ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕೊಡಗಿನಲ್ಲೂ ವಾಹನ ದಟ್ಟಣೆ

Last Updated 12 ಡಿಸೆಂಬರ್ 2017, 7:30 IST
ಅಕ್ಷರ ಗಾತ್ರ

ವಿರಾಜಪೇಟೆ: ವೀರರಾಜೇಂದ್ರನಿಂದ ಸ್ಥಾಪನೆಗೊಂಡು ಸುಮಾರು 225 ವರ್ಷಗಳಾಗಿರುವ ಈ ಪಟ್ಟಣವನ್ನು ಇಂದು ಬಹುವಾಗಿ ಕಾಡುತ್ತಿರುವುದು ಸಂಚಾರ ಸಮಸ್ಯೆ. ಈ ಸಮಸ್ಯೆ ಕೇವಲ ಪಟ್ಟಣದ ನಿವಾಸಿಗಳನ್ನು ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಪ್ರವಾಸಿಗರನ್ನೂ ಕಾಡುತ್ತಿದೆ.

ದಕ್ಷಿಣ ಕೊಡಗಿನ ಕೇಂದ್ರಸ್ಥಾನ ವಿರಾಜಪೇಟೆಯಲ್ಲಿ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಅದಕ್ಕೆ ಕಾರಣ ಪಟ್ಟಣದ ಮೂಲಕ ಒಂದು ರಾಜ್ಯ ಹೆದ್ದಾರಿ ಹಾಗೂ ಮತ್ತೊಂದು ಅಂತರರಾಜ್ಯ ಹೆದ್ದಾರಿ ಹಾದುಹೋಗಿದ್ದರೂ ಅಗತ್ಯಕ್ಕೆ ತಕ್ಕಂತೆ ಪಟ್ಟಣದ ರಸ್ತೆಗಳು ವಿಸ್ತರಣೆ ಆಗದಿರುವುದು.

ಕನಿಷ್ಠ ಪಟ್ಟಣದ ಪ್ರಮುಖ ರಸ್ತೆಯಾದ ಗಡಿಯಾರ ಕಂಬದಿಂದ ಖಾಸಗಿ ಬಸ್‌ ನಿಲ್ದಾಣ– ಮಾಂಸ ಮಾರುಕಟ್ಟೆ– ದೊಡ್ಡಟ್ಟಿ ಚೌಕಿ– ಗಡಿಯಾರ ಕಂಬ... ಹೀಗೆ ಚೌಕಾಕಾರದಲ್ಲಿರುವ ಈ ರಸ್ತೆಯಾದರೂ ಇಂದಿನ ಅಗತ್ಯಕ್ಕೆ ತಕ್ಕಂತೆ ವಿಸ್ತರಣೆಯಾಗಿದ್ದರೆ, ಶೇ 80ರಷ್ಟು ಸಂಚಾರ ಸಮಸ್ಯೆ ನಿವಾರಣೆಯಾಗುತ್ತಿತ್ತು ಎಂಬುದು ಸ್ಥಳೀಯರ ಅಭಿಪ್ರಾಯ.

ಕೆಎಸ್‌ಆರ್‌ಟಿಸಿ ರಸ್ತೆ ಕೆಲವು ವರ್ಷಗಳ ಹಿಂದೆ ಸ್ವಲ್ಪಮಟ್ಟಿಗೆ ವಿಸ್ತರಣೆ ಆಗಿದ್ದರೂ, ಪಟ್ಟಣದಲ್ಲಿ ವಾಹನಗಳ ಸಂಚಾರ ಅಧಿಕಗೊಂಡಿರುವುದರಿಂದ ಈ ರಸ್ತೆಯಲ್ಲೂ ಇದೀಗ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿದೆ. ನೆರೆಯ ಕೇರಳ ರಾಜ್ಯಕ್ಕೆ ಸಾಗುವ ರಸ್ತೆಯು ಪಟ್ಟಣದ ಹೃದಯಭಾಗದಲ್ಲಿ ಹಾದುಹೋಗಿರುವುದು ಕೂಡ ಸಂಚಾರ ಸಮಸ್ಯೆ ಉಲ್ಬಣಗೊಳ್ಳಲು ಮತ್ತೊಂದು ಕಾರಣ ಎಂದು ಸ್ಥಳೀಯರು ಆಪಾದಿಸುತ್ತಾರೆ.

ಪಟ್ಟಣದ ಪ್ರಮುಖ ರಸ್ತೆಗಳು ತೀರ ಕಿರಿದಾಗಿರುವುದರಿಂದ ರಸ್ತೆಬದಿ ನಿಲುಗಡೆ ಮಾಡಿದ ವಾಹನಗಳೇ ರಸ್ತೆಯ ಅರ್ಧ ಭಾಗವನ್ನು ನುಂಗಿ ನಿಲ್ಲುತ್ತಿವೆ. ಇನ್ನುಳಿದ ಸ್ವಲ್ಪ ಭಾಗದಲ್ಲಿ ಬಸ್‌, ಲಾರಿ ಸೇರಿದಂತೆ ಇತರ ವಾಹನಗಳು ಸಂಚರಿಸಬೇಕು.

