ಮಂಗಳವಾರ, ಮಾರ್ಚ್ 2, 2021
24 °C

ಆರೋಗ್ಯಕ್ಕಾಗಿ ಆಂಬುಪಾಡ್, ಸ್ಮಾರ್ಟ್‌ವಾಚ್

ಜಕ್ಕಣಿಕ್ಕಿ ಎಂ.ದಯಾನಂದ Updated:

ಅಕ್ಷರ ಗಾತ್ರ : | |

ಆರೋಗ್ಯಕ್ಕಾಗಿ ಆಂಬುಪಾಡ್, ಸ್ಮಾರ್ಟ್‌ವಾಚ್

ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಜಾಗತಿಕ ಉದ್ಯಮಶೀಲತಾ ಶೃಂಗಸಭೆಯಲ್ಲಿ (ಜಿಇಎಸ್‌) ಆಕರ್ಷಣೆಯಾಗಿದ್ದವರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮಗಳು ಇವಾಂಕ ಟ್ರಂಪ್‌. ಇವಾಂಕ ಭಾರತಕ್ಕೆ ಬರುವುದಕ್ಕಿಂತ ಹಲವು ದಿನಗಳ ಮೊದಲೇ ಸುದ್ದಿಯಲ್ಲಿದ್ದರು. ಈಕೆಯ ಭೇಟಿ ಮಹಿಳಾ ಉದ್ಯಮಿಗಳಲ್ಲಿ ಹೊಸ ಚೈತನ್ಯ ಮೂಡಿಸಿತ್ತು. ಇದರ ಜತೆಗೆ ಶೃಂಗಸಭೆಗೆ ವಿವಿಧ ರಾಜ್ಯವಲ್ಲದೆ ವಿದೇಶಗಳಿಂದ ಬಂದಿದ್ದ ನವ ಸಂಶೋಧಕರೂ ತಮ್ಮ ಹೊಸ ಹೊಸ ತಂತ್ರಜ್ಞಾನದೊಂದಿಗೆ ಪರಿಚಿತಗೊಂಡಿದ್ದರು.

ಜಿಇಎಸ್‌– 2017ರಲ್ಲಿ ಪ್ರದರ್ಶನಗೊಂಡ ಐದು ಪ್ರಮುಖ ಹೊಸ ಆಲೋಚನೆಗಳ ಯಂತ್ರಗಳಲ್ಲಿ ‘ಆಂಬುಪಾಡ್‌’ ಎಲ್ಲರ ಗಮನಸೆಳೆಯಿತು. ಇದರ ಹೆಸರೇ ಸೂಚಿಸುವಂತೆ ಇದೊಂದು ಆಂಬುಲೆನ್ಸ್‌. ಆದರೆ ಇದು ಪಾಡ್‌ ಟ್ಯಾಕ್ಸಿ ರೂಪದಲ್ಲಿದೆ. ಆದ್ದರಿಂದ ಇವೆರಡನ್ನು ಸೇರಿಸಿ ಆಂಬುಪಾಡ್‌ ಎಂದು ಕರೆಯಲಾಗುತ್ತದೆ. ಇದು ಮೂರು ಚಕ್ರದ ಆಂಬುಲೆನ್ಸ್‌. ತುರ್ತು ಸಂದರ್ಭದಲ್ಲಿ ಇದನ್ನು ಬೈಕ್‌ ಅಥವಾ ಸ್ಕೂಟರ್‌ಗೆ ಕಟ್ಟಿಕೊಂಡು ಕಿರಿದಾದ ದಾರಿಯಲ್ಲೂ ಸಾಗಿ ಆಸ್ಪತ್ರೆ ತಲುಪಬಹುದು. ಗ್ರಾಮೀಣ ಪ್ರದೇಶಗಳಲ್ಲಿನ ಕಚ್ಚಾ ರಸ್ತೆಗಳಿಗೆ ಇದು ಹೇಳಿ ಮಾಡಿಸಿದಂತಿದೆ.

‘ಆಂಬುಪಾಡ್‌’ ತಯಾರು ಮಾಡಿರುವುದು ಯಾವುದೇ ವಾಹನ ತಯಾರಕಾ ಕಂಪನಿಯಲ್ಲ. ಇದನ್ನು ಪುಣೆಯ ಆಂಬುಪಾಡ್‌ ಮೈಕ್ರೊ ಆಂಬುಲೆನ್ಸ್‌ ಮತ್ತು ಮೊಬೈಲ್‌ ಕ್ಲಿನಿಕ್‌ನ ಸಹ ಸಂಸ್ಥಾಪಕಿ ಮತ್ತು ನಿರ್ದೇಶಕಿ ಯಾಮಿನಿ ಲೋವಾನಿಯನ್‌ ಸಿದ್ಧಪಡಿಸಿದ್ದು.

‘ನಾವಿಲ್ಲಿಗೆ ಹೊಸ ಸಂಶೋಧನೆಯೊಂದಿಗೆ ಬಂದಿದ್ದೇವೆ. ಇದಕ್ಕೆ ಹಕ್ಕುಸ್ವಾಮ್ಯವನ್ನೂ ಪಡೆದಿದ್ದೇವೆ. ಇದು ತ್ರಿ ಇನ್‌ ಒನ್‌ ಆಂಬುಲೆನ್ಸ್‌. ಇದರಲ್ಲಿ ಅಗತ್ಯವಾದ ವೈದ್ಯಕೀಯ ಸಾಮಗ್ರಿಗಳು ಇರುತ್ತವೆ. ಮೊಬೈಲ್‌ ಕ್ಲಿನಿಕ್‌ನಂತಿರುವ ಇದರಲ್ಲಿ ಜೀವರಕ್ಷಕ ಸಾಧನಗಳಿವೆ’ ಎಂದು ವಿವರಿಸಿದ್ದಾರೆ ಯಾಮಿನಿ.

ಈ ಪಾಡ್‌ ಆಂಬುಲೆನ್ಸ್ ರೀತಿ ಯಾವಾಗ ಬಳಕೆಯಾಗುವುದಿಲ್ಲವೋ ಆಗ ಮೊಬೈಲ್‌ ಕ್ಲಿನಿಕ್ ಆಗಿ ಪರಿವರ್ತಿಸಬಹುದು. ಇದರಲ್ಲಿನ ಬೆಡ್‌ನಲ್ಲಿ ರೋಗಿಗಳನ್ನು ಮಲಗಿಸಿ ತಪಾಸಣೆ ಮಾಡಬಹುದು. ಆಮ್ಲಜನಕದ ಸಿಲಿಂಡರ್‌, ನೆಬುಲೈಜರ್‌ ಸೇರಿದಂತೆ  ರೋಗಿಯ ತಪಾಸಣೆ ಮಾಡಲು ಬೇಕಾದ ಅಗತ್ಯ ವೈದ್ಯಕೀಯ ವಸ್ತುಗಳೆಲ್ಲವೂ ಇದರಲ್ಲಿವೆ. ಟೆಲಿಮೆಡಿಸಿನ್‌ ಸೌಲಭ್ಯದಿಂದ ರೋಗಿಗಳು ಆಂಬುಪಾಡ್‌ ಒಳಗಿನಿಂದ ಹೊರಗೆ ಇರುವ ತಜ್ಞರ ಜತೆ ಮಾತನಾಡಬಹುದು.

ಯಾಮಿನಿಯವರು ಇದಕ್ಕೊಂದು ಆ್ಯಪ್‌ ಸಿದ್ಧಪಡಿಸಿದ್ದಾರೆ. ರೋಗಿಗಳ ಸಂಪೂರ್ಣ ದಾಖಲೆ, ರೋಗದ ಇತಿಹಾಸವನ್ನು ಇದಕ್ಕೆ ಫೀಡ್‌ ಮಾಡಿ ಅದನ್ನು ದೂರದಲ್ಲಿರುವ ವೈದ್ಯರಿಗೆ ಕಳುಹಿಸಬಹುದು. ಅಲ್ಲಿಂದಲೇ ಅವರು ರೋಗಕ್ಕೆ ಸಲಹೆ ಸೂಚನೆ ನೀಡಬಹುದು. ಆಂಬುಪಾಡ್‌ನಲ್ಲಿ ಪ್ರತಿ ದಿನ 30 ರಿಂದ 35 ರೋಗಿಗಳಿಗೆ ಚಿಕಿತ್ಸೆ ನೀಡಬಹುದು.

‘ಒಂದು ವಾಹನದ ಬೆಲೆ ₹4 ಲಕ್ಷ. 50 ಗ್ರಾಮಗಳಲ್ಲಿ ಇದರ ಸೌಲಭ್ಯ ಸಿಗುವಂತೆ ಕಾರ್ಯತಂತ್ರ ಸಿದ್ಧಪಡಿಸುತ್ತಿದ್ದೇವೆ. ತೆಲಂಗಾಣ ಸರ್ಕಾರ ನೆರವು ನೀಡಲು ಮುಂದೆ ಬಂದಿದ್ದರಿಂದ ಆಂಬುಪಾಡ್‌ ತಯಾರಿಕಾ ಘಟಕವನ್ನು ಹೈದರಾಬಾದ್‌ನಲ್ಲಿ ಸ್ಥಾಪಿಸುತ್ತೇವೆ’ ಎಂದು ಯಾಮಿನಿ ಹೇಳಿದ್ದಾರೆ.

ವ್ಯಸನ ಮುಕ್ತಿಗೆ ಹೊಸ ಸಾಧನ

ಯುವ ಸಂಶೋಧಕಿ ಚೆನ್ನೈನ ಅಕ್ಷಯಾ ಷಣ್ಮುಗಂ ಅವರು ಧೂಮಪಾನ ವ್ಯಸನ ತಡೆಯುವ ಸ್ಮಾರ್ಟ್‌ವಾಚ್ ಅನ್ನು ಸಂಶೋಧಿಸಿದ್ದಾರೆ. ಈ ತಂತ್ರಜ್ಞಾನಕ್ಕಾಗಿ ಇವರು 2018ರ ಫೋರ್ಬ್ಸ್‌ ನಿಯತಕಾಲಿಕದ 30 ವರ್ಷದೊಳಗಿನವರ 30 ಜನ ಸಾಧಕರ ಪಟ್ಟಿಯಲ್ಲಿ ಇತ್ತೀಚೆಗೆ ಸೇರಿದ್ದಾರೆ. ಲ್ಯೂಮೆ ಇಂಕ್‌ ಎಂಬ ಕಂಪನಿಯ ಸಿಇಒ ಆಗಿರುವ  29 ವರ್ಷದ ಅಕ್ಷಯಾ ಅವರ ಸಂಶೋಧನೆ ಈಗ ಇಡೀ ವಿಶ್ವದ ಗಮನಸೆಳೆದಿದೆ. ಆರೋಗ್ಯ ಕ್ಷೇತ್ರದಲ್ಲಿ 30 ವರ್ಷದೊಳಗಿನವರಲ್ಲಿ ಸಾಧನೆ ಮಾಡಿದ 30 ಜನರಲ್ಲಿ ಚೆನ್ನೈನ ವ್ಯಕ್ತಿಯೊಬ್ಬರು ಸೇರಿರುವುದು ಇದು ಎರಡನೇ ಬಾರಿ. ಈ ಮೊದಲು ನವಜಾತ ಶಿಶು ಆರೈಕೆ ತಂತ್ರಜ್ಞಾನ ಕ್ಷೇತ್ರದಲ್ಲಿನ ಸಾಧನೆಗಾಗಿ ಪಟ್ಟಿಯಲ್ಲಿ 27 ವರ್ಷದ ವಿವೇಕ್‌ ಕೊಪ್ಪಾರ್ಥಿ ಹೆಸರು ಸೇರಿತ್ತು.

ಲ್ಯೂಮೆ ಇಂಕ್‌ಗೆ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಹಣಕಾಸಿನ ನೆರವು ನೀಡುತ್ತಿದೆ. ಅಲ್ಲದೆ ಇದು ಅಮೆರಿಕದಲ್ಲಿ ವಿವಿಧ ಮೂಲದಿಂದ ಹಣವನ್ನೂ ಸಂಗ್ರಹಿಸುತ್ತದೆ.

ಚೆನ್ನೈನ ಕೋಡಂಬಾಕಂ ಮೀನಾಕ್ಷಿ ಸುಂದರರಾಜನ್ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಅಧ್ಯಯನ ಮುಗಿಸಿದ ನಂತರ ಅಕ್ಷಯಾ ಅವರು 2009ರಲ್ಲಿ ಉನ್ನತ ಅಧ್ಯಯನಕ್ಕಾಗಿ ಅಮೆರಿಕಕ್ಕೆ ತೆರಳಿದರು. ಆರೋಗ್ಯ ನಿರ್ವಹಣಾ ವ್ಯವಸ್ಥೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಸಂಶೋಧನೆ ಮಾಡಲಾರಂಭಿಸಿದರು. ಮೆಸಾಚುಸೆಟ್ಸ್‌ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ‍ಪಡೆದರು.

ಈ ವೇಳೆ ಧರಿಸಬಹುದಾದ ಆರೋಗ್ಯ ಸಾಧನಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದ ಅಭಿನಯ್ ಪರಾಟೆ ಎಂಬುವವರನ್ನು ಭೇಟಿಯಾದರು. ಸ್ವಲ್ಪ  ಸಮಯದ ನಂತರ  ಪರಾಟೆ ಮತ್ತು ಕೆಲವು ಪ್ರಾಧ್ಯಾಪಕರ ಸಲಹೆ ಪಡೆದು ಲ್ಯೂಮೆ ಇಂಕ್‌ ಸ್ಥಾಪಿಸಿದರು. ಇಲ್ಲಿಂದ ಇವರ ವ್ಯಸನ ಸಮಸ್ಯೆ ನಿವಾರಣೆಯ ಕಡೆಗಿನ ಆಸಕ್ತಿ ಇನ್ನಷ್ಟು ಹೆಚ್ಚಿತು.

ಸ್ಮಾರ್ಟ್‌ವಾಚ್‌ ಹೇಗೆ ಕೆಲಸ ಮಾಡುತ್ತದೆ: ಮೊದಲ ಎರಡು ವಾರ ಈ ಸ್ಮಾರ್ಟ್‌ವಾಚ್‌ ಅನ್ನು ವ್ಯಸನಿಗಳು ಧರಿಸಿ ಎಂದಿನಂತೆ ತಮ್ಮ ಅಭ್ಯಾಸವನ್ನು ಮಾಡಬಹುದು. ಉದಾಹರಣೆಗೆ ಧೂಮಪಾನ, ಮದ್ಯಪಾನ, ಗುಟಕಾ ಜಗಿಯುವುದು ಇತ್ಯಾದಿಯನ್ನು ಮಾಡಬಹುದು. ಎರಡು ವಾರ ಸ್ಮಾರ್ಟ್ ವಾಚ್‌, ಧೂಮಪಾನಿಗಳ ಸಂ‍ಪೂರ್ಣ ನಡವಳಿಕೆ ಮೇಲೆ ನಿಗಾ ವಹಿಸುತ್ತದೆ. ಯಾವ ಅವಧಿಯಲ್ಲಿ ಧೂಮಪಾನ ಮಾಡುತ್ತಾರೆ, ಎಷ್ಟು ಮಾಡುತ್ತಾರೆ, ಹೇಗೆ ಮಾಡುತ್ತಾರೆ ಎಂಬ ಅಂಶಗಳನ್ನು ಅದು ಗಮನಿಸುತ್ತದೆ. ಎರಡು ವಾರದ  ನಂತರ ಧೂಮಪಾನಿ ಸಿಗರೇಟ್‌ಗೆ ಬೆಂಕಿಕಡ್ಡಿ ಗೀರುವ ಆರು ನಿಮಿಷ ಮೊದಲು ಧೂಮಪಾನ ಮಾಡದಂತೆ ಎಚ್ಚರಿಕೆ ನೀಡುತ್ತದೆ. ಈ ಸಾಧನ ಮುಂದಿನ ವರ್ಷ ಮಾರುಕಟ್ಟೆಗೆ ಬರಲಿದೆ.

‘ನಾವು ಕೆಲವು ಕಾರ್ಪೊರೇಟ್‌ ಕಂಪನಿಗಳ ಜತೆ ಮಾತನಾಡಿ ಅಲ್ಲಿನ ಉದ್ಯೋಗಿಗಳಲ್ಲಿರುವ ವ್ಯಸನಗಳ ಬಗ್ಗೆ ಅಧ್ಯಯನ ಮಾಡಿದೆವು. ಅಲ್ಲಿ ಸ್ಮಾರ್ಟ್‌ ವಾಚ್‌ ಶೇ 95ರಷ್ಟು ಮುನ್ನೆಚ್ಚರಿಕೆ ನೀಡಿದೆ’ ಎನ್ನುತ್ತಾರೆ ಅಕ್ಷಯಾ.

***

‘ ಫೋರ್ಬ್ಸ್‌ ಪಟ್ಟಿಯಲ್ಲಿ ಹೆಸರು ಸೇರಿರುವುದು ದೊಡ್ಡ ಗೌರವದಂತೆ. ಆರೋಗ್ಯ ಕ್ಷೇತ್ರದಲ್ಲಿ ಸಂಶೋಧನೆಗೆ ಸಾಕಷ್ಟು ಅವಕಾಶಗಳಿವೆ. ಈಗ ಈ ಕ್ಷೇತ್ರಕ್ಕೆ ಇನ್ನಷ್ಟು ಕೊಡುಗೆ ನೀಡುವ ಉತ್ಸಾಹ ಬಂದಿದೆ. ಈ ಸಾಧನ ಉತ್ತಮ ಜೀವನಶೈಲಿಗೆ ಅನುಕೂಲವಾಗಲಿದೆ.

ಅಕ್ಷಣ ಅಕ್ಷಯ ಷಣ್ಮುಗಂ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.