7
ಪ್ರತಿನಿತ್ಯ ₹ 10 ಲಕ್ಷ ಮೊತ್ತದ ಡೀಸೆಲ್‌ ಉಳಿತಾಯ

26ರಿಂದ ವಿದ್ಯುತ್‌ ರೈಲು ಸಂಚಾರ ಆರಂಭ

Published:
Updated:
26ರಿಂದ ವಿದ್ಯುತ್‌ ರೈಲು ಸಂಚಾರ ಆರಂಭ

ಮೈಸೂರು: ಬೆಂಗಳೂರು– ಮೈಸೂರು ನಡುವೆ ವಿದ್ಯುತ್‌ ರೈಲುಗಳ ಸಂಚಾರ ಡಿ. 26ರಿಂದ ಆರಂಭವಾಗಲಿದೆ. ಚೆನ್ನೈನಿಂದ ಬರುವ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲು ಬೆಂಗಳೂರಿನಿಂದ ಮೈಸೂರಿಗೆ ವಿದ್ಯುತ್‌ ಮಾರ್ಗದಲ್ಲಿ ಮೊದಲ ಬಾರಿಗೆ ಸಂಚರಿಸಲಿದೆ.

ದಕ್ಷಿಣ ವಲಯ ರೈಲುಮಾರ್ಗ ಸುರಕ್ಷಾ ಕಮಿಷನರ್‌ ಕೆ.ಎ.ಮನೋಹರನ್‌ ಈಚೆಗಷ್ಟೇ ವಿದ್ಯುತ್‌ ಮಾರ್ಗವನ್ನು ಪರೀಕ್ಷಿಸಿದ್ದರು. ಇದೀಗ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ.

ಚೆನ್ನೈನಿಂದ ಬರುತ್ತಿದ್ದ ಶತಾಬ್ದಿ ರೈಲಿನ ವಿದ್ಯುತ್ ಎಂಜಿನ್‌ ಅನ್ನು ಬೆಂಗಳೂರಿನಲ್ಲಿ ಬದಲಿಸಬೇಕಿತ್ತು. ಬೆಂಗಳೂರು– ಮೈಸೂರು ನಡುವೆ ಸಂಚರಿಸುವ ರೈಲಿಗೆ ಡೀಸೆಲ್‌ ಎಂಜಿನ್‌ ಬದಲಾವಣೆಗೆ 15ರಿಂದ 30 ನಿಮಿಷ ಹಿಡಿಯುತ್ತಿತ್ತು. ಇನ್ನು ಮುಂದೆ ಇದರ ಅಗತ್ಯವಿರುವುದಿಲ್ಲ. ಚೆನ್ನೈನಿಂದ ಬಂದ ನಂತರ ತಡಮಾಡದೆ ಮೈಸೂರಿಗೆ ಹೊರಡಲಿದೆ.

ಹಣ ಉಳಿತಾಯ: ಮೈಸೂರು– ಬೆಂಗಳೂರು ನಡುವೆ ಪ್ರತಿನಿತ್ಯ 24 ರೈಲುಗಳು ಸಂಚರಿಸುತ್ತವೆ. ವಿದ್ಯುತ್‌ ಎಂಜಿನ್‌ ಬಳಕೆಯಾದರೆ ದಿನಕ್ಕೆ ₹ 10 ಲಕ್ಷದಂತೆ ತಿಂಗಳಿಗೆ ₹ 3 ಕೋಟಿ ಉಳಿತಾಯವಾಗಲಿದೆ. ಈ ಮಾರ್ಗಕ್ಕೆ ಅಗತ್ಯವಿರುವ ಹೊಸ ವಿದ್ಯುತ್‌ ಎಂಜಿನ್‌ಗಳನ್ನು ಈಗಾಗಲೇ ನೈರುತ್ಯ ರೈಲ್ವೆ ಪಡೆದುಕೊಂಡಿದೆ ಎಂದು ನೈರುತ್ಯ ರೈಲ್ವೆ ಕೇಂದ್ರೀಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ.ವಿಜಯಾ ‘ಪ್ರಜಾವಾಣಿ’ಗೆ ತಿಳಿಸಿದರು.

ಮೈಸೂರು– ಬೆಂಗಳೂರು ನಡುವಿನ ಪ್ರಯಾಣಕ್ಕೆ ಪ್ರತಿ ರೈಲಿಗೆ 700 ಲೀಟರ್‌ ಡೀಸೆಲ್‌ ಬೇಕಾಗುತ್ತದೆ. ಇದರಿಂದ ₹ 41 ಸಾವಿರ ಖರ್ಚಾಗುತ್ತದೆ. ಒಂದು ಕಿ.ಮೀಗೆ 5 ಲೀಟರ್‌ ಡೀಸೆಲ್ ಬೇಕು. ವಿದ್ಯುತ್‌ ಎಂಜಿನ್ ಇರುವ ರೈಲು 2,600 ಯುನಿಟ್‌ ವಿದ್ಯುತ್‌ ಬಳಸುತ್ತದೆ. ಒಟ್ಟಾರೆ ₹ 17 ಸಾವಿರ ಖರ್ಚಾಗುವ ಕಾರಣ, ಸಾಕಷ್ಟು ಉಳಿತಾಯ ಆಗಲಿದೆ.

ಬೆಂಗಳೂರು– ಮೈಸೂರು ನಡುವಿನ 139 ಕಿ.ಮೀ ದೂರದ ಮಾರ್ಗವನ್ನು ವಿದ್ಯುದೀಕರಣಗೊಳಿಸಲು ಒಟ್ಟು ₹ 210 ಕೋಟಿ ಖರ್ಚಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry