7

ಚಂಡಮಾರುತ ನಿರ್ವಹಣೆಗೆ ಸನ್ನದ್ಧತೆ ಸುಧಾರಣೆಯಾಗಲಿ

Published:
Updated:
ಚಂಡಮಾರುತ ನಿರ್ವಹಣೆಗೆ ಸನ್ನದ್ಧತೆ ಸುಧಾರಣೆಯಾಗಲಿ

ಮೂರು ವಾರಗಳ ಹಿಂದೆ ಅರೇಬಿಯನ್ ಸಮುದ್ರಕ್ಕೆ ಅಪ್ಪಳಿಸಿದ ಓಖಿ ಚಂಡಮಾರುತದಿಂದಾಗಿ ತಮಿಳುನಾಡು ಹಾಗೂ ಕೇರಳದ ನೂರಾರು ಮೀನುಗಾರರು ಕಣ್ಮರೆಯಾಗಿದ್ದಾರೆ. ಅನೇಕ ಜನರ ಜೀವಹಾನಿಗಳಲ್ಲದೆ ಅಪಾರ ಆಸ್ತಿಪಾಸ್ತಿ ನಷ್ಟವಾಗಿದೆ. ಲಕ್ಷದ್ವೀಪ ಹಾಗೂ ಕೇರಳ, ತಮಿಳುನಾಡಿನ ಸಂತ್ರಸ್ತ ಪ್ರದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭೇಟಿ ನೀಡಿ ಪರಿಹಾರ ಕಾರ್ಯಾಚರಣೆಗಳನ್ನು ಪರಿಶೀಲಿಸಿದ್ದಾರೆ. ಈ ಚಂಡಮಾರುತದ ಪರಿಣಾಮಗಳನ್ನು ತಗ್ಗಿಸುವುದು ಸಾಧ್ಯವಿತ್ತೇ ಎಂಬುದು ಕೇಳಿಕೊಳ್ಳಬೇಕಾದ ಸದ್ಯದ ಪ್ರಶ್ನೆಯಾಗಿದೆ. ಭಾರತದ ನೈಸರ್ಗಿಕ ವಿಪತ್ತು ನಿರ್ವಹಣಾ ವ್ಯವಸ್ಥೆಯ ಸನ್ನದ್ಧತೆಯ ಕೊರತೆ, ಈ ವಿದ್ಯಮಾನದಿಂದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಓಖಿ ಚಂಡಮಾರುತ ಕುರಿತಾದ ಎಚ್ಚರಿಕೆ ನೀಡುವಲ್ಲಿ ವಿಳಂಬವಾಗಿದ್ದರಿಂದ ಅಷ್ಟರಲ್ಲಾಗಲೇ ಸಮುದ್ರಕ್ಕಿಳಿದಿದ್ದ ಅನೇಕ ಮೀನುಗಾರರು ಸಾವಿಗೀಡಾಗಬೇಕಾಯಿತು. ವಾಯುಭಾರ ಕುಸಿತದ ಎಚ್ಚರಿಕೆಗಳಿಗೆ ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳೂ ನೀಡಬೇಕಾದಷ್ಟು ಗಮನ ನೀಡಲಿಲ್ಲ ಎಂಬುದು ವ್ಯವಸ್ಥೆಯ ಲೋಪ. ನಂತರ ಕೈಗೊಂಡ ರಕ್ಷಣಾ ಕಾರ್ಯಾಚರಣೆಯೂ ವಿಳಂಬವಾಯಿತು . ಏಕೆಂದರೆ ಪರಿಹಾರ ಕಾರ್ಯಾಚರಣೆಗೆ ಅಗತ್ಯವಾದ ಸನ್ನದ್ಧತೆ ಇರಲಿಲ್ಲ ಎಂಬುದು ಅಕ್ಷಮ್ಯ. ಸಂತ್ರಸ್ತ ಕುಟುಂಬಗಳು ರಾಜ್ಯದ ಅಧಿಕಾರಿಗಳನ್ನು ದೂಷಿಸಿದ್ದಾರೆ. ಆ ಅಧಿಕಾರಿಗಳು ಕೇಂದ್ರ ಸಂಸ್ಥೆಗಳತ್ತ ಕೈತೋರಿದ್ದಾರೆ ಎಂಬುದು ಹೊಣೆ ಜಾರಿಸುವ ಯತ್ನ ಎಂದಷ್ಟೇ ಹೇಳಬಹುದು.

1999ರಲ್ಲಿ ಒಡಿಶಾ ಸೂಪರ್ ಚಂಡಮಾರುತದಿಂದ 10,100 ಜನರು ಸತ್ತಿದ್ದರು. ಆದರೆ ಆ ನಂತರ 2013ರಲ್ಲಿ ಒಡಿಶಾದಲ್ಲಿ ಅಪ್ಪಳಿಸಿದ ಫಾಲಿನ್ ಚಂಡಮಾರುತ ಹಾಗೂ 2014ರಲ್ಲಿ ಆಂಧ್ರಪ್ರದೇಶದಲ್ಲಿ ಅಪ್ಪಳಿಸಿದ್ದ ಹುಡ್ ಹುಡ್ ಚಂಡಮಾರುತ ಸಂದರ್ಭದಲ್ಲಿ ಸಂತ್ರಸ್ತರ ತೆರವು ಕಾರ್ಯಾಚರಣೆಯನ್ನು ದಕ್ಷವಾಗಿ ನಿರ್ವಹಿಸಲಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು. ಇದರಿಂದ ಜೀವಹಾನಿ ಕಡಿಮೆಯಾಗಿತ್ತು. ಆದರೆ, 2013ರ ಉತ್ತರಾಖಂಡ ಹಾಗೂ 2014 ಶ್ರೀನಗರ ಪ್ರವಾಹ ಸಂದರ್ಭದಲ್ಲಿ ಭಾರಿ ಮಳೆ ಬಗ್ಗೆ ಎಚ್ಚರಿಕೆ ನೀಡಲಾಗಿದ್ದರೂ ಅದು ಅಸ್ಪಷ್ಟವಾಗಿತ್ತು ಎಂದು ರಾಜ್ಯ ಸರ್ಕಾರಗಳು ದೂರಿದ್ದವು. ಈಗ ಕೇರಳದಲ್ಲೂ ಇಂತಹ ಸಮಸ್ಯೆ ಪುನರಾವರ್ತನೆಯಾಗಿದೆ. ಸ್ಪಷ್ಟ ಹಾಗೂ ಸಕಾಲಿಕ ಎಚ್ಚರಿಕೆ ಇದ್ದಿದ್ದರೆ ಜೀವ ಹಾಗೂ ಆಸ್ತಿಪಾಸ್ತಿ ನಷ್ಟದ ಪ್ರಮಾಣವನ್ನು ಕಡಿಮೆ ಮಾಡುವುದು ಸಾಧ್ಯವಿತ್ತು. ಓಖಿ ಚಂಡಮಾರುತದ ಸಂದರ್ಭದಲ್ಲಿ ಸಂವಹನ ಕೊರತೆಯ ಸಮಸ್ಯೆ ಎದ್ದು ಕಾಣಿಸುತ್ತದೆ.

ಹೀಗಾಗಿ ಭಾರತೀಯ ಹವಾಮಾನ ಮುನ್ಸೂಚನಾ ಕೇಂದ್ರಗಳು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರಗಳ ಮಧ್ಯೆ ಉತ್ತಮ ಸಮನ್ವಯ ಸಾಧ್ಯವಾಗಬೇಕಾದುದು ಅತ್ಯಂತ ಅವಶ್ಯ. ‘ಹವಾಮಾನ ಬದಲಾವಣೆ ’ ಸದ್ಯದ ಸಂದರ್ಭದಲ್ಲಿ ಜಾಗತಿಕವಾದ ದೊಡ್ಡ ಸವಾಲು ಎಂಬುದು ನಮಗೆ ನೆನಪಿರಬೇಕು. ಹೀಗಾಗಿ ಹೆಚ್ಚು ತೀವ್ರತೆಯ ಚಂಡಮಾರುತಗಳು ಮುಂದಿನ ದಿನಗಳಲ್ಲೂ ನಿರೀಕ್ಷಿತವೇ. ಆದರೆ ಇಂತಹ ವಿದ್ಯಮಾನಗಳನ್ನು ಎದುರಿಸಲು ನಾವು ಎಷ್ಟರಮಟ್ಟಿಗೆ ಸಜ್ಜಾಗಿರುತ್ತೇವೆ ಎಂಬುದು ಮುಖ್ಯವಾಗುತ್ತದೆ. ಹವಾಮಾನ ಎಂಬುದು ನಮ್ಮ ಸರ್ಕಾರಗಳ ಯೋಜನೆಗಳ ಭಾಗವಾಗಬೇಕು. ನಿಗಾ ವ್ಯವಸ್ಥೆ ಸಮರ್ಪಕವಾಗಿರಬೇಕು. ನಿಖರವಾದ ಮುನ್ಸೂಚನೆಗಳನ್ನು ಸಕಾಲದಲ್ಲಿ ಜನರಿಗೆ ತಲುಪಿಸುವ ತನ್ನ ಕರ್ತವ್ಯದಲ್ಲಿ ಲೋಪವಾಗದಂತೆ ಹವಾಮಾನ ಇಲಾಖೆ ಎಚ್ಚರ ವಹಿಸಬೇಕು. ಹಾಗೆಯೇ ವಿಪತ್ತು ನಿರ್ವಹಣಾ ಸಂಸ್ಥೆಗಳೂ ಜಾಗೃತವಾಗಿದ್ದು ಸನ್ನದ್ಧತೆ ಪ್ರದರ್ಶಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry