ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮರೆಯಾದ ಹೋರಿ ಬೆದರಿಸುವ ಸ್ಪರ್ಧೆ

Last Updated 12 ಡಿಸೆಂಬರ್ 2017, 6:29 IST
ಅಕ್ಷರ ಗಾತ್ರ

ಶಿಕಾರಿಪುರ: ಹೋರಿ ಹಬ್ಬ ನಡೆಸಲು ಜಿಲ್ಲಾಡಳಿತ ನಿಷೇಧ ಹೇರಿದ್ದರಿಂದ ಜನಪದ ಸಂಸ್ಕೃತಿ ಪ್ರತೀಕವಾದ ಹಾಗೂ ಹಲವು ವರ್ಷಗಳಿಂದ ಆಚರಿಸುತ್ತಿದ್ದ ಹೋರಿ ಬೆದರಿಸುವ ಸ್ಪರ್ಧೆ ತಾಲ್ಲೂಕಿನಲ್ಲಿ ಕಣ್ಮರೆಯಾಗಿದೆ.

ವರ್ಷ ಪೂರ್ತಿ ಕೃಷಿ ಚಟುವಟಿಕೆ ನಿರತರಾಗಿರುವ ರೈತರು ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಪ್ರತಿ ವರ್ಷ ದೀಪಾವಳಿ ಹಬ್ಬ ಆರಂಭದಿಂದ ಸುಮಾರು ಮೂರು ತಿಂಗಳ ಕಾಲ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವಿಶೇಷ ಹೋರಿ ಬೆದರಿಸುವ ಸ್ಪರ್ಧೆಗಳನ್ನು ಗ್ರಾಮಸ್ಥರು ಆಯೋಜಿಸುತ್ತಿದ್ದರು. ಈ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತಮಿಳುನಾಡು ಸೇರಿ ಹಲವು ರಾಜ್ಯಗಳಿಂದ ಹೋರಿಗಳನ್ನು ಮಾಲೀಕರು ತರುತ್ತಿದ್ದರು.

ಹೋರಿಗಳಿಗೆ ಉತ್ತಮ ಆಹಾರ ನೀಡಿ, ಅವುಗಳ ಆರೋಗ್ಯ ರಕ್ಷಣೆಗೆ ಮಾಲೀಕರು ಹೆಚ್ಚು ಗಮನ ನೀಡುತ್ತಿದ್ದರು. ಆಯೋಜಕರು ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಹೋರಿಗಳಿಗೆ ಬಹುಮಾನವಾಗಿ ಬಂಗಾರದ ಆಭರಣ, ಬೈಕ್‌, ಟಿವಿ ಸೇರಿ ಹಲವು ಗೃಹ ಬಳಕೆ ವಸ್ತುಗಳನ್ನು ನೀಡುತ್ತಿದ್ದರು.

ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದ ಸಾಹಸಿ ಯುವಕರು ವೇಗವಾಗಿ ಓಡುವ ಹೋರಿಗಳನ್ನು ಹಿಡಿದು ಕೊಬ್ಬರಿ ಮಾಲೆಯನ್ನು ಕೀಳುತ್ತಿದ್ದ ದೃಶ್ಯ ವೀಕ್ಷಕರ ಮನಸ್ಸನ್ನು ರೋಮಾಂಚನ
ಗೊಳಿಸುತ್ತಿತ್ತು. ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ಸ್ಪರ್ಧೆ ಆಯೋಜಿಸಿದರೂ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನ ಬರುತ್ತಿದ್ದರು.

ಪ್ರಸಕ್ತ ವರ್ಷ ಜಿಲ್ಲಾಡಳಿತ ಹೋರಿ ಬೆದರಿಸುವ ಸ್ಪರ್ಧೆಗೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಗ್ರಾಮಸ್ಥರೂ ಸ್ಪರ್ಧೆ ಸಂಘಟಿಸಲು ಹಿಂದೇಟು ಹಾಕುತ್ತಿದ್ದಾರೆ. ನಿಷೇಧದ ನಡುವೆಯೂ ಸ್ಪರ್ಧೆ ಆಯೋಜಿಸಿ ಸಾವು ವನೋವು ಸಂಭವಿಸಿದರೆ ಎಂಬ ಭೀತಿ ಸಂಘಟಕರನ್ನು ಕಾಡುತ್ತಿದೆ.

ಜಿಲ್ಲೆಯ ಆಯನೂರು ಕೋಟೆಯಲ್ಲಿ ಈಚೆಗೆ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿತದಿಂದ ಒಬ್ಬ ವ್ಯಕ್ತಿ ಮೃತಪಟ್ಟಿದ್ದರು. ಸಂಘಟಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದು ಸಹ ಸ್ಪರ್ಧೆ ಆಯೋಜಿಸಲು ಹಿಂದೇಟು ಹಾಕಲು ಪ್ರಮುಖ ಕಾರಣವಾಗಿದೆ.

ತಾಲ್ಲೂಕಿನಲ್ಲಿ ಲಕ್ಷಕ್ಕೂ ಹೆಚ್ಚು ರೂಪಾಯಿ ನೀಡಿ ಹೋರಿ ಖರೀದಿಸಿದ ಮಾಲೀಕರು ಹಾಗೂ ಅಭಿಮಾನಿಗಳು ಪಕ್ಕದ ಹಾವೇರಿ ಜಿಲ್ಲೆಯ ಗ್ರಾಮಗಳಲ್ಲಿ ನಡೆಯುವ ವಿಶೇಷ ಹೋರಿ ಬೆದರಿಸುವ ಸ್ಪರ್ಧೆಗಳಲ್ಲಿ ಭಾಗವಹಿಸಲು ತೆರಳುತ್ತಿರುವ ದೃಶ್ಯ ಕಂಡು ಬರುತ್ತಿದೆ.

ಹಲವು ವರ್ಷಗಳಿಂದ ಸಾಂಪ್ರದಾಯಿಕವಾಗಿ ಬೆಳೆದು ಬಂದ ಹೋರಿ ಬೆದರಿಸುವ ಸ್ಪರ್ಧೆಗೆ ಜಿಲ್ಲಾಡಳಿತ ನಿಷೇಧ ಹೇರಿರುವುದು ಜನಪದ ಸಂಸ್ಕೃತಿ ನಶಿಸಲು ಕಾರಣವಾಗಿದೆ ಎಂದು ಹೋರಿ ಮಾಲೀಕ ಡಾ. ಪ್ರಶಾಂತ ಅಭಿಪ್ರಾಯಪಟ್ಟರು.

ಸ್ಪರ್ಧೆಯಲ್ಲಿ ಸಾವು–ನೋವು ಸಂಭವಿಸದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಪೂರಕವಾದ ನಿಯಮಗಳನ್ನು ವಿಧಿಸಿ, ಸ್ಪರ್ಧೆ ಏರ್ಪಡಿಸಲು ಅವಕಾಶ ನೀಡಬೇಕು ಎಂದು ಹೋರಿ ಮಾಲೀಕ ಜಮೀನ್ದಾರ ಮಂಜುನಾಥ  ಒತ್ತಾಯಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT