ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ‘ಕುಂದಾ’ ಸವಿಯುವ ಆಸೆ

ಭಾರತ ‘ಎ’–ಬಾಂಗ್ಲಾದೇಶ ‘ಎ’ ತಂಡಗಳ ಟ್ವೆಂಟಿ–20 ಕ್ರಿಕೆಟ್‌ ಸರಣಿ
Last Updated 11 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಳಗಾವಿ: ಹುಬ್ಬಳ್ಳಿಯಲ್ಲಿ ಈಚೆಗೆ ನಡೆದ ಏಕದಿನ ಸರಣಿಯಲ್ಲಿ ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡಿರುವ ಭಾರತ ‘ಎ’ ತಂಡ ಈಗ ಮತ್ತೊಂದು ಸರಣಿ ಗೆಲುವಿನ ವಿಶ್ವಾಸದಲ್ಲಿದೆ. ಇಲ್ಲಿನ ಆಟೊನಗರದಲ್ಲಿರುವ ಕೆಎಸ್‌ಸಿಎ ಮೈದಾನದಲ್ಲಿ ಬಾಂಗ್ಲಾದೇಶ ‘ಎ’ ಮಹಿಳಾ ತಂಡದ ವಿರುದ್ಧ ನಡೆಯಲಿರುವ ಟ್ವೆಂಟಿ–20 ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಸರಣಿ ಜಯಕ್ಕೆ ಮುನ್ನುಡಿ ಬರೆಯಲು ಸಜ್ಜಾಗಿದೆ. ಪಂದ್ಯ ಮಂಗಳವಾರ ನಡೆಯಲಿದೆ.

ಕುಂದಾನಗರಿಯ ಕೆ.ಎಸ್‌.ಸಿ.ಎ ಕ್ರೀಡಾಂಗಣದಲ್ಲಿ ನಡೆಯಲಿರುವ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯ ಇದಾಗಿರುವುದರಿಂದ ಪ್ರೇಕ್ಷಕರು ಕೂಡ ಕುತೂಹಲ ಗೊಂಡಿದ್ದಾರೆ.

ಬೆಳಗಾವಿಯಲ್ಲಿ ಇದೇ ಮೊದಲ ಬಾರಿ ಮಹಿಳಾ ಕ್ರಿಕೆಟ್‌ ಪಂದ್ಯ ನಡೆಯುತ್ತಿರುವುದು ಕೂಡ ಕುತೂಹಲ ಹೆಚ್ಚಲು ಕಾರಣ. ಕರ್ನಾಟಕದ ಪ್ರತಿಭೆ ಎ.ಆರ್‌. ವನಿತಾ ಆತಿಥೇಯ ತಂಡದಲ್ಲಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಏಕದಿನ ಸರಣಿಯ ಎರಡು ಪಂದ್ಯಗಳಲ್ಲಿ ಅವರು ಉತ್ತಮ ಸಾಮರ್ಥ್ಯ ತೋರಿದ್ದಾರೆ. ಆರಂಭಿಕ ಆಟಗಾರ್ತಿಯಾದ ಅವರಿಗೆ 3ನೇ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿತ್ತು.

ಮುಂಬೈನ 19 ವರ್ಷದ ಒಳಗಿನವರ ತಂಡದ ನಾಯಕಿ ಜೆ.ರಾಡ್ರಿಗಸ್‌ ಕೂಡ ಆ ಸರಣಿಯಲ್ಲಿ ಮಿಂಚಿದ್ದಾರೆ. ಮುಂದಿನ ವರ್ಷ ಭಾರತ ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವೆ ಅಂತರರಾಷ್ಟ್ರೀಯ ಕ್ರಿಕೆಟ್‌ ಸರಣಿ ನಡೆಯಲಿದೆ. ಇದರಿಂದಾಗಿ ಆತಿಥೇಯ ತಂಡದ ಜೂನಿಯರ್‌ ಆಟಗಾರ್ತಿಯರ ಪಾಲಿಗೆ ಈ ಟೂರ್ನಿ ಮಹತ್ವದ್ದಾಗಿದೆ.

ಡಿಸೆಂಬರ್‌ 14ರಂದು ಎರಡನೇ ಪಂದ್ಯ ಹಾಗೂ 16ರಂದು ಮೂರನೇ ಪಂದ್ಯ ನಡೆಯಲಿದೆ. ಉಭಯ ತಂಡದ ಆಟಗಾರ್ತಿಯರು ಸೋಮವಾರ ನೆಟ್ಸ್‌ ನಲ್ಲಿ ಕಠಿಣ ಅಭ್ಯಾಸ ನಡೆಸಿದರು.

‘ಏಕದಿನ ಸರಣಿಯನ್ನು 3–0 ಅಂತರದಿಂದ ಗೆದ್ದಿರುವುದರಿಂದ ಆತ್ಮವಿಶ್ವಾಸ ಹೆಚ್ಚಿದೆ. ಆ ಸರಣಿಯಲ್ಲಿ ಆಡಿದ್ದ ಹತ್ತು ಮಂದಿಯನ್ನು ಬದಲಾವಣೆ ಮಾಡಲಾಗಿದೆ. ಟ್ವೆಂಟಿ–20 ತಂಡದಲ್ಲಿ ಎಂಟು ಆಲ್‌ರೌಂಡರ್‌ಗಳಿದ್ದೇವೆ. ಇಲ್ಲಿನ ಪಿಚ್‌ ಬ್ಯಾಟಿಂಗ್‌ಗೆ ಅನುಕೂಲವಾಗಿದ್ದು ಎಲ್ಲ ಪಂದ್ಯಗಳಲ್ಲೂ ಉತ್ತಮ ಮೊತ್ತ ಗಳಿಸುವ ವಿಶ್ವಾಸವಿದೆ. ಸಂಘಟಿತ ಹೋರಾಟ ಮುಂದುವರಿಸುತ್ತೇವೆ’ ಎಂದು ಅತಿಥೇಯ ತಂಡದ ನಾಯಕಿ ಅನುಜಾ ಪಾಟೀಲ ಭರವಸೆ ವ್ಯಕ್ತಪಡಿಸಿದರು.

‘ಎಲ್ಲ ವಿಭಾಗಗಳಲ್ಲಿ ವೈಫಲ್ಯ ಕಂಡಿದ್ದರಿಂದ ಏಕದಿನ ಸರಣಿಯಲ್ಲಿ ಸೋತಿದ್ದೇವೆ. ಈಗ ಉತ್ತಮ ಸಾಮರ್ಥ್ಯ ತೋರುವುದಕ್ಕಾಗಿ ಕಠಿಣ ಅಭ್ಯಾಸ ನಡೆಸುತ್ತಿದ್ದೇವೆ’ ಎಂದು ಬಾಂಗ್ಲಾ ತಂಡದ ನಾಯಕಿ ಜಹಾಂಆರ ಆಲಂ ಹೇಳಿದರು.

ತಂಡಗಳು
ಭಾರತ:
ಅನುಜಾ ಪಾಟೀಲ (ನಾಯಕಿ), ಎಸ್‌. ಮೇಘನಾ, ಜೆಮಿಮಾ ರಾಡ್ರಿಗಸ್‌, ಸ್ವಾಗತಿಕಾ ಪಾತ್‌, ಪೂಜಾ ವಸ್ತ್ರಕರ್, ಟಿ.ಪಿ. ಕನ್ವರ್‌, ಸೋನಿ ಯಾದವ್‌, ರಮ್ಯಾ ಎಸ್‌. ಡೋಳಿ, ವಿ.ಆರ್. ವನಿತಾ, ಡಿ. ಹೇಮಲತಾ, ದೇವಿಕಾ ವೈದ್ಯ, ತಾನ್ಯಾ ಭಾಟಿಯಾ, ಮೇಘನಾ ಸಿಂಗ್‌, ರಾಧಾ ಯಾದವ್, ತರನ್ನುಮ್‌ ಪಠಾಣ್‌.

ಬಾಂಗ್ಲಾದೇಶ: ಜಹಾಂಆರ ಆಲಂ (ನಾಯಕಿ), ರುಮಾನಾ ಅಹಮದ್‌, ನಿಗಾರ್‌ ಸುಲ್ತಾನಾ ಜೋಟಿ, ಫರ್ಗಾನಾ ಹಕ್‌ ಪಿಂಕಿ, ಖಾದಿಜಾ ಟಿ. ಕುಬ್ರಾ, ಫಹಿಮಾ ಖತೂನ್‌, ಲಿಲ್ಲಿ ರಾಣಿ ಬಿಸ್ವಾಸ್‌, ನಹಿದಾ ಅಖ್ತರ್‌, ಪನ್ನಾ ಘೋಷ್‌, ಸುರಯಾ ಅಜ್‌ಮಿಮ್‌, ಸರ್ಮಿನ್‌ ಸುಲ್ತಾನ, ಸನ್ಮಾ ಖಾತುನ್, ಲತಾ ಮೊಂಡಲ್‌, ಶೈಲಾ ಶರ್ಮಿನ್‌, ಮುರ್ಷಿದಾ ಖಾತುನ್‌, ಶಮಿಮಾ ಸುಲ್ತಾನ.

ಪಂದ್ಯ ಆರಂಭ: ಬೆಳಿಗ್ಗೆ 9.30ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT