4
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in
ವಿಚಾರಗೋಷ್ಠಿಯಲ್ಲಿ ವಕೀಲ ಸಿ.ಎಸ್‌.ದ್ವಾರಕನಾಥ್‌ ಅಭಿಪ್ರಾಯ

ನಾಗಮೋಹನ್‌ದಾಸ್‌ರ ತೀರ್ಪಿನಲ್ಲಿ ಬುದ್ಧನ ಆಶಯ ಅಡಗಿದೆ

Published:
Updated:

ಕೋಲಾರ: ‘ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌ರ ತೀರ್ಪುಗಳಲ್ಲಿ ಬುದ್ಧ, ಅಂಬೇಡ್ಕರ್‌ ಆಶಯ ಅಡಗಿದೆ’ ಎಂದು ವಕೀಲ ಸಿ.ಎಸ್.ದ್ವಾರಕನಾಥ್ ಅಭಿಪ್ರಾಯಪಟ್ಟರು.

ನಗರದಲ್ಲಿ ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ‘ಸಮ್ಮೇಳನಾಧ್ಯಕ್ಷರ ಬದುಕು ಬರಹ’ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿ, ಕೋಲಾರ ಜಿಲ್ಲೆಯ ಮಣ್ಣು ಇಲ್ಲಿ ಹುಟ್ಟಿ ಬೆಳೆದವರಿಗೆ ಸಾಮಾಜಿಕ ನ್ಯಾಯದ ಹೋರಾಟ ಕಲಿಸುತ್ತದೆ. ನಾಗಮೋಹನ್‌ದಾಸ್‌ರ ಮೇಲೆ ಅವರ ತಂದೆ ಸ್ವಾತಂತ್ರ್ಯ ಹೋರಾಟಗಾರ ನಾಗಪ್ಪ, ಕಾರ್ಲ್‌ ಮಾರ್ಕ್ಸ್‌, ಅಂಬೇಡ್ಕರ್ ಹಾಗೂ ಜಸ್ಟೀಸ್ ಕೃಷ್ಣ ಅಯ್ಯರ್‌ರ ಪ್ರಭಾವ ಗಾಢವಾಗಿದೆ' ಎಂದರು.

ನ್ಯಾಯಮೂರ್ತಿಯ ಹೃದಯದಲ್ಲಿ ಸಾಮಾಜಿಕ ಚಿಂತಕನಿದ್ದರೆ ಯಾವ ರೀತಿಯ ತೀರ್ಪು ನೀಡಲು ಸಾಧ್ಯ ಎಂಬುದಕ್ಕೆ ನಾಗಮೋಹನ್‌ದಾಸ್‌ರ ತೀರ್ಪುಗಳು ಉದಾಹರಣೆ. ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಅವರು ನೀಡಿದ ತೀರ್ಪುಗಳು ಅಧ್ಯಯನ ಯೋಗ್ಯವಾಗಿವೆ. ಅವರ ನಿರಂತರ ಓದು ನ್ಯಾಯಮೂರ್ತಿಗಳಿಗೆ ಮಾದರಿಯಾಗಬೇಕು ಎಂದರು.

ದೇಶದಲ್ಲಿ ಅಂಬೇಡ್ಕರ್‌ರನ್ನು ನಿರ್ದಿಷ್ಟ ಜಾತಿಗೆ  ಸೀಮಿತಗೊಳಿಸಲಾಗಿದೆ. ಆದರೆ, ನಾಗಮೋಹನ್‌ದಾಸ್‌ ತಮ್ಮ ಪುಸ್ತಕದಲ್ಲಿ ಅಂಬೇಡ್ಕರ್‌ರನ್ನು ಜಾಗತಿಕ ಧುರೀಣರಾಗಿ ಗುರುತಿಸಿರುವುದು ಬಹು ದೊಡ್ಡ ವಿಚಾರ. ಜನಸಾಮಾನ್ಯರ ಹಾಗೂ ಗ್ರಾಮೀಣರ ಬದುಕು ಬವಣೆ ಅರಿತ ಕಾರಣಕ್ಕೆ ಅವರಿಂದ ಶ್ರೇಷ್ಠ ತೀರ್ಪುಗಳು ಹೊರ ಬರಲು ಸಾಧ್ಯವಾಯಿತು ಎಂದು ತಿಳಿಸಿದರು.

ಕೆಲ ಪ್ರಕರಣಗಳಲ್ಲಿ ನಾಗಮೋಹನ್‌ದಾಸ್‌ ಅವರು ನೀಡಿದ ತೀರ್ಪುಗಳನ್ನು ಉದಾಹರಿಸಿ ಆ ತೀರ್ಪುಗಳಲ್ಲಿ ಅಡಗಿದ್ದ ಸಾಮಾಜಿಕ ಕಳಕಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕವಿ ಹೃದಯ: ‘ನಾಗಮೋಹನ್‌ದಾಸ್‌ರ ಸಾಹಿತ್ಯ ಮತ್ತು ಚಿಂತನೆ’ ಕುರಿತು ಮಾತನಾಡಿದ ಸಾಹಿತಿ ವಿಠಲ್ ಭಂಡಾರಿ, ‘ಕವಿ ಹೃದಯದ ಸಂವಿಧಾನ ತಜ್ಞರಾಗಿರುವ ನಾಗಮೋಹನ್‌ದಾಸ್ ಜನಸಾಮಾನ್ಯರೊಂದಿಗೆ ಸಂವಾದ ಮಾಡುವ ಶೈಲಿಯಲ್ಲಿ ಸಾಹಿತ್ಯ ರಚಿಸಿರುವುದು ವಿಶೇಷ’ ಎಂದು ಬಣ್ಣಿಸಿದರು.

ತಮ್ಮ ವಿಚಾರಗಳಲ್ಲಿ ಅಂಬೇಡ್ಕರ್ ಹಾಗೂ ಕಾರ್ಲ್‌ ಮಾರ್ಕ್ಸ್‌ರನ್ನು ಅನುಸಂಧಾನಿಸುವ ನಾಗಮೋಹನ್‌ದಾಸ್‌ರ ಭಾಷಣ ಹಾಗೂ ಉಪನ್ಯಾಸಗಳು ಪರಿಣಾಮಕಾರಿಯಾಗಿವೆ. ಅವರು ನಿರಂತರ ಸತ್ಯಾನ್ವೇಷಣೆಯಲ್ಲಿ ತೊಡಗಿದ್ದಾರೆ. ಅಂಬೇಡ್ಕರ್ ಅಶಯದಂತೆ ಸಂವಿಧಾನ ಓದಿದರೆ ದೇಶದ ಅನೇಕ ಸಮಸ್ಯೆಗಳು ಬಗೆಹರಿಯುತ್ತವೆ ಎಂದರು.

ಸಮ್ಮೇಳನಾಧ್ಯಕ್ಷರೊಂದಿಗೆ ನಡೆದ ಸಂವಾದದಲ್ಲಿ ಕೃಷ್ಣಪ್ಪ, ಪ್ರಸನ್ನಕುಮಾರಿ, ಡಿ.ವೆಂಕಟರಾಮೇಗೌಡ, ಎಲ್.ನಾಗರಾಜ್, ರಾಜಣ್ಣ, ರುದ್ರೇಶ್, ಸಿ.ಎ.ರಮೇಶ್, ಮಂಜುಳಾ, ಕೊಮ್ಮಣ್ಣ, ಎಸ್.ರವೀಂದ್ರ, ವಾಸುದೇವರೆಡ್ಡಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry