7

ಇವಿಎಂ ಮತ್ತು ಸುಪ್ರೀಂ ಕೋರ್ಟ್

Published:
Updated:

ಈ ವಿಷಯವನ್ನು ಕುರಿತು ಎಸ್. ನಟರಾಜ್ ಬೂದಾಳು ಅವರ ನಿಲುವಿಗೆ ಪೂರಕವಾಗಿ, ಹಾಗೂ ಇದು ಮಂಜುನಾಥ ಸು. ಮ. ಅವರು ಹೇಳುವಂತೆ ‘ಕೈಲಾಗದವನು ಮೈ ಪರಚಿಕೊಂಡ’ (ಪ್ರ. ವಾ., ಚರ್ಚೆ, ಡಿ.21) ಎನ್ನುವಷ್ಟು ಸರಳವಲ್ಲ ಎಂಬುದನ್ನು ವಿಶದಪಡಿಸಲು ಕೆಲವು ವಿವರಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಇಲ್ಲಿ ಮುಖ್ಯವಾಗುವ ಅಂಶಗಳು ಎರಡು: ಮತಯಂತ್ರಗಳ ವಿಶ್ವಾಸಾರ್ಹತೆ ಮತ್ತು ವ್ಯಕ್ತಿಯ ಮತದಾನದ ಗೌಪ್ಯತೆ.

ಮೊದಲಿಗೆ ಇವಿಎಂಗಳ ವಿಶ್ವಾಸಾರ್ಹತೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದವರು ಡಾ. ಸುಬ್ರಮಣಿಯನ್‌ ಸ್ವಾಮಿ. ಅವರು 2009ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸುಮಾರು 900 ಮತಗಟ್ಟೆಗಳಲ್ಲಿ ಅಕ್ರಮವು ನಡೆದಿದೆ ಎಂದು ದೆಹಲಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದರು. 2010ರಲ್ಲಿ ದೆಹಲಿ ಹೈಕೋರ್ಟ್ ಅದನ್ನು ಆಧಾರ ರಹಿತವೆಂದು ತಿರಸ್ಕರಿಸಿತು. ಅನಂತರ ಸ್ವಾಮಿ ಆ ತೀರ್ಪಿನ ಪುನರ್‌ಪರಿಶೀಲನೆಗಾಗಿ ಸುಪ್ರೀಂ ಕೋರ್ಟ್‍ಗೆ 2012ರಲ್ಲಿ ಅರ್ಜಿ ಹಾಕಿದರು.

ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ, 2013ರಲ್ಲಿ ಚುನಾವಣಾ ಆಯೋಗವು ಸ್ವತಃ ಒಂದು ನಿರ್ಧಾರವನ್ನು ತೆಗೆದುಕೊಂಡು, ಇನ್ನು ಮುಂದೆ ‘ಪೇಪರ್ ಟ್ರೇಲ್’ (VVPAT: Voter verifiable paper audit trail) ಇರುವ ಹೊಸ ಮತಯಂತ್ರಗಳನ್ನು ಉಪಯೋಗಿಸುವುದಾಗಿ ಘೋಷಿಸಿತು. ಆನಂತರ, ಅದೇ ವರ್ಷದ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪನ್ನು ಕೊಟ್ಟಿತು: ‘It is an indispensable requirement of free, fair, and transparent polls’ (ಮತಯಂತ್ರಗಳಿಗೆ ಪೇಪರ್ ಟ್ರೇಲ್ ಅಳವಡಿಸಿಕೊಳ್ಳುವುದು ಮುಕ್ತ, ವಿಶ್ವಸನೀಯ ಹಾಗೂ ಪಾರದರ್ಶಕ ಚುನಾವಣೆಗೆ ಕಡ್ಡಾಯವಾದ ಅವಶ್ಯಕತೆ). ಆದರೆ, ಚುನಾವಣಾ ಕಾರ್ಯದ ಅಗಾಧತೆಯನ್ನು ಗಮನಿಸಿ, ಚುನಾವಣಾ ಆಯೋಗವು ಇಂತಹ ಹೊಸ ಮತಯಂತ್ರಗಳನ್ನು ಹಂತ ಹಂತವಾಗಿ ಉಪಯೋಗಿಸಬಹುದು ಎಂದು ಹೇಳಿತು. ಆದರೆ, 2013ರ ತೀರ್ಪನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು ನಾಲ್ಕು ವರ್ಷಗಳ ನಂತರ, ಎಂದರೆ 2017ರಲ್ಲಿ ಮಾತ್ರ.

ವಿದ್ಯುನ್ಮಾನ ಮತಯಂತ್ರಗಳ ವಿಶ್ವಾಸಾರ್ಹತೆ ಪ್ರಶ್ನಾರ್ಹವಾದುದರಿಂದ, ಅವುಗಳನ್ನು ನಾಲ್ಕೈದು ವರ್ಷ ಪ್ರಾಯೋಗಿಕವಾಗಿ ಉಪಯೋಗಿಸಿ, ಆನಂತರ ಆ ಪ್ರಯೋಗವನ್ನು ನಿಲ್ಲಿಸಿರುವ ರಾಷ್ಟ್ರಗಳೆಂದರೆ: ಜರ್ಮನಿ (2009ರಲ್ಲಿ ನಿಲ್ಲಿಸಿತು), ಫ್ರಾನ್ಸ್‌ (2017ರಲ್ಲಿ ನಿಲ್ಲಿಸಿತು), ಇತ್ಯಾದಿ. ಹಾಗೆಯೇ ಈ ಮತಯಂತ್ರಗಳನ್ನು ಯಾವಾಗಲೂ ಉಪಯೋಗಿಸದೇ ಇರುವ ಅನೇಕ ರಾಷ್ಟ್ರಗಳಲ್ಲಿ ಮುಖ್ಯವಾದವುಗಳೆಂದರೆ, ಇಂಗ್ಲೆಂಡ್, ಅಮೆರಿಕ, ಕೆನಡಾ (ಕೆನಡಾದಲ್ಲಿ ಮುನಿಸಿಪಲ್ ಚುನಾವಣೆಗಳಲ್ಲಿ ಮತಯಂತ್ರಗಳ ಉಪಯೋಗವಿದೆ, ಆದರೆ ಸಾರ್ವತ್ರಿಕ ಚುನಾವಣೆಯಲ್ಲಿ ಇಲ್ಲ), ಇತ್ಯಾದಿ.

ಇನ್ನು, ಮತದಾರನ ಆಯ್ಕೆಯ ಗೋಪ್ಯತೆಯ ಪ್ರಶ್ನೆ. ಗುಪ್ತ ಮತದಾನ ಚುನಾವಣೆಗಳ ಅತಿ ಮುಖ್ಯ ಅಂಶ. ಮತಪತ್ರಗಳ ಮೂಲಕ ಚುನಾವಣೆ ನಡೆಯುವಾಗ, ಒಂದು ಕ್ಷೇತ್ರದ ಎಲ್ಲಾ ಮತಪೆಟ್ಟಿಗೆಗಳನ್ನು ಒಂದೆಡೆ ತಂದು ಅವುಗಳನ್ನು ಬೆರೆಸುತ್ತಿದ್ದುದರಿಂದ ‘ಯಾವ ಭಾಗದ ಜನರು ಯಾವ ಪಕ್ಷಕ್ಕೆ ಮತ ನೀಡಿದ್ದಾರೆ’ ಎಂಬುದು ರಹಸ್ಯವಾಗಿರುತ್ತಿತ್ತು. ಆದರೆ, ಮತಯಂತ್ರಗಳ ಮೂಲಕ ಚುನಾವಣೆ ನಡೆಯುವಾಗ ಆ ರಹಸ್ಯವನ್ನು ಕಾಪಾಡಿಕೊಳ್ಳಲಾಗುವುದಿಲ್ಲ. ಏಕೆಂದರೆ, ಒಂದು ಯಂತ್ರದಲ್ಲಿರುವ ಮತಗಳನ್ನು ಅಲ್ಲಿಯೇ ಎಣಿಸುವುದರಿಂದ ಯಾವ ಭಾಗದ, ಧರ್ಮದ ಜನರು ಯಾರಿಗೆ ಮತವನ್ನು ಚಲಾಯಿಸಿದ್ದಾರೆ ಎಂಬುದು ಸುಲಭವಾಗಿ ಗೊತ್ತಾಗುತ್ತದೆ. ಪರಿಣಾಮತಃ, ಮತದಾನದ ಮೊದಲು ಬೆದರಿಕೆ ಒಡ್ಡಲು ಅಥವಾ ಆನಂತರ ಅಧಿಕಾರಕ್ಕೆ ಬಂದ ಅಥವಾ ಸೋತ ಪಕ್ಷದವರು ತಮ್ಮ ವಿರುದ್ಧ ಮತ ಹಾಕಿದವರನ್ನು ಶಿಕ್ಷಿಸಲು ಸಾಧ್ಯವಾಗುತ್ತದೆ.

ಮತಪತ್ರಗಳ ಕಾಲದಲ್ಲಿಯೂ ‘ಮತದಾನ ಸ್ಥಳಗಳ ದುರಾಕ್ರಮಣ,’ ‘ಮತಪೆಟ್ಟಿಗೆಗಳ ಕಳವು’ ಇತ್ಯಾದಿ ಅಕ್ರಮಗಳು ನಡೆಯುತ್ತಿದ್ದುವು. ಆದರೆ, ಶೇಷನ್ ಅವರು ಚುನಾವಣಾ ಆಯೋಗದ ಮುಖ್ಯಸ್ಥರಾದಾಗ ಅಂತಹ ಅಕ್ರಮಗಳನ್ನೂ ತಡೆಯಬಹುದು ಎಂಬುದನ್ನು ತೋರಿಸಿಕೊಟ್ಟರು. ಅವರ ನಂತರ, ಈ ವಿಷಯದಲ್ಲಿ ಚುನಾವಣಾ ಆಯೋಗವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಅಪಾರ ಪೋಲೀಸ್ ಬೆಂಬಲದಿಂದ ಅಂತಹ ಅಕ್ರಮಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದೆ.

ಮಾನವನೊಬ್ಬನಿಂದ ನಿರ್ಮಿತವಾದ ಯಾವ ಯಂತ್ರವನ್ನಾದರೂ ಮತ್ತೊಬ್ಬ ಮಾನವ ಅದನ್ನು ಭೇದಿಸಬಹುದು, ಮತ್ತು ತನ್ನ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳಬಹುದು. ಇದಕ್ಕೆ ಅತಿ ಕುಪ್ರಸಿದ್ಧ ಉದಾಹರಣೆಯೆಂದರೆ, ಭೇದಿಸಲಾಗದ್ದು ಎಂದು ಭಾವಿಸಲಾಗುತ್ತಿದ್ದ ಅಮೆರಿಕದ ರಕ್ಷಣಾ ವಿಭಾಗದ (ಪೆಂಟಗನ್) ಅತ್ಯಂತ ಸಂಕೀರ್ಣ ಕಂಪ್ಯೂಟರ್‌ಗಳನ್ನೇ ಹ್ಯಾಕ್ ಮಾಡಲಾಯಿತು.

ಕೊನೆಯದಾಗಿ, ನಿಜ; ವಿದ್ಯುನ್ಮಾನ ಯಂತ್ರಗಳನ್ನು ಉಪಯೋಗಿಸಿಯೇ ಈ ಬೃಹತ್ ದೇಶದ ಚುನಾವಣೆಗಳನ್ನು ನಡೆಸುವುದು ಮತ್ತು ನಿಗದಿತ ಸಮಯದಲ್ಲಿ ಫಲಿತಾಂಶಗಳನ್ನು ನೀಡುವುದು ಅಗಾಧ ಕೆಲಸ. ಇನ್ನು ಮತಯಂತ್ರಗಳನ್ನು ಕೈಬಿಟ್ಟು, ಮತಪತ್ರಗಳನ್ನು ಉಪಯೋಗಿಸಿದರೆ, ಉತ್ತರಪ್ರದೇಶ, ಮಧ್ಯಪ್ರದೇಶ, ಇವೇ ಮುಂತಾದ ಬೃಹತ್ ರಾಜ್ಯಗಳಲ್ಲಿ ಮತ ಎಣಿಕೆಗೆ ಅನೇಕ ದಿನಗಳೇ ಬೇಕಾಗಬಹುದು. ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ‘shortcuts are the longest routes’ (‘ಹತ್ತಿರದ ದಾರಿ ಎಂಬುದೇ ಅತ್ಯಂತ ದೂರದ ದಾರಿಯೂ ಆಗಬಹುದು’) ಎಂಬ ಗಾದೆಯನ್ನೂ ನಾವು ನೆನಪಿಟ್ಟುಕೊಳ್ಳಬೇಕು.

***

ಮತಯಂತ್ರದಲ್ಲಿ ಮೋಸವಿಲ್ಲ

ನಾನೊಬ್ಬ ನಿವೃತ್ತ ಪ್ರಾಧ್ಯಾಪಕನಾಗಿದ್ದು ಸೇವೆಯಲ್ಲಿದ್ದಾಗ ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಡೆದ ಅನೇಕ ಚುನಾವಣೆಗಳಲ್ಲಿ ಮತಗಟ್ಟೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಮತಪತ್ರ ಹಾಗೂ ಇ.ವಿ.ಎಂ. ಬಳಕೆಯ ಎರಡೂ ಮಾದರಿಯ ಚುನಾವಣಾ ಕಾರ್ಯದಲ್ಲಿ ಭಾಗಿಯಾಗಿದ್ದೇನೆ. ನನ್ನ ಅನುಭವದಲ್ಲಿ ಇ.ವಿ.ಎಂ. ಅತ್ಯುತ್ತಮ.

ಮತದಾನ ಆರಂಭಕ್ಕೂ ಮೊದಲು ಎಲ್ಲ ಅಭ್ಯರ್ಥಿಗಳ ಪರ ಬೂತ್ ಪ್ರತಿನಿಧಿಗಳಿಂದ ಅಣಕು ಮತದಾನ ಮಾಡಿಸಿ, ತೋರಿಸಿ, ಅವರ ಮುಂದೆಯೇ ಆ ಮತಗಳನ್ನು ಅಳಿಸಿಹಾಕಿ, ಪೇಪರ್ ಸೀಲುಗಳ ಮೇಲೆ ಅವರೆಲ್ಲರ ಸಹಿ ಪಡೆದು ಯಂತ್ರಗಳನ್ನು ಲಾಕ್ ಮಾಡುತ್ತೇವೆ. ಮತದಾನ ಶುರುವಾದ ಬಳಿಕ ಮತಗಟ್ಟೆಯ ಅಧಿಕಾರಿ ಯಂತ್ರವನ್ನು ನಿಯಂತ್ರಿಸುವುದರಿಂದ ಒಬ್ಬ ಮತದಾರ ಒಂದೇ ಮತವನ್ನು ಚಲಾಯಿಸಲು ಸಾಧ್ಯ. ಇಲ್ಲಿ ಯಾವುದೇ ಅಕ್ರಮ ಸಾಧ್ಯವಿಲ್ಲ. ಮತ ಎಣಿಕೆಯ ದಿನ, ಎಣಿಕೆ ಕೇಂದ್ರದಲ್ಲಿ ಅಭ್ಯರ್ಥಿಗಳ ಪ್ರತಿನಿಧಿಗಳ ಮುಂದೆ ಮತಗಟ್ಟೆಯ ದಾಖಲೆಗಳ ಪರಿಶೀಲನೆಯ ನಂತರ ಎಲ್ಲರ ಒಪ್ಪಿಗೆಯೊಂದಿಗೆ ಎಣಿಕೆ ಶುರುವಾಗುತ್ತದೆ. ವಂಚನೆ ಸಾಧ್ಯವಿಲ್ಲ.

ಆದರೆ ಮತಪತ್ರ ಹಾಗಲ್ಲ. ಅದನ್ನು ಅಧಿಕಾರಿಯಿಂದ ಪಡೆದ ಮತದಾರ ಸರಿಯಾಗಿ ಚಲಾಯಿಸುವುದು ಅನುಮಾನ. ಮಡಿಸುವ ಸಂದರ್ಭದಲ್ಲಿ ಮತ ಕುಲಗೆಡುವ ಸಂಭವಗಳೂ ಉಂಟು. ಮತಪೆಟ್ಟಿಗೆಗಳಿಗೆ ಕಿಡಿಗೇಡಿಗಳು ಹಾನಿ ಮಾಡುವ, ಇಡೀ ಬೂತ್‌ಅನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ (ರಿಗ್ಗಿಂಗ್) ಅವಕಾಶವಿದೆ. ಮತಪತ್ರಗಳನ್ನು ಹರಿದುಹಾಕುವ ಸನ್ನಿವೇಶವೂ ಉಂಟು. ಇನ್ನು ಮತ ಎಣಿಕೆಯ ಸಂದರ್ಭದಲ್ಲೂ ಮತಗಳ ಅದಲು ಬದಲು ಹಾಗೂ ಕುಲಗೆಟ್ಟ ಮತಗಳ ನಿರ್ಣಯ ಇತ್ಯಾದಿ ಸಮಸ್ಯೆಗಳು ಹೆಚ್ಚು.

ರಾಜಕಾರಣಿಗಳು ಚುನಾವಣಾ ವ್ಯವಸ್ಥೆಯನ್ನು ಹಾಳು ಮಾಡಿ, ತಮಗೆ ಬೇಕಾದಂತೆ ಮತಗಳನ್ನು ಪಡೆಯಲು ಮತಪತ್ರ ಬಳಕೆಗೆ ಒತ್ತಾಯಿಸುತ್ತಿದ್ದಾರಷ್ಟೆ. ಅದಕ್ಕಾಗಿ ವಿದೇಶಗಳ ಉದಾಹರಣೆ ಕೊಡುವುದು ಅಸಂಬದ್ಧ. ನಾವು ಭಾರತೀಯರು ಇಂಥ ವಿಚಾರಗಳಲ್ಲಿ ಎಷ್ಟು ಪ್ರಾಮಾಣಿಕರು ಎಂದು ನಮ್ಮನ್ನೇ ನಾವು ಕೇಳಿಕೊಳ್ಳೋಣ.

ಆದ್ದರಿಂದ ಚುನಾವಣೆಗೆ ಮತಪತ್ರಗಳು ಬೇಡ, ಎಲೆಕ್ಟ್ರಾನಿಕ್ ಮತಯಂತ್ರಗಳೇ ಇರಲಿ.

ಎನ್. ನರಹರಿ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry