ಗಡಿಭಾಗದ ದುರಂತ ಪ್ರೇಮಕಥೆ

6

ಗಡಿಭಾಗದ ದುರಂತ ಪ್ರೇಮಕಥೆ

Published:
Updated:
ಗಡಿಭಾಗದ ದುರಂತ ಪ್ರೇಮಕಥೆ

ಬೀದರ್‌ ಜಿಲ್ಲೆಯಲ್ಲಿ ಹರಿಯುವ ಮಾಂಜ್ರಾ ನದಿಯ ಹೆಸರಿನ ಕನ್ನಡ ಸಿನಿಮಾ ಒಂದು ಸಿದ್ಧವಾಗುತ್ತಿದೆ. ಕನ್ನಡ ಮತ್ತು ಮರಾಠಿಯಲ್ಲಿ ಏಕಕಾಲಕ್ಕೆ ತೆರೆ ಕಾಣುವ ಚಿತ್ರಕ್ಕೆ ಎರಡೂ ಭಾಷಿಕರಿಗೆ ಅರ್ಥವಾಗುವ ಶೀರ್ಷಿಕೆಯನ್ನೇ ನಿರ್ದೇಶಕರು ಆರಿಸಿಕೊಂಡಿದ್ದಾರೆ.

ನಿರ್ದೇಶಕ ಮುತ್ತುರಾಜ್‌ ಆಂಧ್ರ ಮೂಲದವರು. ಹಣ ಹೂಡಿರುವ ರವಿ ಅರ್ಜುನ್‌ ಪೂಜೇರ ಅವರು ಕರ್ನಾಟಕದವರು. ನಾಯಕ– ನಾಯಕಿ ಮಹಾರಾಷ್ಟ್ರದವರು. ಹೀಗೆ ಮೂರು ರಾಜ್ಯಗಳ ತಂಡ ಸೇರಿಕೊಂಡು ‘ಮಾಂಜ್ರಾ’ ರೂಪುಗೊಂಡಿದೆ. ಸಿನಿಮಾದ ಕಥೆಯೂ ಗಡಿಭಾಗದ ಬೆಳಗಾವಿ ಬುಂಬರ್ಗಾ ಎಂಬ ಹಳ್ಳಿಯಲ್ಲಿ ನಡೆದ ನೈಜ ಘಟನೆಯನ್ನು ಆಧಿರಿಸಿದೆ.

ಕನ್ನಡದ ಹುಡುಗ ಮತ್ತು ಮರಾಠಿ ಹುಡುಗಿಯ ನಡುವಿನ ದುರಂತ ಪ್ರೇಮಕಥೆಯನ್ನು ಮುತ್ತುರಾಜ್‌ ತೆರೆಯ ಮೇಲೆ ತರುತ್ತಿದ್ದಾರೆ. ಅವರು ಈ ಘಟನೆಯ ಕುರಿತ ಲೇಖನವನ್ನು ಎಂಟನೇ ತರಗತಿಯಲ್ಲಿದ್ದಾಗಲೇ ಓದಿದ್ದರಂತೆ. ಆಗಲೇ ಈ ಕಥೆಯನ್ನು ಸಿನಿಮಾ ಮಾಡಬೇಕು ಎಂಬ ಆಲೋಚನೆ ಮೊಳಕೆ ಒಡೆದಿದ್ದಂತೆ.

ನಾಯಕ ರಂಜಿತ್‌ ಅವರಿಗಿದು ಮೊದಲ ಸಿನಿಮಾ. ‘ನಾನು ಸಿನಿಮಾ ಮಾಡಬೇಕು ಎಂಬ ಆಸೆಯಿಂದ ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿದ್ದೆ. ಈ ಚಿತ್ರದ ಕಥೆ ಕೇಳಿದಾಗ ನಿಜಕ್ಕೂ ಖುಷಿ ಆಯ್ತು. ಅವಕಾಶ ಸಿಕ್ಕಿರುವುದು ಸಂತಸ ತಂದಿದೆ’ ಎಂದು ಬೀಗಿದರು.

ನಾಯಕಿ ಅಪೂರ್ವಾ ಅವರಿಗಿದು ಎರಡನೇ ಸಿನಿಮಾ. ‘ನಾನು ಹಾಲು ಮಾರುವ ಮರಾಠಿ ಹೆಣ್ಣುಮಗಳ ಪಾತ್ರದಲ್ಲಿ ನಟಿಸಿದ್ದೇನೆ. ಈ ಸಿನಿಮಾದಲ್ಲಿ ನನ್ನ ಭಾಗವನ್ನು ಮೂಲಕಥೆ ನಡೆದಿರುವ ಮನೆಯಲ್ಲಿಯೇ ಚಿತ್ರೀಕರಿಸಲಾಗಿದೆ. ದುರಂತ ಅಂತ್ಯ ಕಾಣುವ ಹೆಣ್ಣಿನ ಬದುಕಿನ ಈ ಕಥೆ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎಂದು ಹೇಳಿದರು.

ಈ ಸಿನಿಮಾಗೆ ‘ಎ ಡಿಂಗ್‌ ಡಾಂಗ್‌ ಲವ್‌ ಸ್ಟೋರಿ’ ಎಂಬ ಅಡಿಶೀರ್ಷಿಕೆಯೂ ಇದೆ. ಡಿಂಗ್‌ ಡಾಂಗ್‌ ಎಂದರೆ ಪ್ರೇಮ ಎಂದು ಅರ್ಥವಂತೆ. ಇದೂ ಕೂಡ ಮುತ್ತುರಾಜ್‌ ವ್ಯಾಖ್ಯಾನ.

ಬೆಳಗಾವಿ, ಕಾರವಾರ, ಗೋವಾ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಸಯ್ಯದ್‌ ಯಾಸೀನ್‌ ಛಾಯಾಗ್ರಹಣ, ಚಿನ್ಮಯ ಎಂ.ರಾವ್‌ ಸಂಗೀತದ ಹೊಣೆ ಹೊತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry