ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಒಟ್ಟು ಮಹಿಳೆಯರಲ್ಲಿ ಅಂತರ್ಜಾಲ ಬಳಸುವವರು ಕೇವಲ ಶೇ. 29 ಮಾತ್ರ!

Last Updated 12 ಡಿಸೆಂಬರ್ 2017, 8:52 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಅಂತರ್ಜಾಲ ಬಳಕೆಯಲ್ಲಿ ಮಹಿಳೆಯರಿಗೆ ಹೋಲಿಸಿದರೆ ಪುರುಷರು ಮುಂದಿದ್ದಾರೆ. ದೇಶದ ಒಟ್ಟು ಮಹಿಳೆಯರಲ್ಲಿ ಕೇವಲ ಶೇ. 29ರಷ್ಟು ಮಂದಿ ಮಾತ್ರವೇ ಅಂತರ್ಜಾಲ ಬಳಸುತ್ತಿದ್ದು, ವಿದ್ಯುನ್ಮಾನ ಕ್ಷೇತ್ರದಲ್ಲಿಯೂ ಲಿಂಗ ಅಸಮಾನತೆ ಎದ್ದು ಕಾಣುತ್ತಿದೆ ಎಂದು ವಿಶ್ವಸಂಸ್ಥೆ ಪ್ರಕಟಿಸಿರುವ ವರದಿಯೊಂದು ತಿಳಿಸಿದೆ.

2017ರ ಅಂಕಿ ಅಂಶದಂತೆ ವಿಶ್ವದಲ್ಲಿ ಮಹಿಳೆಯರಿಗಿಂತ ಶೇ. 12ರಷ್ಟು ಪುರುಷರು ಹೆಚ್ಚಾಗಿ ಅಂತರ್ಜಾಲ ಬಳಸುತ್ತಿದ್ದಾರೆ. ಭಾರತದಲ್ಲಿರುವ ಒಟ್ಟು ಮಹಿಳೆಯರಲ್ಲಿ ಮೂರನೇ ಒಂದರಷ್ಟು ಮಹಿಳೆಯರು ಮಾತ್ರವೇ ಅಂತರ್ಜಾಲ ಬಳಸುತ್ತಿದ್ದಾರೆ ಎನ್ನಲಾಗಿದೆ.

ವಿಶ್ವಸಂಸ್ಥೆಯ ಅಂಗಸಂಸ್ಥೆ ಯುನಿಸೆಫ್‌ 'ಡಿಜಿಟಲ್ ಜಗತ್ತಿನಲ್ಲಿ ವಿಶ್ವದ ಮಕ್ಕಳ ಸ್ಥಾನಮಾನ–2017’ ಹೆಸರಿನಲ್ಲಿ ಮಾಡಿರುವ ವರದಿಯಲ್ಲಿ ಈ ಮಾಹಿತಿಯನ್ನು ಉಲ್ಲೇಖಿಸಲಾಗಿದ್ದು, ಲಿಂಗದ ಕಾರಣದಿಂದ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಬಳಸದಂತೆ ಹಲವು ಕಟ್ಟುಪಾಡುಗಳನ್ನು ಹೇರಲಾಗಿದೆ ಎಂದೂ ಅಭಿಪ್ರಾಯಪಟ್ಟಿದೆ.

ವಿದ್ಯುನ್ಮಾನ ಕ್ಷೇತ್ರದಲ್ಲಿ ಲಿಂಗ ಅಸಮಾನತೆಯನ್ನು ತೊಡೆದು ಅಂತರ್ಜಾಲ ಮಾಹಿತಿ ಸೇವೆ, ಮಹಿಳೆಯರ ಆರೋಗ್ಯ, ಶಿಕ್ಷಣ ಹಾಗೂ ಕೌಶಲ್ಯದ ವಿಚಾರಗಳಲ್ಲಿ ಮುಕ್ತವಾಗಿ ಭಾಗವಹಿಸುವುದರಿಂದ 21ನೇ ಶತಮಾನದ ವಿಶ್ವ ಆರ್ಥಿಕತೆಗೆ ಸಹಕಾರಿಯಾಗಲಿದೆ. ವಿದ್ಯುನ್ಮಾನ ವ್ಯವಸ್ಥೆಯಿಂದ ಹೆಣ್ಣುಮಕ್ಕಳನ್ನು ಹೊರಗಿಡುವುದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು ಎಂಬುದಾಗಿಯೂ ಎಚ್ಚರಿಸಿದೆ.

‘ಭಾರತದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳು ವಿದ್ಯುನ್ಮಾನ ಜಗತ್ತಿನೊಂದಿಗೆ ತೆರೆದುಕೊಳ್ಳಲು ಒಂದೇ ಬಗೆಯ ಅವಕಾಶಗಳನ್ನು ಹೊಂದಿದ್ದಾರೆ. ಭಾರತ ಪ್ರಮುಖ ಮಾಹಿತಿ ತಂತ್ರಜ್ಞಾನ ದೇಶವಾಗಿದೆ. ಮಕ್ಕಳು ಎಲ್ಲಿ ಬದುಕುತ್ತಿವೆ ಎಂಬುದು ಮುಖ್ಯವಲ್ಲ. ಬದಲಾಗಿ ವಿದ್ಯುನ್ಮಾನ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು’ ಎಂದು ಯುನಿಸೆಫ್‌ನ ಭಾರತ ಪ್ರತಿನಿಧಿ ಯಾಸ್ಮಿನ್‌ ಅಲಿ ಹಕ್‌ ವರದಿ ಬಿಡುಗಡೆ ವೇಳೆ ಮಾತನಾಡಿದ್ದಾರೆ.

‘ಅಂತರ್ಜಾಲ ಹಾಗೂ ಸಾಮಾಜಿಕ ಮಾಧ್ಯಮಗಳು ಮಕ್ಕಳ ಕಲಿಕೆಗೆ, ಭಾಗವಹಿಸುವಿಕೆಗೆ ಅತ್ಯುತ್ತಮ ಅವಕಾಶಗಳನ್ನು ಒದಗಿಸುತ್ತವೆ. ಜತೆಗೆ ಸಮಸ್ಯೆಗಳನ್ನೂ ಸೃಷ್ಟಿಸುತ್ತವೆ. ಹಾಗಾಗಿ ಅಂತರ್ಜಾಲವನ್ನು ರಕ್ಷಣಾತ್ಮಕವಾಗಿ ಬಳಸುವ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಬೇಕು’ ಎಂದು ಅವರು ಹೇಳಿದ್ದಾರೆ.

‘ವಿದ್ಯುನ್ಮಾನ ವ್ಯವಸ್ಥೆ ಇಂದು ನಮ್ಮ ಬದುಕಿನ ಅತ್ಯುತ್ತಮವಾದ  ಹಾಗೂ ಅತ್ಯಂತ ಕೆಟ್ಟ ಭಾಗವಾಗಿ ಬದಲಾಗಿದೆ. ಪ್ರತಿ ಮಗುವಿಗೆ ಅಂತರ್ಜಾಲದ ಪ್ರಯೋಜನಗಳನ್ನು ತಲುಪಿಸುವಾಗ ಅದರ ನ್ಯೂನತೆಯನ್ನು ಮೀರುವುದು ಹೇಗೆ ಎಂಬ ಸವಾಲು ನಮ್ಮೆದುರಿದೆ’ ಎಂದು ಯುನಿಸೆಫ್‌ನ ಕಾರ್ಯಕಾರಿ ನಿರ್ದೇಶಕರಾದ ಅಂಥೋಣಿ ಲೇಕ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT