3

ಪ್ರಶ್ನೋತ್ತರ

Published:
Updated:
ಪ್ರಶ್ನೋತ್ತರ

ಹೆಸರು ಬೇಡ, ಹುಬ್ಬಳ್ಳಿ

ನಾನು M.Sc (Zoology) ಓದುತ್ತಿದ್ದು, ನಿಮ್ಮ ಅಂಕಣದಿಂದ ಪ್ರಭಾವಿತನಾಗಿ ₹ 2000 ಆರ್.ಡಿ. ಮೂರು ವರ್ಷಗಳಿಗೆ ಮಾಡಿದ್ದೇನೆ. ನಾನು ಬಿಡುವಿನ ವೇಳೆಯಲ್ಲಿ ಟ್ರ್ಯಾಕ್ಟರ್‌ ಓಡಿಸುತ್ತಿದ್ದು, ತಿಂಗಳಿಗೆ ₹ 5000–6000 ಉಳಿಸುತ್ತೇನೆ.   ನಾನು ಇತ್ತೀಚೆಗೆ ಬ್ಯಾಂಕಿಗೆ ಆರ್.ಡಿ. ಮಾಡಲು ಹೋದಾಗ PPF ಅಥವಾ NPS ಮಾಡಲು ಹೇಳಿದರು. ಇವೆರಡೂ ದೀರ್ಘಾವಧಿ ಹೂಡಿಕೆಯಾದ್ದರಿಂದ ನಿಮ್ಮ ಸಲಹೆ ಪಡೆದು ಮುಂದುವರೆಯಲು ಆಶಿಸುತ್ತೇನೆ. ನಾನು ಏನು ಮಾಡಲಿ?

ಉತ್ತರ: ನೀವು M.Sc ಓದುತ್ತಿದ್ದು, ಬಿಡುವಿನ ಸಮಯದಲ್ಲಿ ಟ್ರ್ಯಾಕ್ಟರ್‌ ಓಡಿಸಿ, ಸಂಪಾದಿಸುವುದು ಕೇಳಿ ಆಶ್ಚರ್ಯವಾಯಿತು, ಜೊತೆಗೆ ಸಂತೋಷವೂ ಆಯಿತು. ಕಾಯಕವೇ ಕೈಲಾಸ, ಸಮಯವೇ ಹಣ ಈ ಗಾದೆ ಮಾತಿಗೆ ನೀವು ಸಾಕ್ಷಿಯಾಗಿದ್ದೀರಿ. Dignity of labour ಮರೆತು ಭವಿಷ್ಯದತ್ತ ಚಿಂತಿಸುವ ನಿಮ್ಮಂತಹ ಯುವ ಪೀಳಿಗೆಯೇ ನಿಜವಾಗಿ ದೇಶದ ಆಸ್ತಿ. ನಿಮಗೆ ಅಭಿನಂದನೆಗಳು. ನೀವು ತಿಳಿಸಿದಂತೆ PPF – NPS ದೀರ್ಘಾವಧಿ ಹೂಡಿಕೆಯಾಗಿದ್ದು, ನೀವು ಮುಂದೆ ಕೆಲಸಕ್ಕೆ ಸೇರಿ ದುಡಿಯಲು ಪ್ರಾರಂಭಿಸಿದ ನಂತರ ಈ ಎರಡೂ ಹೂಡಿಕೆಗೆ ಆದ್ಯತೆ ನೀಡಿರಿ. ಅಲ್ಲಿಯ ತನಕ ನಿಮ್ಮ ಇಂದಿನ ಪರಿಸ್ಥಿತಿಗೆ ಆರ್.ಡಿ.ಯೇ ಲೇಸು.

ಮೋಹನ್‌ಕುಮಾರ್, ಬೆಂಗಳೂರು

ನಾನು ಅವಿಭಕ್ತ ಕುಟುಂಬದಲ್ಲಿ ವಾಸವಾಗಿದ್ದು, ಚಿಕ್ಕ ವಯಸ್ಸಿನವರ ಹೆಸರಿನಲ್ಲಿ ಖಾತೆ ತೆರೆಯುವಾಗ ತಂದೆ ತಾಯಿ ಹೊರತುಪಡಿಸಿ ಮೂರನೆಯವರು ಸಹಿ ಹಾಕಿ ಖಾತೆ ತೆರೆಯಬಹುದೇ ?

ಉತ್ತರ: ತಂದೆತಾಯಿ ಮಾತ್ರ ಅವರ ಚಿಕ್ಕ ಮಕ್ಕಳ ಖಾತೆ ಬ್ಯಾಂಕಿನಲ್ಲಿ ತೆರೆಯುವಾಗ, ಖಾತೆ ಪ್ರಾರಂಭಿಸುವ ಕಾಗದ ಪತ್ರಗಳಿಗೆ ಸಹಿ ಹಾಕಬಹುದು. ತಂದೆತಾಯಿಗಳಿಲ್ಲದ ಸಂದರ್ಭದಲ್ಲಿ ಪೋಷಕರು ಅಥವಾ  ಮೇಲ್ವಿಚಾರಕರು ನ್ಯಾಯಾಲಯದಿಂದ ನೇಮಕವಾದವರಾಗಿರಬೇಕು. ಅಜ್ಜ, ಅಜ್ಜಿ, ಚಿಕ್ಕಪ್ಪ, ದೊಡ್ಡಪ್ಪ ಹೀಗೆ ಹತ್ತಿರದ ಸಂಬಂಧಿಗಳು ಮೇಲ್ವಿಚಾರಕರಾಗಿ ಕೋರ್ಟ್‌ ನಿರ್ಧರಿಸುತ್ತದೆ.

ಪ್ರಶಾಂತ ಕಡಕೋಲ್, ಗದಗ

ನಾನು ವಿದ್ಯಾರ್ಥಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿದ್ದೇನೆ. ನನ್ನೊಡನೆ ₹ 20 ಲಕ್ಷ ಹಣವಿದೆ. ಇದನ್ನು 3–6 ತಿಂಗಳಿಗೆ ವಿನಿಯೋಗಿಸಲು ಮಾರ್ಗದರ್ಶನ ಮಾಡಿರಿ. ಹೂಡಿಕೆಯಲ್ಲಿ ಭದ್ರತೆ ಹಾಗೂ ಉತ್ತಮ ವರಮಾನ ಬಯಸುತ್ತೇನೆ?

ಉತ್ತರ: ಹೂಡಿಕೆಯಲ್ಲಿ ಭದ್ರತೆ, ದ್ರವ್ಯತೆ ಹಾಗೂ ಉತ್ತಮ ವರಮಾನ ಇರಬೇಕು. ನೀವು 3–6 ತಿಂಗಳು ಮಾತ್ರ ಹಣ ಹೂಡಲು ಸಾಧ್ಯವಾದ್ದರಿಂದ ಯಾವುದೇ ತಲೆನೋವಿಲ್ಲದೆ, ನಿಮ್ಮ ಮನೆಗೆ ಸಮೀಪದ ಬ್ಯಾಂಕಿನಲ್ಲಿ ಅವಧಿ ಠೇವಣಿ ಇರಿಸಿ, ನಿಶ್ಚಿಂತರಾಗಿರಿ. ಇಲ್ಲಿ ದ್ರವ್ಯತೆ ಕೂಡಾ ಇದೆ. ಅವಧಿಗೆ ಮುನ್ನ ಬಡ್ಡಿ ಸಮೇತ ಅಸಲನ್ನು ಪಡೆಯಬಹುದು. ಇನ್ನು ಉತ್ತಮ ವರಮಾನ ಬರಬಹುದಾದ ಹೂಡಿಕೆಗಳಿದ್ದರೂ, ಅಲ್ಲಿ ಭದ್ರತೆ ಇರುವುದಿಲ್ಲ. ಕೆಲವು ಹೂಡಿಕೆಗಳಲ್ಲಿ ಅಸಲನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ.

ಜೀವನ್‌ ರಿಚ್‌ಮೊಂಡ್, ಬೆಂಗಳೂರು

ನನ್ನೊಡನೆ ₹ 4 ಲಕ್ಷ ಹಣವಿದೆ. ಅಂಚೆ ಕಚೇರಿಯ ಯೋಜನೆಯಲ್ಲಿ 2 ವರ್ಷಗಳ ಅವಧಿಗೆ ಇರಿಸಬೇಕೆಂದಿದ್ದೇನೆ. ಬಡ್ಡಿ ತೆರಿಗೆ ಮುರಿಯದೇ ಪಡೆಯಬಹುದೇ ತಿಳಿಸಿರಿ. ಬಡ್ಡಿ ಮುರಿಯದಿರುವ ಏನಾದರೂ ಬೇರೆ ಹೂಡಿಕೆ ಇದೆಯೇ?

ಉತ್ತರ: ಅಂಚೆ ಕಚೇರಿಯ ತಿಂಗಳ ವರಮಾನ ಸ್ಕೀಮ್‌ (MIS)   5 ವರ್ಷಗಳ ಅವಧಿ ಠೇವಣಿ. 2 ವರ್ಷ ಇರಿಸುವಂತಿಲ್ಲ. ಈ ಠೇವಣಿಯಲ್ಲಿ T.D.S. ಇರುತ್ತದೆ. ನೀವು ತೆರಿಗೆಗೆ ಒಳಗಾಗದಿರುವಲ್ಲಿ 15G ನಮೂನೆಯ ಫಾರಂ ಕೊಟ್ಟರೆ ತೆರಿಗೆ ಮುರಿಯುವುದಿಲ್ಲ. PPF ಹೊರತಾಗಿ, ಯಾವದೇ ಠೇವಣಿ ಮೇಲೆ ಬರುವ ಬಡ್ಡಿ ವರಮಾನಕ್ಕೆ ಆದಾಯ ತೆರಿಗೆ ವಿನಾಯಿತಿ ಇರುವುದಿಲ್ಲ. ನೀವು ಪ್ರತೀ ತಿಂಗಳೂ ಬಡ್ಡಿ ಪಡೆಯಬೇಕಾದಲ್ಲಿ ಬ್ಯಾಂಕುಗಳಲ್ಲಿ, ನಿಗದಿಪಡಿಸಿದ ಬಡ್ಡಿದರದಲ್ಲಿ ಸ್ವಲ್ಪ ಕಡಿತ ಮಾಡಿಕೊಡುತ್ತಾರೆ. ಇದೇ ವೇಳೆ 3 ತಿಂಗಳಿಗೊಮ್ಮೆ ಬಡ್ಡಿ ಪಡೆದರೆ ಬಡ್ಡಿ ಕಡಿತವಾಗುವುದಿಲ್ಲ. ಇಲ್ಲಿ 2 ವರ್ಷಗಳ ಅವಧಿಗೆ ಠೇವಣಿ ಇರಿಸಬಹುದು.

ಕಾರ್ತೀಕ್ ಬಂಗೇರಾ, ಮಂಗಳೂರು

ನಾನು ಸದ್ಯ ‍ಪರರಾಷ್ಟ್ರದಲ್ಲಿದ್ದೇನೆ. ಇಂಟರ್‌ನೆಟ್ ಮುಖಾಂತರ ನಿಮ್ಮ ಪ್ರಶ್ನೋತ್ತರ ಓದುತ್ತೇನೆ. ಡಿಸೆಂಬರ್‌ನಲ್ಲಿ ಮಂಗಳೂರಿಗೆ ಬರುತ್ತೇನೆ. ನಾನು ₹ 30 ಲಕ್ಷ ಎಲ್ಲಿಯಾದರೂ ವಿನಿಯೋಗಿಸ ಬೇಕೆಂದಿದ್ದೇನೆ. FD ಮಾಡುವ ಆಸೆ ಇದೆ. ನಿಮ್ಮ ಮಾರ್ಗದರ್ಶನ ಕೇಳಿ ಮುಂದೆ ಹಣ ಹೂಡಬೇಕೆಂದಿದ್ದೇನೆ?

ಉತ್ತರ: ನೀವು ಭಾರತದ ಅನಿವಾಸಿಗಳಾಗಿದ್ದು (N.R.I.) ಭಾರತದಲ್ಲಿ ಹಣ ಹೂಡಿದರೆ, ಬರುವ ಬಡ್ಡಿಗೆ ಆದಾಯ ತೆರಿಗೆ ಇರುವುದಿಲ್ಲ. ಪರರಾಷ್ಟ್ರ ಬಿಟ್ಟು ಭಾರತದಲ್ಲಿ ತಂಗಿದ ನಂತರ, ಎಲ್ಲಾ ಠೇವಣಿ ಮೇಲಿನ ಬಡ್ಡಿಗೂ ತೆರಿಗೆ ಬರುತ್ತದೆ. ಎಫ್.ಡಿ. ಬದಲಾಗಿ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಇರಿಸಿರಿ. ಇಲ್ಲಿ ನಿಮ್ಮ ಹಣ ಚಕ್ರಬಡ್ಡಿಯಲ್ಲಿ ಬೆಳೆಯುತ್ತದೆ.

ಹೆಸರು, ಊರು ಬೇಡ

ನನ್ನ ತಾಯಿಗೆ ₹ 6 ಲಕ್ಷ ವಿಮಾ ಹಣ ಬರಲಿದೆ. ಈ ಹಣ ಅವರ ಉಪಯೋಗಕ್ಕೆ ಎಲ್ಲಿ ಇರಿಸಲಿ. ಈ ಹಣಕ್ಕೆ ತೆರಿಗೆ ಇದೆಯೇ ಪ್ಯಾನ್ ಕಾರ್ಡಿನ ಅವಶ್ಯವಿದೆಯೇ ?

ಉತ್ತರ: ನಿಮ್ಮ ತಾಯಿಗೆ ಬರುವ ಹಣ ಅವರು ಹಿರಿಯ ನಾಗರಿಕರಾಗಿದ್ದಲ್ಲಿ ಅಂಚೆಕಚೇರಿಯ ಪ್ರತಿ ತಿಂಗಳೂ ಬಡ್ಡಿಬರುವ (MIS) ನಲ್ಲಿ ಇರಿಸಿ. See 10 (D) ಪ್ರಕಾರ ಶೇ 20ಕ್ಕೂ ಹೆಚ್ಚಿನ ಪ್ರೀಮಿಯಂ ಹಣ (ಇಳಿಸಿದ ವಿಮಾ ಹಣದ sum Assured) ಹಾಗೂ ಶೇ 10ಕ್ಕೂ ಹೆಚ್ಚಿನ ಪ್ರೀಮಿಯಂ ಹಣ ಕ್ರಮವಾಗಿ 1–4–2003 ಹಾಗೂ 1–4–2012 ನಂತರ ಪಡೆದ ಪಾಲಿಸಿಗಳಿಗೆ, ಆದಾಯ ತೆರಿಗೆ ಅನ್ವಯವಾಗುತ್ತದೆ. ನಿಮ್ಮ ತಾಯಿ ಈ ಅವಧಿಗೂ ಮುನ್ನ ಪಡೆದ ಪಾಲಿಸಿಯಾದಲ್ಲಿ ಅವರಿಗೆ ತೆರಿಗೆ ಬರುವುದಿಲ್ಲ. ಪ್ಯಾನ್ ಕಾರ್ಡ್‌ ಅವಶ್ಯವಿದೆ.

ಸಂಜೀವ್‌ಕುಮಾರ್ ಶಿವಣ್ಣಗೌಡ, ವಿಜಯಪುರ

ನಾನು SBI ನಲ್ಲಿ PPF ಖಾತೆ ತೆರೆದಿದ್ದೆ. ಇದನ್ನು ಅಂಚೆಕಚೇರಿಗೆ ವರ್ಗಾಯಿಸಬೇಕೆಂದಿದ್ದೇನೆ. ಇದು ಸಾಧ್ಯವೇ ಹಾಗೂ ಏನು ಮಾಡಬೇಕು?

ಉತ್ತರ: ಕೇಂದ್ರ ಸರ್ಕಾರ ಸಾದರಪಡಿಸಿದ ಠೇವಣಿ ಯೋಜನೆಗಳಾದ PPF ಹಾಗೂ ಸುಕನ್ಯಾ ಸಮೃದ್ಧಿ ಯೋಜನೆ, ಇವೆರಡನ್ನೂ ಬ್ಯಾಂಕಿನಿಂದ ಅಂಚೆಕಚೇರಿಗೂ ಅಂಚೆಕಚೇರಿಯಿಂದ ಬ್ಯಾಂಕಿಗೂ ವರ್ಗಾಯಿಸುವ ಸೌಲತ್ತು ಸದಾ ಇದೆ. ನೀವು SBIಗೆ ಹೋಗಿ, ಬಿಳಿಹಾಳೆಯಲ್ಲಿ ಖಾತೆ ವಿವರಣೆ ನೀಡಿ, ನಿಮಗೆ ಬೇಕಾದ ಅಂಚೆ ಕಚೇರಿಗೆ PPF ವರ್ಗಾಯಿಸಲು ಅರ್ಜಿ ಕೊಡಿ. SBIನಲ್ಲಿ ನಿಮಗೆ ಎಲ್ಲಾ ಮಾಹಿತಿ ನೀಡುತ್ತಾರೆ ಹಾಗೂ ಸಹಕರಿಸುತ್ತಾರೆ.

ಶ್ರೀನಿವಾಸರೆಡ್ಡಿ, ಊರುಬೇಡ

ನನ್ನ ವಯಸ್ಸು 57. ರಾಜ್ಯ ಸರ್ಕಾರದ ನೌಕರ. ನನ್ನ ಒಟ್ಟು ಸಂಬಳ ₹ 1 ಲಕ್ಷ. ಹೆಂಡತಿ ವಯಸ್ಸು 56. ₹ 25 ಲಕ್ಷ ಎಫ್.ಡಿ. ಮಾಡಿಸಿದ್ದೇನೆ. ನಾನು ನಿವೃತ್ತನಾದ ನಂತರ ತಪ್ಪದೇ ಆದಾಯ ಬರಲು (Regular Income) ಯಾವುದು ಉತ್ತಮ ಹೂಡಿಕೆ.  ನನ್ನ ಮಗ ಮದುವೆಯಾಗಿ ಸ್ವತಂತ್ರವಾಗಿ ವಾಸಿಸುತ್ತಿದ್ದಾನೆ. ನನಗೆ ₹ 25 ಸಾವಿರ ಬಾಡಿಗೆ ಬರುತ್ತದೆ. ನನಗೆ ಆರೋಗ್ಯ ವಿಮೆ ₹ 4 ಲಕ್ಷವಿದೆ. ದಯಮಾಡಿ ಮಾರ್ಗದರ್ಶನ ಮಾಡಿ.

ಉತ್ತರ: ನೀವು ನಿವೃತ್ತಿ ಹೊಂದಿದ ನಂತರ, ನಿಮಗೆ ಪಿಂಚಣಿ ಇದೆ. ನಿವೃತ್ತಿಯಿಂದ ಕೂಡಾ ದೊಡ್ಡ ಮೊತ್ತ ಬರುತ್ತದೆ. ಜೊತೆಗೆ ಬಾಡಿಗೆ ₹ 25 ಸಾವಿರ ಬರುತ್ತದೆ. ಈ ಎಲ್ಲಾ ಆದಾಯ ನಿಮ್ಮ ನಿವೃತ್ತಿ ನಂತರ ಬರುವುದರಿಂದ ನಿಮಗೆ ಪ್ರತೀ ತಿಂಗಳೂ ಬೇರೆ ಆದಾಯ ಅವಶ್ಯವಿಲ್ಲ. ಈ ಎಲ್ಲಾ ಮೊತ್ತ ಲೆಕ್ಕ ಹಾಕಿ ಠೇವಣಿ ಇಡುವಾಗ ಬರುವ ಬಡ್ಡಿಗೆ ಕನಿಷ್ಠ ಶೇ 20 ನೀವು ತೆರಿಗೆ ಸಲ್ಲಿಸುವ ಸಂದರ್ಭ ಇದೆ. ಸುಮ್ಮನೆ ತೆರಿಗೆ ತುಂಬುವುದಕ್ಕಿಂತ ಒಳ್ಳೆ ಜಾಗ ಸಿಕ್ಕಿದ್ದರೆ ಕನಿಷ್ಠ 30X40 ಅಳತೆಯ ನಿವೇಶನ ಖರೀದಿಸಿರಿ. ಇದರಿಂದ ಹಣದ ನಿರ್ವಹಣೆ ಬಹಳ ಸುಲಭವಾಗುತ್ತದೆ. ಭೂಮಿ ಮೇಲೆ ಹಾಕಿದ ಹಣ ಎಂದಿಗೂ ಕಡಿಮೆಯಾಗುವುದಿಲ್ಲ.

***

ಹೆಸರು, ಊರು ಬೇಡ

ವಯಸ್ಸು 27, ಅವಿವಾಹಿತ,  ಶೀಘ್ರದಲ್ಲಿಯೇ ಮದುವೆಯಾಗಲಿದ್ದೇನೆ. ಕಸಬು ಹಸು ಸಾಕಾಣಿಕೆ. ಎರಡು ಎಕರೆ ನೀರಾವರಿ ರಹಿತ ಜಮೀನು ಇದೆ. 4 ಜನ ಅವಲಂಬಿತರಿದ್ದಾರೆ. ಚಿಕ್ಕಪ್ಪ ಅಂಗವಿಕಲ. ಸುಮಾರು 6 ವರ್ಷಗಳ ಹಿಂದೆ ನಾನು ನಿಮ್ಮ ಪ್ರಶ್ನೋತ್ತರ ವಿಭಾಗದಿಂದ ಪ್ರಭಾವಿತನಾಗಿ, ₹ 16 ಲಕ್ಷ RD+FD ಯಿಂದ ಉಳಿತಾಯ ಮಾಡಿದ್ದೇನೆ. ₹ 6000 NSC, ₹ 4100 RD ಶೇ 9.25ರಲ್ಲಿ 10 ವರ್ಷಗಳ ಅವಧಿಗೆ ಹಾಗೂ ವಾರ್ಷಿಕ ₹ 30,000 ಜೀವನ ಆನಂದ ಪಾಲಿಸಿಗೆ ತುಂಬುತ್ತೇನೆ. ಸಿಂಡ್ ಆರೋಗ್ಯ ಹಾಗೂ ನನ್ನ ಉಳಿತಾಯದ ಬಗ್ಗೆ ತಿಳಿಸಿ?

ಉತ್ತರ: ನಿಮ್ಮ ಉಳಿತಾಯ ತುಂಬಾ ಚೆನ್ನಾಗಿದೆ. ಕಷ್ಟಪಟ್ಟು ಗಳಿಸಿದ ಹಣ ಹೆಚ್ಚಿನ ಬಡ್ಡಿ, ಉಡುಗೊರೆ, ಕಮೀಷನ್ ಆಸೆಯಿಂದ ಅಭದ್ರವಾದ ಜಾಗದಲ್ಲಿ ಎಂದಿಗೂ ಹೂಡದಿರಿ. ನೀವು RD 10 ವರ್ಷ ಮಾಡಿರುವುದರಿಂದ ಈಗ RD ಮೇಲಿನ ಬಡ್ಡಿ ದರ ಕಡಿಮೆಯಾದರೂ, ನಿಮಗೆ ಶೇ 9.25ರಷ್ಟು ಬಡ್ಡಿ 10 ವರ್ಷಗಳ ತನಕ ದೊರೆಯುತ್ತದೆ. ಹಸು ಸಾಕಾಣಿಕೆ ಮಾಡಿ 4 ಜನ ಅವಲಂಬಿತರನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳುವ ನಿಮ್ಮ ಸ್ವಭಾವ ಎಲ್ಲರೂ ಮೆಚ್ಚಬೇಕಾಗಿದೆ. ನನ್ನ ಅಂಕಣ 6 ವರ್ಷಗಳ ಹಿಂದೆ ಓದಿ ಇಂದು ದೊಡ್ಡ ಮೊತ್ತದ ಠೇವಣಿ ಹೊಂದಿರುವುದು ನನಗೆ ಹೆಮ್ಮೆ ಎನಿಸುತ್ತದೆ. ಮುಂದೆಯೂ ಹಾಗೆಯೇ ಉಳಿಸಿ ಕರೋಡಪತಿಯಾಗಿರಿ. ನಿಮಗೆ ಶುಭ ಹಾರೈಸುತ್ತೇನೆ. ಸಿಂಡ್‌ ಆರೋಗ್ಯ ಒಂದು ಉತ್ತಮ ಆರೋಗ್ಯ ವಿಮಾ ಯೋಜನೆ ಅದರ ಕೋಷ್ಠಿಕ ಈ ಕೆಳಗಿನಂತಿದೆ. ನೀವು ಸೇರಿ ಮನೆಯಲ್ಲಿ 5 ಜನ ಇರುವುದರಿಂದ ಮೇಲಿನಂತೆ ಕನಿಷ್ಠ ₹ 3 ಲಕ್ಷ ಸಿಂಡ್‌ ಆರೋಗ್ಯ ವಿಮೆ ಮಾಡಿರಿ. ಇಲ್ಲಿ ಕಟ್ಟಿದ ಹಣ ವಾಪಸು ಬರುವುದಿಲ್ಲ. 5 ಜನರಲ್ಲಿ ಯಾರಾದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಲ್ಲಿ ₹ 3 ಲಕ್ಷಗಳ ತನಕ (ವಿಮೆ ಮಾಡಿದ ಮೊತ್ತಕ್ಕನುಸಾರವಾಗಿ) ಹಣ ರಹಿತ ಚಿಕಿತ್ಸೆ ಪಡೆಯಬಹುದು. ಹೆಚ್ಚಿನ ವಿಚಾರಕ್ಕೆ ಸಿಂಡಿಕೇಟ್ ಬ್ಯಾಂಕ್ ಸಂಪರ್ಕಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry