7

ಶಾಲೆ ಮೇಲ್ಛಾವಣಿ ಕುಸಿತ: ಆತಂಕದಲ್ಲಿ ಮಕ್ಕಳು

Published:
Updated:
ಶಾಲೆ ಮೇಲ್ಛಾವಣಿ ಕುಸಿತ: ಆತಂಕದಲ್ಲಿ ಮಕ್ಕಳು

ಸೇಡಂ: ತಾಲ್ಲೂಕಿನ ಮಳಖೇಡ ಗ್ರಾಮದ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಸೋಮವಾರ ರಾತ್ರಿ ಕುಸಿದಿದೆ. ಶಾಲೆಯ ಸಿಬ್ಬಂದಿ ಕೋಣೆ ಕುಸಿದಿದ್ದರಿಂದ ಪ್ರಾಣಾಪಾಯದಿಂದ ಪಾರಾದಂತಾಗಿದೆ.

ಎಂದಿನಂತೆ ಮಂಗಳವಾರ ಶಾಲೆ ತೆರೆದಾಗ ಮೇಲ್ಛಾವಣಿ ಕುಸಿದಿದ್ದು ಶಿಕ್ಷಕರಿಗೆ ಗೊತ್ತಾಗಿದೆ. ಸೋಮವಾರ ರಾತ್ರಿ ಸಂದರ್ಭದಲ್ಲಿ ಮೇಲ್ಛಾವಣಿ ಕುಸಿದಿದ್ದರಿಂದ ಸಿಬ್ಬಂದಿ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ‘ಒಂದು ವೇಳೆ ನಾವು ಒಳಗಡೆ ಇರುವಾಗ ಮೇಲ್ಛಾವಣಿ ಕುಸಿದಿದ್ದರೇ ನಮ್ಮ ಜೀವಕ್ಕೆ ಹಾನಿಯಾಗುತ್ತಿತ್ತು’ ಎಂದು ಶಿಕ್ಷಕಿಯೊಬ್ಬರು ವಿವರಿಸಿದರು.

‘ಸಿಬ್ಬಂದಿ ಕೋಣೆ ಕುಸಿದಿದ್ದರಿಂದ ಪಕ್ಕದಲ್ಲಿರುವ ತರಗತಿ ಕೋಣೆಯಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಹೆದರುತ್ತಿದ್ದಾರೆ. ಸಿಬ್ಬಂದಿ ಕೋಣೆಯ ಪಕ್ಕದಲ್ಲಿ ರುವ ಎರಡು ಕೋಣೆಗಳ ಗೋಡೆಗಳು ಶಿಥಿಲಗೊಂಡಿವೆ. ಮೇಲ್ಛಾವಣಿಯ ಸಿಮೆಂಟ್ ಪ್ಲಾಸ್ಟರ್ ತೆಳ್ಳನೆಯ ಪದರು ರೂಪದಲ್ಲಿ ಬಿರುಕು ಬಿಟ್ಟಿದ್ದರಿಂದ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಿದೆ. ಪಾಠ ಮಾಡುತ್ತಿದ್ದರೂ ಸಹ ವಿದ್ಯಾರ್ಥಿಗಳು ಛಾವಣಿಯತ್ತ ನೋಡುತ್ತಿರುತ್ತಾರೆ’ ಎಂದು ಶಾಲೆಯ ಶಿಕ್ಷಕರು ಹೇಳುತ್ತಾರೆ.

ಶಾಲೆಯ ಕಟ್ಟಡ ತುಂಬಾ ಹಳೆಯದಾಗಿದ್ದು, ಅದು ಅಲ್ಲಲ್ಲಿ ಬಿರುಕು ಬಿಟ್ಟಿದೆ. ಒಂದರಿಂದ 7ನೇ ತರಗತಿವರೆಗೆ ಒಟ್ಟು 98 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 98 ವಿದ್ಯಾರ್ಥಿಗಳಿಗೆ 5 ಜನ ಶಿಕ್ಷಕರಿದ್ದಾರೆ. ಒಟ್ಟು 7 ಶಾಲಾ ಕೊಠಡಿಗಳು ಇದ್ದು, ಅದರಲ್ಲಿ ಮೂರು ಕೋಣೆಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಲಾಗುತ್ತದೆ. ಒಂದರಿಂದ ಮೂರನೇ ತರಗತಿವರೆಗೆ ಒಂದು ಕೋಣೆಯಲ್ಲಿ, 5-6ನೇ ತರಗತಿ ಒಂದು ಕೋಣೆಯಲ್ಲಿ ಮತ್ತು 4-7 ತರಗತಿ ಒಂದು ಕೋಣೆಯಲ್ಲಿ ವಿದ್ಯಾರ್ಥಿಗಳನ್ನು ಕುಳ್ಳಿರಿಸಿ ಪಾಠ ಮಾಡಲಾಗುತ್ತಿದೆ. ಒಂದು ಕೋಣೆಯಲ್ಲಿ ಸಿಬ್ಬಂದಿ ಕುಳಿತುಕೊಳ್ಳುತ್ತಾರೆ. ಮತ್ತೊಂದು ಕೋಣೆ ಹೆಚ್ಚು ಶಿಥಿಲಗೊಂಡಿದ್ದರಿಂದ ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ.

‘ಶಾಲೆಯ ಕೋಣೆಗಳು ಶಿಥಿಲ ಗೊಂಡಿವೆ. ಮೇಲ್ಛಾವಣಿ ಮಳೆಗಾಲದಲ್ಲಿ ನೀರು ಹೀರಿಕೊಂಡು ಉಬ್ಬುತ್ತಿದೆ. ಮಳೆಗಾಲದಲ್ಲಿ ತರಗತಿಯಲ್ಲಿ ನೀರು ನಿಲ್ಲುತ್ತಿದೆ. ಇದರಿಂದ ವಿದ್ಯಾರ್ಥಿಗಳ ಪಾಠಕ್ಕೆ ತೊಂದರೆಯಾಗುತ್ತಿದೆ. ಕೆಲವೊಂದು ಬಾರಿ ವಿದ್ಯಾರ್ಥಿಗಳು ನೀರಲ್ಲಿಯೇ ಕುಳಿತು ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ. ಇದರ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಇದುವರೆಗೂ ಸಮಸ್ಯೆ ಬಗೆಹರಿದಿಲ್ಲ’ ಎಂದು ಪ್ರಭಾರಿ ಮುಖ್ಯಶಿಕ್ಷಕಿ ಶಾರದಾಬಾಯಿ ತಿಳಿಸುತ್ತಾರೆ.

‘ಶಾಲೆಯ ಕಟ್ಟಡವನ್ನು ದುರಸ್ತಿ ಮಾಡುವಂತೆ ಗ್ರಾಮ ಪಂಚಾಯಿತಿ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಆದರೆ, ಇಲ್ಲಿಯವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಕೆಲಸಗಳು ಈಡೇರಿಲ್ಲ. ಇದು ಕೊನೆಯ ಬೇಡಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಪಂದಿಸ ದಿದ್ದರೆ ಶಾಲೆಗೆ ಬೀಗ ಹಾಕಿ ಪ್ರತಿಭಟಿನೆ ನಡೆಸಲಾಗುತ್ತದೆ’ ಎಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಜ್ಯೋತಿ ನಂದ ಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡು ವರ್ಷಗಳಿಂದ ಶಾಲೆಯ ಅವ್ಯವಸ್ಥೆಯ ಕುರಿತು ಅಧಿಕಾರಿಗಳ ಗಮನಕ್ಕೆ ತರುತ್ತಿದ್ದೇವೆ. ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆಯ ಮಾತುಗಳನ್ನು ಹೇಳುತ್ತಿದ್ದಾರೆ. ಆದರೆ, ಕಾರ್ಯರೂಪಕ್ಕೆ ಬಂದಿಲ್ಲ. ಹಲವು ಬಾರಿ ವಿದ್ಯಾರ್ಥಿಗಳು ನೇರವಾಗಿ ಈ ಹಿಂದೆ ಇದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತರೆಡ್ಡಿ ಅವರಿಗೆ ಮಾತನಾಡಿ, ಸಮಸ್ಯೆ ವಿವರಿಸಿದ್ದಾರೆ’ ಎಂದು ಅವರು ಹೇಳಿದರು.

‘ಈ ಹಿಂದೆ ವಿದ್ಯಾರ್ಥಿಗಳು ಹೋರಾಟ ಮಾಡಲು ಸಿದ್ಧರಾಗಿದ್ದರು. ಆದರೆ, ಅವರ ಮನವೊಲಿಸಲಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಅಧಿಕಾರಿಗಳು ಸ್ಪಂದಿಸದಿದ್ದರೆ ಹೋರಾಟ ಮಾಡಲಾಗುತ್ತದೆ’ ಎಂದು ಜ್ಯೋತಿ ಎಚ್ಚರಿಸಿದರು.

ಛಾವಣಿ ಕುಸಿದರೆ ಯಾರು ಹೊಣೆ?

ಸೇಡಂ: ‘ಶಾಲೆಯ 2–3 ಕೊಠಡಿಗಳು ಶಿಥಿಲಗೊಂಡಿವೆ. ಇದರಿಂದ ವಿದ್ಯಾರ್ಥಿಗಳು ಕೊಠಡಿಯಲ್ಲಿ ಕುಳಿತುಕೊಳ್ಳಲು ಹೆದರುತ್ತಿದ್ದಾರೆ. ಶಾಲಾ ಅವಧಿಯಲ್ಲಿ ಕಟ್ಟಡ ಕುಸಿದರೆ ವಿದ್ಯಾರ್ಥಿಗಳ ಪ್ರಾಣಕ್ಕೆ ಹಾನಿಯಾಗುತ್ತದೆ. ಇದಕ್ಕೆ ಯಾರು ಜವಾಬ್ದಾರರಾಗುತ್ತಾರೆ?’ ಎಂದು ಪ್ರಭಾರಿ ಮುಖ್ಯಶಿಕ್ಷಕಿ ಶಾರದಾಬಾಯಿ ಅಳಲು ತೋಡಿಕೊಂಡರು.

* * 

ಇಲ್ಲಿಯವರೆಗೆ ಯಾರೂ ಸ್ಪಂದಿಸಿಲ್ಲ. ಜನಪ್ರತಿನಿಧಿಗಳು, ಅಧಿಕಾರಿ ಗಳು ಇತ್ತ ಗಮನ ಹರಿಸಬೇಕು.

ರಾಜಕುಮಾರ ಕಟ್ಟಿ, ಅಧ್ಯಕ್ಷರು, ನಮೋ ಬುದ್ಧ ಸೇವಾ ಕೇಂದ್ರ<

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry