ಮಂಗಳವಾರ, ಮಾರ್ಚ್ 2, 2021
29 °C

ಶೋಷಣೆ ನಿಲ್ಲದಿರುವುದು ನಾಚಿಕೆಗೇಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೋಷಣೆ ನಿಲ್ಲದಿರುವುದು ನಾಚಿಕೆಗೇಡು

ಚಿಕ್ಕಬಳ್ಳಾಪುರ: ‘ಸಮಾಜದಲ್ಲಿನ ತಾರತಮ್ಯ, ಶೋಷಣೆ ತೊಡೆದು ಹಾಕಲು ಸಾಕಷ್ಟು ಮಹನೀಯರು ಶ್ರಮಿಸಿ, ಸಮಾನತೆಯ ಸಂದೇಶ ಸಾರಿದ್ದಾರೆ. ಆದರೆ ಇಂದಿಗೂ ನಮ್ಮಲ್ಲಿ ಶೋಷಣೆಯ ಮೂಲಕ ಮಾನವ ಹಕ್ಕುಗಳ ಉಲ್ಲಂಘಿಸುವ ಘಟನೆಗಳು ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಶಿಕ್ಷಣ ತಜ್ಞ ಪ್ರೋ. ಕೋಡಿ ರಂಗಪ್ಪ ಹೇಳಿದರು.

ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಪೊಲೀಸ್‌ ಇಲಾಖೆ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ ಸೋಮ‘ವಾರ ನಗರದಲ್ಲಿ ಆಯೋಜಿಸಿದ್ದ ‘ವಿಶ್ವ ಮಾನವ ಹಕ್ಕುಗಳ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪ್ರತಿಯೊಬ್ಬರೂ ಗೌರವಯುತವಾಗಿ ಬದುಕಲು ಸಂವಿಧಾನ ನಮಗೆ ಹಕ್ಕುಗಳನ್ನು ನೀಡಿದೆ. ಹೀಗಿದ್ದೂ, ಪ್ರತಿ ದಿನ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಭಿನ್ನಾಭಿಪ್ರಾಯವಿದ್ದರೂ ವ್ಯಕ್ತಿಯ ಘನತೆ, ವ್ಯಕ್ತಿತ್ವವನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಯಾವುದೇ ಜನಾಂಗವಿರಲಿ ಆತ್ಮ ಗೌರವ ಉಳಿಸಿಕೊಳ್ಳುವುದು ನಾಗರಿಕರ ಕೆಲಸವಾಗಬೇಕು’ ಎಂದು ತಿಳಿಸಿದರು.

ಪ್ರಭಾರ ಜಿಲ್ಲಾಧಿಕಾರಿ ಕೆ.ಎನ್‌.ಅನುರಾಧಾ ಮಾತನಾಡಿ, ‘ಒಬ್ಬ ವ್ಯಕ್ತಿಯನ್ನು ಮತ್ತೊಬ್ಬ ವ್ಯಕ್ತಿ ಶೋಷಣೆ ಮಾಡಬಾರದು ಎನ್ನುವ ಉದ್ದೇಶವಿಟ್ಟುಕೊಂಡು ವಿಶ್ವ ಸಂಸ್ಥೆ ಮಾನವ ಹಕ್ಕುಗಳನ್ನು ಜಾರಿಗೆ ತಂದಿದೆ. ಇವತ್ತು ಇಡೀ ವಿಶ್ವದಲ್ಲಿ ಎಲ್ಲಿ ಹೋದರೂ ಜನರು ತಮ್ಮ ಹಕ್ಕನ್ನು ಪಡೆಯಬಹುದಾಗಿದೆ. ಆದ್ದರಿಂದ ಇವತ್ತು ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕಿದೆ’ ಎಂದು ತಿಳಿಸಿದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್‌.ಎಚ್. ಕೋರಡ್ಡಿ ಮಾತನಾಡಿ, ‘ಸಮಾಜದಲ್ಲಿ ವ್ಯಕ್ತಿಯ ಘನತೆ, ಗೌರವ ಕಾಪಾಡಿಕೊಳ್ಳಲು ಮಾನವ ಹಕ್ಕುಗಳು ಅತ್ಯವಶ್ಯಕವಾಗಿವೆ. ಹಕ್ಕುಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಮಾಧ್ಯಮಗಳು ಹಾಗೂ ಸಂಘ ಸಂಸ್ಥೆಗಳು ಮುಂದಾಗಬೇಕು’ ಎಂದು ಹೇಳಿದರು.

‘ಭಾರತ ಅಭಿವೃದ್ಧಿ ವಿಷಯದಲ್ಲಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದ್ದರೂ ನಿರಂತರವಾಗಿ ಮಾನವ ಹಕ್ಕುಗಳ ಉಲ್ಲಂಘನೆ ಯಾಗುತ್ತಿವೆ.ಮಾನವ ಹಕ್ಕು ಚ್ಯುತಿಯಾಗದಂತೆ ನೋಡಿಕೊಳ್ಳುವುದು ಪ್ರತಿ ಇಲಾಖೆಯ ಜವಾಬ್ದಾರಿ. ಸಂವಿಧಾನದ ಅಡಿಯಲ್ಲಿ ಸಿಗಬೇಕಾದ ಹಕ್ಕುಗಳು ಸಿಗದಿದ್ದಾಗ ಜನರು ಕಾನೂನಾತ್ಮಕ ಹೋರಾಟ ಮಾಡಬೇಕು’ ಎಂದು ತಿಳಿಸಿದರು.

‘ಸಮಾಜದ ಅತ್ಯಂತ ದುರ್ಬಲ ವ್ಯಕ್ತಿಗೂ ಸಹ ರಕ್ಷಣೆ ನೀಡಿ ಗೌರವಯುತ ಮತ್ತು ಸ್ವಾಭಿಮಾನದ ಬದುಕು ರೂಪಿಸಿಕೊಳ್ಳುವ ಪರಿಸರ ನಿರ್ಮಾಣ ಮಾಡುವುದು ಮಾನವ ಹಕ್ಕುಗಳ ಉದ್ದೇಶವಾಗಿದೆ. ಅದೇ ರೀತಿ ಹಕ್ಕುಗಳನ್ನು ಪಡೆದುಕೊಳ್ಳುವಷ್ಟೇ ನಮ್ಮ ಕರ್ತವ್ಯಗಳನ್ನು ನಾವು ನಿರ್ವಹಿಸುವದು ಅಷ್ಟೇ ಮುಖ್ಯ ಅಂದಾಗ ಮಾತ್ರ ಆರೋಗ್ಯಕರ ಸಮಾಜ ಕಾಣಲು ಸಾಧ್ಯವಾಗುತ್ತದೆ’ ಎಂದರು.

ಮಾನವ ಹಕ್ಕುಗಳ ಆಯೋಗದ ರಿಜಿಸ್ಟ್ರಾರ್ ಪಿ.ಸೂರ್ಯ ನಾರಾಯಣ ಗೌಡ ಮಾತನಾಡಿ, ‘ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳನ್ನು ನೋಡಿ ಅಸೂಯೆ ಪಡಬಾರದು. ರ‍್ಯಾಗಿಂಗ್ ನಡೆದರೆ ಶಿಕ್ಷಕರು, ಪೊಲೀಸರ ಗಮನಕ್ಕೆ ತರಬೇಕು’ ಎಂದು ಹೇಳಿದರು.

‘ವಿದ್ಯಾರ್ಥಿಗಳಲ್ಲಿ ಶ್ರೀಮಂತ, ಬಡವ ಎಂಬ ಮೇಲು ಕೀಳು ಭಾವನೆ ಬರಬಾರದು. ಮತ್ತೊಬ್ಬರ ಹಕ್ಕಿಗೆ ಧಕ್ಕೆ ತರದಂತೆ ನಡೆದುಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣ ಕಂಡುಬಂದರೆ ಆಯೋಗಕ್ಕೆ ದೂರು ನೀಡಬೇಕು’ ಎಂದರು.

ನ್ಯಾಯಾಧೀಶರಾದ ದೇವರಾಜ್‌, ಲೋಕೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವಣ್ಣ ರೆಡ್ಡಿ, ವಕೀಲ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ತಮ್ಮೇಗೌಡ, ಪ್ರಧಾನ ಕಾರ್ಯದದರ್ಶಿ ವಿನೋದ್‌ ಕುಮಾರ್‌ ಇದ್ದರು.

* * 

ಎಲ್ಲಿಯವರೆಗೆ ಜನರು ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಮಾನವ ಹಕ್ಕುಗಳ ಉಲ್ಲಂಘನೆ ಮುಂದುವರಿಯುತ್ತಲೇ ಇರುತ್ತದೆ. ಎಸ್‌.ಎಚ್.ಕೋರಡ್ಡಿ, ನ್ಯಾಯಾಧೀಶ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.