7

‘ಗೋಮಾತೆ ಸೇವೆ ದೇಶಸೇವೆ ಮಾಡಿದಂತೆ’

Published:
Updated:
‘ಗೋಮಾತೆ ಸೇವೆ ದೇಶಸೇವೆ ಮಾಡಿದಂತೆ’

ವಿಜಯಪುರ: ‘ಭೂ ತಾಯಿಗೂ ಅಕ್ಕರೆಯ ಆಹಾರ ಉಣಬಡಿಸುವ ಗೋಮಾತೆಯ ಸೇವೆ, ದೇಶಕ್ಕೆ ಸಲ್ಲಿಸುವ ಸೇವೆಯಿದ್ದಂತೆ. ಗೋ ರಕ್ಷಣೆಯ ಸೇವೆ ಸರ್ವೋಚ್ಛ ಸೇವೆ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ವಿಜಯಪುರದಲ್ಲಿ ಸೋಮವಾರ ಮುಸ್ಸಂಜೆ ನಡೆದ ಅಭಯ ಗೋಯಾತ್ರೆಯ ಅಭಯಾಕ್ಷರ ಅಭಿಯಾನದ ಅಂಗವಾಗಿ ಇಲ್ಲಿನ ಶಿವಾನುಭವ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಆಶೀವರ್ಚನ ನೀಡಿದ ಸ್ವಾಮೀಜಿ, ‘ಗೋ ರಕ್ಷಣೆಯ ಕಾರ್ಯದಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು. ಸ್ವಾತಂತ್ರ್ಯ ಆಂದೋಲನ ಮಾದರಿಯಲ್ಲೇ ಗೋ ರಕ್ಷಣೆಯ ಅಭಿಯಾನ ನಡೆಯಬೇಕಾಗಿರುವುದು ಅತ್ಯಂತ ಅವಶ್ಯಕವಾಗಿದೆ’ ಎಂದರು.

‘ಗೋ ಸಂರಕ್ಷಣೆ, ಗೋ ಹತ್ಯೆ ನಿಷೇಧವಾಗಬೇಕು ಎಂಬ ಭಾವನೆ ಪ್ರತಿಯೊಬ್ಬರ ಅಂತರಂಗದಲ್ಲಿಯೂ ಇದೆ. ಈ ಅಂತರಂಗದ ಭಾವನೆಯನ್ನು ಬಹಿರಂಗಗೊಳಿಸಿ, ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಅಭಯ ಗೋಯಾತ್ರೆ-ಯ ಅಭಯ ಗೋರಕ್ಷಾ ಅಭಿಯಾನ ಒಂದು ಮಾಧ್ಯಮ ಹಾಗೂ ಸೇತುವೆಯಾಗಿ ಕಾರ್ಯ ನಿರ್ವಹಿಸಲಿದೆ. ಪ್ರತಿಯೊಬ್ಬರ ಮನೆ -ಮನೆಗೂ ಸಹಿ ಸಂಗ್ರಹದ ಪತ್ರಗಳು ತಲುಪುವಂತೆ ಮಾಡಬೇಕು’ ಎಂದು ಸ್ವಾಮೀಜಿ ಮನವಿ ಮಾಡಿದರು.

‘ಗೋ ಆಧಾರಿತ ಕೃಷಿಯಿಂದ ವಿಮುಖರಾಗಿದ್ದೇವೆ. ಅದರ ಪರಿಣಾಮವನ್ನು ನಾವೇ ಎದುರಿಸುತ್ತಿದ್ದೇವೆ. ನಿತ್ಯ ಪ್ಯಾಕೆಟ್ ಹಾಲು, ರಸಗೊಬ್ಬರದಿಂದ ಬೆಳೆದ ಆಹಾರ ಪದಾರ್ಥಗಳನ್ನು ತಿನ್ನುತ್ತಿದ್ದೇವೆ. ಗೋ ಮಾತೆಯ ಸೇವೆಯನ್ನು ಮರೆತಿರುವ ಕಾರಣದಿಂದಾಗಿಯೇ ಸೃಷ್ಟಿಯೇ ನಮಗೆ ವಿಷಪೂರಿತ ಪದಾರ್ಥ ತಿನ್ನುವ ದೊಡ್ಡ ಶಾಪ ನೀಡಿದೆ’ ಎಂದರು.

‘ಎತ್ತು ಎಂದರೇ ವಿಶಾಲಾರ್ಥವಿದೆ. ಎತ್ತು ಎಂದರೇ ರೈತನ ಬದುಕು ಮೇಲೆತ್ತು, ಸಮಾಜವನ್ನು ಮೇಲೆತ್ತು. ಅಷ್ಟೇ ಅಲ್ಲ ಸಾಕ್ಷಾತ್‌ ಪರಶಿವನನ್ನೇ ಎತ್ತಿಕೊಂಡಿರುವ ಪವಿತ್ರ ಎತ್ತುಗಳ ಸೇವೆಗೆ ನಾವು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು’ ಎಂದು ಸ್ವಾಮೀಜಿ ಮನವಿ ಮಾಡಿದರು.

ಗೋವು ನಮ್ಮ ಪ್ರಾಣ; ಯತ್ನಾಳ

‘ಗೋವು ಪ್ರಾಣಿಯಲ್ಲ. ಅದು ನಮ್ಮ ಪ್ರಾಣ, ನಮ್ಮ ರಾಷ್ಟ್ರದ ಪ್ರಾಣ’ ಎಂದು ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ‘ಗೋವು ನಮ್ಮ ರಾಷ್ಟ್ರೀಯ ಪ್ರಾಣಿಯಾಗಬೇಕು, ಕೂಡಲೇ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಮೂಲಕ ಸಮಸ್ತ ಹಿಂದೂಗಳ ಭಾವನೆಗಳಿಗೆ ಗೌರವ ನೀಡುವ ಕೆಲಸ ಮಾಡಬೇಕು’ ಎಂದು ಯತ್ನಾಳ ಒತ್ತಾಯಿಸಿದರು.

ವಿಜಯಪುರದ ಸಿದ್ಧೇಶ್ವರ ಜಾತ್ರೆಗೆ ಈಗ ಶತಮಾನೋತ್ಸವದ ಸಂಭ್ರಮ. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಜನ ಜಮಾಯಿಸುತ್ತಾರೆ. ಅಭಯಾಕ್ಷರ ಅಭಿಯಾನದ ಯಶಸ್ಸಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದ್ದು, 1 ಲಕ್ಷ ಸಹಿ ಸಂಗ್ರಹ ಮಾಡುವ ಸಂಕಲ್ಪ ಮಾಡಲಾಗಿದೆ ಎಂದು ಇದೇ ಸಂದರ್ಭ ಹೇಳಿದರು.

ಅಮೃತಾನಂದ ಸ್ವಾಮೀಜಿ, ಬಸವರಾಜ ಸ್ವಾಮೀಜಿ, ಕೊಲ್ಹಾರ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ಸಾನ್ನಿಧ್ಯ ವಹಿಸಿದ್ದರು. ಸಿದ್ಧೇಶ್ವರ ಸಂಸ್ಥೆ ಉಪಾಧ್ಯಕ್ಷ ಸಂ.ಗು.ಸಜ್ಜನ, ಗುರು ಗಚ್ಚಿನಮಠ, ಪ್ರೇಮಾನಂದ ಬಿರಾದಾರ, ರಾಘವ ಅಣ್ಣಿಗೇರಿ, ವಿವೇಕ ತಾವರಗೇರಿ ಉಪಸ್ಥಿತರಿದ್ದರು.

ಅಭಯ ಗೋಯಾತ್ರೆ

ಭಾರತೀಯ ಗೋ ಪರಿವಾರ ವಿಜಯಪುರ ಜಿಲ್ಲಾ ಘಟಕ, ಕಗ್ಗೋಡದಲ್ಲಿರುವ ರಾಮನಗೌಡ ಬಾ ಪಾಟೀಲ ಯತ್ನಾಳ ಗೋ ರಕ್ಷಾ ಕೇಂದ್ರ, ವಿವಿಧ ಮಠಗಳು, ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಅಭಯ ಗೋಯಾತ್ರೆ ನಡೆಯಿತು.

ನಗರದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಿಂದ ಈ ಯಾತ್ರೆ ಆರಂಭಗೊಂಡು, ಗಾಂಧಿವೃತ್ತ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಸಿದ್ಧೇಶ್ವರ ದೇವಾಲಯಕ್ಕೆ ತಲುಪಿ ಸಂಪನ್ನಗೊಂಡಿತು.

* * 

ತೊರವಿಯಲ್ಲಿ ನಡೆಯಲಿರುವ ಬೃಹತ್ ಜಾನುವಾರು ಜಾತ್ರೆಯಲ್ಲಿಯೂ ಸಹ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗುವುದು. ಅಲ್ಲಿಯೂ ಸಹ ಸಹಿ ಸಂಗ್ರಹಿಸಲಾಗುವುದು

ಬಸನಗೌಡ ಪಾಟೀಲ ಯತ್ನಾಳ, ವಿಧಾನ ಪರಿಷತ್ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry