7

ಚುನಾವಣೆ ಗೆಲುವು: ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

Published:
Updated:
ಚುನಾವಣೆ ಗೆಲುವು: ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

ಪುತ್ತೂರು/ಸುಳ್ಯ/ ಬಂಟ್ವಾಳ/ ಮೂಡುಬಿದಿರೆ: ಗುಜರಾತ್‌ ಮತ್ತು ಹಿಮಾಚಲ ಪ್ರದೇಶಗಳಲ್ಲಿ  ಬಿಜೆಪಿ ಜಯಭೇರಿ ಭಾರಿಸಿದ ಪ್ರಯುಕ್ತ ಜಿಲ್ಲೆಯ ವಿವಿಧ ಭಾಗಗಳಲ್ಲಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಪುತ್ತೂರು: ‘ನೋಟ್ ಬ್ಯಾನ್ ಹಾಗೂ ಜಿಎಸ್‍ಟಿ ಕ್ರಮದ ವಿರುದ್ಧ ವಿರೋಧಪಕ್ಷಗಳು ಅಪಪ್ರಚಾರ ನಡೆಸಿದರೂ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವ ಮೂಲಕ ಅಲ್ಲಿನ ಮತದಾರರು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.  ಕರ್ನಾಟಕ ಚುನಾವಣೆಗೆ ದಿಕ್ಸೂಚಿಯಾಗಿದೆ’ ಎಂದು ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ  ಹೇಳಿದರು.

ಪುತ್ತೂರು ಬಸ್ ನಿಲ್ದಾಣದ ಬಳಿಯಲ್ಲಿ ಸೋಮವಾರ ನಡೆದ ಬಿಜೆಪಿ ವಿಜಯೋತ್ಸವದಲ್ಲಿ ಅವರು ಮಾತನಾಡಿದರು. ‘ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಜಾತಿಯ ವಿಷಬೀಜ ಬಿತ್ತಿ ಮತಗಳಿಸುವ ತಂತ್ರಗಾರಿಕೆಗೂ ಮತದಾರರು ಸಮ್ಮತಿ ನೀಡಿಲ್ಲ.   ಇಲ್ಲೂ  ಧರ್ಮದ ನಡುವೆ ಒಡಕು ಉಂಟು ಮಾಡುವ, ಜಾತಿಯ ವಿಷ ಬೀಜ ಬಿತ್ತುವ ಅವಕಾಶವಾದಿಗಳಿಗೆ ಮತದಾರರು ಬೆಂಬಲ ನೀಡುವುದಿಲ್ಲ. ಇಲ್ಲಿಯೂ 150 ಸ್ಥಾನ ಪಡೆದು ಬಿಜೆಪಿ ಆಡಳಿತಕ್ಕೆ ಬರಲಿದೆ’ ಎಂದರು.

ಬೊಳುವಾರು ಆಂಜನೇಯ ಮಂತ್ರಾಲಯದ ಬಳಿ ನಡೆದ ಬಿಜೆಪಿ ವಿಜಯೋತ್ಸವದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ, ‘ಜಾತಿ ಹಾಗೂ ಧರ್ಮಗಳ ನಡುವೆ ಗೊಂದಲ ಉಂಟು ಮಾಡಲು ಕಾಂಗ್ರೆಸ್ ಪ್ರಯತ್ನ ಮಾಡಿದ್ದರೂ  ಮೋದಿ ಅವರಿಗೆ ಬೆಂಬಲ ನೀಡುವ ಮೂಲಕ ದೇಶದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬ ಉತ್ತಮ ಸಂದೇಶ ಕೊಟ್ಟಿದ್ದಾರೆ’ ಎಂದರು.

ವಿಜಯೊತ್ಸವ ಕಾರ್ಯಕ್ರಮಕ್ಕೆ ಮೊದಲು ಪುತ್ತೂರು ಬಿಜೆಪಿ ಕಚೇರಿಯಿಂದ ಮೆರವಣಿಗೆ ನಡೆಸಲಾಯಿತು. ಬೊಳುವಾರಿನಲ್ಲಿ ಸಿಹಿ ತಿಂಡಿ ಹಂಚಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು. ಬಸ್ ನಿಲ್ದಾಣದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್, ಜಿಲ್ಲಾ ಕಾರ್ಯದರ್ಶಿ ಬೂಡಿಯಾರ್ ರಾಧಾಕೃಷ್ಣ ರೈ, ಕ್ಷೇತ್ರ ಉಸ್ತುವಾರಿ ಕೃಷ್ಣ ಶೆಟ್ಟಿ ಕಡಬ, ಬಿಜೆಪಿ ನಗರ ಯುವ ಮೋರ್ಚಾ ಅಧ್ಯಕ್ಷ ಅನೀಶ್ ಬಡೆಕ್ಕಿಲ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾದ ಚಂದ್ರಶೇಖರ್ ರಾವ್ ಬಪ್ಪಳಿಗೆ ,ಆರ್.ಸಿ ನಾರಾಯಣ್, ಪುತ್ತೂರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಂಭುಭಟ್, ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ರಾಜೀವ್ ಭಂಡಾರಿ, ಜಿಲ್ಲಾ ಸಂಚಾಲಕ ಗೋಪಾಲಕೃಷ್ಣ ಹೇರಳೆ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಗೌರಿ ಬನ್ನೂರು, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ವಿದ್ಯಾಗೌರಿ , ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭವಾನಿ ಚಿದಾನಂದ್  ಇದ್ದರು.

ಬಂಟ್ವಾಳ: ಸಂಭ್ರಮಾಚರಣೆ

ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ ವಿಜಯೋತ್ಸವ ಆಚರಿಸಿದರು. ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಘೋಷಣೆ ಕೂಗುತ್ತಾ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಅವರೊಂದಿಗೆ ಸಂಭ್ರಮಿಸಿದರು. ಈ ಗೆಲುವು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನುಡಿ ಬರೆದಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕೆ. ಹರಿಕೃಷ್ಣ ಬಂಟ್ವಾಳ, ಬಿ.ದೇವದಾಸ ಶೆಟ್ಟಿ, ಆರ್.ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ರಾಮದಾಸ್ ಬಂಟ್ವಾಳ, ಉದಯ ಕುಮಾರ್, ರಮನಾಥ ರಾಯಿ, ಪ್ರಕಾಶ್ ಅಂಚನ್ ಬಿ.ದಿನೇಶ್ ಭಂಡಾರಿ, ಪುಷ್ಪರಾಜ್ ಚೌಟ, ಚರಣ್ ಜುಮಾದಿಗುಡ್ಡೆ, ಸುರೇಶ್ ಕೋಟ್ಯಾನ್, ಪೃಥ್ವಿರಾಜ್, ಪ್ರದೀಪ್ ಅಜ್ಜಿಬೆಟ್ಟು, ಗಣೇಶ್ ರೈ ಮಾಣಿ, ಪವನ್ ಕುಮಾರ್, ಸಂತೋಷ್ ಕುಮಾರ್ ರಾಯಿ, ಬಾಲಕೃಷ್ಣ ಚೆರ್ಕಳ, ಮಚ್ಚೇಂದ್ರ ಸಾಲಿಯಾನ್, ನಂದರಾಮ ರೈ, ಹರೀಶ ಆಚಾರ್ಯ, ಹರೀಶ ಶೆಟ್ಟಿ, ಲೋಹಿತ್ ಪಣೋಲಿಬೈಲು  ಇದ್ದರು.

ಮೂಡುಬಿದಿರೆ: ವಿಜಯೋತ್ಸವ

ಮೂಡುಬಿದಿರೆಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ ಮಾತನಾಡಿ ‘ಕಾಂಗ್ರೆಸ್ ಪಕ್ಷವು ಗುಜರಾತಿನಲ್ಲಿ ದಲಿತರು, ಹಿಂದುಳಿದವರು, ಪಾಟೀದಾರ್ ಸಮುದಾಯವನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟಿ ಜಯ ಗಳಿಸುವ ಹತಾಶ ಪ್ರಯತ್ನ ನಡೆಸಿದ್ದು, ಪ್ರಜ್ಞಾವಂತ ಮತದಾರರು ಅದಕ್ಕೆ ತಕ್ಕ ಬುದ್ಧಿ ಕಲಿಸಿದ್ದಾರೆ.  ರಾಜ್ಯದಲ್ಲಿ ಗದ್ದುಗೆ ಏರಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ತಂತ್ರ ಫಲಿಸುವುದಿಲ್ಲ. ರಾಜ್ಯದ ಜನತೆಯ ಒಲವು ಬಿಜೆಪಿ ಪಕ್ಷದ ಮೇಲಿದೆ’ ಎಂದು ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಈಶ್ವರ ಕಟೀಲು ನೇತೃತ್ವದಲ್ಲಿ ಜಿ.ವಿ.ಪೈ ಆಸ್ಪತ್ರೆ ಬಳಿ ಇರುವ ಪಕ್ಷದ ಕಚೇರಿಯಿಂದ ಪ್ರಮುಖ ರಸ್ತೆಯ ಮೂಲಕ ಬಸ್ ನಿಲ್ದಾಣದವರೆಗೆ ವಿಜಯೋತ್ಸವ ಮೆರವಣಿಗೆ ನಡೆಯಿತು.

ಜಿಲ್ಲಾ ವಕ್ತಾರ ಕೃಷ್ಣರಾಜ ಹೆಗ್ಡೆ, ಮಂಡಲ ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಯುವ ಮೋರ್ಚಾ ಅಧ್ಯಕ್ಷ ಅಭಿಲಾಶ್ ಶೆಟ್ಟಿ, ಜಿಲ್ಲಾ ಸದಸ್ಯರಾದ ಮೇಘನಾಥ ಶೆಟ್ಟಿ, ಬಾಹುಬಲಿ ಪ್ರಸಾದ್, ಕೆ.ಆರ್.ಪಂಡಿತ್, ಪುರಸಭಾ ಸದಸ್ಯರಾದ ನಾಗರಾಜ ಪೂಜಾರಿ, ಲಕ್ಷ್ಮಣ ಪೂಜಾರಿ, ಮಂಡಲದ ಅಲ್ಪಸಂಖ್ಯಾತ ಮೋಚರ್ಾದ ಅಧ್ಯಕ್ಷ ವಲೇರಿಯನ್ ಕುಟಿನ್ಹೊ, ಹಿಂದುಳಿದ ವರ್ಗಗಳ ಮೋಚರ್ಾದ ಅಧ್ಯಕ್ಷ ಗೋಪಾಲ ಶೆಟ್ಟಿಗಾರ್, ಹೊಸಬೆಟ್ಟು ಪಂ.ಸದಸ್ಯ ಸತೀಶ್ ಶೆಟ್ಟಿ  ಉಪಸ್ಥಿತರಿದ್ದರು.

ಸುಳ್ಯದಲ್ಲಿ ಹರ್ಷಾಚರಣೆ

ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿದ ಹಿನ್ನೆಲೆಯಲ್ಲಿ ಸುಳ್ಯ ಬಿಜೆಪಿ ವತಿಯಿಂದ ವಿಜಯೋತ್ಸವ ಖಾಸಗಿ ಬಸ್ ನಿಲ್ದಾಣದ ಬಳಿ ನಡೆಯಿತು. ಜಿಲ್ಲಾ ಪಂಚಾಯತಿ ಸದಸ್ಯರಾದ ಹರೀಶ್ ಕಂಜಿಪಿಲಿ, ಎಸ್.ಎನ್.ಮನ್ಮಥ, ಪುಷ್ಪಾವತಿ ಬಾಳಿಲ, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಚನಿಯ ಕಲ್ತಡ್ಕ, ಪಟ್ಟಣ ಪಂಚಾಯತಿ ಅಧ್ಯಕ್ಷೆ ಶೀಲಾವತಿ ಮಾಧವ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಅಡ್ಡಂತ್ತಡ್ಕ ದೇರಣ್ಣ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ತಾಲ್ಲೂಕು ಪಂಚಾಯತಿ ಸದಸ್ಯರಾದ ಪುಷ್ಪಾ ಮೇದಪ್ಪ, ಸುಭದಾ ಎಸ್.ರೈ, ವಿದ್ಯಾಲಕ್ಷ್ಮಿ ಎರ್ಮೆಟ್ಟಿ, ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಹರಿಣಾಕ್ಷಿ ನಾರಾಯಣ, ಮುಖಂಡರಾದ ನವೀನ್‌ಕುಮಾರ್ ಮೇನಾಲ, ಸುಬೋಧ್ ಶೆಟ್ಟಿ ಮೇನಾಲ, ಉಪಾಧ್ಯಕ್ಷ ದಿನೇಶ್ ಅಡ್ಕಾರ್, ಅಶೋಕ್ ಅಡ್ಕಾರ್, ಮಹೇಶ್ ಕುಮಾರ್ ಮೇನಾಲ, ಶಂಕರ್ ಪೆರಾಜೆ, ಸೋಮನಾಥ್ ಪೂಜಾರಿ, ನಾರಾಯಣ ಶಾಂತಿನಗರ ಭಾಗವಹಿಸಿದರು.

ಎಸ್‌ಡಿಪಿಐ ಸಂಭ್ರಮಾಚರಣೆ

ಗುಜರಾತಿನ ವಡಗಾಂವ್ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಭೇರಿ ದಾಖಲಿಸಿದ ಜಿಗ್ನೇಶ್ ಮೆವಾನಿ ಗೆಲುವಿಗೆ ಇಲ್ಲಿನ ಬಿ.ಸಿ.ರೋಡು ಕೈಕಂಬ ಜಂಕ್ಷನ್ ಬಳಿ ಬಂಟ್ವಾಳ ಎಸ್‌ಡಿಪಿಐ ವತಿಯಿಂದ ಸೋಮವಾರ ಸಂಜೆ ಸಂಭ್ರಮಾಚರಣೆ ನಡೆಸಿದರು.

ಬಿ.ಸಿ.ರೋಡಿನ ಕೈಕಂಬ ಜಂಕ್ಷನ್ ಬಳಿ ಬಂಟ್ವಾಳ ಎಸ್ಡಿಪಿಐ ವತಿಯಿಂದ ಸಿಹಿ ಹಂಚಿ, ಪಟಾಕಿ ಸಿಡಿಸಿ ಘೋಷಣೆ ಕೂಗಿ ಸಂಭ್ರಮಾಚರಣೆ ನಡೆಸಿದರು. ಎಸ್ಡಿಪಿಐ ಕ್ಷೇತ್ರಾಧ್ಯಕ್ಷ ಶಾಹುಲ್ ಎಸ್.ಎಚ್. ಮಾತನಾಡಿ, ಗುಜರಾತ್ ಚುನಾವಣೆಯಲ್ಲಿ ಜಿಗ್ನೇಶ್ ಗೆಲುವು ಜಾತ್ಯತೀತ ಸಿದ್ಧಾಂತಕ್ಕೆ ಸಿಕ್ಕ ಗೆಲುವು’ ಎಂದರು. ಪ್ರಮುಖರಾದ ಇಸ್ಮಾಯಿಲ್ ಬಾವಾ, ಯೂಸುಫ್ ಆಲಡ್ಕ, ಮಾಲಿಕ್ ಕೊಳಕೆ, ಪುರಸಭಾ ಸದಸ್ಯ ಮುನೀಶ್ ಅಲಿ  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry