ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ಗೆ ‘ಮಾಡು ಇಲ್ಲವೇ ಮಡಿ’ ಪಂದ್ಯ

ಆ್ಯಷಸ್‌ ಟೆಸ್ಟ್‌ : ಸರಣಿ ಜಯದ ಮೇಲೆ ಆಸ್ಟ್ರೇಲಿಯಾ ತಂಡದ ಆಟಗಾರರ ಕಣ್ಣು
Last Updated 13 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಪರ್ತ್‌: ಈಗಾಗಲೇ ಎರಡು ಪಂದ್ಯಗಳಲ್ಲಿ ಸೋತಿರುವ ಇಂಗ್ಲೆಂಡ್ ಬಳಗವು ಆ್ಯಷಸ್‌ ಟೆಸ್ಟ್ ಸರಣಿಯ ಮೂರನೇ ಪಂದ್ಯ ಜಯಿಸಲೇಬೇಕಾದ ಅನಿವಾರ್ಯತೆಯಲ್ಲಿದೆ.

ಗುರುವಾರದಿಂದ ಪರ್ತ್‌ನಲ್ಲಿ ಆರಂಭವಾಗಲಿರುವ ಮೂರನೇ ಪಂದ್ಯ ಎರಡೂ ತಂಡಗಳಿಗೆ ಮಹತ್ವವಾದದ್ದು. ಹಿಂದಿನ ಎರಡು ಪಂದ್ಯಗಳನ್ನು ಗೆದ್ದು ವಿಶ್ವಾಸದ ಬುಗ್ಗೆಯಾಗಿರುವ ಆಸ್ಟ್ರೇಲಿಯಾ ತಂಡ ಸರಣಿ ಗೆದ್ದುಕೊಳ್ಳುವ ಕನಸಿನೊಂದಿಗೆ ಕಣಕ್ಕಿಳಿಯಲಿದೆ.

ಸರಣಿಯಲ್ಲಿ ಜಯದ ವಿಶ್ವಾಸ ಉಳಿಸಿಕೊಳ್ಳಬೇಕಾದರೆ ಇಂಗ್ಲೆಂಡ್ ತಂಡ ಈ ಪಂದ್ಯ ಗೆಲ್ಲಲೇಬೇಕಿದೆ. ಹಿಂದಿನ ಪಂದ್ಯಗಳ ತಪ್ಪುಗಳನ್ನು ತಿದ್ದಿಕೊಂಡು ಆಡಲು ಈ ತಂಡ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಲವು ಬದಲಾವಣೆ ಮಾಡಿಕೊಂಡಿದೆ. ಆದರೆ ತಂಡದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ನಾಯಕ ಜೋ ರೂಟ್ ಆಟಗಾರರಿಗೆ ಕಿವಿ ಮಾತು ಹೇಳಿದ್ದಾರೆ. ‘ಅಂಗಳದಿಂದ ಹೊರಗಿನ ವಿವಾದಗಳಿಂದ ಆಟಗಾರರು ದೂರ ಉಳಿಯಬೇಕು. ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ತಂಡಕ್ಕಾಗಿ ನಾವು ಆಯ್ಕೆಯಾಗಿರುವ ಉದ್ದೇಶವನ್ನು ಮರೆಯಬಾರದು. ನಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಲು ಇದು ಉತ್ತಮ ಅವಕಾಶ’ ಎಂದು ರೂಟ್ ಹೇಳಿದ್ದಾರೆ.

‘ಸರಣಿಯಲ್ಲಿ 2–0ಯಲ್ಲಿ ಹಿಂದೆ ಉಳಿದಿದ್ದೇವೆ. ಮುಂದಿನ ಪಂದ್ಯ ಗೆದ್ದುಕೊಂಡರೆ ನಮ್ಮ ಹಾದಿ ಸುಗಮವಾಗಲಿದೆ. ದೊಡ್ಡ ಇನಿಂಗ್ಸ್ ಕಟ್ಟುವ ಹೊಣೆಗಾರಿಗೆ ಬ್ಯಾಟ್ಸ್‌ಮನ್‌ಗಳ ಮೇಲಿದೆ’ ಎಂದು ರೂಟ್‌ ಆಟಗಾರರಲ್ಲಿ ವಿಶ್ವಾಸ ತುಂಬಿದ್ದಾರೆ.

‘ಕೆಲವು ದಿನಗಳಿಂದ ಇಂಗ್ಲೆಂಡ್‌ ತಂಡದ ಆಟಗಾರರು ವಿವಾದಕ್ಕೆ ಸಿಲುಕಿದ್ದಾರೆ. ತಂಡದ ಆಟಕ್ಕಿಂತ ಹೆಚ್ಚಾಗಿ ಈ ವಿಷಯಗಳು ಚರ್ಚೆಯಾಗುತ್ತಿವೆ. ಇದರಿಂದ ನನಗೆ  ನೋವಾಗಿದೆ. ಈ ಪಂದ್ಯ ಗೆದ್ದರೆ ನಮ್ಮ ಆಟದ ಬಗ್ಗೆ ಚರ್ಚೆ ಆರಂಭವಾಗಲಿದೆ’ ಎಂದು ರೂಟ್ ಹೇಳಿದ್ದಾರೆ.

ಬ್ಯಾಟಿಂಗ್ ವೈಫಲ್ಯ: ಇಂಗ್ಲೆಂಡ್ ತಂಡ ಬ್ಯಾಟಿಂಗ್ ವೈಫಲ್ಯದಿಂದ ಹೊರಗೆ ಬರಬೇಕಿದೆ. ಆಡಿರುವ ಎರಡೂ ಪಂದ್ಯಗಳಿಂದ ಇಂಗ್ಲೆಂಡ್ ತಂಡದಲ್ಲಿ ಒಂದೂ ಶತಕ ದಾಖಲಾಗಿಲ್ಲ. ದೊಡ್ಡ ಜೊತೆಯಾಟದ ಕೊರತೆಯಿಂದ ತಂಡ ಹಿನ್ನಡೆ ಅನುಭವಿಸಿದೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ಜೇಮ್ಸ್‌ ವಿನ್ಸ್ ದಾಖಲಿಸಿದ್ದ 83 ರನ್‌ಗಳು ಸರಣಿಯಲ್ಲಿ ಈವರೆಗೆ ಇಂಗ್ಲೆಂಡ್‌ ತಂಡದ ಆಟಗಾರನ ವೈಯಕ್ತಿಕ ಅಧಿಕ ರನ್‌ ಎನಿಸಿದೆ. ಅಲಸ್ಟೇರ್ ಕುಕ್ ಹಾಗೂ ಮಾರ್ಕ್‌ ಸ್ಟೋನ್‌ಮನ್ ಉತ್ತಮ ಆರಂಭ ನೀಡುವಲ್ಲಿ ವಿಫಲರಾಗಿದ್ದಾರೆ.

ಬೌಲಿಂಗ್‌ನಲ್ಲಿ ಜೇಮ್ಸ್‌ ಆ್ಯಂಡರ್ಸನ್ ಅವರನ್ನು ಹೊರತುಪಡಿಸಿ ಉಳಿದ ಆಟಗಾರರು ಪರಿಣಾಮಕಾರಿ ದಾಳಿ ನಡೆಸುತ್ತಿಲ್ಲ. ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಕೇವಲ 138ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಆಂಡರ್ಸನ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. 43 ರನ್‌ಗಳಿಗೆ 5 ವಿಕೆಟ್ ಕಬಳಿಸಿದ್ದು ಸರಣಿಯಲ್ಲಿ ಇಂಗ್ಲೆಂಡ್‌ ಬೌಲರ್‌ಗಳ ಉತ್ತಮ ಸಾಧನೆಯಾಗಿದೆ.

ಆದರೆ ಆಸ್ಟ್ರೇಲಿಯಾ ತಂಡ ತವರಿನ ಅಭಿಮಾನಿಗಳ ಎದುರು ವಿಶ್ವಾಸದಿಂದ ಆಡಿದೆ. ಶಾನ್‌ ಮಾರ್ಷ್‌, ಸ್ಟೀವನ್ ಸ್ಮಿತ್‌ ಶತಕದ ಆಸರೆ ನೀಡಿದ್ದಾರೆ. ಮಿಷೆಲ್ ಸ್ಟಾರ್ಕ್‌ ಬೌಲಿಂಗ್‌ನಲ್ಲಿ ಮಿಂಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT