7

‘ನಿರಂತರ ಕುಡಿಯುವ ನೀರಿನ ಯೋಜನೆಗೆ ಮತ್ತಷ್ಟು ಅನುದಾನ’

Published:
Updated:

ವಿಜಯಪುರ: ನಗರಕ್ಕೆ ಅಮೃತ್ ಯೋಜನೆಯಡಿ ವಾರದ 24 ಗಂಟೆ ನಿರಂತರ ನೀರು ಪೂರೈಸುವ ಯೋಜನೆಗೆ ಹೆಚ್ಚುವರಿ ಅನುದಾನ ಒದ ಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಬುಧವಾರ ವಿಜಯಪುರ ಮತಕ್ಷೇತ್ರದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, -ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಅಮೃತ್ ಯೋಜನೆಯಡಿ ನಗರಕ್ಕೆ ನೀರು ಪೂರೈಕೆಗೆ ಹೆಚ್ಚುವರಿ ಅನುದಾನದ ಅವಶ್ಯಕತೆ ಕುರಿತು ನಗರ ಶಾಸಕರಿಂದ ಬೇಡಿಕೆ ಬಂದಿದ್ದು, ಈಗ ಜಾರಿಯಲ್ಲಿರುವ ₹ 230 ಕೋಟಿ ಯೋಜನೆಗೆ ಹೆಚ್ಚುವರಿಯಾಗಿ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ವಿಜಯಪುರ ಮತಕ್ಷೇತ್ರದಲ್ಲಿ ₹ 395 ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ಉದ್ಘಾಟನೆ ನೆರವೇರಿಸಿದ್ದು, ನಗರದಲ್ಲಿ ಜಾರಿಯಲ್ಲಿರುವ ಒಳಚರಂಡಿ ಯೋಜನೆಯನ್ನು ಬಾಕಿ ಉಳಿದಿರುವ ಪ್ರದೇಶಕ್ಕೂ ವಿಸ್ತರಣೆ ಮಾಡುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಲಿದೆ. ನಮ್ಮ ಸರ್ಕಾರ ಬಂದ ನಂತರ ವಿಜಯಪುರ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಿ, ₹ 100 ಕೋಟಿ ವಿಶೇಷ ಅನುದಾನ ನೀಡಲಾಗಿದೆ ಎಂದರು.

ಐತಿಹಾಸಿಕ ನಗರ ವಿಜಯಪುರದಲ್ಲಿ ಗೋಲಗುಮ್ಮಟದಂತಹ ಸ್ಮಾರಕ ಇಡಿ ಜಗತ್ತಿಗೆ ಆಕರ್ಷಣೀಯವಾಗಿದೆ. ಈ ಹಿನ್ನಲೆಯಲ್ಲಿ ಈ ನಗರಕ್ಕೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವುದು. ಅತ್ಯಂತ ಅವಶ್ಯಕತೆ ಎಂದು ಮನಗಂಡು ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರಂತೆ ನಗರಕ್ಕೆ ಅಂಡರ್ ಗ್ರೌಂಡ್ ಕೇಬಲ್ ವ್ಯವಸ್ಥೆ ಕಲ್ಪಿಸುವ ಕುರಿತಂತೆ ₹ 250 ಕೋಟಿ ವಿಸ್ತೃತ ಯೋಜನೆ ತಯಾರಿಸಲಾಗಿದ್ದು, ವಿದ್ಯುತ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮಾತನಾಡಿದರು. ನಗರ ಶಾಸಕ ಡಾ.ಮಕ್ಬೂಲ್ ಬಾಗವಾನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಶಿವಾನಂದ ಪಾಟೀಲ, ಪ್ರೊ.ರಾಜು ಆಲಗೂರ, ಯಶವಂತರಾಯಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಮೇಟಿ, ಮೇಯರ್‌ ಸಂಗೀತಾ ಪೋಳ, ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಆಜಾದ ಪಟೇಲ, ಉಪಮೇಯರ್ ರಾಜೇಶ ದೇವಗಿರಿ, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಸುಂದರೇಶಬಾಬು ಇದ್ದರು. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry