಗಲೇ ಕಾರಿಗೆ ಬೆಂಕಿ ಹಚ್ಚಲಾಯಿತು. ಗಂಭೀರ ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಲಭೆಗೆ ಪ್ರಚೋದನೆ ನೀಡುವವರ ವಿರುದ್ಧ ಕ್ರಮ: ನಿಂಬಾಳ್ಕರ ಎಚ್ಚರಿಕೆ

‘ಪರೇಶ ಸಾವಿಗೆ ಸಂಬಂಧಿಸಿದಂತೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶ ಹಾಕಿ ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಪಶ್ಚಿಮ ವಲಯದ ಐಜಿಪಿ ಹೇಮಂತ್‌ ನಿಂಬಾಳ್ಕರ ಎಚ್ಚರಿಸಿದ್ದಾರೆ.

ಜಿಲ್ಲೆಯಾದ್ಯಂತ 14ರವರೆಗೆ ನಿಷೇಧಾಜ್ಞೆ

ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಡಿ.14ರವರೆಗೆ ಸಭೆ, ಸಮಾರಂಭ, ಮೆರವಣಿಗೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.