7

ಸಮಾನ ಶಿಕ್ಷಣ ಇಂದಿನ ಅಗತ್ಯ

Published:
Updated:
ಸಮಾನ ಶಿಕ್ಷಣ ಇಂದಿನ ಅಗತ್ಯ

ಚಿಕ್ಕಬಳ್ಳಾಪುರ: ‘ಬಹುತೇಕ ಖಾಸಗಿ ವಿದ್ಯಾ ಸಂಸ್ಥೆಗಳು ಹಣ ಮಾಡುವುದನ್ನೇ ಗುರಿಯಾಗಿರಿಸಿಕೊಂಡಿರುವ ಪ್ರಸ್ತುತ ಸಂದರ್ಭದಲ್ಲಿ ಪ್ರತಿಯೊಬ್ಬ ವಿದ್ಯಾ

ರ್ಥಿಗೂ ನಾವು ಸಮಾನ ಶಿಕ್ಷಣದ ಅವಕಾಶಗಳನ್ನು ಒದಗಿಸಿ ಕೊಡುವ ಅಗತ್ಯವಿದೆ’ ಎಂದು ಸತ್ಯಸಾಯಿ ಲೋಕಸೇವಾ ಸಮೂಹ ಸಂಸ್ಥೆ ಮುಖ್ಯ ಮಾರ್ಗದರ್ಶಕ ಬಿ.ಎನ್.ನರಸಿಂಹಮೂರ್ತಿ ಹೇಳಿದರು.

ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಸತ್ಯಸಾಯಿ ಲೋಕಸೇವಾ ಸಮೂಹ ಸಂಸ್ಥೆಯ ‘ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್’ನ 2ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಇವತ್ತು ಶಿಕ್ಷಣ ಕ್ಷೇತ್ರದಲ್ಲಿ ಅಸಮಾನತೆ ತೀವ್ರ ತರದಲ್ಲಿ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಶ್ರೀಮಂತರು ಮಕ್ಕಳು ಖಾಸಗಿ ಶಾಲೆಗಳಿಗೆ ಹೋದರೆ, ಬಡವರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಜಗತ್ತಿನಲ್ಲಿ ಪ್ರತಿಯೊಂದು ಮಗುವಿಗೂ ಸರಿಯಾದ ಶಿಕ್ಷಣ ನೀಡಿದ್ದೇ ಆದರೆ ಜಗತ್ತಿನ ಎಲ್ಲ ಸಮಸ್ಯೆಗಳು ಮಾಯವಾಗುತ್ತವೆ ಎಂದು ಸತ್ಯಸಾಯಿ ಬಾಬಾ ಅವರು ಪ್ರತಿಪಾದಿಸುತ್ತಿದ್ದರು’ ಎಂದು ತಿಳಿಸಿದರು.

‘ಇವತ್ತು ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಶಿಕ್ಷಣ ವ್ಯಾಪಾರೀಕರಣಗೊಳ್ಳುತ್ತಿರುವುದು ದುರಂತದ ಸಂಗತಿ. ಒಂದೊಮ್ಮೆ ನಾವೇನಾದರೂ ಸಮಾನ ಶಿಕ್ಷಣ ಒದಗಿಸಿ ಕೊಡುವುದಾಗಿದ್ದರೆ ಅದು ಸರ್ಕಾರಿ ಶಾಲೆಗಳಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಬಾಬಾ ಅವರು ಸರ್ಕಾರದೊಂದಿಗೆ ಕೈಜೋಡಿಸಿ ಮಾಡುತ್ತಿರುವ ಕಾರ್ಯಗಳು ದೇಶದ ಎಲ್ಲಾ ಪ್ರಾಂತ್ಯಗಳಿಗೆ ಆದರ್ಶವಾಗಿವೆ’ ಎಂದರು.

‘ಇವತ್ತು ಸರ್ಕಾರಿ ಶಾಲೆಗಳು ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿವೆ. ಇಂತಹ ಸಂದರ್ಭಗಳಲ್ಲಿ ನಮ್ಮಂತಹ ಖಾಸಗಿ ವಿದ್ಯಾಸಂಸ್ಥೆಗಳಾದರೂ ಸರ್ಕಾರಿ ಶಾಲೆಗಳಿಗೆ ಸಹಕಾರ ನೀಡಬೇಕಾಗಿದೆ. ಈ ದಿಕ್ಕಿನಲ್ಲಿ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ ವತಿಯಿಂದ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಓದುವ ಒಂದು ಲಕ್ಷ ಬಡ ಮಕ್ಕಳಿಗೆ ಬೆಳಗಿನ ಉಪಹಾರ ನೀಡುವ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

‘ಉಪಾಹಾರ ನೀಡಿ ಪೌಷ್ಠಿಕಾಂಶದ ಕೊರತೆ ನೀಗುವ ಜತೆಗೆ ಮಕ್ಕಳಲ್ಲಿ ಆಧ್ಯಾತ್ಮಿಕ ಚಿಂತನೆ, ಸಂಸ್ಕಾರ ಬಿತ್ತುವ ಕೆಲಸ ಮಾಡಲಾಗುತ್ತಿದೆ. ಇದು ಮಾತ್ರವಲ್ಲದೆ ಇವತ್ತು ರಾಜ್ಯದಲ್ಲಿ ಲೋಕಸೇವಾ ಸಮೂಹ ಸಂಸ್ಥೆ ಶಿಕ್ಷಣ ಸಂಸ್ಥೆಗಳಲ್ಲಿ ಐದು ಸಾವಿರ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಬಾಬಾ ಅವರ ಆದೇಶದಂತೆ

ಗ್ರಾಮೀಣ ಬಡ ಮಕ್ಕಳಿಗೆ ನಾವು ನಮ್ಮ ಶಾಲಾ– ಕಾಲೇಜುಗಳಲ್ಲಿ ಮೊದಲ ಪ್ರಾಶಸ್ತ್ಯ ನೀಡುತ್ತಿದ್ದೇವೆ’ ಎಂದು ತಿಳಿಸಿದರು.

‘ತೀರ ಬಡಮಕ್ಕಳಿಗೆ ಕೇವಲ ಶಿಕ್ಷಣ ನೀಡಿದರೆ ಸಾಲದು ವಸತಿಯನ್ನು ಕೂಡ ಉಚಿತವಾಗಿ ನೀಡಬೇಕು ಎನ್ನುವ ಉದ್ದೇಶದಿಂದ ನಮಲ್ಲಿ ಓದುವ ವಿದ್ಯಾರ್ಥಿಗಳ ಪೈಕಿ ಶೇ 50 ರಷ್ಟು ಗ್ರಾಮೀಣ ಬಡ ಮಕ್ಕಳಿಗೆ ಉಚಿತ ವಸತಿ ಸಹಿತ ಶಿಕ್ಷಣ ನೀಡುವ ಯೋಜನೆ ಜಾರಿಗೆ ತಂದಿದ್ದೇವೆ. ಅದಕ್ಕಾಗಿ ಸರ್ಕಾರಿ ಶಾಲೆಗಳ ಶಿಕ್ಷಕರು ತಮ್ಮ ಶಾಲೆಯಲ್ಲಿರುವ ಅರ್ಹ ಬಡ ಮಕ್ಕಳನ್ನು ನಮ್ಮಲ್ಲಿ ಕಳುಹಿಸಿ ಕೊಡಬಹುದು’ ಎಂದರು.

ಪುದುಚೇರಿ ಶಿಕ್ಷಣ ಸಚಿವ ಕಮಲ ಕಣ್ಣನ್‌ ಮಾತನಾಡಿ, ‘ಬೆಳಗಿನ ಉಪಾಹಾರ ಸೇವಿಸದೆ ಶಾಲೆಗೆ ಬರುತ್ತಿದ್ದ ಬಡ ಕುಟುಂಬದ, ಕೂಲಿ ಕಾರ್ಮಿಕರ ಮಕ್ಕಳು ಪ್ರಾರ್ಥನೆ ವೇಳೆ ಬಳಲಿ ಕುಸಿದು ಬೀಳುತ್ತಿದ್ದರು. ಇದನ್ನು ಮನಗಂಡು ನಮ್ಮ ಸರ್ಕಾರ ಮಕ್ಕಳಲ್ಲಿನ ಈ ಪೌಷ್ಟಿಕಾಂಶದ ಕೊರತೆ ನೀಗಲು ಕಳೆದ ವರ್ಷದ ಜೂನ್–ಜುಲೈನಲ್ಲಿ ಸರ್ಕಾರಿ ಶಾಲೆಗಳಲ್ಲಿ ಬೆಳಗಿನ ಉಪಾಹಾರ ನೀಡುವ ಯೋಜನೆ ಆರಂಭಿಸಿತು’ ಎಂದು ಹೇಳಿದರು.

‘ಈ ಯೋಜನೆಯಲ್ಲಿ ನಮಗೆ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಕೈಜೋಡಿಸಿದ್ದು ತುಂಬ ಸಂತಸ ತಂದಿದೆ. ಟ್ರಸ್ಟ್‌ಗೆ ಅಗತ್ಯವಿರುವ ಸಹಕಾರ ನೀಡಲು ನಮ್ಮ ಸರ್ಕಾರ ಸಂಪೂರ್ಣ ಸಿದ್ಧವಿದೆ’ ಎಂದು ಹೇಳಿದರು.

ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಅಧ್ಯಕ್ಷ ನರಸಿಂಹಚಾರಿ ಸಂಪತ್‌, ಸತ್ಯ ಸಾಯಿಬಾಬಾ ಅವರ ಸಂದೇಶ ವಾಹಕ ಮಧುಸೂದನ ನಾಯ್ಡು, ಸತ್ಯಸಾಯಿ ಲೋಕಶಿಕ್ಷಣ ಸಂಸ್ಥೆ ಪದಾಧಿಕಾರಿಗಳಾದ ನಾರಾಯಣ ರಾವ್, ಸಂಜೀವ್‌ ಶೆಟ್ಟಿ ಇದ್ದರು.

* * 

ದೈವಭಕ್ತಿ ಮತ್ತು ಜೀವ ಕಾರುಣ್ಯವೇ ಭಾರತೀಯ ಸಂಸ್ಕೃತಿಯ ಮೂಲಧಾತು. ಜಾತಿ, ಮತ ಬೇಧವಿಲ್ಲದ ಪ್ರೀತಿಸಬೇಕಿದೆ.

ಬಿ.ಎನ್.ನರಸಿಂಹಮೂರ್ತಿ, ಸತ್ಯಸಾಯಿ ಲೋಕಸೇವಾ ಸಮೂಹ ಸಂಸ್ಥೆ ಮುಖ್ಯ ಮಾರ್ಗದರ್ಶಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry