ಶನಿವಾರ, ಮಾರ್ಚ್ 6, 2021
19 °C

7 ಕಂಪೆನಿಗಳ ಜತೆ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

7 ಕಂಪೆನಿಗಳ ಜತೆ ಒಪ್ಪಂದ

ಬೆಂಗಳೂರು: ರಾಜ್ಯ ಸರ್ಕಾರವು ‘2030 ವಾಟರ್‌ ರಿಸೋರ್ಸ್‌ ಗ್ರೂಪ್‌’ ಕೈಗೆತ್ತಿಕೊಂಡಿರುವ ‘ರಾಮತಳ ಮಾರ್ಕೆಟ್‌ ಲಿಂಕೇಜ್‌’ ಯೋಜನೆಗೆ ಕೈಜೋಡಿಸಲು 7 ಖಾಸಗಿ ಕಂಪನಿಗಳು ಬುಧವಾರ ನಗರದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದವು.

ರೈತರಿಗೆ ತುಂತುರು ಹನಿ ನೀರಾವರಿ ಸೌಲಭ್ಯ ಒದಗಿಸಲು ಮತ್ತು ಈ ಪ್ರದೇಶದಲ್ಲಿ ಬೆಳೆದ ಬೆಳೆಗಳನ್ನು ಖಾಸಗಿ ಕಂಪನಿಗಳು ನೇರವಾಗಿ ಖರೀದಿಸಲು ಅನುಕೂಲವಾಗುವಂತೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ರಾಮತಳದಲ್ಲಿ ಈ ಯೋಜನೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ.

ಮಹಾ ಅಗ್ರಿಕಲ್ಚರ್‌ ಪ್ರಾಡಕ್ಟ್ಸ್ ಪ್ರೈವೇಟ್‌ ಲಿಮಿಟೆಡ್‌, ರಾವಿಸ್‌ ನ್ಯೂಟ್ರಿಷನ್‌, ಪಳಿನಿಯಪ್ಪ ಪೌಲ್ಟ್ರಿ ಫಾರ್ಮ್, ಕೆನ್‌ ಅಗ್ರಿಟೆಕ್‌ ಪ್ರೈವೇಟ್‌ ಲಿಮಿಟೆಡ್‌, ರೀಟ್ಜಲ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌, ಜೀವಭೂಮಿ ಕಂಪೆನಿಗಳ ಪ್ರತಿನಿಧಿಗಳು ಸರ್ಕಾರದ ಜತೆಗಿನ ಒಪ್ಪಂದಕ್ಕೆ ಸಹಿ ಹಾಕಿದರು.

ಕೃಷ್ಣ ಭಾಗ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌, ಕೃಷಿ ಮತ್ತು ತೋಟಗಾರಿಗೆ ಇಲಾಖೆ ಕಾರ್ಯದರ್ಶಿ ಮಹೇಶ್ವರ್‌ ರಾವ್‌ ಸರ್ಕಾರದ ಪರವಾಗಿ ಒಪ್ಪಂದಕ್ಕೆ ಸಹಿ ಮಾಡಿದರು. ಕಳೆದ ಜುಲೈನಲ್ಲಿ 6 ಕಂಪನಿಗಳ ಜತೆಗೆ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು.

‘ರಾಮತಳ’ ಯೋಜನೆಗೆ ರಾಜ್ಯ ಸರ್ಕಾರ 15,000 ರೈತರನ್ನು ಒಳಗೊಳ್ಳುವಂತೆ ₹800 ಕೋಟಿ ವಿನಿಯೋಗಿಸಿ 24,000 ಹೆಕ್ಟೇರ್‌ಗೆ ತುಂತುರು ಹನಿ ನೀರಾವರಿ ಸೌಲಭ್ಯ ಕಲ್ಪಿಸಿದೆ. ಈ ಪ್ರದೇಶದಲ್ಲಿ ರೈತರು ಬೆಳೆಯುವ ಬೆಳೆಗಳಿಗೆ ಉತ್ತಮ ಬೆಲೆ ಮತ್ತು ಮಾರುಕಟ್ಟೆ ಸೌಲಭ್ಯವನ್ನೂ ಒದಗಿಸಲು ‘ಡ್ರಿಪ್‌ ಟು ಮಾರ್ಕೆಟ್‌’ ಪರಿಕಲ್ಪನೆಯಡಿ ಖಾಸಗಿ ಕಂಪನಿಗಳು ರೈತರ ಬಳಿಗೇ ಹೋಗಿ ಸಂಸ್ಕರಣಾ ಘಟಕ, ಶೈತ್ಯಾಗಾರ ಮತ್ತು ಕಚೇರಿ ಆರಂಭಿಸಿ, ಬೆಳೆಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗುತ್ತಿದೆ.

ಅಂಜುಂ ಪರ್ವೇಜ್‌ ಮಾತನಾಡಿ, ‘ಕೊಪ್ಪಳದಲ್ಲಿ 1.12 ಲಕ್ಷ ಹೆಕ್ಟೇರ್‌ ಭೂಮಿಯನ್ನು ತುಂತುರು ಹನಿ ನೀರಾವರಿಗೆ ಒಳಪಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ. 7ರಿಂದ 8 ವರ್ಷಗಳಲ್ಲಿ 5 ಲಕ್ಷ ಹೆಕ್ಟೇರ್‌ ಭೂಮಿ ತುಂತುರು ಹನಿ ನೀರಾವರಿಗೆ ಒಳಪಡಿಸಲು ಸುಮಾರು ₹28,000 ಕೋಟಿ ವಿನಿಯೋಗಿಸುವ ಯೋಜನೆ ಹೊಂದಿದ್ದೇವೆ’ ಎಂದು ತಿಳಿಸಿದರು.

‘ರೈತರು ಮತ್ತು ಖಾಸಗಿ ಕಂಪನಿಗಳ ಪರಸ್ಪರ ಸಂವಹನ ಮತ್ತು ಸಂಪರ್ಕಕ್ಕೆ ‘ನಮ್ಮ ಡ್ರಿಪ್‌’ ಆನ್‌ಲೈನ್‌ ಪೋರ್ಟಲ್‌ ರೂಪಿಸಲಾಗುತ್ತಿದೆ. ಈ ಪೋರ್ಟಲ್‌ 6 ತಿಂಗಳೊಳಗೆ ಸಿದ್ಧವಾಗಲಿದ್ದು, ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ. ಖಾಸಗಿ ಕಂಪನಿಗಳು ರೈತರನ್ನು ನೇರವಾಗಿ ಸಂಪರ್ಕಿಸಲು, ರೈತರು ತಮಗೆ ಬೇಕಾದ ರಸಗೊಬ್ಬರ, ಬಿತ್ತನೆ ಬೀಜ, ಯಂತ್ರೋಪಕರಣ ಖರೀದಿಸಲು ನೇರವಾಗಿ ಕಂಪನಿಗಳನ್ನು ಸಂಪರ್ಕಿಸಲು ಈ ಪೋರ್ಟಲ್‌ ವೇದಿಕೆ ಒದಗಿಸಲಿದೆ’ ಎಂದು ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.