ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥರ್ವನ ಆರ್ಭಟ

Last Updated 15 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನ್ನಡ ಚಿತ್ರರಂಗದ ಮೂಲಕವೇ ಪರಿಚಿತಗೊಂಡು ನಂತರ ಬೇರೆ ಬೇರೆ ಭಾಷೆಗಳಲ್ಲಿ ತಮ್ಮ ಅಭಿನಯ ಪ್ರತಿಭೆಯನ್ನು ವಿಸ್ತರಿಸಿಕೊಂಡ ನಟ ಅರ್ಜುನ್‌ ಸರ್ಜಾ. ಅವರ ಕುಟುಂಬದ ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಈಗಾಗಲೇ ಚಂದನವನದಲ್ಲಿ ನೆಲೆಯೂರಿಯಾಗಿದೆ. ಇದೀಗ ಸರ್ಜಾ ಕುಟುಂಬದ ಇನ್ನೊಂದು ಕುಡಿ ಕನ್ನಡದ ಮೂಲಕವೇ ಬಣ್ಣದ ಲೋಕಕ್ಕೆ ಅಡಿಯಿಡಲು ಸಿದ್ಧವಾಗಿದೆ.

ಅರ್ಜುನ್‌ ಸರ್ಜಾ ಅವರ ತಂಗಿಯ ಮಗ ಪವನ್‌ ತೇಜ ‘ಅಥರ್ವ’ ಸಿನಿಮಾದ ಮೂಲಕ ನಾಯಕನಟನಾಗಿ ಪರಿಚಿತರಾಗುತ್ತಿದ್ದಾರೆ. ಅರುಣ್‌ ನಿರ್ದೇಶನದ ‘ಅಥರ್ವ’ ಸಿನಿಮಾದ ಚಿತ್ರೀಕರಣ ಈಗಾಗಲೇ ಮುಗಿದಿದ್ದು ಫೆಬ್ರುವರಿಯಷ್ಟರಲ್ಲಿ ಬಿಡುಗಡೆ ಮಾಡುವ ಸಿದ್ಧತೆ ನಡೆಯುತ್ತಿದೆ.

ಚಿತ್ರದ ಕುರಿತು ಮಾಹಿತಿ ಹಂಚಿಕೊಳ್ಳಲಿಕ್ಕಾಗಿಯೇ ಇತ್ತೀಚೆಗೆ ತಂಡ ಪತ್ರಿಕಾಗೋಷ್ಠಿ ಕರೆದಿತ್ತು. ಮೊದಲು ಮಾತಿಗಿಳಿದ ಸಹ ನಿರ್ಮಾಪಕ ರಕ್ಷಯ್‌ ಎಸ್‌.ವಿ. ‘ನಾಲ್ಕು ವರ್ಷಗಳಿಂದ ಒಂದು ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಅಭಿಲಾಷೆಯಲ್ಲಿದ್ದೆವು. ನಿರ್ದೇಶಕ ಅರುಣ್‌ ನನ್ನ ಸ್ನೇಹಿತ. ಅವರ ಪ್ರತಿಭೆ ನನಗೂ ಚೆನ್ನಾಗಿ ಗೊತ್ತು. ಆದ್ದರಿಂದ ಈ ಸಿನಿಮಾಕ್ಕೆ ಹಣ ಹೂಡಲು ಮುಂದಾದೆ’ ಎಂದು ಹೇಳಿದರು.

ಕಳೆದ ಮೂರು ವರ್ಷಗಳಿಂದ ಈ ಸಿನಿಮಾ ಕೆಲಸದಲ್ಲಿ ತೊಡಗಿಕೊಂಡಿದ್ದೇನೆ. ‘ಅಥರ್ವ’ ಚಿತ್ರದ ಮೂಲಕ ನನ್ನ ಕನಸು ನನಸಾಗುತ್ತಿದೆ’ ಎಂದು ಖುಷಿಯಿಂದ ಹೇಳಿಕೊಂಡ ಅರುಣ್‌, ‘ಅಥರ್ವ ಎಂದರೆ ನರಸಿಂಹಸ್ವಾಮಿಯ ಹೆಸರು. ಈ ಚಿತ್ರದ ಕಥೆ ಒಂದು ಹುಟ್ಟಿನಿಂದ ಆರಂಭವಾಗಿ ಒಂದು ಸಾವಿನ ಮೂಲಕ ಕೊನೆಗೊಳ್ಳುತ್ತದೆ. ಆ ಹುಟ್ಟು ಯಾರದು? ಸಾವು ಯಾರದು? ಎಂಬ ಪ್ರಶ್ನೆಗಳಿಗೆ ಸಿನಿಮಾದಲ್ಲಿ ಉತ್ತರವಿದೆ. ಹುಟ್ಟು ಮತ್ತು ಸಾವಿನ ನಡುವಿನ ಪಯಣವೇ ಸಿನಿಮಾದ ಕಥಾವಸ್ತು’ ಎಂದು ಶೀರ್ಷಿಕೆಗೂ ಕಥೆಗೂ ಇರುವ ಸಂಬಂಧ ವಿವರಿಸಿದರು.

ಬೆಂಗಳೂರು, ಚಿಕ್ಕಮಗಳೂರು, ಮಂಡ್ಯ, ಮೈಸೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ಮುಗಿಸಲಾಗಿದೆ. ಸಿನಿಮಾದಲ್ಲಿರುವ ನಾಲ್ಕು ಹಾಡುಗಳಿಗೆ ರಾಘವೇಂದ್ರ ವಿ. ಸಂಗೀತ ಸಂಯೋಜಿಸಿದ್ದಾರೆ.

ನಾಯಕನಟ ಪವನ್‌ ತೇಜ ಅವರಿಗೆ ಕಾಲೇಜು ಓದುತ್ತಿದ್ದಾಗಲೇ ಸಿನಿಮಾರಂಗದ ಬಗ್ಗೆ ಆಸಕ್ತಿ ಇತ್ತಂತೆ. ಈ ಕುರಿತು ಅರ್ಜುನ್‌ ಸರ್ಜಾ ಅವರ ಬಳಿ ಹೇಳಿದಾಗ ಅವರು ‘ಆಸೆ ಇರುವುದು ಸಹಜ. ಆದರೆ ಅದಕ್ಕೆ ತಕ್ಕ ಸಿದ್ಧತೆಯೂ ಅವಶ್ಯ. ನಟನೆಗೆ ಸರಿಯಾಗಿ ಸಿದ್ಧನಾಗಿ ಬಾ’ ಎಂದು ಬುದ್ದಿಮಾತು ಹೇಳಿದರು. ಇದನ್ನೇ ಗಂಭೀರವಾಗಿ ತೆಗೆದುಕೊಂಡ ಪವನ್‌, ರಂಗಭೂಮಿಯಲ್ಲಿ ತೊಡಗಿಕೊಂಡು 25ಕ್ಕೂ ಹೆಚ್ಚು ನಾಟಕ ಪ್ರದರ್ಶನಗಳಲ್ಲಿ ನಟಿಸಿದ್ದಾರೆ. ನಂತರ ಸಿನಿಮಾ ನಟನೆಗೆ ಅಗತ್ಯವಿರುವ ತರಬೇತಿ, ಅಂಗಸೌಷ್ಠವವನ್ನು ರೂಪಿಸಿಕೊಂಡೇ ಬಣ್ಣದ ಜಗತ್ತಿಗೆ ಕಾಲಿಟ್ಟಿದ್ದಾರೆ.

‘ನಾನು ಕೇಳಿದ ಕಥೆಗಳಲ್ಲಿ ಅಥರ್ವ ತುಂಬ ಸೂಕ್ಷ್ಮವಾದ ಕಥೆ ಅನಿಸಿತು.ನಾನು ಮೂರು ಭಿನ್ನ ಛಾಯೆಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಈ ಚಿತ್ರಕ್ಕಾಗಿಯೇ 15 ಕೆ.ಜಿ. ತೂಕವನ್ನೂ ಇಳಿಸಿಕೊಂಡಿದ್ದೇನೆ’ ಎಂದರು ಪವನ್‌ ತೇಜ.

ಈಗಾಗಲೇ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಸನಂ ಶೆಟ್ಟಿ ಅವರಿಗೆ ಇದು ಮೊದಲ ಕನ್ನಡ ಚಿತ್ರ. ಬೆಂಗಳೂರಿನವರೇ ಆಗಿರುವ ಅವರಿಗೆ ಈಗ ಕನ್ನಡ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿರುವುದು ಖುಷಿ ಕೊಟ್ಟಿದೆ. ತಮ್ಮ ಜತೆ ತೆರೆ ಹಂಚಿಕೊಂಡಿರುವ ಪವನ್‌ ತೇಜ ಅವರನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ಜತೆಗೆ ‘ಸಾಮಾನ್ಯವಾಗಿ ಸಿನಿಮಾತಂಡ ಅಂದಮೇಲೆ ನಿರ್ಮಾಪಕ, ನಿರ್ದೇಶಕ, ತಂತ್ರಜ್ಞರು, ನಟರು, ಸಹಾಯಕರು ಹೀಗೆ ಸ್ಥಾನಮಾನ ಇರುತ್ತದೆ. ಆದರೆ ಈ ತಂಡದಲ್ಲಿ ಮಾತ್ರ ಆ ರೀತಿಯ ಯಾವ ತರತಮವನ್ನೂ ನಾನು ನೋಡಿಲ್ಲ’ ಎಂದರು.

ಖಳನಾಗಿ ಅಬ್ಬರಿಸಿರುವ ಯಶವಂತ ಶೆಟ್ಟಿ ತಂಡಕ್ಕೆ ಶುಭ ಹಾರೈಸಿದರು. ಶಿವ ಸೀನ ಛಾಯಾಗ್ರಹಣ, ವಿಜೇತ್‌ ಕೃಷ್ಣ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ರಂಗಾಯಣ ರಘು, ಧರ್ಮೇಂದ್ರ ಅರಸ್‌, ಸುಚೇಂದ್ರ ಪ್ರಸಾದ್‌ ಮುಂತಾದವರು ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT