ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಖಾತೆಗೆ ಆಧಾರ್‌, ಪ್ಯಾನ್‌ ಗಡುವು ಮಾರ್ಚ್‌ 31

Last Updated 13 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಬ್ಯಾಂಕ್‌ ಖಾತೆಗಳಿಗೆ ಪ್ಯಾನ್‌ ಮತ್ತು ಆಧಾರ್‌ ಸಂಖ್ಯೆಗಳನ್ನು ಜೋಡಣೆ ಮಾಡಲು ನಿಗದಿ ಪಡಿಸಿದ್ದ ಗಡುವನ್ನು ಕೇಂದ್ರ ಸರ್ಕಾರ 2018ರ ಮಾರ್ಚ್‌ 31ರವರೆಗೆ ವಿಸ್ತರಿಸಿದೆ. ಇದಕ್ಕೂ ಮುನ್ನ ಡಿಸೆಂಬರ್‌ 31ರ ಗಡುವು ವಿಧಿಸಲಾಗಿತ್ತು.

ಈ ಸಂಬಂಧ ಹಣಕಾಸು ಸಚಿವಾಲಯ ಮಂಗಳವಾರ ತಡರಾತ್ರಿ ಅಧಿಸೂಚನೆ ಹೊರಡಿಸಿದೆ.

ಡಿ.31 ಗಡುವನ್ನು ವಾಪಸ್ ಪಡೆಯುವುದಕ್ಕಾಗಿ ಸಚಿವಾಲಯವು ‘ಅಕ್ರಮ ಹಣ ವರ್ಗಾವಣೆ ಕಾಯ್ದೆ ನಿಯಮಗಳು–2005’ ಅನ್ನು ಪರಿಷ್ಕರಿಸಿದೆ.

ಬ್ಯಾಂಕ್‌ ಖಾತೆ ತೆರೆಯುವ ಸಂದರ್ಭದಲ್ಲಿ ಆಧಾರ್‌ ಸಂಖ್ಯೆ ನೀಡುವುದನ್ನು ಕಡ್ಡಾಯಗೊಳಿಸಿ ಹಣಕಾಸು ಸಚಿವಾಲಯ ಈ ವರ್ಷಾರಂಭದಲ್ಲಿ ಆದೇಶ ಹೊರಡಿಸಿತ್ತು.

ಈಗಾಗಲೇ ಬ್ಯಾಂಕ್‌ ಖಾತೆ ಹೊಂದಿರುವವರು ಡಿಸೆಂಬರ್‌ 31ರ ಒಳಗಾಗಿ ಆಧಾರ್‌ ಸಂಖ್ಯೆಯ ವಿವರಗಳನ್ನು ನೀಡುವಂತೆ ಸೂಚಿಸಿತ್ತು. ಆಧಾರ್‌ ಜೋ‌ಡಣೆ ಮಾಡದಿದ್ದರೆ ಖಾತೆ ಸ್ಥಗಿತಗೊಳ್ಳಲಿದೆ ಎಂದೂ ಹೇಳಿತ್ತು.

ಜನರು ಬ್ಯಾಂಕ್‌ಗಳಲ್ಲಿ ಹೊಸದಾಗಿ ಖಾತೆ ತೆರೆದ ಪಕ್ಷದಲ್ಲಿ ಆರು ತಿಂಗಳ ಒಳಗಾಗಿ ಆಧಾರ್‌ ವಿವರಗಳನ್ನು ಸಲ್ಲಿಸುವಂತೆಯೂ ಸೂಚಿಸಲಾಗಿತ್ತು. ಈ ನಿಯಮದಲ್ಲಿ ಏನೂ ಬದಲಾವಣೆ ಮಾಡಲಾಗಿಲ್ಲ.

ಜೀವ ವಿಮೆ ಪಾಲಿಸಿಗಳು ಮತ್ತು ಮ್ಯೂಚ್ಯುವಲ್‌ ಫಂಡ್‌ಗಳಿಗೆ ಆಧಾರ್‌ ಜೋಡಣೆ ಮಾಡುವ ಬಗ್ಗೆ ಹೊಸ ಅಧಿಸೂಚನೆಯಲ್ಲಿ ಯಾವುದೇ ಪ್ರಸ್ತಾಪ ಇಲ್ಲ. ಹಾಗಾಗಿ ಇದಕ್ಕೆ ಡಿಸೆಂಬರ್‌ 31 ಕೊನೆಯ ದಿನ.

ಆಧಾರ್‌ ಸಂಖ್ಯೆಯನ್ನು ಪ್ಯಾನ್‌ನೊಂದಿಗೆ ಜೋಡಣೆ ಮಾಡುವ ಗಡುವನ್ನು ಮಾರ್ಚ್‌ 31ರವರೆಗೆ ವಿಸ್ತರಿಸಿ ಹಣಕಾಸು ಸಚಿವಾಲಯ ಕಳೆದ ವಾರ ಆದೇಶ ಹೊರಡಿಸಿತ್ತು.

‘ಸುಪ್ರೀಂ’ನಲ್ಲಿ ಇಂದು ವಿಚಾರಣೆ
ಸರ್ಕಾರದ ವಿವಿಧ ಯೋಜನೆಗಳಿಗೆ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಆಧಾರ್‌ ಸಂಖ್ಯೆ ಜೋಡಿಸುವುದನ್ನು ಕಡ್ಡಾಯಗೊಳಿಸಿರುವುದರ ವಿರುದ್ಧ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಗುರುವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ.

ಮಧ್ಯಾಹ್ನ 2 ಗಂಟೆಗೆ ವಿಚಾರಣೆ ನಡೆಯಲಿದೆ.

ಆಧಾರ್‌ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಣೆ ಮಾಡಲು ನಿಗದಿಪಡಿಸಲಾಗಿರುವ ಗಡುವನ್ನು 2018ರ ಮಾರ್ಚ್‌ 31ರವರೆಗೆ ವಿಸ್ತರಿಸಲು ಸಿದ್ಧವಿರುವುದಾಗಿ ಕೇಂದ್ರ ಸರ್ಕಾರ ಡಿ.7ರಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT