7

ದೇವರು ನಗುವುದು ಯಾವಾಗ?

Published:
Updated:
ದೇವರು ನಗುವುದು ಯಾವಾಗ?

ರವೀಂದ್ರನಾಥ ಟ್ಯಾಗೋರ್‌ ಅವರ ಪದ್ಯವೊಂದರ ಕನ್ನಡ ಅನುವಾದ ಹೀಗಿದೆ; ‘ಭಕ್ತಿಪಾತ್ರ’ ಅದರ ಶೀರ್ಷಿಕೆ:

ಸಡಗರದಿಂದಲಿ ತೇರನು ಎಳೆದರು

ಜನರೆಲ್ಲರು ಸೇರಿ.

ಜುಡಿಯಲಿ ಹೊರಳುತ ವಂದನೆಗೈವರು

ಭಕ್ತರು ಮಿತಿಮೀರಿ.

‘‘ನಾನೇ ದೇವರು ಎಂದಿತು ದಾರಿಯು,’’

ರಥವೆಂದಿತು ‘’ನಾನು.’’

‘‘ನಾನೇ ದೇವರು’’ ಎನ್ನಲು ಮೂರ್ತಿಯು

ದೇವನಕ್ಕ ತಾನು.

ಬಂಗಾಳಿಯಿಂದ ಈ ಪದ್ಯವನ್ನು ಅನುವಾದ ಮಾಡಿದವರು ಎಸ್‌. ಜಿ. ಕುಲಕರ್ಣಿ. ಪದ್ಯದ ಅರ್ಥಕ್ಕೆ ವಿಶ್ಲೇಷಣೆ ಏನೂ ಬೇಕಾಗಿಲ್ಲ; ಅರ್ಥ ಸುಲಭವಾಗಿಯೇ ಇದೆ. ಒಂದು ರೀತಿಯಲ್ಲಿ ಇಲ್ಲಿ ‘ದೇವರ ಹುಡುಕಾಟ’ವಿದೆ.

ನಾವು ಎಷ್ಟೋ ಸಲ ಮೈಲುಗಲ್ಲನ್ನೇ ಊರು ಎಂದು ಭಾವಿಸಿಕೊಳ್ಳುತ್ತೇವೆ. ಹೀಗೆ ತಪ್ಪಾಗಿ ತಿಳಿಯುವ ಪ್ರಕ್ರಿಯೆಯನ್ನು ವೇದಾಂತದ ಪರಿಭಾಷೆಯಲ್ಲಿ ‘ಅಧ್ಯಾಸ’ ಎನ್ನುತ್ತಾರೆನ್ನಿ! ಅಲ್ಲೊಂದು ಹಗ್ಗ ಬಿದ್ದಿದೆ; ಮಬ್ಬಾದ ಬೆಳಕಿದೆ; ಆಗ ನಾವು ಆ ಹಗ್ಗವನ್ನೇ ಹಾವು ಎಂದು ತಿಳಿದು ಭಯಪಡುತ್ತೇವೆ. ಹೀಗೆ ಹಗ್ಗವನ್ನು ಹಾವು ಎಂದು ತಿಳಿಯುವ ದೃಷ್ಟಿಯನ್ನೇ ಅಧ್ಯಾಸ ಎನ್ನುವುದು.

ಜೀವನದುದ್ದಕ್ಕೂ ನಮ್ಮ ಈ ಅಧ್ಯಾಸಬುದ್ಧಿಯದೇ ಪ್ರಾಬಲ್ಯ ಎದ್ದುಕಾಣುತ್ತದೆ. ಸುಖ–ಸಂತೋಷವನ್ನು ಹುಡುಕುವುದೇ ನಮ್ಮ ಎಲ್ಲರ ಗುರಿಯೇ ಆಗಿದೆಯಲ್ಲವೆ? ಆದರೆ ನಾವು ಸುಖ ಎಂದು ಯಾವುದನ್ನು ನೋಡುತ್ತಿದ್ದೇವೆ; ಸಂತೋಷ ಎಂದು ಯಾವುದನ್ನು ನಂಬಿದ್ದೇವೆ?

ಜಾತ್ರೆಯಲ್ಲಿ ರಥವನ್ನು ಎಳೆಯಲು ಭಕ್ತರು ಸೇರಿದ್ದಾರೆ. ಜಾತ್ರೆ, ರಥೋತ್ಸವ ಎಂದರೆ ಒಬ್ಬರು, ಇಬ್ಬರಿಂದ ಸಾಧ್ಯವಾಗುವಂಥದ್ದಲ್ಲ; ಇಡಿಯ ಊರಿಗೆ ಊರೇ ಸೇರಬೇಕು. ಅಷ್ಟೇ ಅಲ್ಲ, ಊರು ಕೂಡ ಸಜ್ಜಾಗಬೇಕು; ರಥವನ್ನು ಕಟ್ಟಬೇಕು; ರಥವನ್ನು ಎಳೆಯಲು ಹಗ್ಗವೂ ಬೇಕು; ಜನರೂ ಬೇಕು; ರಸ್ತೆಯೂ ಬೇಕು. ಎಲ್ಲ ಸಿದ್ಧ ಎಂದಿಟ್ಟುಕೊಳ್ಳಿ. ಖಾಲಿ ರಥವನ್ನು ಎಳೆಯಲಾಗುತ್ತದೆಯೆ? ರಥದಲ್ಲಿ ಕುಳ್ಳರಿಸಲು ದೇವರ ಮೂರ್ತಿಯೂ ಬೇಕು. ಒಟ್ಟಿನಲ್ಲಿ ರಥೋತ್ಸವ ಎನ್ನುವುದು ಸಾಮೂಹಿಕ ಪ್ರಯತ್ನದಿಂದಾಗಿಯೇ ಸಾಧ್ಯವಾಗುವಂಥದ್ದು.

ಹೀಗಿದ್ದರೂ ಆ ಜಾತ್ರೆಯಲ್ಲಿ ಭಾಗವಹಿಸಿದ್ದವರೆಲ್ಲರೂ ‘ನನ್ನಿಂದಲೇ ಈ ಜಾತ್ರೆ ನಡೆಯುತ್ತಿದೆ’ – ಎಂದು ಯೋಚಿಸತೊಡಗಿದರೆ ಗತಿ ಏನು? ಜಾತ್ರೆ ನನ್ನಿಂದಲೇ ಎಂದು ಯೋಚಿಸುವುದಷ್ಟೆ ಅಲ್ಲ, ‘ದೇವರೇ ನಾನು’ ಎಂಬ ಆಲೋಚನೆ ಬಂದರೆ? ಇಂಥ ನಿಲುವನ್ನೇ ಠಾಕೂರರ ಪದ್ಯ ವ್ಯಂಗ್ಯ ಮಾಡುತ್ತಿರುವುದು.

ರಥವಾಗಲೀ, ರಥದಲ್ಲಿರುವ ಮೂರ್ತಿಯಾಗಲೀ – ಇವೆಲ್ಲವೂ ದೈವದ ಸಂಕೇತಗಳು ಮಾತ್ರವೇ; ಅವೇ ದೇವರಲ್ಲ. ಹೀಗೆಯೇ ಆ ಊರಿನ ಪ್ರತಿ ವ್ಯಕ್ತಿಯೂ ಆ ಊರಿನ ಭಾಗವೇ; ಆದರೆ ಅವನೇ ಊರಲ್ಲ. ನಾನೇ ದೇವರು – ಎಂಬ ಅಹಂ ಕೇವಲ ಮನುಷ್ಯರಿಗಷ್ಟೆ ಅಲ್ಲ, ರಥಬೀದಿಗೂ ರಥದ ವಿಗ್ರಹಕ್ಕೂ ಬಂದರೆ ಗತಿ ಏನು? ಅಧ್ಯಾಸಬುದ್ಧಿಯ ತೀವ್ರತೆಯನ್ನು ಈ ಪದ್ಯ ನಿರೂಪಿಸುತ್ತಿದೆ.

ಹೇಗೆ ದಾರಿಯೇ ‘ನಾನು ದೇವರು’ ಎಂದು ಆಲೋಚಿಸುತ್ತಿದೆಯೋ, ಹೇಗೆ ವಿಗ್ರಹವೇ ‘ನಾನು ದೇವರು’ – ಎಂದು ಆಲೋಚಿಸುತ್ತದೆಯೋ ಹಾಗೆ ನಾವು ಸುಖ–ಸಂತೋಷವನ್ನು ಬೇರೆ ಎಲ್ಲೋ ಆರೋಪಿಸಿ, ಅದನ್ನು ದಕ್ಕಿಸಿಕೊಳ್ಳಲು ಪರದಾಡುತ್ತಿರುತ್ತೇವೆ. ಹಣವೇ ಸಂತೋಷ; ಅಧಿಕಾರವೇ ಸುಖ; ತೋಲ್ಬಳವೇ ಸೌಂದರ್ಯ; ಪದವಿಪತ್ರವೇ ವಿದ್ಯೆ; ಹೊಗಳಿಕೆಯೇ ಒಳ್ಳೆತನ; ಸೋಮಾರಿತನವೇ ವಿಶ್ರಾಂತಿ; ನಾಲಗೆಯ ರುಚಿಯೇ ಊಟ – ಹೀಗೆ ಏನೇನೋ ತಪ್ಪು ತಿಳಿವಳಿಕೆಗಳಲ್ಲಿ ನಮ್ಮ ಜೀವನವನ್ನು ನಿರ್ಮಿಸಿಕೊಳ್ಳುತ್ತಿರುತ್ತೇವೆ.

ಆದರೆ ಸುಖ ಎಂದರೇನು, ಸಂತೋಷ ಎಂದರೇನು, ಆರೋಗ್ಯ ಎಂದರೇನು, ವಿದ್ಯೆ ಎಂದರೇನು, ಒಳ್ಳೆಯದು ಎಂದರೇನು, ವಿಶ್ರಾಂತಿ ಎಂದರೇನು, ಆಹಾರ ಎಂದರೆ ಯಾವುದು – ಎನ್ನುವುದು ತಿಳಿಯದೆ ಹೋದಾಗ ತಪ್ಪಾದ ಗ್ರಹಿಕೆಗಳಿಗೆ ಪಕ್ಕಾಗುತ್ತೇವೆ. ಆಗ ಅಡಿಪಾಯವಿಲ್ಲದೆ ಕಟ್ಟಿದ ಮನೆಯಂತೆ ನಮ್ಮ ಜೀವನಸೌಧವೂ ಕುಸಿಯುತ್ತದೆ. ಹೀಗಾಗಿ ನಾವು ಯಾವುದೇ ಒಂದು ‘ಕಲ್ಪನೆ’ಯನ್ನು ಹುಡುಕುವ ಮೊದಲು, ಒಪ್ಪುವ ಮೊದಲು, ಅದರ ಮೂಲತತ್ತ್ವ ಏನು – ಎನ್ನುವುದನ್ನು ಕಂಡುಕೊಳ್ಳಬೇಕು.

ಸುಖ–ಸಂತೋಷಗಳಿಗೆ ಹಣವೂ ಒಂದು ಸಾಧನವಷ್ಟೆ; ವಿದ್ಯೆಯನ್ನು ಪಡೆಯಲು ಕಾಲೇಜು ವ್ಯಾಸಂಗವೂ ಒಂದು ದಾರಿಯಷ್ಟೆ; ವಿಗ್ರಹ ಎನ್ನುವುದು ದೇವರ ಸಂಕೇತ ಮಾತ್ರವೇ – ಎಂಬ ವಿವೇಕ ನಮಗೆ ಒದಗಬೇಕು. ಸಂತೋಷದ ಮೂಲವಾಗಲೀ ವಿದ್ಯೆಯ ನೆಲೆಯಾಗಲೀ ದೈವದ ಚೈತನ್ಯವಾಗಲೀ ಚಿಹ್ನೆಗಳಲ್ಲಿ ಇಲ್ಲ, ಚಿಂತನೆಯಲ್ಲಿ ಎನ್ನುವುದನ್ನು ನಾವು ಮರೆಯಬಾರದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry