ಭಾನುವಾರ, ಮಾರ್ಚ್ 7, 2021
22 °C

‘ಮಾತಿಗೆ ತಪ್ಪಿದ ದೇವೇಗೌಡ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮಾತಿಗೆ ತಪ್ಪಿದ ದೇವೇಗೌಡ’

ವಿಜಯಪುರ: ‘ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ಬಸವಣ್ಣನ ಹೆಸರು ಇಡಲು ಪ್ರಯತ್ನಿಸುವುದಾಗಿ ಅಧಿಕಾರದಲ್ಲಿದ್ದಾಗ ಭರವಸೆ ನೀಡಿದ್ದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು, ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ಬಸವ ಅಭಿಮಾನಿಗಳಿಗೆ ದ್ರೋಹ ಎಸಗಿದ್ದಾರೆ’ ಎಂದು ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಸಂಘಟಕ ದಯಾನಂದ ಸ್ವಾಮೀಜಿ ದೂರಿದರು.

‘ಬಸವಣ್ಣನ ಹೆಸರಿಡುವಂತೆ ಒತ್ತಾಯಿಸಿ ನಡೆಯುತ್ತಿದ್ದ ಹೋರಾಟದಲ್ಲಿ ಪಾಲ್ಗೊಂಡಿದ್ದ ದೇವೇಗೌಡ, ಚುನಾವಣೆ ಮುಗಿಯುತ್ತಿದ್ದಂತೆ, ಬೇಡಿಕೆ ಈಡೇರಿಸಲಾಗುವುದು ಎಂದು ಹೇಳಿದ್ದರು. ನಂತರ ಕೇಳಿದರೆ, ಆಯ್ತು, ಮುಂದೆ ನೋಡೋಣ ಎಂದರಾದರೂ, ನಾಮಕರಣ ಮಾಡಲಿಲ್ಲ’ ಎಂದು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.

‘ವಿರೋಧದ ನಡುವೆಯೂ ಟಿಪ್ಪು ಜಯಂತಿ ಆಚರಿಸುವ ರಾಜ್ಯ ಸರ್ಕಾರ, ಬಸವಣ್ಣನ ಹೆಸರನ್ನು ಗುಲ್ಬರ್ಗಾ ವಿ.ವಿ.ಗೆ ನಾಮಕರಣ ಮಾಡಲು ಮನಸ್ಸು ಮಾಡುತ್ತಿಲ್ಲ. ಆಡಳಿತ ನಡೆಸಿದ ಎಲ್ಲ ಪಕ್ಷಗಳು ಈ ವಿಷಯದಲ್ಲಿ ವಿಫಲ ಆಗಿವೆ’ ಎಂದು ಅವರು ಕಿಡಿಕಾರಿದರು.

‘ಶಿಫಾರಸು ಮಾಡಿ’: ‘ವಿಧಾನಸಭಾ ಚುನಾವಣೆಗೆ ಮುನ್ನವೇ ರಾಜ್ಯ ಸರ್ಕಾರ, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಇದು ಸಾಧ್ಯವಾಗದಿದ್ದರೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ’ ಎಂದರು.

‘ಲಿಂಗಾಯತ ಚಳವಳಿಯ ಮುಂಚೂಣಿಯಲ್ಲಿರುವ ರಾಜಕೀಯ ಮುಖಂಡರು ತಮ್ಮ ಸ್ವಾರ್ಥಕ್ಕಾಗಿ ಈ ವೇದಿಕೆ ಬಳಸಿಕೊಳ್ಳಬಾರದು. ಈ ಲೋಚನೆಗಳನ್ನು ಹೊಂದಿದ್ದರೆ, ಇಂದೇ ಕೈಬಿಡುವುದು ಒಳ್ಳೆಯದು. ಯಾವುದೇ ಕಾರಣಕ್ಕೂ ರಾಜಕೀಯವನ್ನು ಬೆಂಬಲಿಸುವುದಿಲ್ಲ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.