ಶುಕ್ರವಾರ, ಫೆಬ್ರವರಿ 26, 2021
30 °C

ವೀರಶೈವ–ಲಿಂಗಾಯತ ಎರಡೂ ಒಂದೇ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೀರಶೈವ–ಲಿಂಗಾಯತ ಎರಡೂ ಒಂದೇ

ಗದಗ: ‘ವೀರಶೈವ–ಲಿಂಗಾಯತ ಬೇರೆ ಅಲ್ಲ, ಅವೆರಡೂ ಒಂದೇ. ವಿಶ್ವವೇ ನಮ್ಮ ಬಂಧು, ಸ್ವತಂತ್ರ ಧರ್ಮದ ಮನ್ನಣೆ ಸಾಧ್ಯವೇ ಇಲ್ಲ’ ಎಂದು ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶ್ರೀ ಹೇಳಿದರು.

ಇಲ್ಲಿನ ಗಂಜಿ ಬಸವೇಶ್ವರ ದೇವಸ್ಥಾನದಿಂದ ಪೇಟೆ ವೀರಭದ್ರೇಶ್ವರ ದೇವಸ್ಥಾನದವರೆಗೆ ಗುರುವಾರ ನಡೆದ ಜನ ಜಾಗೃತಿ ಪಾದಯಾತ್ರೆಯಲ್ಲಿ ಭಾಗವಹಿಸಿ, ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ಗುರು– ವಿರಕ್ತರೊಂದಿಗೆ, ಸನಾತನ ಧರ್ಮ ವೀರಶೈವ– ಲಿಂಗಾಯತ ಛಿದ್ರ ಆಗದಂತೆ ರಕ್ಷಿಸುವುದು ಕೂಡ ಭಕ್ತರದೂ ಕರ್ತವ್ಯ. ಈ ಹಿನ್ನೆಲೆಯಲ್ಲಿ ಡಿ. 24ರಂದು ನಗರದಲ್ಲಿ ನಡೆಯುವ ವೀರಶೈವ–ಲಿಂಗಾಯತ ಸಮನ್ವಯ ಸಮಾವೇಶದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕು’ ಎಂದರು.

800ಕ್ಕೂ ಹೆಚ್ಚು ಮಹಿಳೆಯರು ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದರು. ‘ವೀರಶೈವ–ಲಿಂಗಾಯತ ಒಂದು; ವಿಶ್ವವೇ ನಮ್ಮ ಬಂಧು’, ‘ಮಾನವ ಧರ್ಮಕ್ಕೆ ಜಯವಾಗಲಿ’, ‘ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’, ‘ಸ್ವಾಭಿಮಾನಿಗಳೇ ಸ್ವಾಭಿಮಾ ನದಿಂದ ಬನ್ನಿ’ ಎಂಬ ಘೋಷಣೆ ಬರೆದಿದ್ದ ಫಲಕಗಳನ್ನು ಭಕ್ತರು ಹಿಡಿದುಕೊಂಡಿದ್ದರು. ಇವರನ್ನು ಹಿಂಬಾಲಿಸಿದ ಮಠಾಧೀಶರು ಧರ್ಮ ಜಾಗೃತಿ ಮೂಡಿಸಿದರು. ಪಾದಯಾತ್ರೆ 19, 20, 21, 24, 25ನೇ ವಾರ್ಡ್‌ಗಳ ವ್ಯಾಪ್ತಿಯ ವಿಭೂತಿ ಓಣಿ, ಖಾನತೋಟ, ಹಳೆ ಚವಡಿಕೂಟ, ಹಳೆ ಸರಾಫ್‌ ಬಜಾರ್‌ ಮೂಲಕ ಸಾಗಿ ಪೇಟೆ ವೀರಭದ್ರೇಶ್ವರ ದೇವಸ್ಥಾನದ ಆವರಣ ತಲುಪಿತು. ಬಳಿಕ ಅಲ್ಲಿ ಬಹಿರಂಗ ಸಭೆ ನಡೆಸಲಾಯಿತು.

ಹಾಲಕೇರಿ ಅನ್ನದಾನೇಶ್ವರ ಮಠದ ಸಂಗನಬಸವ ಸ್ವಾಮೀಜಿ, ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಸ್ವಾಮೀಜಿ, ಅಭಿನವ ಬೂದೀಶ್ವರ ಸ್ವಾಮೀಜಿ, ಅಡ್ನೂರಿನ ಪಂಚಾಕ್ಷರ ಶಿವಾಚಾರ್ಯ ಶ್ರೀ, ಮಣಕವಾಡದ ಸಿದ್ಧರಾಮ ದೇವರು, ತುಪ್ಪದ ಕುರಹಟ್ಟಿಯ ಶ್ರೀ, ಕುಂಟೋಜಿ ಶ್ರೀ, ಅಬ್ಬಿಗೇರಿ ಶ್ರೀ, ನರೇಗಲ್ ಶ್ರೀ, ಸೊರಟೂರ ಫಕ್ಕೀರೇಶ್ವರ ಶ್ರೀ ಭಾಗವಹಿಸಿದ್ದರು. ಅನಿಲ ಅಬ್ಬಿಗೇರಿ, ವಿರೂಪಾಕ್ಷಪ್ಪ ಅಕ್ಕಿ, ಬಸಣ್ಣ ಮಲ್ಲಾಡದ, ಚಂದ್ರು ಬಾಳಿಹಳ್ಳಿಮಠ ಇದ್ದರು.

ಇಂದಿನ ಪಾದಯಾತ್ರೆ: ಡಿ. 15ರಂದು ಪಾದಯಾತ್ರೆ ವೀರೇಶ್ವರ ಪುಣ್ಯಾಶ್ರಮದ ಆವರಣದಿಂದ ಆರಂಭವಾಗಿ 11, 26 ಮತ್ತು 28ನೇ ವಾರ್ಡ್‌ಗಳಲ್ಲಿ ಸಂಚರಿಸಿ, ವಿವೇಕಾನಂದ ನಗರದ ಕಾಶಿ ವಿಶ್ವನಾಥ ದೇವಾಸ್ಥಾನದ ಸಭಾಭವನದಲ್ಲಿ ಸಂಪನ್ನಗೊಳ್ಳುವುದು ಎಂದು ಸಮಿತಿ ತಿಳಿಸಿದೆ.

‘ಪ್ರತ್ಯೇಕತೆ ಬೇಡಿಕೆ ಬಿರುಗಾಳಿ ಇದ್ದಂತೆ’

ಪ್ರತ್ಯೇಕ ಧರ್ಮದ ಹೋರಾಟ ಬಿರುಗಾಳಿ ಇದ್ದಂತೆ. ಬಿರುಗಾಳಿ ದಿಢೀರ್ ಬಂದು ಕ್ಷಣಮಾತ್ರದಲ್ಲಿ ಎಲ್ಲವನ್ನೂ ನಾಶಮಾಡುತ್ತದೆ. ಸಾಕಷ್ಟು ಹಾನಿಯುಂಟು ಮಾಡುತ್ತದೆ. ಆದರೆ, ನಮ್ಮ ಹೋರಾಟ ವಸಂತಗಾಳಿ ಇದ್ದಂತೆ. ಇದು ಎಲ್ಲರಿಗೂ ತಂಪಿನ ಅನುಭವ ನೀಡುತ್ತದೆ. ಎಲ್ಲರ ಮನಸ್ಸಿಗೆ ಆಹ್ಲಾದಕರ ಅನುಭೂತಿ ಮೂಡಿಸುತ್ತದೆ’ ಎಂದು ಹೇಳಿದರು.

‘ಪ್ರತ್ಯೇಕತಾವಾದಿಗಳು ಹಣ ಕೊಟ್ಟು ಸಮಾವೇಶಕ್ಕೆ ಜನರನ್ನು ಕರೆದುಕೊಂಡು ಹೋಗುತ್ತಿದ್ದಾರೆ ಎಂಬ ಆರೋಪ ಎಲ್ಲಡೆಯಿಂದ ಕೇಳಿಬರುತ್ತಿದೆ. ಆದರೆ, ನಾವು ಧರ್ಮದ ಲಾಂಛನ ರುದ್ರಾಕ್ಷಿ, ಇಷ್ಟಲಿಂಗ, ಭಸ್ಮ ಕೊಟ್ಟು ಭಕ್ತರನ್ನು ಸಮನ್ವಯ ಸಮಾವೇಶಕ್ಕೆ ಆಹ್ವಾನಿಸುತ್ತಿದ್ದೇವೆ' ಎಂದರು.

ಸ್ವಾಭಿಮಾನಿಗಳು ಸ್ವಾಭಿಮಾನದಿಂದ ಈ ಸಮಾವೇಶದಲ್ಲಿ ಭಾಗವಹಿಸಬೇಕು. ಇದರ ಭಾಗವಾಗಿ ಡಿ. 23ರವರೆಗೆ ಪ್ರತಿನಿತ್ಯ ಸಂಜೆ ಹಾಲಕೇರಿ ಅನ್ನದಾನೇಶ್ವರ ಮಠದಲ್ಲಿ ಪ್ರವಚನ ಕಾರ್ಯಕ್ರಮ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಆಹ್ವಾನ ನೀಡಿದರು.

* * 

ಪ್ರತ್ಯೇಕ ಧರ್ಮದ ಹೋರಾಟ ಬಿರುಗಾಳಿ ಇದ್ದಂತೆ. ಎಲ್ಲವನ್ನೂ ನಾಶ ಮಾಡುತ್ತದೆ. ಸಮನ್ವಯ ಸಮಾವೇಶ ವಸಂತಗಾಳಿ ಇದ್ದಂತೆ. ಎಲ್ಲರಿಗೂ ನೆಮ್ಮದಿ ನೀಡುತ್ತದೆ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ

ಶ್ರೀಶೈಲ ಪೀಠ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.