ಪಟ್ಟಣದ ಬದ್ರಿಯಾ ಜಂಕ್ಷನ್‌ನಿಂದ ಮಾಂಸ ಮಾರುಕಟ್ಟೆವರೆಗಿನ ಕಾಂಕ್ರೀಟ್‌ ರಸ್ತೆ ಹೊಂಡಬಿದ್ದು ಅದರಲ್ಲಿನ ಕಬ್ಬಿಣ ಸಲಾಕೆಗಳು ಹೊರಬಂದು ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಮಸ್ಯೆಯನ್ನು ತಂದೊಡ್ಡುತ್ತಿದೆ.

ಜತೆಗೆ, ಪಟ್ಟಣದ ಪ್ರಮುಖ ಭಾಗಗಳಲ್ಲಿ ಪಾದಚಾರಿ ರಸ್ತೆಯನ್ನು ಕೆಲವು ವರ್ತಕರು ಸಂಪೂರ್ಣ ಆಕ್ರಮಿಸಿ ಕೊಂಡಿರುವುದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಪಂಚಾಯಿತಿ ಕೆಲವು ಬಾರಿ ಕಾರ್ಯಾಚರಣೆ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.

‘ರಾಜ್ಯ ಹಾಗೂ ಅಂತರರಾಜ್ಯ ಹೆದ್ದಾರಿಗೆ ಪಟ್ಟಣ ವ್ಯಾಪ್ತಿಯಲ್ಲಿ ಎಷ್ಟು ಜಾಗವನ್ನು ಬಿಟ್ಟು ಕಟ್ಟಡ ಕಟ್ಟಬೇಕು ಎಂಬುದರಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ ಕೆಲವರು ಹಳೆ ಕಟ್ಟಡವನ್ನು ತೆರವುಗೊಳಿಸಲು ಮುಂದಾಗುತ್ತಿಲ್ಲ. ವಾಹನ ನಿಲುಗಡೆಗೆ ಸ್ಥಳಾವಕಾಶವಿದ್ದರೆ ತನ್ನಿಂದ ತಾನೇ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗುತ್ತದೆ ಎಂಬುದಕ್ಕೆ ಈಚೆಗೆ ವಿಸ್ತರಣೆಗೊಂಡ ಕೆಎಸ್‌ಆರ್‌ಟಿಸಿ ರಸ್ತೆಯೇ ಉತ್ತಮ ಉದಾಹರಣೆಯಾಗಿದೆ’ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳುತ್ತಾರೆ.

ತಪ್ಪದ ವಾಹನ ಪ್ರದಕ್ಷಿಣೆ!

ಅಗತ್ಯ ವಸ್ತುಗಳನ್ನು ಖರೀದಿ ಸಲು ವಿರಾಜಪೇಟೆ ಪಟ್ಟಣಕ್ಕೆ ಬರುವ ಗ್ರಾಹಕರು, ವಾಹನ ನಿಲುಗಡೆಗೆ ಸ್ಥಳಾವಕಾಶವಿಲ್ಲದೇ ಪಟ್ಟಣದಲ್ಲಿ ಪ್ರದಕ್ಷಿಣೆ ಹಾಕುವುದು ಕಂಡು ಬರುತ್ತದೆ.

ಪಟ್ಟಣದ ಮೂರ್ನಾಡು ರಸ್ತೆಯ ಜಂಕ್ಷನ್‌ನಿಂದ ಕೇವಲ 150 ಮೀ. ಅಂತರದಲ್ಲಿರುವ ದೊಡ್ಡಟ್ಟಿ ಚೌಕಿಗೆ ಬರಲು ಏಕಮುಖ ಸಂಚಾರ ವ್ಯವಸ್ಥೆಯಿಂದ ದ್ವಿಚಕ್ರ ವಾಹನವೂ ಸೇರಿದಂತೆ ಎಲ್ಲ ವಾಹನಗಳು ಸುಮಾರು 2 ಕಿ.ಮೀ ಬಳಸಿಕೊಂಡು ಬರಬೇಕು.

ಕಿರಿದಾಗಿರುವ ಈ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸದೇ ಪೊಲೀಸರಿಗೆ ಬೇರೆ ದಾರಿಯಿಲ್ಲವಾದರೂ, ನಿಜಕ್ಕೂ ಆಗಬೇಕಾದುದ್ದು ರಸ್ತೆಯ ವಿಸ್ತರಣೆ. ಆದರೆ, ಸಂಬಂಧಪಟ್ಟವರು ಈ ಬಗ್ಗೆ ತಲೆಕೆಡಿಸಿಕೊಂಡಿರುವಂತಿಲ್ಲ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ರಸ್ತೆ ವಿಸ್ತರಣೆ ವಿಚಾರ ಬಂದಾಗ ಪ.ಪಂ ಹಾಗೂ ಲೋಕೋಪಯೋಗಿ ಇಲಾಖೆಯು ಪರಸ್ಪರ ಬೆರಳು ತೋರುವ ಮೂಲಕ ನುಣುಚಿಕೊಳ್ಳುವ ಪ್ರಯತ್ನ ನಡೆಸುತ್ತಿವೆ
ಅನ್ವರ್‌ ಅಹ್ಮದ್‌, ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT