ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಕರಾವಳಿ ಉತ್ಸವ

Last Updated 22 ಡಿಸೆಂಬರ್ 2017, 4:27 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿ ಉತ್ಸವಕ್ಕೆ ನಗರ ಸಜ್ಜಾಗಿದ್ದು, ಶುಕ್ರವಾರದಿಂದ ಇದೇ 31 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ ಮನೆ ಮಾಡಲಿದೆ. ಇದೇ 22 ರಂದು ಮಧ್ಯಾಹ್ನ 3.30 ರಿಂದ ನೆಹರೂ ಮೈದಾನದಿಂದ, ಕರಾವಳಿ ಉತ್ಸವ ಮೈದಾನದವರೆಗೆ ಆಕರ್ಷಕ ಬೃಹತ್ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದ್ದು, ಸಚಿವ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ.

ಸಂಜೆ 5.30 ಕ್ಕೆ ಕರಾವಳಿ ಉತ್ಸವ ಮೈದಾನದಲ್ಲಿ ಏರ್ಪಡಿಸಿರುವ ವಸ್ತು ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಲಿದ್ದಾರೆ. ಸಂಜೆ 6 ಗಂಟೆಗೆ ಕರಾವಳಿ ಉತ್ಸವ ಮೈದಾನದಲ್ಲಿ ಕರಾವಳಿ ಉತ್ಸವ ಉದ್ಘಾಟನಾ ಸಮಾರಂಭ ನಡೆಯಲಿದ್ದು, ನಟ ಪ್ರಕಾಶ್ ರೈ ಉದ್ಘಾಟಿಸಲಿದ್ದಾರೆ.

ಆಕರ್ಷಕ ಮೆರವಣಿಗೆ: ಮಧ್ಯಾಹ್ನ 3.30ಕ್ಕೆ ನೆಹರೂ ಮೈದಾನದಿಂದ ಹೊರಡುವ ಮೆರವಣಿಗೆಯು, ಎ.ಬಿ. ಶೆಟ್ಟಿ ಸರ್ಕಲ್, ಹಂಪನಕಟ್ಟೆ ವೃತ್ತ, ಕೆ.ಎಸ್.ರಾವ್ ರಸ್ತೆ, ನವಭಾರತ ಸರ್ಕಲ್, ಪಿವಿಎಸ್ ಜಂಕ್ಷನ್, ಮಹಾತ್ಮ ಗಾಂಧಿ ರಸ್ತೆ, ಬಲ್ಲಾಳಬಾಗ್, ಲಾಲ್‌ಬಾಗ್ ಮೂಲಕ ಕರಾವಳಿ ಉತ್ಸವ ಮೈದಾನದಲ್ಲಿ ಸಂಪನ್ನಗೊಳ್ಳಲಿದೆ.

ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಕಲಾತಂಡಗಳ ಪ್ರದರ್ಶನಗಳು, ನೃತ್ಯಗಳು, ಚೆಂಡೆ, ಡೋಲು ಇತ್ಯಾದಿ ಸುಮಾರು 80ಕ್ಕೂ ಹೆಚ್ಚು ತಂಡಗಳು ಪಾಲ್ಗೊಳ್ಳಲಿವೆ. ತುಳುನಾಡಿನ ಜನಪದ ಕುಣಿತ, ಯಕ್ಷಗಾನ ವೇಷಗಳು, ಸೋಣ ಜೋಗಿ ಕುಣಿತ, ಹುಲಿವೇಷ, ತಾಲೀಮು, ಶಂಖ ದಾಸರು, ಜಾನಪದ ಗೊಂಬೆ, ಕೊರಗರ ಗಜಮೇಳ, ಮರಕಾಲು ಹುಲಿ ವೇಷ ಇತ್ಯಾದಿ ಅನೇಕ ತಂಡಗಳು ಭಾಗವಹಿಸಲಿವೆ. ವಿವಿಧ ದೇವಸ್ಥಾನಗಳಿಂದ ಸಾಂಪ್ರದಾಯಿಕ ವಾದನದೊಂದಿಗೆ ತಟ್ಟೀರಾಯ, ಬೇತಾಳ ಮೆರವಣಿಗೆಗೆ ಮೆರುಗು ನೀಡಲಿವೆ. ಅನೇಕ ವಿದ್ಯಾ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾದಲ, ಬ್ಯಾಂಕ್, ಅಂಚೆ ಇಲಾಖೆಗಳು ಪಾಲ್ಗೊಳ್ಳಲಿವೆ.

ವಿಶೇಷ ಪ್ರದರ್ಶನ: ಕರಾವಳಿ ಉತ್ಸವ ಮೈದಾನದ ವಸ್ತು ಪ್ರದರ್ಶನ ಮಂಟಪ ಹೊರ ಆವರಣದಲ್ಲಿ ಸಂಜೆ 5.30 ರಿಂದ 7 ರವರೆಗೆ ರಾಜ್ಯದ ವಿವಿಧೆಡೆಯಿಂದ ಬಂದ ಕಲಾ ತಂಡಗಳು ವಿಶೇಷ ಪ್ರದರ್ಶನವನ್ನು ನೀಡಲಿವೆ.

ಮೆರವಣಿಗೆಯಲ್ಲಿ ಭಾಗವಹಿಸುವ ಎಲ್ಲರಿಗೂ ಉಪ್ಪಿಟ್ಟು, ಅವಲಕ್ಕಿ, ಬಾದಾಮಿ ಹಾಲು, ಲಾಡು, ಕಿತ್ತಲೆ, ಕುಡಿಯುವ ನೀರು, ಮೆರವಣಿಗೆಯ ನಂತರ ಕರಾವಳಿ ಉತ್ಸವ ಮೈದಾನದಲ್ಲಿ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಕರಾವಳಿ ಉತ್ಸವ ಮೆರವಣಿಗೆಯ ಸಮಿತಿಯ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ವಿನಂತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT